ಅಯೋಧ್ಯೆ ಶ್ರೀರಾಮನ ಅಕ್ಷತೆ ಕೊಡಲು ಬರುವವರ ಮೇಲೆ ಪ್ರಶ್ನೆಯ ಕೂರಂಬು ತಿರುಗಿಸುವ ಬುದ್ಧಿಜೀವಿಗಳು; ರೋಹಿತ್ ಚಕ್ರತೀರ್ಥ ಬರಹ
Jan 17, 2024 09:34 PM IST
ಅಯೋಧ್ಯೆ ಶ್ರೀರಾಮನ ಅಕ್ಷತೆ (twitter/@CHIP_Maadonu)
- ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೂ ಮುನ್ನ ಜನರಿಗೆ ಅಕ್ಷತೆ ಜೊತೆ ಆಹ್ವಾನ ನೀಡಲಾಗುತ್ತಿದೆ. ಆದರೆ ಮನೆಮನೆಗೆ ಹೋಗಿ ಅಕ್ಷತೆ ಹಂಚುತ್ತಿರುವರಿಗೆ ಪ್ರಗತಿಪರ ಬುದ್ಧಿಜೀವಿಗಳು ಪ್ರಶ್ನೆಗಳನ್ನು ಕೇಳುತ್ತಿರುವ ಬಗ್ಗೆ ವಿಜ್ಞಾನ ಲೇಖಕ, ಚಿಂತಕ ರೋಹಿತ್ ಚಕ್ರತೀರ್ಥ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು 'ಎಚ್ಟಿ ಕನ್ನಡ'ದಲ್ಲಿ ಮರುಪ್ರಕಟಿಸಲಾಗಿದೆ.
"ನಮ್ಮಲ್ಲಿ ಪ್ರಶ್ನೆಮಾಡುವ ಪ್ರಗತಿಪರ ಬುದ್ಧಿಜೀವಿಗಳು ಬಹಳ ಬುದ್ಧಿವಂತರು. ಅಂಟಿಗೆಪಿಂಟಿಗೆಯವರು ಯಾಕೆ ನಮ್ಮ ಮನೆಗೆ ಒಪ್ಪಿಗೆ ಇಲ್ಲದೆ ಟ್ರೆಸ್‌ಪಾಸ್ ಮಾಡಬೇಕು? ನಮ್ಮ ಅನುಮತಿ ಇಲ್ಲದೆ ನಮ್ಮ ಮನೆ ಗೇಟ್ ದಾಟುವ ಅವಕಾಶ ಅವರಿಗೆ ಕೊಟ್ಟವರಾರು? ಎಂದು ಅವರು ಪ್ರಶ್ನಿಸುವುದಿಲ್ಲ. ಹಾಗೆ ಪ್ರಶ್ನಿಸಿದರೆ ತಾವು ನೆಲಮೂಲದ ಸಂಸ್ಕೃತಿಯ ವಿರೋಧಿಗಳು ಎಂಬ ಹಣೆಪಟ್ಟಿ ಹಚ್ಚಿಕೊಳ್ಳಬೇಕಾಗುತ್ತದೆಂದು ಗೊತ್ತು. ಹಾಗಾಗಿ ಅಕ್ಷತೆ ಕೊಡಲು ಬರುವ ಸ್ವಯಂಸೇವಕರ ಮೇಲೆ ತಮ್ಮ ಪ್ರಶ್ನೆಯ ಕೂರಂಬು ತಿರುಗಿಸುತ್ತಾರೆ. ರಾಮನ ಬಗ್ಗೆ ಪ್ರಶ್ನೆಯ ಮೇಲೆ ಪ್ರಶ್ನೆ ಎಸೆಯುವವರು ಅಂಥವೇ ಪ್ರಶ್ನೆಗಳನ್ನು ಇನ್ನು ಕೆಲವು ದೇವರುಗಳ ಬಗ್ಗೆ ಎತ್ತರಲಾರರು. ಯಾಕೆಂದರೆ ಹಾಗೆ ಕೆಲವು ಮತ್ತು ಕೆಲವರ ದೇವರುಗಳನ್ನು ಪ್ರಶ್ನಿಸಿದರೆ ಒಂದೋ ಜೀವಮಾನವಿಡೀ ಕೋರ್ಟು-ಕಚೇರಿ ಅಲೆಯಬೇಕು ಅಥವಾ ಎಲ್ಲೂ ಅಲೆಯಲಾಗದಂತೆ ಕೈಕಾಲು ಮುರಿಸಿಕೊಂಡು ಮನೆಯಲ್ಲಿ ಕೂರಬೇಕು ಎಂಬ ಸತ್ಯ ಅವರಿಗೆ ಗೊತ್ತಿದೆ.
