logo
ಕನ್ನಡ ಸುದ್ದಿ  /  ಜೀವನಶೈಲಿ  /  Womens Day: ಮಹಿಳೆಯರೇ ವಯಸ್ಸಾಯ್ತು ಅಂತ ಕೊರಗಬೇಡಿ, 60ರಲ್ಲೂ 30ರ ಉತ್ಸಾಹವಿರಲು ಹೀಗಿರಲಿ ನಿಮ್ಮ ಜೀವನಶೈಲಿ

Womens Day: ಮಹಿಳೆಯರೇ ವಯಸ್ಸಾಯ್ತು ಅಂತ ಕೊರಗಬೇಡಿ, 60ರಲ್ಲೂ 30ರ ಉತ್ಸಾಹವಿರಲು ಹೀಗಿರಲಿ ನಿಮ್ಮ ಜೀವನಶೈಲಿ

Reshma HT Kannada

Mar 05, 2024 02:36 PM IST

google News

60ರಲ್ಲೂ 30ರ ಉತ್ಸಾಹವಿರಲು ಹೀಗಿರಲಿ ನಿಮ್ಮ ಜೀವನಶೈಲಿ

    • ಮಹಿಳೆಯರು 55-60 ವರ್ಷ ವಯಸ್ಸಾದ ತಕ್ಷಣ ಬದುಕಿನಲ್ಲಿ ಎಲ್ಲವೂ ಮುಗಿಯಿತು ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಮಾತ್ರವಲ್ಲ ಇಲ್ಲದ ಚಿಂತೆಗಳಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಅಂತಹವರು 60ರಲ್ಲೂ 30ರ ವಯಸ್ಸಿನವರಂತೆ ಉತ್ಸಾಹದಿಂದಿರಲು ಈ ಟಿಪ್ಸ್‌ಗಳನ್ನು ಪಾಲಿಸಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಸುಧಾರಿಸುತ್ತದೆ. 
60ರಲ್ಲೂ 30ರ ಉತ್ಸಾಹವಿರಲು ಹೀಗಿರಲಿ ನಿಮ್ಮ ಜೀವನಶೈಲಿ
60ರಲ್ಲೂ 30ರ ಉತ್ಸಾಹವಿರಲು ಹೀಗಿರಲಿ ನಿಮ್ಮ ಜೀವನಶೈಲಿ

ʼನಂಗೀಗ 57 ವರ್ಷ, ಮಕ್ಕಳಿಗೆ ಮದುವೆ ಆಗಿ ಮೊಮ್ಮಕ್ಕಳು ಆಗಿವೆ. ನಿವೃತ್ತಿಗೆ ಇನ್ನು 3 ವರ್ಷ ಬಾಕಿ, ಯಾಕೋ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ವಾಲೆಂಟರಿ ರಿಟೈರ್‌ಮೆಂಟ್‌ ತೆಗೆದುಕೊಳ್ಳೋಣ ಅನ್ನಿಸುತ್ತಿದೆ. ನಂಗೆ ಇನ್ನೇನು ಆಗಬೇಕಿದೆ ಅಲ್ವಾ, ಅದರ ಮಧ್ಯೆ ಈ ಬಿಪಿ, ಶುಗರ್‌ ಸಮಸ್ಯೆ ಬೇರೆ, ಬದುಕು ಸಾಕು ಎನ್ನಿಸುತ್ತಿದೆʼ ಹೀಗೆ ಬೇಸರ ತೋಡಿಕೊಳ್ಳುತ್ತಿದ್ದರು ಆತ್ಮೀಯರಾದ ವಾರಿಜಾ ಹೆಗಡೆ. ಇದು ಅವರೊಬ್ಬರ ಕಥೆಯಲ್ಲ. ಬಹುತೇಕ ಮಹಿಳೆಯರು 50 ವರ್ಷ ದಾಟಿದ ಕೂಡಲೇ ಜೀವಾನೋತ್ಸಹ ಇಲ್ಲದಂತೆ ಆಡುತ್ತಾರೆ. ಬದುಕಿನಲ್ಲಿ ಎಲ್ಲವೂ ಮುಗಿಯಿತು ಎನ್ನುವ ಭಾವ ಅವರಲ್ಲಿ ಆವರಿಸುತ್ತದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ.

