Menstrual Cup: ಬಹಳಷ್ಟು ಜನಕ್ಕೆ ಒಗ್ಗೋದಿಲ್ಲ ಮುಟ್ಟಿನ ಕಪ್; ಚೇತನಾ ತೀರ್ಥಹಳ್ಳಿ ಬರಹ
Dec 31, 2023 04:23 PM IST
ಮುಟ್ಟಿನ ಕಪ್
- ಮೆನ್ಸ್ಟ್ರುವಲ್ ಕಪ್ ಬಗ್ಗೆ ಲೇಖಕಿ ಚೇತನಾ ತೀರ್ಥಹಳ್ಳಿ (Gayathri HN) ಅವರು ಫೇಸ್ಬುಕ್ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅವರ ಪೋಸ್ಟ್ ಅನ್ನು ‘ಎಚ್ಟಿ ಕನ್ನಡ’ದಲ್ಲಿ ಮರುಪ್ರಕಟಿಸಲಾಗಿದೆ.
ಮುಟ್ಟಿನ ಕಪ್ ಅಥವಾ ಮೆನ್ಸ್ಟ್ರುವಲ್ ಕಪ್ ಬಗ್ಗೆ ಹಲವರಿಗೆ ತಿಳಿದಿದ್ದರೂ ಕೆಲವರಿಗೇ ತಿಳಿದಿಲ್ಲ. ಮುಟ್ಟಿನ ಕಪ್ ಎನ್ನುವುದು ಮುಟ್ಟಿನ ಸಮಯದಲ್ಲಿ ಸ್ತ್ರೀಯರಿಗೆ ಒಂದು ನೈರ್ಮಲ್ಯ ಸಾಧನವಾಗಿದೆ. ಮುಟ್ಟಿನ ವೇಳೆ ಆಗುವ ರಕ್ತಸ್ರಾವ ಸೋರಿಕೆಯಾಗದಂತೆ ತಡೆಯಲು ಸ್ಯಾನಿಟರಿ ಪ್ಯಾಡ್ಗಳ ಪರ್ಯಾಯವಾಗಿ ಇದನ್ನು ಬಳಸಲಾಗುತ್ತದೆ. ಮುಟ್ಟಿನ ಸಮಯದಲ್ಲಿ ಯೋನಿಗೆ ಈ ಕಪ್ ಅನ್ನು ಸೇರಿಸಲಾಗುತ್ತದೆ. ರಕ್ತದ ಹರಿವಿನ ಪ್ರಮಾಣವನ್ನು ಆಧರಿಸಿ 4 ರಿಂದ 12 ಗಂಟೆಯ ವರೆಗೆ ಒಂದು ಕಪ್ ಬಳಸಬಹುದಾಗಿದೆ.
ಏಕಬಳಕೆ ಹಾಗೂ ಮರುಬಳಕೆ ಮಾಡಬಹುದಾದ ಹಲವು ಬ್ರಾಂಡ್ಗಳ ಕಪ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಕೂಡ 2023ರ ಸೆಪ್ಟೆಂಬರ್ನಲ್ಲಿ ಶುಚಿ ನನ್ನ ಮೈತ್ರಿ ಎಂಬ ಹೆಸರಿನ ಮುಟ್ಟಿನ ಕಪ್ ಯೋಜನೆಗೆ ಚಾಲನೆ ನೀಡಿ 17 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಿಸುತ್ತಿದೆ. ಇದೀಗ ಈ ಕುರಿತು ಲೇಖಕಿ ಚೇತನಾ ತೀರ್ಥಹಳ್ಳಿ (Gayathri HN) ಅವರು ಫೇಸ್ಬುಕ್ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಗಾಯತ್ರಿ ಅವರ ಫೇಸ್ಬುಕ್ ಪೋಸ್ಟ್ ಇಲ್ಲಿದೆ:
"ಮೆನ್ಸ್ಟ್ರುವಲ್ ಕಪ್ ಬಹಳಷ್ಟು ಜನಕ್ಕೆ ಒಗ್ಗೋದಿಲ್ಲ. ನಾನು ಇದರಿಂದಾಗಿ ಒಂದು ದಶಕದ ಹಿಂದೆ ದೀರ್ಘಕಾಲದ ಸೋಂಕು ಮತ್ತು ಅಡ್ಡ ಪರಿಣಾಮಗಳನ್ನು ಅನುಭವಿಸಿದೆ. ಪ್ರತಿಯೊಬ್ಬ ಹೆಣ್ಣಿನ ವೆಜಿನಲ್ ಪಿಹೆಚ್ ವಿಭಿನ್ನವಾಗಿರುತ್ತೆ. ಅನಾಟಮಿ ಕೂಡಾ. ಬಟ್ಟೆಯಿಂದ ಹಿಡಿದು ಪ್ಯಾಡ್ಸ್, ಕಪ್ಸ್ವರೆಗೆ "ಎಲ್ಲರಿಗೂ ಒಗ್ಗುವ" ಸಾಧನ ಯಾವುದೂ ಇಲ್ಲ.