ಈ ರೀತಿ ಪ್ರಶ್ನೆಗಳನ್ನು ಕೇಳುವುದು ಬಹಳ ಸುಲಭ. ನಿಮ್ಮ ಕೃಷ್ಣ ಹದಿನಾರು ಸಾವಿರ ಹೆಂಡತಿಯರನ್ನು ಕಟ್ಟಿಕೊಂಡಿದ್ದ, ನಿಮ್ಮ ರಾಮ ಕಟ್ಟಿಕೊಂಡ ಹೆಂಡತಿಯನ್ನೇ ಬಿಟ್ಟಿದ್ದ, ನಿಮ್ಮ ಶಿವ ಬೂದಿ ಬಳಿದುಕೊಳ್ಳುತ್ತಿದ್ದ, ಕಲ್ಲು ಸಾಲಿಗ್ರಾಮಕ್ಕೆ ಏನನ್ನಾದರೂ ಮಾಡುವ ಸಾಮರ್ಥ್ಯ ಇದೆಯಾ, ಗಣಪತಿಯನ್ನ ಮಣ್ಣಲ್ಲಿ ಮಾಡಿ ಮತ್ತೆ ಕೆರೆಯಲ್ಲಿ ಬಿಡುತ್ತೀರಲ್ಲ ಇದಕ್ಕೇನಾದರೂ ಅರ್ಥ ಇದೆಯಾ... ಹೀಗೆ ಪ್ರಶ್ನೆಗಳದ್ದೇ ಒಂದು ಪುಸ್ತಕ ಮಾಡಬಹುದು. ಇಂಥ ಪ್ರಶ್ನೆಗಳನ್ನು ಈ ಪ್ರಗತಿಪರರು ನಮ್ಮ ಜನಸಾಮಾನ್ಯ ಹಿಂದುಗಳಲ್ಲಿ ಕೇಳಿದಾಗ ಹಿಂದುಗಳು ಅಪ್ರತಿಭರಾಗುತ್ತಾರೆ. ಉತ್ತರ ಕೊಡಲು ತಡಬಡಾಯಿಸುತ್ತಾರೆ. ಕೆಲವೊಮ್ಮೆ ವೈಜ್ಞಾನಿಕ ಕಾರಣ ಕೊಡಲು ಹೋಗಿ ಮತ್ತಷ್ಟು ನಗೆಪಾಟಲಾಗುತ್ತಾರೆ. ಹಿಂದು ಧರ್ಮದ ಮೂಲ ತಿರುಳನ್ನು ಅರ್ಥ ಮಾಡಿಕೊಳ್ಳದಿರುವುದೇ ಹೀಗೆ ಪ್ರಶ್ನೆಗಳು ಮತ್ತು ಉತ್ತರಗಳು ಹುಟ್ಟಿಕೊಳ್ಳಲು ಮೂಲ ಕಾರಣ.
