World Water Day: ಹನಿ ನೀರಿಗೂ ನೀಡಿ ಸಾಗರದಷ್ಟು ಮಹತ್ವ, ಜೀವಜಲವನ್ನು ಜೀವದಂತೆ ಕಾಪಾಡಿ; ವಿಶ್ವ ಜಲದಿನದ ಇತಿಹಾಸ, ಮಹತ್ವ ತಿಳಿಯಿರಿ
Mar 22, 2024 07:59 AM IST
ವಿಶ್ವ ಜಲ ದಿನ ಮಾರ್ಚ್ 22
- ಭೂಮಿಯ ಭಾಗಶಃ ನೀರೇ ತುಂಬಿದ್ದರು, ಇಂದು ನೀರಿಗಾಗಿ ಹಾಹಾಕಾರ ಮಾಡುವ ಪರಿಸ್ಥಿತಿ ಎದುರಾಗಿದೆ. ಜೀವಜಲಕ್ಕೆ ಕಂಟಕ ಎದುರಾಗಿರುವುದು ನಿಜಕ್ಕೂ ಸಂಕಟದ ವಿಚಾರ. ನೀರಿನ ಮಹತ್ವ ಹಾಗೂ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 22 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಲದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಉದ್ದೇಶ, ಮಹತ್ವ ಹೀಗಿದೆ.
ನೀರು ಜಗತ್ತಿನ ಅತ್ಯಮೂಲ್ಯ ವಸ್ತುಗಳಲ್ಲಿ ಒಂದು. ಪ್ರಪಂಚದಲ್ಲಿನ ಸಕಲ ಜೀವಿಗಳಿಗೂ ನೀರು ಬೇಕೇ ಬೇಕು. ಆ ಕಾರಣಕ್ಕೆ ನೀರನ್ನು ಜೀವಜಲ ಎಂದು ಕರೆಯುತ್ತೇವೆ. ಮನುಷ್ಯ ಕೂಡ ನೀರಿಲ್ಲದೆ ಒಂದು ದಿನ ಕೂಡ ಕಳೆಯಲಾರ. ಮನುಷ್ಯನ ದೈನಂದಿನ ಕಾರ್ಯಗಳಗೆ ನೀರು ಸಿಗುತ್ತಿಲ್ಲ ಎಂಬ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ. ಆದರೆ ಇದೀಗ ಅಂಥಹದ್ದೇ ಪರಿಸ್ಥಿತಿ ಎದುರಾಗಿದೆ. ಕುಡಿಯಲೂ ಕೂಡ ನೀರಿಲ್ಲದೆ ಮನುಷ್ಯರು ಹೈರಾಣುಗುತ್ತಿದ್ದಾರೆ. ಅಂತರ್ಜಲ ಬತ್ತಿ ಹೋಗಿ ಭೂಮಿ ಬರಡಾಗಿದೆ. ಮರ, ಗಿಡಗಳ ನಿರಂತರ ನಾಶ ಮಳೆ ಕೊರತೆ ಎದುರಾಗುವಂತೆ ಮಾಡಿದೆ. ಅತಿಯಾದ ಕೈಗಾರಿಕೀಕರಣವು ಪ್ರಕೃತಿ ಮೂಲಗಳನ್ನ ನಾಶ ಮಾಡುತ್ತಿದೆ. ಇದೆಲ್ಲದರ ಪರಿಣಾಮದಿಂದ ಮಳೆ ಕೊರತೆ ಉಂಟಾಗಿ ನೀರು ಮರೀಚಿಕೆಯಾಗುತ್ತಿದೆ.
ಭಾರತ ಕೂಡ ಇತ್ತೀಚಿನ ದಿನಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೆಂಗಳೂರಿನಂತಹ ಮಹಾನಗರಿಯಲ್ಲೂ ಕುಡಿಯಲು ನೀರಿಲ್ಲ. ಪ್ರಪಂಚದ ಎಷ್ಟೋ ರಾಷ್ಟ್ರಗಳು ನೀರಿನ ಕೊರತೆ ಎದುರಿಸುತ್ತಿವೆ. ಇದಕ್ಕೆಲ್ಲಾ ಮುಖ್ಯ ಕಾರಣ ಪರಿಸರ ನಾಶವೇ ಹೊರತು ಮತ್ತಿನೇನಲ್ಲ. ಅಂತರ್ಜಲದ ಕೊರತೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ಭವಿಷ್ಯದಲ್ಲಿ ನೀರನ್ನು ನಾವು ಪೆಟ್ರೋಲ್, ಡೀಸೆಲ್ ರೀತಿ ಲೀಟರ್‌ಗೆ ನೂರಾರು ರೂಪಾಯಿ ಕೊಟ್ಟು ಕುಡಿಯುವ ಪರಿಸ್ಥಿತಿ ಎದುರಾದರೂ ಆಶ್ವರ್ಯವಿಲ್ಲ. ಹಾಗಾಗಿ ಮೊದಲು ನಾವು ಪರಿಸರಕ್ಕೆ ಹಾನಿ ಮಾಡುವುದನ್ನು ನಿಲ್ಲಿಸುವ ಜೊತೆಗೆ ಅಂತರ್ಜಲವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನೀರು ಸಕಲ ಜೀವಿಗಳಿಗೂ ಅತ್ಯಮೂಲ್ಯ ಎಂಬ ಕಾರಣಕ್ಕೆ ನೀರಿನ ಮಹತ್ವ ಹಾಗೂ ನೀರಿನ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜಲದ ಸಂದರ್ಭದ ಈ ದಿನ ಇತಿಹಾಸ, ಮಹತ್ವಗಳ ಬಗ್ಗೆ ತಿಳಿಯೋಣ.
