logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ವಿವಾಹೇತರ ಸಂಬಂಧ ಹೆಚ್ಚುತ್ತಿರುವುದಕ್ಕೆ ಕಾರಣ ಇದೇನಾ, ನೀವೇನಂತೀರ?

Relationship: ವಿವಾಹೇತರ ಸಂಬಂಧ ಹೆಚ್ಚುತ್ತಿರುವುದಕ್ಕೆ ಕಾರಣ ಇದೇನಾ, ನೀವೇನಂತೀರ?

HT Kannada Desk HT Kannada

Dec 08, 2023 04:26 PM IST

google News

ವಿವಾಹೇತರ ಸಂಬಂಧಕ್ಕೆ ಕಾರಣಗಳು

  • Relationship: ಮದುವೆ, ಎಲ್ಲರ ಜೀವನದಲ್ಲಿ ಪ್ರಮುಖ ಘಟ್ಟ. ಜೀವನ ಸಂಗಾತಿ ಬಗ್ಗೆ ನೂರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಡುವವರಲ್ಲಿ ಕೆಲವರ ವೈವಾಹಿಕ ಜೀವನ ಹೂವಿನಂತಿದ್ದರೆ, ಕೆಲವರದ್ದು ಮುಳ್ಳಿನಂತೆ ಇರುತ್ತದೆ. ನಾನಾ ಕಾರಣಗಳಿಂದ ಡಿವೋರ್ಸ್‌ನಲ್ಲಿ ಕೊನೆಯಾಗುತ್ತಿದೆ. 

ವಿವಾಹೇತರ ಸಂಬಂಧಕ್ಕೆ ಕಾರಣಗಳು
ವಿವಾಹೇತರ ಸಂಬಂಧಕ್ಕೆ ಕಾರಣಗಳು (PC: Freepik)

Relationship: ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಬಿರುಕಿಗೆ ವಿವಾಹೇತರ ಸಂಬಂಧ ಕೂಡಾ ಪ್ರಮುಖ ಕಾರಣವಾಗುತ್ತಿದೆ. ಮದುವೆ ಆಗಿ ಜೀವನ ಸಂಗಾತಿಯೊಂದಿಗೆ ನಿಷ್ಠೆಯಿಂದ ಇರುವ ಬದಲಿಗೆ ಕೆಲವರು ವಿವಾಹೇತರ ಸಂಬಂಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದರೂ ಕೆಲವರು ಯಾರಿಗೂ ತಿಳಿಯದೆ ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಮದುವೆ ಆದರೂ ಪರಸ್ತ್ರೀ/ ಪರಪುರುಷರೊಂದಿಗೆ ಅಫೇರ್‌ ಇರಿಸಿಕೊಳ್ಳುವುದಕ್ಕೆ ಕೆಲವೊಂದು ಸಂಭವನೀಯ ಕಾರಣಗಳು ಇಂತಿವೆ.

ಚಿಕ್ಕ ವಯಸ್ಸಿಗೆ ಮದುವೆ ಆಗುವುದು

ಕೆಲವೆಡೆ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಾರೆ. ಮದುವೆ ಬಗ್ಗೆ ತಮ್ಮದೇ ಕನಸು ಹೊತ್ತ ಅವರಿಗೆ ಸಂಬಂಧಗಳ ಸುಳಿಯಲ್ಲಿ ಸಿಲುಕಿದಂತೆ ಆಗಿ, ನಾನು ಜೀವನದಲ್ಲಿ ಏನೂ ಎಂಜಾಯ್‌ ಮಾಡಲಿಲ್ಲ. ನನ್ನಿಷ್ಟಂತೆ ಬದುಕಲು ಆಗಲಿಲ್ಲ ಎಂಬ ಭಾವನೆ ಬರಬಹುದು. ಇದರಿಂದ ಅವರು ಪರಸ್ತ್ರೀ/ ಪರಪುರುಷರೊಂದಿಗೆ ಆಕರ್ಷಿತರಾಗುವ ಸಾಧ್ಯತೆ ಇದೆ.

ಬಲವಂತದ ಮದುವೆ

ಅನಾವಶ್ಯಕ ಕಾರಣಗಳಿಂದ ಮದುವೆ ಆಗುವವರು ಕೂಡಾ ವಿವಾಹೇತರ ಸಂಬಂಧಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ತಂದೆ, ತಾಯಿ ಬಲವಂತ ಮಾಡುವ ಕಾರಣಕ್ಕೋ, ಸಮಾಜಕ್ಕೆ ಹೆದರೋ ಕೆಲವರು ಇಷ್ಟವಿಲ್ಲದಿದ್ದರೂ ತಮ್ಮ ಜೀವನ ಸಂಗಾತಿಯ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ಮದುವೆ ಆಗುತ್ತಾರೆ. ಆದರೆ ನಂತರ ನಾನು ಮದುವೆ ಆದವರು ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬ ಕಾರಣಕ್ಕೆ ಆಘಾತಕ್ಕೆ ಒಳಗಾಗಬಹುದು. ತಾವು ಇಷ್ಟಪಟ್ಟ ಗುಣ ಮತ್ತೊಬ್ಬ ವ್ಯಕ್ತಿಯಲ್ಲಿದ್ದರೆ ಖಂಡಿತ ಅವರ ಕಡೆಗೆ ಆಕರ್ಷಿತರಾಗುವ ಸಾಧ್ಯತೆ ಹೆಚ್ಚು.