ಮೊದಲನೆಯದಾಗಿ ಹೀಗೆ "ಪ್ರತಿಯೊಂದನ್ನೂ ಪ್ರಶ್ನಿಸಬೇಕು" ಎನ್ನುವುದೇ ಪಾಶ್ಚಾತ್ಯ ಚಿಂತನೆಯ ಭಾಗ. ಪ್ರತಿಯೊಂದಕ್ಕೂ ಉತ್ತರ ಹುಡುಕಲು ಯತ್ನಿಸಬೇಕು - ಎಂಬುದು ಭಾರತೀಯ ದೃಷ್ಟಿ. ಪ್ರಶ್ನಿಸುವುದೇ ಉದ್ಯೋಗವಾದಾಗ, ಹಾಗೆ ಪ್ರಶ್ನಿಸುವುದರಲ್ಲೇ ಒಂದು ಬಗೆಯ ಸುಖ ಸಿಗಲು ಶುರುವಾಗುತ್ತದೆ. "ನಾನು ಪ್ರಶ್ನಿಸಿ ಅವರನ್ನು ತಲೆಕೆಳಗೆ ಮಾಡಿದೆ ಗೊತ್ತಾ? ಇವರನ್ನು ಉರಿ ಎಬ್ಬಿಸಿದೆ ಗೊತ್ತಾ?" ಎಂದು ಹೇಳಿಕೊಂಡು ವಿಕೃತಸಂತೋಷ ಪಡುವುದಕ್ಕಷ್ಟೇ ಸೀಮಿತರಾಗುತ್ತೇವೆ. ಪ್ರಶ್ನೆ ಮಾಡುವವನಿಗೆ ಉತ್ತರ ಪಡೆಯುವ, ಹುಡುಕುವ ಹಸಿವು ಇರಬೇಕು. ಆ ಉತ್ತರಕ್ಕಾಗಿ ಶಾಸ್ತ್ರಗ್ರಂಥಗಳನ್ನು ಓದುವ, ಹಿರಿಯರ ಮಾತನ್ನು ಕೇಳುವ, ಧ್ಯಾನಿಸುವ, ತಾನಾಗಿ ಉತ್ತರ ಪಡೆಯುವ ತಾಳ್ಮೆ ಇರಬೇಕು. ಒಂದು ಗಾಯ ಇದ್ದರೆ ಅದನ್ನು ಕೆರೆಕೆರೆದು ಕೆರೆಯುತ್ತಲೇ ಹೋಗುವುದು ಪಾಶ್ಚಾತ್ಯ ದಾರಿಯಾದರೆ ಆ ಗಾಯವನ್ನು ಮಾಯಿಸಿಕೊಳ್ಳಲು ಏನೇನು ಮಾಡಬಹುದು ಎಂದು ಯೋಚಿಸುವುದು ಭಾರತೀಯ ದಾರಿ.
"ಹಾಗಾದರೆ ಪ್ರಶ್ನೆ ಮಾಡಲೇಬಾರದಾ?" ಎಂದು ಕೇಳುತ್ತೀರಾ? ಪ್ರಶ್ನೆ ಮಾಡುವ ಮೂಲಕವೇ ಭಾರತೀಯ ತತ್ತ್ವಜ್ಞಾನ ಬೆಳೆದಿರುವುದು. ಷಟ್-ಪ್ರಶ್ನೋಪನಿಷತ್ ಎಂಬ ಹೆಸರಿನ ಉಪನಿಷತ್ತೇ ಇಲ್ಲವೆ? ವಿದ್ಯಾರ್ಥಿ "ನನಗೆ ಪ್ರಶ್ನೆ ಕೇಳುವುದಿದೆ" ಎಂದಾಗ ಗುರು ಪಿಪ್ಪಲಾದರು "ತಡಿಯಪ್ಪ. ಮೊದಲು ಒಂದು ವರ್ಷ ಇಲ್ಲಿದ್ದು ಇಲ್ಲಿಯ ಜೀವನಕ್ರಮ ನೋಡು. ನೀನೇ ಅಧ್ಯಯನ ಮಾಡು. ಎಲ್ಲ ಬಗೆಯಲ್ಲೂ ಜ್ಞಾನಸಂಪಾದನೆಗೆ ಪ್ರಯತ್ನಿಸು. ಆಮೇಲೂ ಪ್ರಶ್ನೆ ಉಳಿದಿದ್ದರೆ ಅದನ್ನು ಕೇಳು; ಉತ್ತರ ನನಗೆ ತಿಳಿದಿದ್ದರೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ" ಎನ್ನುತ್ತಾರೆ. ಇಲ್ಲಿ ಪ್ರಶ್ನಿಸುವ ಧಾರ್ಷ್ಟ್ಯ ಇಲ್ಲ; ಉತ್ತರಿಸುವ ಹಪಹಪಿ ಇಲ್ಲ. ಪ್ರಶ್ನಿಸುವ ಅವಸರ ಇರುವಂತೆಯೇ ಉತ್ತರವನ್ನು ಸಮಚಿತ್ತದಿಂದ ಸಮಗ್ರವಾಗಿ ಪರಿಶೀಲಿಸಿ ಸ್ವೀಕರಿಸುವ ತಾಳ್ಮೆ ಇರಬೇಕು. ಇಲ್ಲವಾದರೆ ಪ್ರಶ್ನೆ ಮಾತ್ರ ಮಾಡುತ್ತೇವೆ ಎನ್ನುವ ಬುದ್ಧಿವಂತರಿಗೆ ಜಗತ್ತೆಲ್ಲ ಬರಿಯ ಪ್ರಶ್ನೆಗಳೇ ಕಾಣುತ್ತವೆ - ಸುತ್ತಿಗೆ ಹಿಡಿದವನಿಗೆ ಜಗತ್ತೆಲ್ಲ ಮೊಳೆಗಳೇ ಕಂಡಂತೆ. ಅಂಥವರಿಗೆ ಅಪ್ಪ ಎದುರು ನಿಂತರೂ ಪ್ರಶ್ನೆ ಇರುತ್ತದೆ - ಇಂವ ನಿಜಕ್ಕೂ ನನ್ನ ಅಪ್ಪನಾ ಅಂತ!