ದಿನಾಂಕ
ಪ್ರತಿವರ್ಷ ಮಾರ್ಚ್ 22 ರಂದು ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ವಿಶೇಷದಿನ ಶುಕ್ರವಾರ ಬಂದಿದೆ. ಇಂದು ಪ್ರಪಂಚದಾದ್ಯಂತ ಜಲದಿನವನ್ನು ಆಚರಿಸಲಾಗುತ್ತದೆ.
ಇತಿಹಾಸ
1993ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೀರಿನ ಸಂರಕ್ಷಣೆ ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಲಾಯಿತು. ಅಲ್ಲದೇ ಆ ವರ್ಷದಿಂದಲೇ ಮಾರ್ಚ್ 22 ರಿಂದ ವಿಶ್ವ ಜಲದ ಆಚರಣೆ ಜಾರಿಗೆ ಬಂದಿತು.
ವಿಶ್ವ ಜಲ ದಿನ ಮಹತ್ವ
ನೀರಿನ ಅಸ್ತಿತ್ವವನ್ನು ಆಚರಿಸುವ ದಿನ ಇದಾಗಿದೆ. ಈ ದಿನವು ಜಾಗತಿಕ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಕ್ರಮವನ್ನ ಪ್ರೇರೇಪಿಸುತ್ತದೆ. ನೀರಿನ ವಿಚಾರದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಲು ಸಹಕಾರ ನೀಡುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ. ನೀರನ್ನು ಉಳಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ.
ನೀರು ಉಳಿಸಲು ನಾವೆಲ್ಲರೂ ಕೈಜೋಡಿಸಬೇಕು. ಜೊತೆಗೆ ಪರಿಸರ ಹಾನಿಯನ್ನು ಆದಷ್ಟು ತಡೆಯಬೇಕು. ಗಿಡಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು. ಅಂತರ್ಜಲ ಹೆಚ್ಚಿಸುವ ಕ್ರಮಗಳಾದ ಇಂಗುಗುಂಡಿ, ಮಳೆನೀರಿನ ಕೊಯ್ಲು ಮುಂತಾದ ಅಗತ್ಯ ಕ್ರಮಗಳನ್ನು ಮನೆಗಳಿಂದಲೇ ಆರಂಭಿಸಬೇಕು. ಭೂಮಿಯ ಒಡಲು ಹೀಗೆ ಬರಿದಾಗುತ್ತಿದ್ದರೆ ಮುಂದೊಂದು ದಿನ ಪ್ರಪಂಚವೇ ನೀರಲ್ಲದೆ ಹೀನಾಯ ಪರಿಸ್ಥಿತಿ ಎದುರಾಗುವ ಕಾಲ ಬಂದರೂ ಆಶ್ವರ್ಯವಿಲ್ಲ. ಈಗಾಗಲೇ ನೀರಿಲ್ಲದೇ ತೊಂದರೆ ಅನುಭವಿಸುತ್ತಿರುವ ನಗರಗಳ ಬಗ್ಗೆ ಒಮ್ಮೆ ತಿಳಿಯಿರಿ. ಮುಂದೊಂದು ದಿನ ಅಂತಹ ಪರಿಸ್ಥಿತಿ ನಿಮಗೂ ಬಾರದಿರಲಿ ಎಂದು ಆಶಿಸಿ, ಜೊತೆಗೆ ನೀರು ಉಳಿಸಲು, ಅಂತರ್ಜಲ ಹೆಚ್ಚಿಸಲು, ಪರಿಸರ ಉಳಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಯೋಚಿಸಿ ಕೈಗೊಳ್ಳಿ. ಜೀವಜಲಕ್ಕೆ ಕಂಟಕ ಎದುರಾಗದಿರಲಿ.
ವಿಭಾಗ