logo
ಕನ್ನಡ ಸುದ್ದಿ  /  ಜೀವನಶೈಲಿ  /  Women's Day 2023: ಪ್ರಸವಾನಂತರದ ಥೈರಾಯಿಡ್‌ಗೆ ಕಾರಣಗಳೇನು? ಇದನ್ನು ಗುರುತಿಸುವುದು ಹೇಗೆ?

women's day 2023: ಪ್ರಸವಾನಂತರದ ಥೈರಾಯಿಡ್‌ಗೆ ಕಾರಣಗಳೇನು? ಇದನ್ನು ಗುರುತಿಸುವುದು ಹೇಗೆ?

HT Kannada Desk HT Kannada

Mar 06, 2023 09:46 PM IST

google News

ತಾಯಿ ಮಗು

    • postpartum thyroiditis: ಹೆಣ್ಣುಮಕ್ಕಳಲ್ಲಿ ಹೆರಿಗೆಯ ನಂತರ ಹಾರ್ಮೋನ್‌ಗಳಲ್ಲಿನ ವ್ಯತ್ಯಾಸದ ಕಾರಣದಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಪ್ರಸವಾನಂತರದ ಥೈರಾಯಿಡ್‌ ಕೂಡ ಒಂದು. ಇದನ್ನು ಪೋಸ್ಟ್‌ಪಾರ್ಟಮ್‌ ಥೈರಾಯಿಡೈಟಿಸ್‌ ಎಂದೂ ಕರೆಯುತ್ತಾರೆ.
ತಾಯಿ ಮಗು
ತಾಯಿ ಮಗು

ಮಗುವಿಗೆ ಜನ್ಮ ನೀಡುವುದು ಅಥವಾ ಹೆರಿಗೆಯ ಸಮಯ ಎಂದರೆ ಹೆಣ್ಣುಮಕ್ಕಳಿಗೆ ಸಂತಸ ಹಾಗೂ ಆತಂಕ ಎರಡೂ ಒಟ್ಟಿಗೆ ಆಗುವ ಘಳಿಗೆ. ಈ ಸಮಯದಲ್ಲಿ ಹೆಣ್ಣಾದವಳು ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಹಾರ್ಮೋನ್‌ಗಳಲ್ಲಿನ ವ್ಯತ್ಯಾಸದ ಕಾರಣದಿಂದ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ.

ಇತ್ತೀಚೆಗೆ ಹೆರಿಗೆಯ ನಂತರದಲ್ಲಿ ಹೆಣ್ಣುಮಕ್ಕಳಲ್ಲಿ ʼಪ್ರಸವಾನಂತರದ ಥೈರಾಯಿಡ್ʼ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಕೆಲವರಲ್ಲಿ ಇದು ಹೈಪರ್‌ ಆಗಿರಬಹುದು, ಇನ್ನೂ ಕೆಲವರಲ್ಲಿ ಹೈಪೊ ಇರಬಹುದು. ಕೆಲವೊಮ್ಮೆ ಇದು ಅನುವಂಶಿಕ ಕಾರಣದಿಂದಲೂ ಬರುವ ಸಾಧ್ಯತೆ ಇದ್ದು, ಕುಟುಂಬದಲ್ಲಿ ಯಾರಾದರೂ ಥೈರಾಯಿಡ್‌ ಅಥವಾ ಟೈಪ್‌ 1 ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾದರೆ ನಿಮ್ಮನ್ನು ಈ ತೊಂದರೆ ಕಾಡುತ್ತಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?