ಇರಲಿ, ಭಾರತೀಯ ಚಿಂತನೆಯ ಒಂದು ಮುಖ್ಯ ಸಂಗತಿಯನ್ನು ಗಮನಿಸೋಣ: ಇಲ್ಲಿ ಯಾವುದೇ ಸಂಗತಿಗೆ: ಲೋಕಪ್ರಯೋಜನ ಅಥವಾ ಭಾವಪ್ರಯೋಜನ ಎಂಬ ಒಂದು ಮುಖ ಇರುತ್ತದೆ (ಕೆಲವೊಮ್ಮೆ ಎರಡೂ ಇರಬಹುದು). ಸಂಜೆಗತ್ತಲಾಗುವಾಗ ಮನೆಯಲ್ಲಿ ದೀಪ ಹಚ್ಚುತ್ತೀರಿ - ಅರ್ಥಾತ್ ಬಲ್ಬ್ ಬೆಳಗುತ್ತೀರಿ. ಅದು ಲೋಕಪ್ರಯೋಜನಕ್ಕಾಗಿ. ಆ ಬೆಳಕಿನಲ್ಲಿ ನಾವು ನಮ್ಮ ಮನೆಗೆಲಸಗಳನ್ನು ಮಾಡಿಕೊಳ್ಳಬಹುದು. ಹಾಗೆಯೇ ಮನೆಯಲ್ಲಿ ದೇವರ ಕೋಣೆಯಲ್ಲಿ, ದೇವರ ಮುಂದೆ ತುಪ್ಪದ ದೀಪ ಹಚ್ಚಿಡುತ್ತೀರಿ. ಅದೇನೂ ಲೋಕಪ್ರಯೋಜನಕ್ಕಾಗಿ ಅಲ್ಲ. ದೇವರ ಮುಂದೆ ಹಚ್ಚಿಟ್ಟ ನೀಲಾಂಜನದ ಬೆಳಕಲ್ಲಿ ಯಾರೂ ಮನೆಗೆಲಸ ಮಾಡಿಕೊಳ್ಳುವುದಿಲ್ಲ. ಆದರೆ ಆ ದೀಪ ಭಾವಪ್ರಯೋಜನಕ್ಕಾಗಿ. ಅರ್ಥಾತ್, ಅದರಿಂದ ನಿಮ್ಮ ಮನಸ್ಸಿಗೆ ಒಂದು ನೆಮ್ಮದಿಯುಂಟು. ಮನೆಯಲ್ಲಿ ಸಂಜೆಹೊತ್ತಿಗೆ ದೇವರಿಗೆ ದೀಪ ಹಚ್ಚಿಡಬೇಕು ಎಂದು ಯಾವ ಟೆಕ್ಸ್ಟ್ ಬುಕ್ಕಲ್ಲೂ ಬರೆದಿಲ್ಲ. ಅದನ್ನು ಕಲಿಸಿದ್ದು ನಮ್ಮ ಮನೆಯ ಹಿರಿಯರು. ಅಮ್ಮ ಮಾಡಿದ್ದನ್ನು ಮಗಳು ಮುಂದುವರಿಸುತ್ತಾಳೆ. ಮಗಳು ಮಾಡುವ ಆ ಕೆಲಸವನ್ನು ಅವಳ ಮುಂದಿನ ತಲೆಮಾರು ಮುಂದುವರಿಸುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿರುವ ಬಹಳಷ್ಟು