ವಯಸ್ಸು 50 ದಾಟುತ್ತಿದ್ದಂತೆ ಮಹಿಳೆಯರಲ್ಲಿ ಜೀವನೋತ್ಸಾಹ ಕುಗ್ಗುವುದು ಸಹಜ. ಬದುಕಿನ ಜವಾಬ್ದಾರಿಗಳು, ವಯೋಸಹಜ ಸಮಸ್ಯೆಗಳು, ಒತ್ತಡ, ನಿವೃತ್ತಿಯ ಸಮಯ ಹತ್ತಿರವಾಗುವುದು ಈ ಎಲ್ಲದರ ಕಾರಣದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹಾಗಂತ ಬದುಕು ಅಷ್ಟಕ್ಕೇ ಮುಗಿಯುತ್ತದೆ ಎಂದಲ್ಲ. 60ರ ನಂತರವೂ 30ರ ಉತ್ಸಾಹ ನಿಮ್ಮಲ್ಲಿ ಇರಬೇಕು ಅಂದ್ರೆ ನಿಮ್ಮ ಜೀವನಶೈಲಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ತಪ್ಪದೇ ರೂಢಿಸಿಕೊಳ್ಳಬೇಕು. ಇದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ.

ಆರೋಗ್ಯಕರ ಆಹಾರ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳುವುದು

ವಯಸ್ಸು ಯಾವುದೇ ಇರಲಿ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಆಹಾರಕ್ರಮದಲ್ಲಿ ಹಣ್ಣು-ತರಕಾರಿಗಳನ್ನು ಹೆಚ್ಚು ಹೆಚ್ಚು ಸೇರಿಸಿ. ಅದರಲ್ಲೂ 60ರ ನಂತರ ಪೋಷಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ಕಡಿಮೆ ಕಾರ್ಬೊಹೈಡ್ರೇಟ್‌ ಇರುವ ಆಹಾರಗಳು, ತರಕಾರಿ, ಹಣ್ಣು, ಮೀನು, ಬೀಜಗಳು, ಧಾನ್ಯಗಳು, ಉತ್ಕರ್ಷಣ ನಿರೋಧಕಗಳು, ಪೊಟ್ಯಾಶಿಯಂ, ಒಮೆಗಾ 3 ಅಂಶ ಇರುವ ಆಹಾರಗಳ ಸೇವನೆಗೆ ಹೆಚ್ಚು ಒತ್ತು ನೀಡಿ.

ವ್ಯಾಯಾಮ ಅಥವಾ ವಾಕಿಂಗ್‌

ವಯಸ್ಸಾಯ್ತು ಇನ್ನೇನು ವ್ಯಾಯಾಮ, ವಾಕಿಂಗ್‌ ಮಾಡುವುದು ಎನ್ನುವ ಮನೋಭಾವ ಖಂಡಿತ ಬೇಡ. ಆರೋಗ್ಯಕರ ಆಹಾರ ಸೇವನೆಯಷ್ಟೇ ವ್ಯಾಯಾಮ ಹಾಗೂ ವಾಕಿಂಗ್‌ ಕೂಡ ತಪ್ಪದೇ ಪಾಲಿಸುವುದು ಬಹಳ ಅವಶ್ಯ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ 60ರ ನಂತರ ಪ್ರತಿದಿನ ತಪ್ಪದೇ ದೇಹದಂಡಿಸುವುದು ಹಲವು ಕಾರಣಗಳಿಂದ ಅವಶ್ಯವಾಗಿದೆ. ವ್ಯಾಯಾಮ ಎಂದರೆ ಜಿಮ್‌ ಅಂತಲೇ ಇಲ್ಲ. ಡಾನ್ಸ್‌, ಏರೋಬಿಕ್ಸ್‌, ಈಜುವುದು ಹೀಗೆ ಯಾವುದೇ ಚಟುವಟಿಕೆಯಲ್ಲಿ ತೊಡಗಬಹುದು.

ಮೆದುಳನ್ನು ಸಕ್ರಿಯವಾಗಿರಿಸಿಕೊಳ್ಳಿ

ಹೊಸ ಹೊಸ ಅಧ್ಯಯನಗಳಲ್ಲಿ ಮನಸ್ಸನ್ನು ತೊಡಗಿಸುವ ಮೂಲಕ ನಿಮ್ಮ ದೇಹ ಹಾಗೂ ಮನಸ್ಸಿಗೆ ವಯಸ್ಸಾಗದಂತೆ ನೋಡಿಕೊಳ್ಳಬಹುದು. ಮ್ಯೂಸಿಕಲ್‌ ಇನ್ಸ್ಟ್ರುಮೆಂಟ್‌ಗಳನ್ನು ಕಲಿಯುವುದು, ಪುಸ್ತಕ ಬರವಣಿಗೆ, ಚಿತ್ರಕಲೆ ಇಂತಹ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆ ಮೂಲಕ ಮನಸ್ಸನ್ನು ಕ್ರಿಯಾಶೀಲವಾಗಿರಿಸಿಕೊಳ್ಳಿ.

