logo
ಕನ್ನಡ ಸುದ್ದಿ  /  ಜೀವನಶೈಲಿ  /  Cervical Cancer: ಮಹಿಳೆಯರನ್ನು ಕಾಡುತ್ತಿದೆ ಮಾರಣಾಂತಿಕ ಗರ್ಭಕಂಠದ ಕ್ಯಾನ್ಸರ್; ಆತಂಕ ಬೇಡ, ಇರಲಿ ಜೋಪಾನ

Cervical Cancer: ಮಹಿಳೆಯರನ್ನು ಕಾಡುತ್ತಿದೆ ಮಾರಣಾಂತಿಕ ಗರ್ಭಕಂಠದ ಕ್ಯಾನ್ಸರ್; ಆತಂಕ ಬೇಡ, ಇರಲಿ ಜೋಪಾನ

Meghana B HT Kannada

Jan 17, 2024 09:06 PM IST

google News

ಮಹಿಳೆಯರನ್ನು ಕಾಡುತ್ತಿದೆ ಗರ್ಭಕಂಠದ ಕ್ಯಾನ್ಸರ್ (ಪ್ರಾತಿನಿಧಿಕ ಚಿತ್ರ)

    • Cervical Cancer: ಜನವರಿ ತಿಂಗಳನ್ನು ಗರ್ಭಕಂಠದ ಕ್ಯಾನ್ಸರ್​ ಜಾಗೃತಿ ತಿಂಗಳು ಎಂದೇ ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್​ ಬಳಿಕ ಭಾರತೀಯ ಮಹಿಳೆಯರನ್ನು ಕಾಡುತ್ತಿರುವ ಮತ್ತೊಂದು ಮಾರಕ ಕ್ಯಾನ್ಸರ್​ ಎಂದರೆ ಅದು ಗರ್ಭಕಂಠದ ಕ್ಯಾನ್ಸರ್​. ಈ ಕಾಯಿಲೆ ಹೇಗೆ ಬರುತ್ತೆ..? ಲಕ್ಷಣಗಳೇನು..?ಚಿಕಿತ್ಸೆಯೇನು? ಇಲ್ಲಿದೆ ಮಾಹಿತಿ
ಮಹಿಳೆಯರನ್ನು ಕಾಡುತ್ತಿದೆ ಗರ್ಭಕಂಠದ ಕ್ಯಾನ್ಸರ್ (ಪ್ರಾತಿನಿಧಿಕ ಚಿತ್ರ)
ಮಹಿಳೆಯರನ್ನು ಕಾಡುತ್ತಿದೆ ಗರ್ಭಕಂಠದ ಕ್ಯಾನ್ಸರ್ (ಪ್ರಾತಿನಿಧಿಕ ಚಿತ್ರ) (freepik)

ಜನವರಿ ತಿಂಗಳನ್ನು ಗರ್ಭಕಂಠದ ಜಾಗೃತಿ ತಿಂಗಳು ಎಂದು ಕರೆಯಲಾಗುತ್ತದೆ. ಇದು ಗರ್ಭಕೋಶದ ಕ್ಯಾನ್ಸರ್​ಗಿಂತ ವಿಭಿನ್ನವಾದ ಮಾರಣಾಂತಿಕ ಕ್ಯಾನ್ಸರ್​​ನ ಒಂದು ಬಗೆಯಾಗಿದೆ. ಮುಂಬೈನ ಟಾಟಾ ಮೆಮೋರಿಯಲ್​ ಆಸ್ಪತ್ರೆ ನೀಡಿರುವ ವರದಿಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್​ ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆಯ ಜೀವವನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಭಾರತದಲ್ಲಿ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತಿರುವ ಅತ್ಯಂತ ಅಪಾಯಕಾರಿ ಕಾಯಿಲೆಗಳ ಪೈಕಿ ಗರ್ಭಕಂಠದ ಕ್ಯಾನ್ಸರ್​ ಕೂಡ ಒಂದಾಗಿದೆ. ಯೋನಿಯಿಂದ ಗರ್ಭಾಶಯದವರೆಗೂ ಈ ಕ್ಯಾನ್ಸರ್​ ಆವರಿಸಿಕೊಳ್ಳುತ್ತದೆ.