ಸಂಗತಿಗಳೆಲ್ಲವೂ ಇರುವುದು ಭಾವಪ್ರಯೋಜನಕ್ಕಾಗಿ. ಶ್ರಾದ್ಧದಲ್ಲಿ ಪಿಂಡ ಇಡುವ ಕ್ರಮದಿಂದ ಹಿಡಿದು, ದೇವರಿಗೆ ಆರತಿ ಬೆಳಗುವವರೆಗೆ. ಅವೆಲ್ಲ ಶಾಸ್ತ್ರ - ವಿಧಿವಿಧಾನ - ಆಚರಣೆಗಳೂ ನಮ್ಮ ಭಾವಜಗತ್ತಿನ ಭಾಗ. ಶ್ರದ್ಧೆಯ ಭಾಗ. ಮತ್ತು ಅವೆಲ್ಲವೂ ಯಾವುದೋ ಭಾವವನ್ನು ಉದ್ದೀಪನಗೊಳಿಸಲು ಇರುವ ಸಂಕೇತಗಳು. ಅಮೂರ್ತ ಸಂಗತಿಗಳನ್ನು ಹಿಡಿಯಲು ನಾವು ಬಳಸುವ ಮೂರ್ತ ರೂಪ-ರೂಪಕಗಳು. ಶುದ್ಧವಾದ, ಬಿಸಿಬಿಸಿಯಾಗಿ ಹಬೆಯಾಡುವ, ಆರೋಗ್ಯಕರ ಊಟ ಮಾಡಬೇಕು ಎಂಬುದು ಮನುಷ್ಯನ ಬಯಕೆ. ಅದಕ್ಕಾಗಿ, ಆತ ತಾನು ತಯಾರಿಸಿದ ಊಟವನ್ನು ಮೊದಲು ದೇವರಿಗೆ ಅರ್ಪಿಸುವ ವಿಧಿಯನ್ನು ತನಗೆ ತಾನಾಗಿ ವಿಧಿಸಿಕೊಂಡ. ಹಾಗೆ ಮಾಡಿದ್ದರಿಂದ ಸಾಮಾನ್ಯ ಅನ್ನವೇ ನೈವೇದ್ಯವಾಯಿತು. ದೇವರಿಗೆ ಅರ್ಪಿಸಿದ್ದನ್ನು ನಾನು ಉಣ್ಣುತ್ತಿದ್ದೇನೆಂಬ ಆ ಭಾವದಲ್ಲಿ ಕೃತಜ್ಞತೆ ಇದೆ, ತೃಪ್ತಿ ಇದೆ, ಭಕ್ತಿ ಇದೆ. ಆ ಎಲ್ಲ ಭಾವನೆಗಳನ್ನು ಉದ್ದೀಪನಗೊಳಿಸುವುದಕ್ಕಾಗಿ ನೈವೇದ್ಯ/ಸಮರ್ಪಣೆ ಎಂಬ ಮೂರ್ತ ಆಚರಣೆಯೊಂದು ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿತು. ಅನ್ನದ ಮೇಲಿರುವ ತುಳಸೀದಳ ಅಂಥದೊಂದು ಆಚರಣೆಯ, ಭಾವದ, ಸಂಸ್ಕೃತಿಯ ಮೂರ್ತ ಪ್ರತಿನಿಧಿ.
