ತುಪ್ಪದ ಉಪಯೋಗ ತಿಳಿಯದೆ ಬೆಪ್ಪಾಗಬೇಡಿ; ಚಳಿಗಾಲದಲ್ಲಿ ಸೇವಿಸಿದ್ರೆ ನಿಮ್ಮಷ್ಟು ಆರೋಗ್ಯವಂತರು ಬೇರೆ ಯಾರಿಲ್ಲ
Nov 07, 2023 07:15 AM IST
ತುಪ್ಪದ ಉಪಯೋಗ ತಿಳಿಯದೆ ಬೆಪ್ಪಾಗಬೇಡಿ; ಚಳಿಗಾಲದಲ್ಲಿ ಸೇವಿಸಿದ್ರೆ ನಿಮ್ಮಷ್ಟು ಆರೋಗ್ಯವಂತರು ಬೇರೆ ಯಾರಿಲ್ಲ
- Ghee in Winter: ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಎಣ್ಣೆ ಮತ್ತು ಜಿಡ್ಡಿನ ಪದಾರ್ಥಗಳ ಅವಶ್ಯಕತೆ ಇರುತ್ತದೆ. ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆ, ಒಡೆದ ಹಿಮ್ಮಡಿ, ಕಡಿಮೆ ರೋಗನಿರೋಧಕ ಶಕ್ತಿ ಮುಂತಾದವುಗಳಿಗೆ ತುಪ್ಪ ಸೇವನೆ ಉತ್ತಮ ಪರಿಹಾರ. ದಿನನಿತ್ಯದ ಆಹಾರದಲ್ಲಿಯೇ ಈ ರೀತಿಯಾಗಿ ತುಪ್ಪ ಸೇವಿಸಿ. ಚಳಿಗಾಲದಲ್ಲಿ ನಿಮ್ಮನ್ನು ಕಾಪಾಡಿಕೊಳ್ಳಿ.(ಬರಹ: ಅರ್ಚನಾ ವಿ. ಭಟ್)
ಚಳಿಗಾಲ ದೇಶದ ಹಲವು ಭಾಗಗಳಲ್ಲಿ ನಿಧಾನವಾಗಿ ಪ್ರಾರಂಭವಾಗಿದೆ. ಜೊತೆಗೆ ಹವಾಮಾನ ಬದಲಾಗುತ್ತಿದೆ. ಇದು ರೋಗನಿರೋಧಕ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ನಮ್ಮ ಆಹಾರ ಪದ್ದತಿಯಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರಗಳನ್ನು ಸೇರಿಸಿಕೊಳ್ಳಬೇಕಾಗಿದೆ. ಅವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವುದಾದರೆ ತುಪ್ಪ ಬಹಳ ಮಹತ್ವದ ಆಹಾರವಾಗಿದೆ. ಅದು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ತುಪ್ಪವನ್ನು ಚಳಿಗಾಲದಲ್ಲಿ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬ ಭಯ ಕೆಲವರಲ್ಲಿ ಕಾಡುತ್ತಿರುತ್ತದೆ. ಆದರೆ ತುಪ್ಪದಲ್ಲಿರುವ ಕೊಬ್ಬಿನಾಂಶ ಆರೋಗ್ಯಕರವಾದದ್ದು ಮತ್ತು ಅದು ದೇಹಕ್ಕೆ ಅತ್ಯಗತ್ಯ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ.
ನಮ್ಮ ಪೂರ್ವಜರ ಕಾಲದಿಂದಲೂ ತುಪ್ಪ ಭಾರತೀಯರ ಅಡುಗೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಇದು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದ್ದು, ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತದೆ. ಇದು ವಿಟಮಿನ್ ಎ, ಡಿ, ಇ ಮತ್ತು ಕರಗಬಲ್ಲ ಕೊಬ್ಬನ್ನು ಹೊಂದಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ತುಪ್ಪದಲ್ಲಿ ಆಂಟಿಒಕ್ಸಿಡೆಂಟ್ ಹೇರಳವಾಗಿದ್ದು, ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ಇದು ಆಹಾರದಲ್ಲಿರುವ ಪೋಷಕಾಂಶಗಳನ್ನು ಸಂರಕ್ಷಿಸುವುದರಿಂದ ಅಡುಗೆಗೂ ಸೂಕ್ತವಾಗಿದೆ. ಚಳಿಗಾಲದ ಆಹಾರದಲ್ಲಿ ತುಪ್ಪ ಸೇರಿಸುವುದು ರುಚಿಯನ್ನು ಹೆಚ್ಚಿಸುವುದಲ್ಲದೆ ದೇಹದ ಆರೋಗ್ಯವನ್ನು ಸಹ ಖಚಿತವಾಗಿ ಕಾಪಾಡಬಲ್ಲದು. ತುಪ್ಪವನ್ನುಯಾವ ಆಹಾರದ ಜೊತೆ ಹೇಗೆ ಸೇವಿಸಬಬಹುದು ಆ ವಿಧಾನಗಳನ್ನು ಇಲ್ಲಿವೆ.