ಹೈಪರ್‌ಥೈರಾಯಿಡ್‌ ಸಮಸ್ಯೆಯ ಮೊದಲ ಹಂತದಲ್ಲಿ ಗಾಬರಿ, ಆತಂಕ, ಹೆಚ್ಚಿದ ಹೃದಯ ಬಡಿತ ಈ ಸಮಸ್ಯೆ ಕಾಣಿಸಬಹುದು, ಇದರ ಎರಡನೇ ಹಂತದಲ್ಲಿ ಇದ್ದಕ್ಕಿದ್ದಂತೆ ದೇಹತೂಕ ಇಳಿಯುವುದು ಕಾಣಬಹುದು. ಇನ್ನು ಹೈಪೊಥೈರಾಯಿಡ್‌ನಲ್ಲಿ ಯಾವಾಗಲೂ ಸುಸ್ತಾಗುವುದು, ಮಲಬದ್ಧತೆ, ಸ್ನಾಯು ಸೆಳೆತ, ನಿಶಕ್ತಿ, ತೂಕ ಹೆಚ್ಚಳವಾಗುವುದು ಕಾಣಬಹುದು. ಹಲವರಲ್ಲಿ ಹೆರಿಗೆಯಾದ ಸ್ವಲ್ಪ ಸಮಯದ ನಂತರದಲ್ಲಿ ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆ ನಿವಾರಣೆಯಾಗಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಇದು ಜೀವನಪೂರ್ತಿ ಭಾದಿಸುವ ಸಾಧ್ಯತೆ ಇದ್ದು, ಹಾರ್ಮೋನ್‌ ಚಿಕಿತ್ಸೆಗೆ ಒಳ ಪಡಬೇಕಾಗಬಹುದು.

ಚಂಢೀಗಡದ ಕ್ಲೌಡ್‌ನೈನ್‌ ಗ್ರೂಪ್‌ ಆಸ್ಪತ್ರೆಯ ಸ್ತೀರೋಗ ತಜ್ಞೆ ಡಾ. ಸೀಮಾ ಶರ್ಮಾ ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆಗೆ ಕಾರಣ ಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆ ತಿಳಿಸಿದ್ದಾರೆ.

ಪ್ರಸವಾನಂತರದ ಥೈರಾಯಿಡ್‌ನ ಲಕ್ಷಣಗಳು

ಈ ಸಮಸ್ಯೆ ಕಾಣಿಸಿಕೊಂಡ ಆರಂಭದಲ್ಲಿ ರೋಗ ಲಕ್ಷಣಗಳು ಸೌಮ್ಯವಾಗಿರುತ್ತವೆ. ಮುಖ್ಯವಾಗಿ ಆಯಾಸ, ತೂಕ ಇಳಿಕೆ, ಹೃದಯ ಬಡಿತದಲ್ಲಿ ಏರಿಕೆ, ಶಾಖದ ಅಸಹಿಷ್ಣುತೆ, ಆತಂಕ, ಮಾನಸಿಕ ಕಿರಿಕಿರಿ, ನಡುಕ ಮುಂತಾದ ಲಕ್ಷಣಗಳಿರುತ್ತವೆ. ಹೈಪೊಥೈರಾಯಿಡ್‌ ಸಮಸ್ಯೆಯಾದರೆ ಮಲಬದ್ಧತೆ, ನಿಶಕ್ತಿ, ತೂಕ ಹೆಚ್ಚಳ ಮುಂತಾದ ಲಕ್ಷಣಗಳು ಕಾಣಿಸಬಹುದು ಎನ್ನುತ್ತಾರೆ ಡಾ. ಸೀಮಾ.

ರೋಗ ಪತ್ತೆ ಹಚ್ಚುವುದು

ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆಯ ರೋಗನಿರ್ಣಯವು ಕ್ಲಿನಿಕಲ್ ರೋಗಲಕ್ಷಣಗಳು ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ (ಟಿಎಸ್ಎಚ್ ಮಟ್ಟ ಮತ್ತು ಫ್ರೀ ಟಿ 4). ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆ ಹೊಂದಿರುವ 70-80 ಪ್ರತಿಶತ ರೋಗಿಗಳಲ್ಲಿ ಸೀರಮ್‌ನಲ್ಲಿನ ಥೈರಾಯ್ಡ್-ವಿರೋಧಿ ಪೆರಾಕ್ಸಿಡೇಸ್ ಪ್ರತಿಕಾಯಗಳ ಮಟ್ಟವು ಹೆಚ್ಚಾಗಿರುತ್ತದೆ ಎನ್ನುತ್ತಾರೆ ಫರಿದಾಬಾದ್‌ನ ಮಾರೆಂಗಾವ್‌ ಕ್ಯೂಆರ್‌ಜಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಗುಂಜನ್‌ ಭೋಲಾ.