ಸನಾತನ ಸಂಸ್ಕೃತಿಯೆಂಬುದು ನಿಂತಿರುವುದು ಇಂಥ ಮೂರ್ತ-ಅಮೂರ್ತಗಳ ಅಪೂರ್ವ ಸಾಮರಸ್ಯದ ಮೇಲೆ. ಮದುವೆಯಾಗುವಾಗ ಅಂತರಪಟ ಹಿಡಿಯುವುದು, ಹಾರ ಬದಲಾಯಿಸಿಕೊಳ್ಳುವುದು, ತಾಳಿ ಕಟ್ಟುವುದು ಅನಿವಾರ್ಯವೇನಲ್ಲ. ಆದರೆ ಅದೆಲ್ಲ ಇರುವುದರಿಂದ ಆ ವಾತಾವರಣಕ್ಕೊಂದು ಸಂಭ್ರಮದ ಕಳೆ ಬರುತ್ತದೆ. ಅಭಿಷೇಕ ಮಾಡುವುದು, ನೈವೇದ್ಯ ಅರ್ಪಿಸುವುದು, ಆರತಿ ಬೆಳಗುವುದು, ಮಂತ್ರೋಚ್ಚಾರಣೆ ಮಾಡುವುದು, ಜಾಗಟೆ ಬಡಿಯುವುದು, ಶಂಖ ಊದುವುದು ಯಾವುದನ್ನೂ ದೇವರು ಅಪೇಕ್ಷಿಸಲಾರ. ಆದರೆ ಅವೆಲ್ಲ ಇರುವುದರಿಂದ ಪೂಜೆಯ ಒಂದು ವಾತಾವರಣ ರಂಗೇರುತ್ತದೆ. ಹೀಗೆ ಮೂರ್ತ ಸಂಕೇತಗಳ ಮೂಲಕ, ಮೂರ್ತೀಕರಿಸಿದ ಆಚರಣೆಗಳ ಮೂಲಕ ಮನುಷ್ಯನ ಭಾವಕೋಶವನ್ನು ಎಚ್ಚರಿಸುವ, ಅವನಲ್ಲಿ ಭಾವೋದ್ದೀಪನಗೊಳಿಸುವ ಕೆಲಸವನ್ನು ಮಾಡಬಹುದು ಎನ್ನುವುದನ್ನು ಸನಾತನ ಧರ್ಮ ಕಂಡುಕೊಂಡಿದೆ. ಹಾಗಾಗಿಯೇ ಅದು "ನಿನಗೆ ನಿನ್ನನ್ನು ಮೀರಿದ ಒಂದು ಮಹಾಶಕ್ತಿಯ ಬಗ್ಗೆ ಭಕ್ತಿ-ಪ್ರೀತಿ-ಗೌರವ-ಶರಣು ಭಾವಗಳು ಬರಬೇಕಾ? ಹಾಗಾದರೆ ಒಂದು ಕಲ್ಲಿನಲ್ಲೋ ಮರದಲ್ಲೋ ಲೋಹದಲ್ಲೋ ಆ ಮಹಾಶಕ್ತಿಗೊಂದು ಆಕಾರ ಕೊಟ್ಟು ಆವಾಹಿಸಿಕೋ" ಎಂದಿತು.
ಸನಾತನ ಧರ್ಮವನ್ನು "ವೈಜ್ಞಾನಿಕ"ವಾಗಿ ಪ್ರಶ್ನಿಸುವವರು ಕೈ ಹಾಕುವುದು ಇಂಥ ಭಾವಪ್ರಯೋಜನ ಕೊಡುವ ಸಂಗತಿಗಳಿಗೇನೇ. ಯಾಕೆಂದರೆ ಅಂಥದೊಂದು ಭಾವದ ಬಗ್ಗೆಯೇ ಅವರು ಮೂಢರು. ಏಕಾದಶಿ ಉಪವಾಸ ವ್ರತ ಹಿಡಿದವನಿಗೆ ಆ ವ್ರತದಿಂದ ಆರೋಗ್ಯ ಪ್ರಯೋಜನಗಳೇನೋ ಆಗಬಹುದು; ಆದರೆ ಅದಕ್ಕೂ ಮೀರಿ ಒಂದು ಬಗೆಯ ಮಾನಸಿಕ ಸಮಾಧಾನ ಇರುತ್ತದೆ. ಅವನ ಭಕ್ತಿಭಾವವನ್ನು ವ್ರತ ಇನ್ನಷ್ಟು ಹೆಚ್ಚಿಸುತ್ತದೆ. ಪ್ರಶ್ನೆ ಮಾಡುವ ಬುದ್ಧಿಜೀವಿಗೆ ಆ ರೀತಿ ಒಂದು ದಿನ ಉಪವಾಸ ಮಾಡಿಸಿ ಆರೋಗ್ಯದ ಪ್ರಯೋಜನವನ್ನೇನೋ ಮನದಟ್ಟು ಮಾಡಿಸಬಹುದು; ಆದರೆ ಅದರಿಂದಾಗುವ ಭಾವಪ್ರಯೋಜನವನ್ನು ತಿಳಿಯಪಡಿಸುವುದು ಸುತಾರಾಂ ಸಾಧ್ಯವಿಲ್ಲದ ಕೆಲಸ. ತಿರುಪತಿಯ ನೂಕುನುಗ್ಗಲಿನಲ್ಲಿ ಗಂಟಗಟ್ಟಲೆ ಕ್ಯೂ ನಿಂತು ಒಂದೇ ಒಂದು ಕ್ಷಣ ತಿಮ್ಮಪ್ಪನ ದರ್ಶನ ಮಾಡಲು ಸಿಕ್ಕರೂ ಅದರಿಂದ ಪುನೀತರಾಗುವ ಭಕ್ತರ ಭಾವವನ್ನು ಪ್ರಶ್ನಿಸುವ ಬುದ್ಧಿಜೀವಿ ತನ್ನ ಜೀವನದಲ್ಲೆಂದೂ ಆ ಭಕ್ತಿಭಾವವನ್ನು ಅರ್ಥೈಸಿಕೊಳ್ಳಲಾರ. ಹಾಗಾಗಿ ಅವನಿಗೆ ತಿಮ್ಮಪ್ಪದರ್ಶನ ಅರ್ಥವಿಲ್ಲದ ವ್ಯರ್ಥ ಕಸರತ್ತಿನಂತೆಯೇ ಕಾಣುತ್ತದೆ.