ದಿನನಿತ್ಯದ ಆಹಾರದಲ್ಲಿ ತುಪ್ಪದ ಬಳಕೆ ಹೀಗಿರಲಿ
- ರೊಟ್ಟಿಗೆ ತುಪ್ಪ
ದಿನನಿತ್ಯ ಸೇವಿಸುವ ರೊಟ್ಟಿಗೆ ತುಪ್ಪ ಹಚ್ಚಿ ತಿನ್ನುವುದು ಸುಲಭವಾದ ಮಾರ್ಗವಾಗಿದೆ. ಇದರ ಹೊರತಾಗಿ, ಸ್ಟಫ್ಡ್ ಪರಾಠಗಳನ್ನು ಮಾಡುವಾಗ ತುಪ್ಪ ಹಚ್ಚುವುದರ ಮೂಲಕ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
- ಅಡುಗೆಗೆ ತುಪ್ಪದ ಬಳಕೆ
ನಿಮ್ಮ ಆಹಾರದಲ್ಲಿ ತುಪ್ಪ ಸೇರಿಸಿಕೊಳ್ಳಲು ಸುಲಭ ಮತ್ತು ಉತ್ತಮ ಮಾರ್ಗವೆಂದರೆ ಆಹಾರವನ್ನು ತುಪ್ಪದಲ್ಲಿ ಬೇಯಿಸುವುದು. ಅಂದರೆ ಸಂಸ್ಕರಿಸಿದ ಎಣ್ಣೆಯ ಬದಲು ತುಪ್ಪದಲ್ಲಿ ತರಕಾರಿಗಳನ್ನು ಬೇಯಿಸುವುದು. ಅದು ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ತುಪ್ಪವು ತರಕಾರಿಗಳಲ್ಲಿ ಕಂಡುಬರುವ ಕರಗಬಹುದಾದ ಕೊಬ್ಬಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ದಾಲ್ ಮತ್ತು ಸೂಪ್‌ಗೆ ತುಪ್ಪ ಸೇರಿಸಿ
ತುಪ್ಪ ಸೇವಿಸಲು ಇನ್ನೂ ಸುಲಭದ ಮಾರ್ಗ ಹುಡುಕುತ್ತಿದ್ದರೆ ನಿಮ್ಮ ಸೂಪ್ ಅಥವಾ ದಾಲ್‌ನಲ್ಲಿ ಒಂದು ಚಮಚ ತುಪ್ಪ ಸೇರಿಸಿ. ಬೇಳೆಕಾಳುಗಳಿಂದ ತಯಾರಿಸುವ ದಾಲ್, ಕ್ವಿನೋವಾ, ಸೂಪ್‌ಗಳಿಗೆ ಒಂದು ಚಮಚ ತುಪ್ಪವನ್ನು ಸೇರಿಸಿ, ನಂತರ ಅದರ ರುಚಿ ಆನಂದಿಸಿ. ಇದು ಚಳಿಗಾಲದಲ್ಲಿ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಲು ಸುಲಭದ ಉಪಾಯವಾಗಿದೆ.
- ಸ್ನಾಕ್ಸ್‌ಗಳಲ್ಲಿ ತುಪ್ಪ
ಮನೆಯಲ್ಲಿ ತಯಾರಿಸಿದ ಪಾಪ್ ಕಾರ್ನ್ ಅಥವಾ ಸ್ವೀಟ್ ಕಾರ್ನ್‌ನೊಂದಿಗೆ ತುಪ್ಪವನ್ನು ಬೆರೆಸಿ ತಿನ್ನಬಹುದು.
- ಹಸಿ ಅರಿಶಿಣ ಮತ್ತು ತುಪ್ಪ
ಮತ್ತೊಂದು ಪರಿಣಾಮಕಾರಿ ವಿಧಾನವೆಂದರೆ ಹಸಿ ಅರಿಶಿಣ ಮತ್ತು ಒಂದು ಚಮಚ ತುಪ್ಪವನ್ನು ಮಿಕ್ಸ್ ಮಾಡಿ . ಈ ಪೇಸ್ಟ್ ಅನ್ನು ಒಂದು ಕಪ್ ಹಾಲಿನಲ್ಲಿ ಸೇರಿಸಿ ಕುಡಿಯಿರಿ. ಅಥವಾ ನಿಮ್ಮ ಬೆಳಗಿನ ಕಾಫಿ ಅಥವಾ ಟೀಗೂ ಸೇರಿಸಿಕೊಳ್ಳಬಹುದು. ಈ ರೀತಿ ತುಪ್ಪವನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ನಿಮ್ಮದಾಗುತ್ತದೆ.