logo
ಕನ್ನಡ ಸುದ್ದಿ  /  ಜೀವನಶೈಲಿ  /  Womens Day 2024: ಹೆಣ್ಣುಮಗುವನ್ನು ಪ್ರೀತಿಸುವಷ್ಟೇ ಕಾಳಜಿಯನ್ನೂ ಮಾಡಿ; ಅಪ್ಪನಾಗುವ ಮುನ್ನ ಅಮ್ಮನಾಗಿ; ತಂದೆಗೊಂದು ಕಿವಿಮಾತು

Womens Day 2024: ಹೆಣ್ಣುಮಗುವನ್ನು ಪ್ರೀತಿಸುವಷ್ಟೇ ಕಾಳಜಿಯನ್ನೂ ಮಾಡಿ; ಅಪ್ಪನಾಗುವ ಮುನ್ನ ಅಮ್ಮನಾಗಿ; ತಂದೆಗೊಂದು ಕಿವಿಮಾತು

Reshma HT Kannada

Feb 29, 2024 01:49 PM IST

google News

ಹೆಣ್ಣುಮಗುವನ್ನು ಪ್ರೀತಿಸುವಷ್ಟೇ ಕಾಳಜಿಯನ್ನೂ ಮಾಡಿ; ಅಪ್ಪನಾಗುವ ಮುನ್ನ ಅಮ್ಮನಾಗಿ; ಅಪ್ಪನಿಗಿದು ಸಲಹೆ

    • ಅಪ್ಪ ಎಂದರೆ ಹೆಣ್ಣುಮಕ್ಕಳಿಗೆ ಅದೇನೋ ವಿಶೇಷ ಪ್ರೀತಿ. ಅಪ್ಪನಿಗೂ ಮಗಳ ಮೇಲೆ ಹಿಡಿ ಪ್ರೀತಿ ಜಾಸ್ತಿ. ಅಪ್ಪನಾದವನು ಮಗಳನ್ನು ಪ್ರೀತಿ ಮಾಡುವಷ್ಟೇ ಕಾಳಜಿಯನ್ನೂ ಮಾಡಬೇಕು. ಸ್ನಾನ ಮಾಡಿಸುವುದರಿಂದ ಶಾಪಿಂಗ್‌ ಮಾಡಿಸುವವರೆಗೆ ಅಪ್ಪ ಅಮ್ಮನಾಗಿ ಮಗಳ ಜೊತೆಗಿರಬೇಕು. 
ಹೆಣ್ಣುಮಗುವನ್ನು ಪ್ರೀತಿಸುವಷ್ಟೇ ಕಾಳಜಿಯನ್ನೂ ಮಾಡಿ; ಅಪ್ಪನಾಗುವ ಮುನ್ನ ಅಮ್ಮನಾಗಿ; ಅಪ್ಪನಿಗಿದು ಸಲಹೆ
ಹೆಣ್ಣುಮಗುವನ್ನು ಪ್ರೀತಿಸುವಷ್ಟೇ ಕಾಳಜಿಯನ್ನೂ ಮಾಡಿ; ಅಪ್ಪನಾಗುವ ಮುನ್ನ ಅಮ್ಮನಾಗಿ; ಅಪ್ಪನಿಗಿದು ಸಲಹೆ