ಸ್ತನ ಕ್ಯಾನ್ಸರ್​ ಹೊರತುಪಡಿಸಿದ್ರೆ ಭಾರತೀಯ ಮಹಿಳೆಯರಲ್ಲಿ ಕ್ಯಾನ್ಸರ್​ ಸಂಬಂಧಿ ಸಾವುಗಳಿಗೆ ಕಾರಣವಾಗುತ್ತಿರುವ ಎರಡನೇ ಕ್ಯಾನ್ಸರ್​ ವಿಧ ಇದಾಗಿದೆ. ದೆಹಲಿಯ ಕ್ಯಾನ್ಸರ್​ ಆಸ್ಪತ್ರೆಯ ಆಂಕೋಲೊಜಿ ವಿಭಾಗದ ವೈದ್ಯರಾದ ಡಾ. ಆಶಿಶ್​ ಗುಪ್ತಾ ನೀಡಿರುವ ಮಾಹಿತಿಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್​ ಹೆಚ್​ಪಿವಿ ( HPV) ಸೋಂಕಿನೊಂದಿಗೆ ನೇರ ಸಂಬಂಧ ಹೊಂದಿರುತ್ತದೆ. ಇದು ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್​ನ ಬಗೆಗಳ ಪೈಕಿ ಒಂದಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ಖ್ಯಾತ ಆಂಕೋಲಜಿ ವೈದ್ಯೆ ಡಾ. ಇಶು ಗುಪ್ತಾ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಗರ್ಭಕಂಠದ ಕ್ಯಾನ್ಸರ್​ ಸೋಂಕನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ಕ್ಯಾನ್ಸರ್​ನ ವಿವಿಧ ಹಂತಗಳ ಬಗ್ಗೆಯೂ ಅವರು ಮಾತನಾಡಿದ್ದು ಅವುಗಳ ಬಗ್ಗೆಯೂ ತಿಳಿದುಕೊಳ್ಳೋಣ :

ಈ ಕ್ಯಾನ್ಸರ್​ನ ಆರಂಭಿಕ ಹಂತದಲ್ಲಿ ಅಸಹಜ ಜೀವಕೋಶಗಳು ದೇಹದಲ್ಲಿ ಅಭಿವೃದ್ಧಿ ಹೊಂದಲು ಆರಂಭಿಸುತ್ತದೆ ಇವುಗಳು ಗರ್ಭಕಂಠದ ಒಳ ಪದರಕ್ಕೆ ಮಾತ್ರ ಸೀಮಿತವಾಗಿ ಇರುತ್ತದೆ. ಈ ಹಂತದಲ್ಲಿ ಕ್ಯಾನ್ಸರ್​ನಿಂದ ಗುಣಮುಖರಾಗುವುದು ಸುಲಭವಾಗಿರುತ್ತದೆ. ವಿವಿಧ ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್​ ಪೀಡಿತ ಮಹಿಳೆಯು ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ.

ಮೊದಲನೇ ಹಂತ : ಈ ಹಂತದಲ್ಲಿ ಗರ್ಭಕಂಠದಲ್ಲಿ ಮಾತ್ರ ಕ್ಯಾನ್ಸರ್​ ಇರುತ್ತದೆ. ಇದಕ್ಕೆ ನಿಮಗೆ ಸೂಕ್ತ ಶಸ್ತ್ರಚಿಕಿತ್ಸೆ ಕೂಡ ಇದೆ. ರೆಡಿಯೇಷನ್​ ಚಿಕಿತ್ಸೆ ಅಥವಾ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬಹುದಾಗಿದೆ.

ಎರಡನೇ ಹಂತ : ಈ ಹಂತದಲ್ಲಿ ಕ್ಯಾನ್ಸರ್​ ಗರ್ಭಕಂಠದ ಆಚೆಗೂ ವಿಸ್ತರಿಸಲು ಆರಂಭಿಸುತ್ತದೆ. ಆದರೂ ಶ್ರೋಣಿ ಭಾಗಕ್ಕೆ ಇದರ ಸೋಂಕು ಇನ್ನೂ ಹರಡಿಲ್ಲವಾದ್ದರಿಂದ ಈ ಹಂತದಲ್ಲಿಯೂ ಕೂಡ ರೇಡಿಯೇಷನ್​ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್​ನ್ನು ಹೊಡೆದೋಡಿಸುವ ಪ್ರಯತ್ನ ಮಾಡಬಹುದಾಗಿದೆ.