ಅಕ್ಷತ ಎಂದರೆ ಪುಡಿಯಾಗದ ಇಡಿ ಕಾಳು ಎಂದು ಅರ್ಥ. ಅರಿಷಿಣ-ಕುಂಕುಮ ಬೆರೆಸಿದಾಗ ಅದು ಅಕ್ಷತೆಯಾಯಿತು. ದ್ರಾವಿಡ ಕನ್ನಡದಲ್ಲಿ ಇದನ್ನು ಅಕ್ಕಿಕಾಳು ಎಂದು ಜನಪದರೂ ಕವಿಗಳೂ ಶತಶತಮಾನಗಳಿಂದ ಹೇಳುತ್ತ, ಬಳಸುತ್ತ ಬಂದಿದ್ದಾರೆ ('ಜಿನನಂ ಪೂಜಿಸಿದಕ್ಕಿ ಮಾಮೆ ಸೊಡರ್ಗಳ್'). ವಿಶೇಷ ಸಂದರ್ಭಗಳಲ್ಲಿ ಅಕ್ಷತೆ ಹಾಕುತ್ತೇವೆ. ಹಿರಿಯರು ತಮ್ಮ ಆಶೀರ್ವಾದದ ರೂಪವಾಗಿ ಕಿರಿಯರ ತಲೆಗೆ ಅಕ್ಷತೆ ಹಾಕುತ್ತಾರೆ. ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲೂ ಅಕ್ಷತೆ ಹಂಚುತ್ತಾರೆ. ಅದೊಂದು ದೈವಿಕ ಸಂಗತಿಯೆಂಬ ಭಾವನೆ ಅದರಲ್ಲಿ ಸೇರಿಕೊಂಡಿದೆ. ಹೇಗೆ ಗಿಡದ ಹೂವೇ ದೇವರ ತಲೆಯನ್ನೇರಿದಾಗ "ಅಲಂಕಾರ" ಆಗುತ್ತದೋ, ಹೇಗೆ ಬಾವಿಯ ಸಾಮಾನ್ಯ ನೀರೇ ದೇವರ ಸಂಪರ್ಕದಿಂದಾಗಿ "ತೀರ್ಥ" ಆಗುತ್ತದೋ, ಹೇಗೆ ಮನೆಯಲ್ಲಿ ಸಾಮಾನ್ಯ ರೀತಿಯಲ್ಲೇ ಬೇಯಿಸಿದ ಅನ್ನ ದೇವರಿಗೆ ನೈವೇದ್ಯವಾದ ಮೇಲೆ "ಪ್ರಸಾದ" ಆಗುತ್ತದೋ ಹಾಗೆ ಸಹಜ-ಸಾಮಾನ್ಯವಾದ ಅಕ್ಕಿ - ಅಕ್ಷತೆಯಾಯಿತು (ಅಕ್ಕಿಯನ್ನೇ ಯಾಕೆ ಹಾಕಬೇಕು? ಅಕ್ಷತೆ ಎರಚುವ ಕಡೆ ಮಣ್ಣೆರಚಬಹುದಲ್ಲ - ಎಂಬ ಪ್ರಶ್ನೆಯೂ ಬಂದೀತು! ಅಕ್ಕಿಯೆಂಬುದು ಯೋಚಿಸಿನೋಡಿದರೆ ಪಂಚಭೂತಗಳ ಸಂಗಮ. ಎಲ್ಲ ಐದು ಮೂಲಭೂತ ಭೌತಿಕ ಶಕ್ತಿಗಳೂ ಸಂಚಯಿಸಿ ಅಕ್ಕಿಯಾಗಿದೆ. ಅರಿಷಿಣ/ಕುಂಕುಮ/ತುಪ್ಪ ಎಂಬುದು ಈ ಐದನ್ನೂ ಮೀರಿದ ದೇವಶಕ್ತಿಯ ಸಂಕೇತ).