ಕಪ್ಸ್ ಕಡಿಮೆ ದರದಲ್ಲಿ ಕೊಡಲಿ, ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಕಡಿಮೆ ದರಕ್ಕೆ bio degradable pads ಕೂಡಾ ಒದಗಿಸಲಿ. ಆಗ ಅಗ್ಗ ಅಂತ ತಮಗೆ ಒಗ್ಗದ / ಒಗ್ಗುವುದೋ ಇಲ್ಲವೋ ತಿಳಿಯದ ಕಪ್ಸ್ ಏಕೈಕ ಆಯ್ಕೆ ಆಗೋದು ತಪ್ಪುತ್ತದೆ. ಸರ್ಕಾರ ಸೇರಿದಂತೆ ಯಾರೂ ಯಾವುದನ್ನೂ ನಮ್ಮ ಮೇಲೆ ಹೇರದೆ ಇರಲಿ.
ಇನ್ಫೆಕ್ಷನ್ ಎಂಥಾ ನರಕ ಅನ್ನೋದು ಅನುಭವಿಸುವ ಹೆಣ್ಣು ಮಕ್ಕಳಿಗಷ್ಟೇ ಗೊತ್ತು. ಮತ್ತು ಇದು ಕೇವಲ ದೈಹಿಕ ಆರೋಗ್ಯದ ಮೇಲಲ್ಲ, ಮಾನಸಿಕ ಹಾಗೂ ಸಾಂಸಾರಿಕ ಆರೋಗ್ಯಕ್ಕೂ ಹಾನಿಕರ. ಹೀಗಾಗಿ ದಯವಿಟ್ಟು... ಇದು ಗಂಭೀರ ಪೋಸ್ಟ್. ಫೇಸ್ಬುಕ್ ಇದನ್ನೂ ಕೆಳಗೆ ತಳ್ಳಿದ್ರೆ ಬೇಜಾರು".
ನೆಟ್ಟಿಗರ ಪ್ರತಿಕ್ರಿಯೆ
ಗಾಯತ್ರಿ ಅವರ ಪೋಸ್ಟ್ಗೆ ಫೇಸ್ಬುಕ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಕಪ್ ನನಗೆ ಬಹಳ ಸಹಕಾರಿಯಾಗಿದೆ. "ಅಡ್ಜಸ್ಟ್ ಆದರೆ ಬಟ್ಟೆ, ಪ್ಯಾಡ್ ಗಿಂತ ಕಂಫರ್ಟಬಲ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ." ನಮ್ಮನೆಯ ಹೆಣ್ಮಕ್ಕಳು ಬಳಸ್ತಿದ್ದಾರೆ. ಬಹಳ ಒಳ್ಳೆಯದು ಅನ್ನುತ್ತಾರೆ. ನಾನು ಧೈರ್ಯ ಮಾಡಿಲ್ಲ ಇನ್ನೂ" ಎಂದು ಮತ್ತೊಬ್ಬರು ಹೇಳಿದ್ದಾರೆ. "ನನಗೂ ಒಂದು ಆರು ತಿಂಗಳು ಅನುಭವಿಸಿದೆ ಇದು ನನಗೂ ಒಗ್ಲಿಲ್ಲ" ಎಂದಿದ್ದಾರೆ ಮತ್ತೊಬ್ಬರು.
