logo
ಕನ್ನಡ ಸುದ್ದಿ  /  ಜೀವನಶೈಲಿ  /  Menstrual Cycle: ನೀವು ಆರೋಗ್ಯಕರ ಋತುಚಕ್ರವನ್ನು ಹೊಂದಿದ್ದೀರೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ ಈ 5 ಲಕ್ಷಣಗಳು

Menstrual Cycle: ನೀವು ಆರೋಗ್ಯಕರ ಋತುಚಕ್ರವನ್ನು ಹೊಂದಿದ್ದೀರೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ ಈ 5 ಲಕ್ಷಣಗಳು

HT Kannada Desk HT Kannada

Jan 24, 2024 07:30 AM IST

google News

ನೀವು ಆರೋಗ್ಯಕರ ಋತುಚಕ್ರದ ಲಕ್ಷಣಗಳು

  • Women Health: ಪ್ರತಿ ತಿಂಗಳು ಮಹಿಳೆಯು ಮುಟ್ಟಾಗುವುದು ಸರ್ವೇ ಸಾಮಾನ್ಯ. ಹಾಗಂತ ಈ ಋತುಚಕ್ರವನ್ನು ನೀವು ಕಡೆಗಣಿಸುವಂತಿಲ್ಲ, ಮುಟ್ಟಿನ ದಿನ, ರಕ್ರಸ್ರಾವದ ಪ್ರಮಾಣ, ಋತುಮತಿಯಾದಾಗ ನೀವು ಅನುಭವಿಸುವ ನೋವು ಹೀಗೆ ಪ್ರತಿಯೊಂದು ನಿಮ್ಮ ಆರೋಗ್ಯದ ಲಕ್ಷಣಗಳನ್ನು ಸೂಚಿಸುತ್ತದೆ ಎಂಬುದನ್ನು ನೀವು ಮರೆಯುವಂತಿಲ್ಲ.

ನೀವು ಆರೋಗ್ಯಕರ ಋತುಚಕ್ರದ ಲಕ್ಷಣಗಳು
ನೀವು ಆರೋಗ್ಯಕರ ಋತುಚಕ್ರದ ಲಕ್ಷಣಗಳು (PC: Pixabay)

Women Health: ಮಹಿಳೆಯರ ಋತುಚಕ್ರ ಪ್ರಕ್ರಿಯೆಯು ಆರೋಗ್ಯಕರವಾಗಿದ್ದಾಗ ಮಾತ್ರ ಸಂತಾನೋತ್ಪತ್ತಿ ಪ್ರಕ್ರಿಯೆ ಕೂಡಾ ಆರಾಮದಾಯಕವಾಗಿ ಇರಲು ಸಾಧ್ಯ. ಕೇವಲ ಇದು ಮಾತ್ರವಲ್ಲ ಮಹಿಳೆಯ ಋತುಚಕ್ರವು ಆಕೆಯ ಒಟ್ಟಾರೆ ಆರೋಗ್ಯವನ್ನೂ ತಿಳಿಸುತ್ತದೆ. ಹಾಗಾದರೆ ನಿಮ್ಮ ಋತುಚಕ್ರ ಪ್ರಕ್ರಿಯೆಯು ಆರೋಗ್ಯಕರವಾಗಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಹೇಗೆ ಸಾಧ್ಯ..? ಇಂಥದ್ದೊಂದು ಗೊಂದಲದಲ್ಲಿ ನೀವಿದ್ದರೆ ಇದಕ್ಕೆ ಉತ್ತರ ಇಲ್ಲಿದೆ.

ಇಲ್ಲಿ ತಿಳಿಸಲಾದ ಲಕ್ಷಣಗಳು ನಿಮಗೆ ಇದ್ದಲ್ಲಿ ನೀವು ಆರೋಗ್ಯಕರ ಋತುಚಕ್ರ ಪ್ರಕ್ರಿಯೆಯನ್ನು ಹೊಂದಿದ್ದೀರಿ ಹಾಗೂ ನಿಮಗೆ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ನಿಮ್ಮಿಂದ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿದುಕೊಳ್ಳಬಹುದಾಗಿದೆ.

