logo
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಕ್ಷಯರೋಗ ದಿನ ಮಾರ್ಚ್‌ 24: ಕ್ಷಯರೋಗದ ರೋಗಲಕ್ಷಣಗಳೇನು? ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ವಿಶ್ವ ಕ್ಷಯರೋಗ ದಿನ ಮಾರ್ಚ್‌ 24: ಕ್ಷಯರೋಗದ ರೋಗಲಕ್ಷಣಗಳೇನು? ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

HT Kannada Desk HT Kannada

Mar 21, 2023 03:58 PM IST

google News

ವಿಶ್ವ ಕ್ಷಯರೋಗ ದಿನ ಮಾರ್ಚ್‌ 24

  • world tuberculosis day 2023: ಕ್ಷಯರೋಗ ಮಾನವ ಹಾಗೂ ಪ್ರಾಣಿಗಳನ್ನು ಬಾಧಿಸುವ ಮಾರಕ ರೋಗ. ಇದು 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುತ್ತದೆ. ಪ್ರತಿ ವರ್ಷ ಮಾರ್ಚ್‌ 24ರಂದು ವಿಶ್ವದಾದ್ಯಂತ ಕ್ಷಯರೋಗ (ಟಿಬಿ) ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

ವಿಶ್ವ ಕ್ಷಯರೋಗ ದಿನ ಮಾರ್ಚ್‌ 24
ವಿಶ್ವ ಕ್ಷಯರೋಗ ದಿನ ಮಾರ್ಚ್‌ 24

ಪ್ರತಿ ವರ್ಷ ಮಾರ್ಚ್‌ 24ರಂದು ವಿಶ್ವದಾದ್ಯಂತ ಕ್ಷಯರೋಗ (ಟಿಬಿ) ದಿನವನ್ನು ಆಚರಿಸಲಾಗುತ್ತದೆ. ಕ್ಷಯರೋಗ ಮಾನವ ಹಾಗೂ ಪ್ರಾಣಿಗಳನ್ನು ಬಾಧಿಸುವ ಮಾರಕ ರೋಗ. ಇದು 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುತ್ತದೆ.

ವಿವಿಧ ಅಂಗಾಂಗಗಳ ಮೇಲೆ ಪರಿಣಾಮ

ಕ್ಷಯರೋಗವು ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಈ ರೋಗವು ದೇಹದ ಇತರ ಅಂಗಗಳನ್ನು ಹಾನಿಗೊಳಿಸುತ್ತದೆ. ಇದನ್ನು ಎಕ್ಸ್ಟ್ರಾಪಲ್ಮನರಿ ಟ್ಯೂಬರ್‌ಕ್ಯುಲೋಸಿಸ್ ಎಂದು ಕರೆಯಲಾಗುತ್ತದೆ.

ಕ್ಷಯರೋಗ ಅಥವಾ ಟಿಬಿಯು ಶ್ವಾಸಕೋಶದ ಒಳಪದರ (ಪ್ಲುರಲ್‌ ಟಿಬಿ), ಕೇಂದ್ರ ನರಮಂಡಲ (ಟಿಬಿ ಮೆನಿಂಜೈಟಿಸ್)‌, ಮೂಳೆ ಹಾಗೂ ಕೀಲುಗಳು (ಮಸ್ಕ್ಯಲೋಸ್ಕೆಲಿಟಲ್ ಸಿಸ್ಟಮ್‌), ದುಗ್ಧರಸ ಗಂಥ್ರಿಗಳು, ಕಿಬ್ಬೊಟ್ಟೆ, ಮೂತ್ರಪಿಂಡಗಳು, ಯಕೃತ್ತು ಹಾಗೂ ರಕ್ತದ ಮೇಲೂ ಪರಿಣಾಮ ಉಂಟು ಮಾಡಬಹುದು. ಇದು ಕೂದಲು ಹಾಗೂ ಉಗುರನ್ನು ಹೊರತು ಪಡಿಸಿ ಅಕ್ಷರಶಃ ದೇಹದ ಬಹುತೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ಈ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ʼಲೈಫ್‌ಸ್ಟೈಲ್‌ʼ ವಿಭಾಗಕ್ಕೆ ನೀಡಿದ ಸಂದರ್ಶನದಲ್ಲಿ ಮುಂಬೈನ ಗ್ಲೋಬಲ್‌ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಸಮೀರ್‌ ಗಾರ್ಡೆ ʼಟಿಬಿಯು ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದ್ದು, ಇದು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮೂತ್ರಕೋಶ, ಬೆನ್ನುಮೂಳೆ ಹಾಗೂ ಮೆದುಳಿನಂತಹ ದೇಹದ ಇನ್ನಿತರ ಅಂಗಾಂಶಗಳಿಗೂ ಇದರಿಂದ ಹಾನಿಯಾಗುವ ಸಾಧ್ಯತೆ ಇದೆ. ಕ್ಷಯರೋಗದ ವ್ಯಕ್ತಿಯು ಕೆಮ್ಮಿದಾಗ, ಉಗುಳಿದಾಗ ಹಾಗೂ ಸೀನಿದಾಗ ಬ್ಯಾಕ್ಟೀರಿಯಾಗಳು ಗಾಳಿಯ ಮೂಲಕ ಇನ್ನೊಬ್ಬ ವ್ಯಕ್ತಿಯ ದೇಹವನ್ನು ಸೇರಿ ರೋಗ ಹರಡಲು ಕಾರಣವಾಗಬಹುದು. ಕ್ಷಯರೋಗದಿಂದ ಗುಣವಾದ ವ್ಯಕ್ತಿಯಿಂದ ಕೂಡ ಕೆಲವೊಮ್ಮೆ ಸೋಂಕು ಹರಡುವ ಸಾಧ್ಯತೆ ಇರುತ್ತದೆʼ ಎಂದು ವಿವರಣೆ ನೀಡಿದ್ದಾರೆ.