ಅಯೋಧ್ಯೆಯಲ್ಲಿ ತಯಾರಿಸಿದ ಅಕ್ಷತೆಯ ಕಾಳಿನ ಸಂಪರ್ಕಕ್ಕೆ ಬಂದ ನಮ್ಮ ಮನೆಯ ಅಕ್ಕಿಕಾಳೂ ಅಕ್ಷತೆಯಾಗುವುದು ಸಾಧ್ಯ. ಹಾಗಾದಾಗ ನಮಗೂ ಶ್ರೀರಾಮನಿಗೂ ಒಂದು ಸಂಬಂಧ ಏರ್ಪಡುತ್ತದೆ. ಅಕ್ಷತೆಯನ್ನಿಟ್ಟ ನಮ್ಮ ಮನೆಯ ದೇವರ ಗೂಡೂ ಅಯೋಧ್ಯೆಯ ರಾಮನ ಗರ್ಭಗುಡಿಯ ಜೊತೆ ಅನೂಹ್ಯವಾದ ಸಂಬಂಧವೊಂದನ್ನು ಸಾಧಿಸುತ್ತದೆ. ಇದು ಭಾವಕ್ಕೆ ಸಂಬಂಧಿಸಿದ ವಿಷಯ. ಅಕ್ಷತೆ ಮಾಡುವುದು ಅಂಥ ಭಾವಪ್ರಯೋಜನದ ಕೆಲಸವನ್ನು. ಅದನ್ನು ಪಾಶ್ಚಾತ್ಯ ಚಿಂತನೆಯ "ಪ್ರಶ್ನೆ ಮಾಡುವ" ಪ್ರಕ್ರಿಯೆಯ ಮೂಲಕ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಭಜನೆ, ಅಕ್ಷತೆ, ಕ್ಷೀರಾಭಿಷೇಕ, ಗಂಧ, ಸಮರ್ಪಣೆ, ಪ್ರಸಾದ, ತೀರ್ಥ, ಗಂಗಾಜಲ... ಎಲ್ಲವೂ ನಮ್ಮ ಭಾವಪ್ರಯೋಜನಕ್ಕಾಗಿ ಒದಗಿಬರುವ ಸಂಗತಿಗಳು. ಒಂದೇ ಅನಂತ ರೂಪಗಳಾಗಿದೆ; ಆ ಅನಂತ ರೂಪಗಳು ಮತ್ತೆ ಒಂದಕ್ಕೇ ಸೇರಿವೆ - ಎಂಬ ಭಾರತೀಯ ದೃಷ್ಟಿಕೋನದ ದಾರಿಯಲ್ಲಿ ಇದನ್ನೆಲ್ಲ ಯೋಚಿಸಿದಾಗ ಉತ್ತರ ನಿಚ್ಚಳವಾಗುತ್ತದೆ
ಉಳಿದಂತೆ, ಪ್ರಶ್ನವೀರರ ಒರಟು ಪ್ರಶ್ನೆಗಳಿಗೆ ಉತ್ತರ ಕೊಡಲು ಒದ್ದಾಡುವುದೇನಿದ್ದರೂ ಕೋಣನಿಗೆ ಮಾಲಕೌಂಸ ರಾಗವನ್ನು ಅರ್ಥೈಸಲು ಹೊರಟ ಹಾಗೆ. ಜಗತ್ತು ಆಡಿಕೊಂಡು ನಗುವುದು ಕೋಣನನ್ನು ನೋಡಿಯೋ ಗಾಯಕನನ್ನು ನೋಡಿಯೋ - ಯೋಚಿಸಿನೋಡಿ."
ಬರಹ: ರೋಹಿತ್ ಚಕ್ರತೀರ್ಥ