ಬಂಜೆತನ ಶಾಶ್ವತ ಸಮಸ್ಯೆನಾ? ಫಲವತ್ತತೆಯನ್ನು ಹೆಚ್ಚಿಸಲು ಇಲ್ಲಿವೆ ಸಲಹೆ
Nov 27, 2023 09:00 PM IST
ಫಲವತ್ತತೆ ಹೆಚ್ಚಿಸಲು ಸಲಹೆ (ಪ್ರಾತಿನಿಧಿಕ ಚಿತ್ರ)
- Infertility: ಬಂಜೆತನವು ಅನೇಕ ದಂಪತಿಗಳಿಗೆ ಜೀವಮಾನದ ಹೋರಾಟವಾಗಿ ಕಂಡುಬರುತ್ತದೆಯಾದರೂ, ಅದು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ, ವೈದ್ಯಕೀಯ ಚಿಕಿತ್ಸೆಗಳನ್ನು ಹುಡುಕುವ ಮೂಲಕ ದಂಪತಿಗಳು ತಾವು ಮಕ್ಕಳನ್ನು ಹೊಂದುವ ಕನಸು ಕಾಣಬಹುದು ಎಂಬುದು ಭಾರತಿ ಧೋರೆಪಾಟೀಲ್ ಅವರ ಸಲಹೆ.
ಬಂಜೆತನವನ್ನು ಸಾಮಾನ್ಯವಾಗಿ ಶಾಶ್ವತ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ, ದಂಪತಿಗಳು ಹತಾಶರಾಗುತ್ತಾರೆ, ನೋವು ಪಡುತ್ತಾರೆ. ಆದರೆ ಬಂಜೆತನವು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒತ್ತಡ, ಕಳಪೆ ಆಹಾರದಂತಹ ಜೀವನಶೈಲಿಯ ಅಂಶಗಳು ತಾತ್ಕಾಲಿಕವಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು.
ಈ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮತ್ತು ದಂಪತಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡುವ ಮೂಲಕ ಅವರು ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಎಚ್ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಪುಣೆಯ ಕನ್ಸಲ್ಟೆಂಟ್ ಇನ್ಫರ್ಟಿಲಿಟಿ ಎಕ್ಸ್ಫರ್ಟ್, ಡಾ. ಭಾರತಿ ಧೋರೆಪಾಟೀಲ್ ಅವರು ಗರ್ಭಧರಿಸುವ ಅವಕಾಶದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
1. ವಯಸ್ಸು: ಮಹಿಳೆಯರಿಗೆ ವಯಸ್ಸಾದಂತೆ, ಅವರ ಫಲವತ್ತತೆ ಕ್ಷೀಣಿಸುತ್ತದೆ. ನೈಸರ್ಗಿಕವಾಗಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ.
2. ಒತ್ತಡ: ತಾತ್ಕಾಲಿಕವಾಗಿ ಬಂಜೆತನಕ್ಕೆ ಒಳಗಾಗಲು ಒತ್ತಡ ಕೂಡ ಕಾರಣವಾಗಬಹುದು. ಒತ್ತಡಕ್ಕೊಳಗಾದಾಗ ಅಂಡೋತ್ಪತ್ತಿ ಮತ್ತು ವೀರ್ಯ ಉತ್ಪಾದನೆಗೆ ಅಡ್ಡಿಪಡಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
3. ಆರೋಗ್ಯ ಸಮಸ್ಯೆಗಳು: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಅಥವಾ ಥೈರಾಯ್ಡ್ ನಂತಹ ವೈದ್ಯಕೀಯ ಪರಿಸ್ಥಿತಿಗಳು ಸಹ ಗರ್ಭಧಾರಣೆಗೆ ಅಗತ್ಯವಾದ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸಬಹುದು.
ಫಲವತ್ತತೆಯನ್ನು ಹೆಚ್ಚಿಸಲು ಸಲಹೆಗಳು:
1. ಒಬ್ಬರು ಏನು ತಿನ್ನುತ್ತಾರೆ ಎಂಬುದು ಫಲವತ್ತತೆ ಸೇರಿದಂತೆ ಒಟ್ಟಾರೆ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವು ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾದಾಮಿ, ಅವಕಾಡೊ, ಸೊಪ್ಪು ಮತ್ತು ಮೊಟ್ಟೆ ಫಲವತ್ತತೆಯನ್ನು ಬೆಂಬಲಿಸುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಭಾರತಿ ಧೋರೆಪಾಟೀಲ್ ಹೇಳುತ್ತಾರೆ. ಸಕ್ಕರೆ ಅಥವಾ ಅನಾರೋಗ್ಯಕರ ಕೊಬ್ಬು ಹೆಚ್ಚಿಸುವ ಸಂಸ್ಕರಿತ ಆಹಾರಗಳ ಬಳಕೆಯನ್ನು ಮಿತಿಗೊಳಿಸಬೇಕು.
2. ನೀವು ನಿರಂತರವಾಗಿ ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದರೆ, ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಸ್ವಯಂ-ಆರೈಕೆಗೆ ಆದ್ಯತೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳುವುದು ಯೋಗ್ಯವಾಗಿದೆ. ಯೋಗ, ಧ್ಯಾನ, ದೀರ್ಘ ಉಸಿರಾಟದ ವ್ಯಾಯಾಮಗಳು ಅಥವಾ ನಿಯಮಿತ ದೈಹಿಕ ಚಟುವಟಿಕೆಯಂತಹ ಒತ್ತಡ ಕಡಿಮೆಗೊಳಿಸುವ ತಂತ್ರಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3. ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಮತ್ತು intrauterine insemination (IUI) ನಂತಹ ತಂತ್ರಜ್ಞಾನದ ಕಾರ್ಯವಿಧಾನಗಳು ಸಹ ತಾತ್ಕಾಲಿಕ ಬಂಜೆತನವನ್ನು ಎದುರಿಸುತ್ತಿರುವವರಿಗೆ ಸಹಾಯ ಮಾಡುತ್ತದೆ.
ಬಂಜೆತನವು ಅನೇಕ ದಂಪತಿಗಳಿಗೆ ಜೀವಮಾನದ ಹೋರಾಟವಾಗಿ ಕಂಡುಬರುತ್ತದೆಯಾದರೂ, ಅದು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ, ವೈದ್ಯಕೀಯ ಚಿಕಿತ್ಸೆಗಳನ್ನು ಹುಡುಕುವ ಮೂಲಕ ದಂಪತಿಗಳು ತಾವು ಮಕ್ಕಳನ್ನು ಹೊಂದುವ ಕನಸು ಕಾಣಬಹುದು ಎಂಬುದು ಭಾರತಿ ಧೋರೆಪಾಟೀಲ್ ಅವರ ಸಲಹೆ.
ಬಂಜೆತನ ತಜ್ಞರೊಂದಿಗೆ ಸಮಾಲೋಚಿಸುವುದು ಫಲವತ್ತತೆಯ ಸವಾಲುಗಳಿಗೆ ಕಾರಣವಾಗುವ ಯಾವುದೇ ಸಂಭಾವ್ಯ ವೈದ್ಯಕೀಯ ಅಂಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ನಿಮಗೆ ಮಕ್ಕಳಾಗದಿದ್ದರೆ ಕಾನೂನಿನ ಪ್ರಕಾರ ಬಾಡಿಗೆ ತಾಯ್ತನದ ಬಗ್ಗೆ ಯೋಚಿಸಬಹುದು ಅಥವಾ ಮಗುವನ್ನು ದತ್ತು ಪಡೆಯಬಹುದು.