ಕ್ಷಯರೋಗದ ವಿವಿಧ ಹಂತಗಳು

ರೋಗಲಕ್ಷಣ ರಹಿತ

ಶ್ವಾಸಕೋಶದ ಕ್ಷಯರೋಗವನ್ನು ಹೊಂದಿರುವ ವ್ಯಕ್ತಿಯೊಬ್ಬನ ಸೀನು, ಕೆಮ್ಮಿನಿಂದ ಎದುರಿನ ವ್ಯಕ್ತಿಗೆ ಕ್ಷಯ ಹರಡಬಹುದು. ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸುಲಭವಾಗಿ ಹರಡುವ ಕಾರಣ ಬಹಳ ಬೇಗನೆ ವ್ಯಕ್ತಿಗಳಿಂದ ವ್ಯಕ್ತಿಗೆ ಅಂಟುತ್ತದೆ. ಸಾಮಾನ್ಯ ಹಾರ್ಟ್‌ ಎಕ್ಸ್‌-ರೇಯಿಂದ ಇದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಹಂತದ ವ್ಯಕ್ತಿಗಳಲ್ಲಿ ಯಾವುದೇ ಅನಾರೋಗ್ಯದ ಸೂಚನೆ ಇರುವುದಿಲ್ಲ. ರೋಗಲಕ್ಷಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

ಸುಪ್ತ ಲಕ್ಷಣಗಳು

ಒಬ್ಬ ವ್ಯಕ್ತಿ ತನ್ನ ದೇಹದಲ್ಲಿ ಕ್ಷಯ ರೋಗದ ರೋಗಾಣುಗಳನ್ನು ಹೊಂದಿದ್ದರೂ, ಅವನಿಗೆ ಅದು ತಿಳಿಯುವುದಿಲ್ಲ. ಕಾರಣ ಅವನಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳೂ ಇರುವುದಿಲ್ಲ. ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯು ಬಿಟಿ ಸೂಕ್ಷ್ಮಾಣುಗಳಿಂದ ದೇಹವನ್ನು ರಕ್ಷಿಸುತ್ತದೆ. ಆ ಕಾರಣಕ್ಕೆ ಸೋಂಕಿಗೆ ತುತ್ತಾದ ಹೆಚ್ಚಿನ ವ್ಯಕ್ತಿಗಳಲ್ಲಿ ಈ ಸಮಸ್ಯೆಯು ಅವರ ಜೀವನದುದ್ದಕ್ಕೂ ಸುಪ್ತವಾಗಿರುತ್ತದೆ. ಈ ವ್ಯಕ್ತಿಯನ್ನು ಚರ್ಮ ಅಥವಾ ರಕ್ತದ ಪರೀಕ್ಷೆಗೆ ಒಡ್ಡಿದಾಗ ಪಾಸಿಟಿವ್‌ ಫಲಿತಾಂಶ ಬರಬಹುದು, ಆದರೆ ಸಾಮಾನ್ಯ ಎಕ್ಸರೇ ಅಥವಾ ಎದೆಭಾಗದ ಎಕ್ಸರೇ ಮಾಡಿಸುವುದರಿಂದ ರೋಗವನ್ನು ಕಂಡುಹಿಡಿಯುವುದು ಸಾಧ್ಯವಾಗುವುದಿಲ್ಲ. (ಯಾಕೆಂದರೆ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತಿರುತ್ತದೆ). ಅಲ್ಲದೆ ದೇಹದ ಯಾವುದೇ ಭಾಗವು ಸೋಂಕಿನ ಯಾವುದೇ ಪುರಾವೆಗಳನ್ನು ತೋರಿಸುವುದಿಲ್ಲ.