ಸಾಮಾನ್ಯವಾಗಿ ಅಪ್ಪನಾದವನಿಗೆ ಮಗನಿಗಿಂತ ಮಗಳ ಮೇಲೆ ಹಿಡಿ ಪ್ರೀತಿ ಜಾಸ್ತಿ, ಅದು ಒಂಥರಾ ಲೋಕ ನಿಯಮವಾಗಿದೆ. ಮೊದಲು ಮಗು ಗಂಡಾಗಿರಲಿ ಎಂದು ಅಮ್ಮ ಬಯಸಿದರೆ, ಹೆಣ್ಣಾಗಿರಲಿ ಎಂದು ಅಪ್ಪ ಬಯಸುತ್ತಾನೆ. ಮಗಳಿಗೂ ಅಪ್ಪನ ಮೇಲೆ ಒಲವು ಜಾಸ್ತಿ. ಅದೆಲ್ಲಾ ಸಹಜ, ಆದರೆ ಕೆಲವರು ಅಪ್ಪಂದಿರು ಮಕ್ಕಳು ಪ್ರೀತಿ ಮಾಡುತ್ತಾರೆ, ಆದರೆ ಆರೈಕೆ, ಕಾಳಜಿ ಮಾಡುವ ವಿಚಾರ ಬಂದಾಗ ಅದು ತಾಯಿಯ ಕೆಲಸ ಎಂಬಂತೆ ವರ್ತಿಸುತ್ತಾರೆ. ಆದರೆ ಇದನ್ನು ಸುಳ್ಳಾಗಿಸಿ ತಾಯಿಯಷ್ಟೇ ತಂದೆಯೂ ಮಗುವಿನ ಕಾಳಜಿ, ಆರೈಕೆ ಮಾಡಬಹುದು ಎಂಬುದನ್ನು ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌, ವಿಡಿಯೊ, ಫೋಟೊಗಳ ಮೂಲಕ ನಾವು ನೋಡುತ್ತಿರುತ್ತೇವೆ. ಅಂತಹ ರೀಲ್ಸ್‌, ವಿಡಿಯೊಗಳನ್ನು ನೋಡಿ ಖುಷಿ ಪಡುವುದಷ್ಟೇ ಅಲ್ಲ, ಹಾಗೆಯೇ ಇರಲು ಪ್ರತಿ ಅಪ್ಪನೂ ಪ್ರಯತ್ನಿಸಬೇಕು. ಆಗ ಮಗಳು ಮಾತ್ರವಲ್ಲ, ಹೆಂಡತಿಗೂ ನಿಮ್ಮ ಮೇಲೆ ಪ್ರೀತಿ, ಗೌರವ ಹೆಚ್ಚುತ್ತದೆ.

ಅಲ್ಲದೇ ಯಾವುದೋ ಸಂದರ್ಭದಲ್ಲಿ ಹೆಂಡತಿ ಮನೆಯಲ್ಲಿ ಇಲ್ಲದಾಗ ಅಥವಾ ಹೆಂಡತಿಗೆ ಹುಷಾರು ತಪ್ಪಿದಾಗ ನೀವು ನಿಮ್ಮ ಮುದ್ದು ಮಗಳಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಬಹುದು. ಅಪ್ಪನಾದವನು ಪ್ರೀತಿ ನೀಡಿ ಮುದ್ದಾಡುವ ಮುನ್ನ ಅಮ್ಮನಾಗುವುದನ್ನೂ ಕಲಿಯಬೇಕು.

ಸ್ನಾನ ಮಾಡಿಸುವುದನ್ನು ಅಭ್ಯಾಸ ಮಾಡಿ

ಚಿಕ್ಕ ಮಕ್ಕಳ ವಿಷಯಕ್ಕೆ ಬಂದಾಗ ಸ್ನಾನ ಮಾಡಿಸುವುದು ನಿಜಕ್ಕೂ ದೊಡ್ಡ ಸವಾಲು. ಈಗಿನ ಕಾಲ ಪೋಷಕರು ತಮ್ಮ ಮಗುವಿಗೆ ಸ್ನಾನ ಮಾಡಿಸಲು ಮನೆಯ ಹಿರಿಯರನ್ನೋ ಅಥವಾ ಆಯಾಗಳನ್ನೋ ಅವಲಂಬಿಸುವುದು ಸಹಜ. ಅದರ ಬದಲು ನೀವೇ ಸ್ನಾನ ಮಾಡಿಸುವುದನ್ನು ಕಲಿಯಿರಿ. ಕೆಲಸಕ್ಕೆ ಹೊರಡುವ ಮುನ್ನ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಮಗುವನ್ನು ಮಲಗಿಸಿ ನಂತರ ಹೊರಡಿ, ಇದರಿಂದ ನಿಮ್ಮ ಹೆಂಡತಿಗೆ ಅದೆಷ್ಟೋ ಸಹಾಯವಾಗುತ್ತದೆ. ಅಲ್ಲದೆ ನಿಮಗೂ ಭಿನ್ನ ಅನುಭವ ಸಿಗುತ್ತದೆ. ನಿಮ್ಮ ಮಗುವಿನ ಕಾಳಜಿ ನೀವೇ ಮಾಡಿದಂತಾಗುತ್ತದೆ.