ಬದಲಾವಣೆಗೆ ಒಗ್ಗಿಕೊಳ್ಳಲು ಸಾಧ್ಯವಾಗದೆ

ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಬದಲಾವಣೆಯನ್ನು ಕೆಲವರಿಗೆ ಎದುರಿಸುವ ಸಾಮರ್ಥ್ಯ ಇರುವುದಿಲ್ಲ. ಜೀವನ ಸಂಗಾತಿಗೆ ಗಂಭೀರ ಆರೋಗ್ಯ ಸಮಸ್ಯೆ, ಸಾವು, ಕೆಲಸ ಕಳೆದುಕೊಳ್ಳುವುದು, ಹಣದ ಸಮಸ್ಯೆ, ಸಂಗಾತಿ ಮೊದಲಿನಷ್ಟು ಸುಂದರವಾಗಿಲ್ಲ ಎಂಬ ಮನೋಭಾವದಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ಇರುವವರು ಮತ್ತೊಬ್ಬರ ರಿಲೇಷನ್‌ಶಿಪ್‌ ಬಯಸಬಹುದು.

ಮಕ್ಕಳನ್ನು ಜನಿಸಿದ ನಂತರ ಬದಲಾವಣೆ

ಇಬ್ಬರು ಮೂವರಾದಾಗ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆದ್ಯತೆಗಳು ಬದಲಾಗುತ್ತವೆ, ಪರಸ್ಪರ ನೀಡಬಹುದಾದ ಸಮಯ ಕಡಿಮೆಯಾಗುತ್ತದೆ. ಹೆಚ್ಚಿನ ಮಹಿಳೆಯರು ಮಗುವಿನ ಕಾಳಜಿ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ, ಪುರುಷರು ಅದೇ ಸಮಯಕ್ಕೆ ಮತ್ತೊಬ್ಬ ಸ್ತ್ರೀಯನ್ನು ಬಯಸಿ ಹೋಗುವ ಎಷ್ಟೋ ಉದಾಹರಣೆಗಳನ್ನು ಸಮಾಜದಲ್ಲಿ ನೋಡಿದ್ದೇವೆ, ಕೇಳಿದ್ದೇವೆ.

ಲೈಂಗಿಕ ಅತೃಪ್ತಿ

ಲೈಂಗಿಕತೆಯು ವೈವಾಹಿಕ ಜೀವನದ ಒಂದು ಭಾಗ, ಆದರೆ ಕೆಲವರು ಇದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಸ್ತ್ರೀಯರಾಗಲೀ, ಪುರುಷರಾಗಲೀ ತಮ್ಮ ಸಂಗಾತಿಯಿಂದ ತಾವು ಬಯಸಿದ್ದನ್ನು ಪಡೆಯಲು ವಿಫಲವಾದಲ್ಲಿ ಮತ್ತೊಬ್ಬರ ಕಡೆಗೆ ಆಕರ್ಷಿತರಾಗುವ ಸಾಧ್ಯತೆ ಬಹಳ ಹೆಚ್ಚು.

ನಿರ್ಲಕ್ಷ್ಯ

ಕೆಲವರಿಗೆ ಮದುವೆ ಆರಂಭದಲ್ಲಿ ಇದ್ದ ಪ್ರೀತಿ ನಂತರ ಇರುವುದಿಲ್ಲ. ಪತಿ ಪತ್ನಿ ಇಬ್ಬರಲ್ಲಿ ಒಬ್ಬರು ಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಿಸುವಾಗ ಮತ್ತೊಬ್ಬರು ಮಾನಸಿಕವಾಗಿ ಧೈರ್ಯ ತುಂಬುವ ಬದಲಿಗೆ ನಿರ್ಲಕ್ಷ್ಯ ಮಾಡುವುದು, ಕೊಂಕು ಮಾತನಾಡುವುದು, ಕಾಳಜಿ ಮಾಡದಿರುವುದು ಮಾಡಿದಾಗ ಅವರ ಮೇಲೆ ಬೇಸರ ಕಾಡುವುದು ಸಹಜ. ಅದು ಹೆಮ್ಮರವಾಗಿ ಬೆಳೆದರೆ ಸಂಬಂಧಗಳು ಹಾಳಾಗಿ ಹೊಸ ಸಂಬಂಧದತ್ತ ಮುಖ ಮಾಡುವ ಸಾಧ್ಯತೆ ಹೆಚ್ಚು.

ಭಿನ್ನಾಭಿಪ್ರಾಯ

ಒಂದು ವಿಚಾರದ ಮೇಲೆ ಇಬ್ಬರಿಗೂ ಬೇರೆ ಬೇರೆ ಅಭಿಪ್ರಾಯ ಇರಬಹುದು. ಒಬ್ಬರು ಆಯ್ಕೆ ಮಾಡುವುದನ್ನು, ಒಬ್ಬರ ನಿರ್ಧಾರವನ್ನು ಮತ್ತೊಬ್ಬರು ಗೌರವಿಸದೆ ಇರಬಹುದು ಅಥವಾ ಇಷ್ಟಪಡದೆ ಇರಬಹುದು. ಈ ರೀತಿ ಆದಲ್ಲಿ ತಮ್ಮ ಭಾವನೆಗೆ ಬೆಲೆ ಇಲ್ಲ ಎಂಬ ಯೋಚನೆಯಿಂದಲೇ ನಿಮ್ಮ ಮೇಲೆ ಆಸಕ್ತಿ ಕಡಿಮೆ ಆಗಿ ವಿವಾಹೇತರ ಸಂಬಂಧವನ್ನು ಪ್ರಚೋದಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