ಕ್ಲಿನಿಕಲ್‌ ಟಿಬಿ

ಈ ಹಂತದಲ್ಲಿರುವ ರೋಗಿಯಲ್ಲಿ ರೋಗಲಕ್ಷಣಗಳು ಸಕ್ರಿಯವಾಗಿರುತ್ತವೆ. ಅಲ್ಲದೆ ರೋಗಲಕ್ಷಣಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಈ ವ್ಯಕ್ತಿಯ ಚರ್ಮ ಹಾಗೂ ರಕ್ತದ ಪರೀಕ್ಷೆಯಲ್ಲಿ ಪಾಸಿಟಿವ್‌ ಅಥವಾ ನೆಗೆಟಿವ್‌ ಫಲಿತಾಂಶ ಬರಬಹುದು. ಆದರೆ ಎದೆಭಾಗದ ಎಕ್ಸರೇ ಹಾಗೂ ಕಫ ಮಾದರಿಯ ಪರೀಕ್ಷೆಗಳಿಂದ ಸಕ್ರಿಯ ಟಿಬಿ ಸೋಂಕನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಅಲ್ಲದೆ ಕೆಲವೊಂದು ಅನಾರೋಗ್ಯದ ಲಕ್ಷಣಗಳಿಂದಲೂ ಇದನ್ನು ಕಂಡುಹಿಡಿಯಬಹುದು.

ಆರಂಭಿಕ ಹಂತದಲ್ಲಿ ಪರೀಕ್ಷೆ ಅಗತ್ಯ

ʼಶ್ವಾಸಕೋಶದ ಕ್ಷಯರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ದೀರ್ಘಕಾಲದ ಸಮಸ್ಯೆಗೆ ಕಾರಣವಾಗಬಹುದು ಹಾಗೂ ಶ್ವಾಸಕೋಶಕ್ಕೆ ಹಾನಿಯನ್ನು ಉಂಟು ಮಾಡಬಹುದು. ಕಶೇರುಖಂಡಗಳು, ಮೆದುಳು ಮತ್ತು ಬೆನ್ನುಹುರಿ, ದುಗ್ಧರಸ ಗಂಥ್ರಿಗಳು ಸೇರಿದಂತೆ ದೇಹದ ಇತರ ಅಂಗಾಂಶಗಳಿಗೆ ಸೋಂಕು ತಗಲುವಂತೆ ಮಾಡಬಹುದು. ಇದು ತಾತ್ಕಾಲಿಕ ಅಥವಾ ದೀರ್ಘಾವಧಿ ಪರಿಣಾಮ ಹಾಗೂ ಹಾನಿ ಉಂಟು ಮಾಡಬಹುದು. ನಿಯಂತ್ರಣಕ್ಕೆ ಸಿಗದ ಕ್ಷಯರೋಗವು ಮಾರಕವಾಗಬಹುದುʼ ಎನ್ನುತ್ತಾರೆ ಡಾ. ಸಮೀರ್‌.

ಕ್ಷಯರೋಗದ ಕುರಿತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

* ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ.

* ತಜ್ಞ ವೈದ್ಯರು ಹಾಗೂ ಪೌಷ್ಟಿಕತಜ್ಞರ ಸಲಹೆ ಪಡೆದು ಪೋಷಕಾಂಶ ಸಮೃದ್ಧ ಆಹಾರ ಸೇವನೆಯನ್ನು ದಿನಚರಿಯಲ್ಲಿ ರೂಢಿಸಿಕೊಳ್ಳುವುದು ಉತ್ತಮ.

* ತಾಜಾ ಪರಿಸರದಲ್ಲಿ ವಾಕಿಂಗ್‌, ಜಾಗಿಂಗ್‌, ಯೋಗದಂತಹ ದೈಹಿಕ ಚಟುವಟಿಕೆಗಳು ನಮ್ಮ ದಿನನಿತ್ಯದ ಭಾಗವಾಗಬೇಕು.

* ಮಧುಮೇಹ, ಹೃದಯ, ಮೂತ್ರಪಿಂಡದಂತಹ ಅಂಗಾಂಶಗಳ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸುಸ್ಥುತಿಯಲ್ಲಿ ಇರಿಸಿಕೊಳ್ಳಬೇಕು.

* ಕೆಲವು ಕಾಯಿಲೆಗಳ ಕಾರಣದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಔಷಧಿಗಳನ್ನು ಸೇವಿಸುತ್ತಿದ್ದರೆ, ವೈದ್ಯರು ಹೇಳಿದ ಕ್ರಮವನ್ನು ತಪ್ಪದೇ ಪಾಲಿಸುವುದು ಅವಶ್ಯ.

* ಮಕ್ಕಳಿಗೆ ಬಾಲ್ಯದಲ್ಲಿಯೇ ಬಿಸಿಜಿ ಇಂಜೆಕ್ಷನ್‌ ನೀಡುವುದು ಅವಶ್ಯ. ಇದರಿಂದ ಯಾವುದೇ ವಿಧದ ಟಿಬಿಯನ್ನು ದೂರ ಮಾಡಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