ಧನಾತ್ಮಕವಾಗಿರಿ

ನಿಮ್ಮ ವರ್ತನೆಯು ದೀರ್ಘಾಯಸ್ಸಿನ ಮೇಲೆ ಪರಿಣಾಮ ಬೀರಬಹುದು. ಬದುಕಿನಲ್ಲಿ ಆಶಾವಾದ ಇರಿಸಿಕೊಳ್ಳುವುದು ಬಹಳ ಮುಖ್ಯ. ಆಶಾವಾದದಿಂದ ಬದುಕುವವರು ಹೆಚ್ಚು ಕಾಲ ಬದುಕುತ್ತಾರೆ ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ.

ಕ್ರಿಯಾಶೀಲರಾಗಿರಿ 

60ರ ವಯಸ್ಸಿನಲ್ಲಿ ಹಲವರು ಜಡಜೀವನ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆದರೆ ಇದು ತಪ್ಪು, ಅದಕ್ಕಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಕ್ರಿಯವಾಗಿ ಇರಲು ಸಾಕಷ್ಟು ದಾರಿಗಳಿವೆ ಅದನ್ನು ಅನುಸರಿಸಿ. ಸಾಮಾಜಿಕವಾಗಿ ಬೆರೆಯುವುದು, ಆರೋಗ್ಯಕರ ಅಡುಗೆಗಳನ್ನು ತಯಾರಿಸುವುದು, ನಿಮ್ಮ ಬದುಕಿನ ಉದ್ದೇಶವನ್ನು ಹೆಚ್ಚಿಸುವ ಯಾವುದೇ ಕೆಲಸ ಮಾಡುವುದು ಈ ಎಲ್ಲವೂ ನಿಮ್ಮಲ್ಲಿ ಜೀವನೋತ್ಸಾಹ ಹೆಚ್ಚಲು ಕಾರಣವಾಗುತ್ತದೆ.

ಸಾಮಾಜಿಕ ಜೀವನವನ್ನು ಕಾಪಾಡಿಕೊಳ್ಳುವುದು

ಸಾಮಾಜಿಕ ಜೀವನವನ್ನು ಕಾಪಾಡಿಕೊಳ್ಳುವುದು ಎಂದರೆ ಸಾಮಾಜಿಕವಾಗಿ ಬೆರೆಯುವುದು. 60ರ ನಂತರ ಮನೆಯೊಳಗೆ ಕುಳಿತು ವಯಸ್ಸಾಗಿದೆ ಎಂದು ಚಿಂತಿಸುತ್ತಿರಬೇಡಿ. ಜನರ ಜೊತೆ ಬೆರೆಯಿರಿ. ಸ್ನೇಹಿತರ ಕೂಟ ರಚಿಸಿ. ಇದರಿಂದ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ ವೃದ್ಧಿಯಾಗಲು ಸಾಧ್ಯ. ಇದು ವಯೋಸಹಜ ಖಿನ್ನತೆಯಂತಹ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ತಪಾಸಣೆ

60ರ ನಂತರ ದೈಹಿಕ ಆರೋಗ್ಯವನ್ನು ಸ್ಥಿರವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿರಂತರ ತಪಾಸಣೆಗೆ ಒಳಗಾಗಿ. ದೈಹಿಕ ಆರೋಗ್ಯ ಸಮಸ್ಯೆಗಳು ಹೆಚ್ಚಿದಾಗ ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ಕ್ರಮ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.

60ರ ನಂತರ ವಯಸ್ಸಾಯ್ತು ಎಂದು ಕೊರಗುತ್ತಾ ಇಲ್ಲಸಲ್ಲದ ಸಮಸ್ಯೆಗಳನ್ನು ತಂದುಕೊಳ್ಳುವುದಕ್ಕಿಂತ ಜೀವನಶೈಲಿಯನ್ನು ಸುಧಾರಿಸಿಕೊಳ್ಳುವ ಮೂಲಕ 60ರಲ್ಲೂ 30ರ ವಯಸ್ಸಿನವರಂತೆ ಉತ್ಸಾಹದಿಂದಿರುವುದನ್ನು ಅಭ್ಯಾಸ ಮಾಡಿ. ದೈಹಿಕ ಆರೋಗ್ಯಕ್ಕೆ ಮಾನಸಿಕ ಆರೋಗ್ಯ ಸುಧಾರಿಸುವುದು ಬಹಳ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬೇಡಿ.

(This copy first appeared in Hindustan Times Kannada website. To read more like this please logon to kannada.hindustantimes.com)

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