ನಿಯಮಿತ ಋತುಚಕ್ರ: ನಿಯಮಿತ ಋತುಚಕ್ರವು ಸಾಮಾನ್ಯವಾಗಿ 21 ರಿಂದ 35 ದಿನಗಳವರೆಗೆ ಇರುತ್ತದೆ. ಒಬ್ಬರಿಂದ ಒಬ್ಬರಿಗೆ ಈ ದಿನಗಳಲ್ಲಿ ಬದಲಾವಣೆ ಇರಬಹುದು. ನಿಮ್ಮ ಋತುಚಕ್ರದ ಅವಧಿಯು ನಿಯಮಿತವಾಗಿದ್ದರೆ ಅಂಡೋತ್ಪತ್ತಿಯಾಗುವ ದಿನವನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ. ಅಂಡಾಣು ಉತ್ಪತ್ತಿಯಾಗುವ ಸಮಯದಲ್ಲಿ ಸಂತಾನೋತ್ಪತ್ತಿ ಸಾಧ್ಯತೆಗಳು ದಟ್ಟವಾಗಿರುತ್ತದೆ. ಅನಿಯಮಿತ ಋತುಚಕ್ರಗಳಲ್ಲಿ ಹಾರ್ಮೋನ್​ ಏರುಪೇರು, ಒತ್ತಡ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಋತುಚಕ್ರದ ಅವಧಿಯು ಅನಿಮಿಯಮಿತವಾಗಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಸಾಮಾನ್ಯ ರಕ್ತಸ್ರಾವ : ಋತುಚಕ್ರದ ಅವಧಿಯಲ್ಲಿ ಬದಲಾವಣೆಯಿದ್ದಂತೆಯೇ ನಿಮ್ಮ ದೇಹದಿಂದ ರಕ್ತಸ್ರಾವ ಉಂಟಾಗುವ ಪ್ರಮಾಣ ಕೂಡಾ ಮಹಿಳೆಯರಿಂದ ಮಹಿಳೆಯರಿಗೆ ಬದಲಾಗುತ್ತದೆ. ಆರೋಗ್ಯಕರ ಋತು ಚಕ್ರದಲ್ಲಿ ಏಳು ದಿನಗಳವರೆಗೆ ರಕ್ತಸ್ರಾವ ಉಂಟಾಗಬಹುದು. ಆದರೆ ಪ್ರತಿ ಎರಡು ಗಂಟೆಗಳಿಗೆ ಒಮ್ಮೆ ಸ್ಯಾನಿಟರಿ ಪ್ಯಾಡ್​ಗಳನ್ನು ಬದಲಾಯಿಸಲೇಬೇಕು ಎನ್ನುವಷ್ಟರ ಮಟ್ಟಿಗೆ ನಿಮಗೆ ರಕ್ತಸ್ರಾವಾಗುತ್ತಿದ್ದರೆ ಒಮ್ಮೆ ವೈದ್ಯರನ್ನು ಭೇಟಿ ಮಾಡುವುದು ಒಳಿತು. 7 ದಿನಗಳಿಗಿಂತಲೂ ಅಧಿಕ ಸಮಯ ನಿಮಗೆ ರಕ್ತಸ್ರಾವವಿದ್ದರೆ ಇದು ಗರ್ಭಕೋಶದಲ್ಲಿ ಫೈಬ್ರಾಯ್ಡ್​ಗಳು ಇರುವ ಅಥವಾ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾಗಿರುವ ಸಂಕೇತವಾಗಿರಬಹುದು. ಇವುಗಳನ್ನು ನಿರ್ಲಕ್ಷಿಸಬೇಡಿ.

