Small savings schemes: ಪಿಪಿಎಫ್, ಸುಕನ್ಯಾ ಸಮೃದ್ಧಿ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಆಧಾರ್-ಪ್ಯಾನ್ ಸಲ್ಲಿಕೆ ಕಡ್ಡಾಯ
Apr 01, 2023 03:47 PM IST
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಆಧಾರ್-ಪ್ಯಾನ್ ಸಲ್ಲಿಕೆ ಕಡ್ಡಾಯ
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಚಂದಾದಾರರು ಸೆಪ್ಟೆಂಬರ್ 30 ರೊಳಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು.
ನವದೆಹಲಿ: ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಕೆವೈಸಿ ಪ್ರಕ್ರಿಯೆಗೆ ಇವೆರಡು ದಾಖಲೆಗಳು ಈಗ ಅವಶ್ಯವಾಗಿದೆ. ಇದಿಗ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಮತ್ತು ಆಧಾರ್ ಸಂಖ್ಯೆ ಕಡ್ಡಾಯವೆಂದು ಹಣಕಾಸು ಸಚಿವಾಲಯ ತಿಳಿಸಿದೆ.
ಈ ಹಿಂದೆ ಆಧಾರ್ ಸಂಖ್ಯೆಯನ್ನು ಸಲ್ಲಿಸದೆಯೇ ಇಂತಹ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದಿತ್ತು. ಈಗ ಪ್ಯಾನ್ ದಾಖಲೆ ಕೂಡ ಸಣ್ಣ ಉಳಿತಾಯ ಯೋಜನೆಯ ಕೆವೈಸಿ ಭಾಗವಾಗಿದೆ ಎಂದು ಮಾರ್ಚ್ 31 ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇಂತಹ ಹೂಡಿಕೆ ಯೋಜನೆಗಳಲ್ಲಿ ಕನಿಷ್ಠ ಮೊತ್ತ ಹೂಡಿಕೆಗೆ ಆಧಾರ್ ಸಂಖ್ಯೆ ಸಾಕಾಗುತ್ತದೆ. ಆದರೆ, ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹೂಡಿಕೆ ಮಾಡುವಾಗ ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಚಂದಾದಾರರು ಸೆಪ್ಟೆಂಬರ್ 30 ರೊಳಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೊಸ ಚಂದಾದಾರರು ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ವಿವರಗಳನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಚಂದಾದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಆಧಾರ್ ಸಂಖ್ಯೆ ದೊರಕದೆ ಇದ್ದರೆ, ಅದರ ಬದಲು ಆಧಾರ್ ನೋಂದಣಿ ಸಂಖ್ಯೆ ನೀಡಬಹುದು. ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ವಿವರಗಳನ್ನು ಸಲ್ಲಿಸದಿದ್ದರೆ, ಈ ವರ್ಷದ ಅಕ್ಟೋಬರ್ 1 ರಿಂದ ಸಣ್ಣ ಉಳಿತಾಯ ಯೋಜನೆ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಇದೇ ರೀತಿ, ಉಳಿತಾಯ ಖಾತೆ ತೆರೆಯುವಾಗ ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕು ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಖಾತೆ ತೆರೆಯುವ ಸಮಯದಲ್ಲಿ ಪ್ಯಾನ್ ಸಂಖ್ಯೆ ಸಲ್ಲಿಸದೆ ಇದ್ದರೆ ಎರಡು ತಿಂಗಳೊಳಗೆ ಸಲ್ಲಿಸಬೇಕು. ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಮೊತ್ತ 50,000 ರೂ.ಗಿಂತ ಹೆಚ್ಚಿದ್ದರೆ ಪ್ಯಾನ್ ಕಾರ್ಡ್ ಸಲ್ಲಿಸಲೇಬೇಕು.
ಸಣ್ಣ ಉಳಿತಾಯ ಯೋಜನೆಯ ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ಹಿಂಪಡೆಯುವಿಕೆ ಮತ್ತು ವರ್ಗಾವಣೆಗಳ ಒಟ್ಟು ಮೊತ್ತವು 10,000 ರೂ.ಗಿಂತ ಹೆಚ್ಚಿದ್ದರೆ ಮತ್ತು ಯಾವುದೇ ಹಣಕಾಸಿನ ವರ್ಷದಲ್ಲಿ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್‌ಗಳ ಒಟ್ಟು ಮೊತ್ತವು 1 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಪ್ಯಾನ್ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಿಗದಿತ ಅವಧಿಯೊಳಗೆ ಚಂದಾದಾರರು ಪ್ಯಾನ್ ವಿವರಗಳನ್ನು ಸಲ್ಲಿಸಲು ವಿಫಲವಾದರೆ, ಪ್ಯಾನ್ ಸಂಖ್ಯೆಯನ್ನು ಒದಗಿಸುವವರೆಗೆ ಖಾತೆಯು ಸ್ಥಗಿತಗೊಳ್ಳುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿವಿಧ ಸಣ್ಣ ಉಳಿತಾಯ ಖಾತೆಗಳಲ್ಲಿ ಹಣ ಹೂಡಿಕೆ ಮಾಡಿರುವವರು ಇಂತಹ ದಾಖಲೆಗಳನ್ನು ಸಲ್ಲಿಸದೆ ಇದ್ದರೆ ತಕ್ಷಣ ಸಲ್ಲಿಸಬಹುದು. ಈ ಕುರಿತು ಸಂಬಂಧಪಟ್ಟ ಬ್ಯಾಂಕ್ ಅಥವಾ ಇತರೆ ಸಂಸ್ಥೆಗಳಿಗೆ ನಿಮಗೆ ಪ್ಯಾನ್/ಆಧಾರ್ ದಾಖಲೆ ಸಲ್ಲಿಸುವಂತೆ ಅಪ್‌ಡೇಟ್ ದೊರಕಬಹುದು.