ಮಗುವಿನ ಆರೋಗ್ಯ ಕಾಳಜಿ

ಗಂಡಸು ಮನೆಯ ಹೊರಗೆ ಹೋಗಿ ದುಡಿಯುತ್ತಾರೆ ಎನ್ನುವ ಕಾರಣ ಮಗುವಿನ ಕಾಳಜಿಯನ್ನು ಸಾಮಾನ್ಯವಾಗಿ ಮಡದಿಯೇ ಮಾಡುತ್ತಿರುತ್ತಾಳೆ. ಆದರೆ ನೀವು ಇದರತ್ತ ಗಮನ ಹರಿಸಿ. ಮಗುವಿನ ಹುಷಾರು ತಪ್ಪಿದಾಗ ಏನು ಮಾಡಬೇಕು, ಹೊಟ್ಟೆ ನೋವಿಗೆ ಯಾವ ಔಷಧಿ, ಯಾವ ಕಾರಣಕ್ಕೆ ಮಗು ಅಳುತ್ತಿದೆ ಎಂಬುದನ್ನೆಲ್ಲಾ ಗಮನಿಸಿ. ಆಗ ನಿಮಗೆ ನಿಮ್ಮ ಮಗುವಿನ ಪ್ರತಿಯೊಂದು ಚಲನವಲನವೂ ಅರ್ಥವಾಗುತ್ತದೆ. ತಾಯಿಯಷ್ಟೇ ಅಲ್ಲ ತಂದೆಯೂ ಮಗುವಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.

ಮಗಳಿಗೆ ಊಟ ಮಾಡಿಸಿ

ಬೆಳಗಿನ ಹೊತ್ತು ಕಚೇರಿ, ಕೆಲಸ ಎಂದು ಬ್ಯುಸಿ ಆಗಿರುವ ನೀವು ಸಂಜೆ ವೇಳೆ ನಿಮ್ಮ ಮಗಳ ಜೊತೆ ಟೈಮ್‌ ಸ್ಪೆಂಡ್‌ ಮಾಡಲು ಇರುವ ಉತ್ತಮ ದಾರಿ ಎಂದರೆ ಮಗುವಿಗೆ ಊಟ ಮಾಡಿಸುವುದು. ಮಗಳು ತಂದೆ ಊಟ ಮಾಡಿಸಿದರೆ ಒಂದೆರಡು ತುತ್ತು ಜಾಸ್ತಿ ತಿನ್ನುತ್ತಾಳೆ ಎನ್ನುವುದರಲ್ಲಿ ಅನುಮಾನವಿಲ್ಲ, ತಂದೆ ಪ್ರೀತಿ ಹಾಗೆ ಮಾಡಿಸುತ್ತದೆ. ಚಂದಮಾಮನನ್ನು ತೋರಿಸುತ್ತಾ ಮಗುವಿನ ಊಟ ಮಾಡಿಸಲು ತಾಯಿಗಷ್ಟೇ ಸಾಧ್ಯವಲ್ಲ, ತಂದೆಗೂ ಸಾಧ್ಯ ಎನ್ನುವುದನ್ನು ಮರೆಯಬೇಡಿ.

ಮಗಳೊಂದಿಗೆ ಆಟವಾಡಿ

ನಿಮಗೆ ಅದೆಷ್ಟೇ ಕೆಲಸ ಕಾರ್ಯಗಳು ಇರಬಹುದು, ಒತ್ತಡ-ಚಿಂತೆ ಇರಬಹುದು. ಆದರೆ ಇದೆಲ್ಲವನ್ನೂ ಮರೆಸಲು ಮಗಳೇ ಮದ್ದು. ಸಂಜೆಯ ವೇಳೆ ಬಿಡುವು ಮಾಡಿಕೊಳ್ಳಿ, ಮಗಳನ್ನು ಪಾರ್ಕ್‌ಗೆ ಕರೆದುಕೊಂಡು ಹೋಗಿ. ಅವಳೊಂದಿಗೆ ನೀವು ಮಗುವಾಗಿ. ಆಗ ಮಗಳೊಂದಿಗೆ ನಿಮ್ಮ ಬಾಂಧವ್ಯ ಇನ್ನಷ್ಟು ವೃದ್ಧಿಯಾಗುತ್ತದೆ. ಬೆಳಗಿನಿಂದ ಮಗಳ ಚಾಕರಿ ಮಾಡುವ ಅಮ್ಮನಿಗೂ ಕೊಂಚ ವಿಶ್ರಾಂತಿ ಸಿಗುತ್ತದೆ.