ನೋವು ಹಾಗೂ ಅಸ್ವಸ್ಥತೆ : ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವು, ಸೊಂಟ ನೋವು, ಬೆನ್ನು ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಅತಿಯಾದ ನೋವು , ತಡೆಯಲು ಸಾಧ್ಯವಾಗದಂತಹ ಸೆಳೆತಗಳು ಅನಾರೋಗ್ಯದ ಸಂಕೇತವಾಗಿರಬಹುದು. ಗರ್ಭಾಕೋಶ ಸಂಕೋಚನದ ಸಮಯದಲ್ಲಿ ಸೌಮ್ಯವಾದ ಸೆಳೆತಗಳು ಬರುವುದು ಸರ್ವೇ ಸಾಮಾನ್ಯ. ಆದರೆ ನೋವಿನ ಮಾತ್ರೆಗಳನ್ನು ನುಂಗುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಭೇಟಿಯಾಗುವುದು ಅನಿವಾರ್ಯ ಎಂದರ್ಥ.

ಋತುಚಕ್ರದ ಅವಧಿ : ಋತುಚಕ್ರದ ಅವಧಿಯು ಸ್ಥಿರವಾಗಿದ್ದರೆ ನೀವು ಆರೋಗ್ಯಕರ ಮುಟ್ಟಿನ ಲಕ್ಷಣಗಳನ್ನು ಹೊಂದಿದ್ದೀರಿ ಎಂದರ್ಥ. ಅಂದರೆ ಒಂದು ಋತು ಚಕ್ರದ ಆರಂಭದಿಂದ ಮತ್ತೊಂದು ಋತುಚಕ್ರದ ಆರಂಭದ ನಡುವಿನ ಅವಧಿಯು ಪ್ರತಿ ತಿಂಗಳು ಸ್ಥಿರವಾಗಿದೆಯೇ ಎಂಬುದನ್ನು ನೀವು ನೋಡಿಕೊಳ್ಳಬೇಕು. ನಿಮ್ಮ ಋತುಚಕ್ರದ ಅವಧಿಯಲ್ಲಿ ಹಠಾತ್​ ಬದಲಾವಣೆಗಳು ಉಂಟಾಗುತ್ತಿದ್ದರೆ , ಗಮನಾರ್ಹ ವ್ಯತ್ಯಾಸವನ್ನು ನೀವು ಪದೇ ಪದೇ ಗಮನಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಒಳಿತು.

ಮನಸ್ಥಿತಿಯಲ್ಲಿ ಸಮತೋಲನ: ಋತುಚಕ್ರದ ಸಮಯದಲ್ಲಿ ಹಾರ್ಮೋನ್​ಗಳಲ್ಲಿ ಏರಿಳಿತ ಉಂಟಾಗುವುದರಿಂದ ನಮ್ಮ ಮನಸ್ಥಿತಿ ನಮ್ಮ ಹತೋಟಿಯಲ್ಲಿ ಇರುವುದಿಲ್ಲ. ಈ ಸಮಯದಲ್ಲಿ ಮೂಡ್​ ಸ್ವಿಂಗ್​​ಗಳು ಉಂಟಾಗುವುದು ಸರ್ವೇ ಸಾಮಾನ್ಯ. ಅತಿಯಾದ ಆಯಾಸ, ಹಠಾತ್​ ಮೂಡ್​ನಲ್ಲಿ ಬದಲಾವಣೆ, ತೀವ್ರ ದುಃಖ, ಕೋಪ ಇವೆಲ್ಲವೂ ಉಂಟಾಗುತ್ತದೆ. ಆದರೆ ಇದು ವಿಪರೀತವಾಗಿದ್ದರೆ ನಿಮಗೆ ಪ್ರಿ ಮೆನ್​ಸ್ಟ್ರುವಲ್​​ ಡಿಸ್ಪೋರಿಕ್​ ಡಿಸಾರ್ಡರ್​ ಇರಬಹುದು. ಇದಕ್ಕೂ ಕೂಡಾ ನೀವು ವೈದ್ಯಕೀಯ ಚಿಕಿತ್ಸೆಯ ಮೂಲಕವೇ ಪರಿಹಾರ ಪಡೆಯಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