"ನಿಜ ಅದಕ್ಕೆ ಆಯ್ಕೆಗಳು ಇರಬೇಕು ಯಾರಿಗೆ ಯಾವುದು ಅವಶ್ಯಕ ಎಂದೆನಿಸುತ್ತದೆಯೋ ಅದನ್ನೇ ಬಳಸಲಿ ಒಂದನ್ನೇ ಪ್ರಮೋಟ್ ಮಾಡೊ ಭರದಲ್ಲು ಹೇರದಿರಲಿ. ಜೊತೆಗೆ ಪರಿಸರಕ್ಕೆ ಪೂರಕವಾದ ಮ್ಯಾನೇಜ್ಮೆಂಟ್ ಮಾಡಬೇಕು. ಇದನ್ನ ಬಿಟ್ಟು ಹೆಣ್ಣುಮಕ್ಕಳು ಪ್ಯಾಡ್ ಬಳಸೋದರಿಂದ ಇಡೀ ಪರಿಸರ ನಾಶ ಎಂಬ ವಾದವನ್ನು ನಾನು ಒಪ್ಪುವುದಿಲ್ಲ.ಅಡ್ಜೆಸ್ಟ್ ಯಾಕೆ ಆಗಬೇಕು ಯಾರಿಗಾಗಿ ಆಗಬೇಕು ನಮಗೆ comfortable ಆಗೋದನ್ನ ನಾವು ಆಯ್ಕೆ ಮಾಡಿಕೊಳ್ಳಬೇಕು. ನಾನು ಎಷ್ಟು ಕಡೆ ನೋಡಿದೀನಿ ಕಪ್ ಈಗ ಇದೊಂದು ಬಿಸಿನೆಸ್ ತರ ನೋಡಿರುವುದರಿಂದ ಕೆಲವರು ಇದನ್ನ ನೀವು ಹಾಕಿಕೊಳ್ಳಿ ಹಾಕಿಕೊಳ್ಳದಿದ್ದರೆ ನಿಮಗೆ ಹೀಗೆ ಆಗುತ್ತೆ ಹಾಗೆ ಆಗುತ್ತೆ ಎನ್ನುವ ಜೋತಿಷ್ಯ ಹೇಳೊದನ್ನ ಕೇಳಿದೀನಿ. ಇದೆಲ್ಲಾ ನಮಗೆ ಬೇಕಾ... ಮುಟ್ಟು ಮೈಲಿಗೆ ಎನ್ನುವವರಲ್ಲಿ ಕಪ್ ಬಳಸೋದು ಕೂಡ ಒಂದು ಮೈಲಿಗೆ ಎಂತಲೇ ನೋಡುವವರು ಇದ್ದಾರೆ. ಸೋ ಇದರ ಬಗ್ಗೆ ಮುಕ್ತವಾಗಿ ಚರ್ಚೆಗಳು ಆಗಬೇಕು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಮನೆಯಲ್ಲಿ ಇರುವ ಹಳೆಯ ಕಾಟನ್ ಬಟ್ಟೆಗಳನ್ನು ,ಒಗೆದು ಐರನ್ ಮಾಡಿ ಅದನ್ನು ಸ್ವಲ್ಪ ದೊಡ್ಡದಾದ ಅಳತೆಯಲ್ಲಿ ಕಟ್ ಮಾಡಿ ಇಟ್ಟುಕೊಳ್ಳುವುದು ...ಪ್ರತಿ ತಿಂಗಳು ಬಳಸಿದ ನಂತರ , ಬೆಂಕಿಗೆ ಹಾಕುವುದು ( ಹಂಡೆ ಒಲೆ ಇದೆ ಮನೆಯಲ್ಲಿ ) ... ಇದುವರೆಗೆ ಬಟ್ಟೆಗಳನ್ನು ಬಿಟ್ಟು ಬೇರೆ ಬಳಸಿಲ್ಲ , ಹೊರಗೆ ಹೋದಾಗ ಸಹ , ಕಟ್ ಮಾಡಿದ ಬಟ್ಟೆಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಇರುವೆ , ಯಾರಾದರೂ ನೋಡುತ್ತಾರೆ ಎಂಬ ಮುಜುಗರ ಸಹ ಇರುವುದಿಲ್ಲ" ಎಂದು ಒಬ್ಬರು ಕಾಮೆಂಟ್ ಮಾಡಿದ್ದು, ಇದಕ್ಕೆ ಗಾಯತ್ರಿ ಅವರು "ನಾನು ಊರಿನಲ್ಲಿ ಇರುವಾಗ ಇದನ್ನೇ ಮಾಡ್ತಾ ಇದ್ದುದು. ನಗರದ ಲೈಫ್ ಸ್ಟೈಲ್ ಗೆ ಇದು ಕಷ್ಟ. ಮುಖ್ಯವಾಗಿ ಒಣಗಿಸಲು ಬಿಸಿಲು ಸಿಗೋದಿಲ್ಲ" ಎಂದಿದ್ದಾರೆ.
ವಿಭಾಗ