ಮೂರನೇ ಹಂತ : ಈ ಹಂತದಲ್ಲಿ ಕ್ಯಾನ್ಸರ್​ ಯೋನಿಯ ಕೆಳಭಾಗ, ಶ್ರೋಣಿ ಭಾಗವನ್ನು ಆವರಿಸಲು ಆರಂಭಿಸುತ್ತದೆ. ಈ ಹಂತದಲ್ಲಿ ವೈದ್ಯರು ಕೀಮೋಥೆರಪಿ ಮೊರೆ ಹೋಗಬಹುದು. ಅಲ್ಲವೇ ಶಸ್ತ್ರಚಿಕಿತ್ಸೆ ಹಾಗೂ ರೆಡಿಯೇಷನ್​ ಥೆರಪಿ ಮೂಲಕ ರೋಗಿಯನ್ನು ಬಚಾವು ಮಾಡುವ ಪ್ರಯತ್ನ ಮಾಡುತ್ತಾರೆ.

ನಾಲ್ಕನೇ ಹಂತ : ಇದು ಗರ್ಭಕಂಠ ಕ್ಯಾನ್ಸರ್​ನ ಅತ್ಯಂತ ಗಂಭೀರ ಹಂತವಾಗಿದೆ. ಈ ಹಂತದಲ್ಲಿ ಕ್ಯಾನ್ಸರ್​ ಮೂತ್ರಕೋಶ, ಗುದನಾಳ ಸೇರಿದಂತೆ ಅಕ್ಕಪಕ್ಕದ ಅಂಗಗಳಿಗೆ ಹರಡಿರುತ್ತದೆ. ಈ ಸಮಯದಲ್ಲಿ ಚಿಕಿತ್ಸೆ ಕೊಡುವುದೂ ಸಹ ಕಷ್ಟವಾಗಿಬಿಡುತ್ತದೆ. ಕೀಮೋಥೆರಪಿ ಮೂಲಕ ರೋಗಿಯನ್ನು ರಕ್ಷಿಸುವ ವಿಧಾನವನ್ನು ವೈದ್ಯರು ಅರಿಸಿಕೊಳ್ಳಬಹುದಾದರೂ ಇದು ಅತ್ಯಂತ ಕ್ಲಿಷ್ಟಕರ ಹಂತವಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಆರಂಭಿಕ ಹಂತದಲ್ಲಿಯೇ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಸುಳಿವು ಸಿಕ್ಕಲ್ಲಿ ರೋಗಿಯನ್ನು ಬಚಾವ್​ ಮಾಡುವುದು ಸುಲಭವಾಗುತ್ತದೆ. ರೆಡಿಯೇಷನ್​ ಥೆರಪಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್​ಕಾರಕ ಕೋಶಗಳನ್ನು ಸಾಯಿಸಬಹುದು. ಗರ್ಭಕಂಠದ ಕ್ಯಾನ್ಸರ್​ಗೆ ಹೆಚ್​ಪಿವಿ ಸೋಂಕು ಮುಖ್ಯ ಕಾರಣವಾಗಿರುವ ಹಿನ್ನೆಲೆಯಲ್ಲಿ ಹೆಚ್​ಪಿವಿ ಲಸಿಕೆ ಪಡೆಯುವುದು ಬಹಳ ಮುಖ್ಯವಾಗಿದೆ. 11-26 ವರ್ಷದ ಹೆಣ್ಣುಮಕ್ಕಳು ಕಡ್ಡಾಯವಾಗಿ ಹೆಚ್​ಪಿವಿ ಲಸಿಕೆಗಳನ್ನು ಪಡೆಯುವುದು ಉತ್ತಮ. ಅಲ್ಲದೇ ಹೆಚ್​ಪಿವಿ ಸೋಂಕಿತ ಪುರುಷನಿಂದ ಈ ಕಾಯಿಲೆಯು ಹರಡುವುದರಿಂದ ಮಹಿಳೆಯರು ಅಸುರಕ್ಷಿತ ಲೈಂಗಿಕ ಕ್ರಿಯೆಗಳನ್ನು ನಡೆಸಬಾರದು. ಅತಿಯಾಗಿ ಜನನನಿಯಂತ್ರಣ ಮಾತ್ರೆ ಸೇವನೆ ಕೂಡ ಗರ್ಭಕಂಠದ ಕ್ಯಾನ್ಸರ್​ಗೆ ಒಂದು ಕಾರಣವಾಗಿರುವುದರಿಂದ ಮಹಿಳೆಯರು ಈ ಬಗ್ಗೆಯೂ ಜಾಗೃತಿಯನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