ಹೋಮ್‌ವರ್ಕ್‌ಗೆ ಹೆಲ್ಪ್‌ ಮಾಡಿ

ಬಹುತೇಕ ಮನೆಗಳಲ್ಲಿ ಮಕ್ಕಳ ಹೋಮ್‌ ವರ್ಕ್‌ ಮಾಡಿಸುವುದು ಅಮ್ಮನ ಕೆಲಸ ಎನ್ನುವ ಮನೋಭಾವವಿದೆ. ಹಾಗಂತ ಇದು ನಿಯಮವಲ್ಲ. ಮೊದಲೇ ಹೇಳಿದಂತೆ ಹೆಣ್ಣುಮಕ್ಕಳು ಅಮ್ಮನಿಗಿಂತ ಅಪ್ಪನ ಮಾತು ಕೇಳುವುದೇ ಹೆಚ್ಚು. ಹಾಗಾಗಿ ಮಗಳಿಗೆ ಹೋಮ್‌ವರ್ಕ್‌ ಮಾಡಿಸುವ ಜವಾಬ್ದಾರಿ ತೆಗೆದುಕೊಳ್ಳಿ.

ಶಾಪಿಂಗ್‌ ಕರೆದುಕೊಂಡು ಹೋಗಿ

ಮಗಳ ಬೇಕು ಬೇಡಗಳನ್ನು ಪೊರೈಸಲು ಮಡದಿಯ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ಸುಮ್ಮನಾಗುವುದಕ್ಕಿಂತ ಅವಳೊಂದಿಗೆ ನೀವು ಶಾಪಿಂಗ್‌ ಮಾಡಿ. ಅವಳ ಇಷ್ಟ-ಕಷ್ಟಗಳ ಬಗ್ಗೆ ತಿಳಿಯಿರಿ. ಅವಳ ಬೇಕು-ಬೇಡಗಳನ್ನು ಪೂರೈಸಿ. ಇದರಿಂದ ಮಗಳಿಗೆ ನಿಮ್ಮ ಪ್ರೀತಿ ಹೆಚ್ಚುವುದಲ್ಲದೇ ಮಗಳನ್ನು ಅರ್ಥ ಮಾಡಿಕೊಳ್ಳಲು ನಿಮಗೂ ಒಂದು ಅವಕಾಶ ಲಭಿಸುತ್ತದೆ.

ಹರೆಯದ ಮಗಳಿಗೆ ಸ್ನೇಹಿತನಾಗಿ

ತಂದೆಯಾಗಿ ಮಗಳ ಜೊತೆ ನೀವು ನಿಲ್ಲಬೇಕಾದ ಬಹುಮುಖ್ಯ ಘಟ್ಟವಿದು. ಹರೆಯದ ವಯಸ್ಸಿನಲ್ಲಿ ಮಗಳ ಮನದ ತೊಳಲಾಟಗಳಿಗೆ ತಂದೆಯಾದವನು ಸ್ನೇಹಿತನಂತೆ ಜೊತೆಯಾಗಬೇಕು. ಮಗಳ ಗೊಂದಲಗಳಿಗೆ ಉತ್ತರವಾಗಬೇಕು. ಮಗಳಿಗೆ ಅಮ್ಮ-ಅಪ್ಪನಾಗುವುದು ಮಾತ್ರ, ಸ್ನೇಹಿತನಾಗಿಯೂ ಇರಿ.

ನೋಡಿದ್ರಲ್ಲಾ, ಮಗಳನ್ನು ಪ್ರೀತಿ ಮಾಡುವುದಷ್ಟೇ ಅಲ್ಲ, ಅಪ್ಪನಾದವನು ಆಕೆಯ ಕಾಳಜಿಗೂ ಒತ್ತು ನೀಡಬೇಕು. ಮಗಳನ್ನು ಕಾಳಜಿ ಮಾಡುವುದರಿಂದ ಮಗಳ ಪ್ರೀತಿಯ ಜೊತೆಗೆ ಮಗಳ ತಾಯಿಯ ಪ್ರೀತಿ, ಅಭಿಮಾನವನ್ನೂ ಗಳಿಸಬಹುದು. ಪುಟ್ಟ ಮಗಳಿಗೆ ಅಪ್ಪನಾಗುವ ಮುನ್ನ ಅಮ್ಮನಾಗುವುದೂ ಮುಖ್ಯ. ಹೆಣ್ಣುಮಗುವಿನ ಬಾಲ್ಯದಿಂದ ಹರೆಯದ ದಿನಗಳವರೆಗೆ ಅಪ್ಪನು ಅಮ್ಮನಾಗಿ ಜೊತೆಗಿರುವುದು ಬಹಳ ಮುಖ್ಯವಾಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