ʼಹೆರಿಗೆಯ ನಂತರ ಥೈರಾಯಿಡ್‌ ಗ್ರಂಥಿಗಳ ಕಾರ್ಯ ಚಟುವಟಿಕೆಗಳಲ್ಲಿ ಏರುಪೇರಾಗಬಹುದು. ಫ್ರಿ ಟಿ4ನಲ್ಲಿನ ಬದಲಾವಣೆಯು ಟಿಎಸ್‌ಎಚ್‌ ಏರುಪೇರಿಗೂ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ಟಿ3 ಹಾರ್ಮೋನ್‌ ಪರೀಕ್ಷೆ ಮಾಡಬೇಕಾಗುತ್ತದೆʼ ಎನ್ನುತ್ತಾರೆ ಡಾ. ಶರ್ಮಾ.

ಚಿಕಿತ್ಸೆ

ಹೈಪೊ ಹಾಗೂ ಹೈಪರ್‌ ಥೈರಾಯಿಡ್‌ ಈ ಎರಡೂ ವಿಧಗಳಿಗೆ ಚಿಕಿತ್ಸಾ ವಿಧಾನಗಳು ಬೇರೆ ಬೇರೆಯಾಗಿದ್ದು, ಈ ಬಗ್ಗೆ ಡಾ. ಸೀಮಾ ವಿವರಣೆ ನೀಡುವುದು ಹೀಗೆ:

ಹೈಪರ್‌ ಥೈರಾಯಿಡ್‌

ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆ ಹೊಂದಿರುವ ಹಲವರಿಗೆ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. ಆದರೆ ಹೈಪರ್‌ ಥೈರಾಯಿಡ್‌ ಸಮಸ್ಯೆ ನಿವಾರಣೆಯಾಗುವವರೆಗೆ 4 ರಿಂದ 8 ವಾರಗಳಿಗೊಮ್ಮೆ ಪರೀಕ್ಷೆ ನಡೆಸಬೇಕಾಗುತ್ತದೆ. ಥೈರಾಯಿಡ್‌ ಮಟ್ಟ ಹಾಗೂ ದೇಹಸ್ಥಿತಿಗೆ ಅನುಗುಣವಾಗಿ ಔಷಧಿಗಳನ್ನು ನೀಡಲಾಗುತ್ತದೆ.

ಹೈಪೊ ಥೈರಾಯಿಡ್‌

ಸಾಮಾನ್ಯ ಶ್ರೇಣಿಗಿಂತ ಎತ್ತರದ ಟಿಎಸ್‌ಎಚ್‌ ಹೊಂದಿರುವ ರೋಗಲಕ್ಷಣದ ರೋಗಿಗಳಿಗೆ ಟಿ4 ಚಿಕಿತ್ಸೆಯ ಅಗತ್ಯವಿರುತ್ತದೆ.

ಚಿಕಿತ್ಸೆಯ ಅವಧಿ

ಪ್ರಸವಾನಂತರದ ಥೈರಾಯಿಡ್‌ ಸಮಸ್ಯೆ ಇರುವವರಿಗೆ ಸಾಮಾನ್ಯವಾಗಿ 6 ರಿಂದ 12 ತಿಂಗಳುಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಆರು ವಾರಗಳ ನಂತರ ಥೈರಾಯಿಡ್‌ ಗ್ರಂಥಿಯ ಕಾರ್ಯಚಟುವಟಿಕೆಯ ಆಧಾರದ ಮೇಲೆ ಡೋಸ್‌ ಕಡಿಮೆ ಮಾಡಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