Milkomeda: ಭವಿಷ್ಯದಲ್ಲಿ ನಮ್ಮ ಮನೆಯಾಗಲಿದೆ ಮಿಲ್ಕೊಮೆಡಾ: ಎರಡು ದೈತ್ಯ ಗ್ಯಾಲಕ್ಸಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಬ್ರಹ್ಮಾಂಡ!
Feb 26, 2023 03:50 PM IST
ಸಾಂದರ್ಭಿಕ ಚಿತ್ರ
- ಮುಂದಿನ ಎರಡು ಶತಕೋಟಿ ವರ್ಷಗಳ ಅವಧಿಯಲ್ಲಿ ನಮ್ಮ ಹಾಲು ಹಾದಿ ಗ್ಯಾಲಕ್ಸಿ ಮತ್ತು ಆ್ಯಂಡ್ರೋಮೆಡಾ ಗ್ಯಾಲಕ್ಸಿಗಳ ಸಮ್ಮಿಲನ ಪ್ರಕ್ರಿಯೆ ಆರಂಭವಾಗಲಿದ್ದು, ಬರೋಬ್ಬರಿ 150 ಶತಕೋಟಿ ವರ್ಷಗಳ ನಂತರ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಎರಡು ಗ್ಯಾಲಕ್ಸಿಗಳ ಸಮ್ಮಿಲನದಿಂದ ರಚನೆಯಾಗುವ ಭವಿಷ್ಯದ ಏಕಮೇವ ದೈತ್ಯ ಗ್ಯಾಲಕ್ಸಿಗೆ ಖಗೋಳಶಾಸ್ತ್ರಜ್ಞರು ಮಿಲ್ಕೊಮೆಡಾ ಎಂದು ಹೆಸರಿಸಿದ್ದಾರೆ.
ಬೆಂಗಳೂರು: ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಶಾಶ್ವತವೇ ಎಂದು ಪ್ರಶ್ನಿಸಿದರೆ, ಖಗೋಳ ವಿಜ್ಞಾನವು ಇಲ್ಲ ಎಂಬ ಉತ್ತರ ನೀಡುತ್ತದೆ. ಏಕೆಂದರೆ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಯೊಂದೂ ವಸ್ತು(ಗ್ಯಾಲಕ್ಸಿಗಳು, ನಕ್ಷತ್ರಗಳು, ಗ್ರಹಕಾಯಗಳು..ಇನ್ನೂ ಅನೇಕ)ವೂ ನಿರಂತರವಾಗಿ ಚಲನೆಯಲ್ಲಿವೆ. ಇವು ಪರಸ್ಪರ ದೂರಕ್ಕೆ ಸರಿಯುತ್ತಿವೆ. ಹಾಗೆಯೇ ವಿಶ್ವದ ವಿಸ್ತರಣೆ ಪ್ರಕ್ರಿಯೆಯಲ್ಲಿ ಪರಸ್ಪರ ಹತ್ತಿರಕ್ಕೂ ಬರುತ್ತವೆ.
ಅಂದರೆ ವಿಸ್ತರಣೆ ಪ್ರಕ್ರಿಯೆಯು ಹಿಂಸಾತ್ಮಕ ಘರ್ಷಣೆಯಿಂದ ಕೂಡಿರುತ್ತವೆ. ಕೇವಲ ಗ್ರಹಕಾಯಗಳು ಮಾತ್ರವಲ್ಲದೇ, ಬಿಲಿಯನ್‌ಗಟ್ಟಲೇ ನಕ್ಷತ್ರಗಳನ್ನು ಸಲುಹುತ್ತಿರುವ ನಕ್ಷತ್ರಪುಂಜಗಳೂ ಕೂಡ ಪರಸ್ಪರ ಡಿಕ್ಕಿ ಹೊಡೆಯುತ್ತವೆ. ವಿಶ್ವ ರಚನೆಯ ಇತಿಹಾಸದಲ್ಲಿ ಇಂತಹ ಅನೇಕ ಹಿಂಸಾತ್ಮಕ ಸಮ್ಮಿಲನವನ್ನು ನಾವು ಈಗಾಗಲೇ ಗುರುತಿಸಿದ್ದೇವೆ.
ಇದೇ ವಿಶ್ವದ ಭಾಗವಾಗಿರುವ ನಮ್ಮ ಕ್ಷಿರಪಥ(ಮಿಲ್ಕಿವೇ ಗ್ಯಾಲಕ್ಸಿ) ನಕ್ಷತ್ರಪುಂಜ ಕೂಡ, ಭವಿಷ್ಯದಲ್ಲಿ ನಮ್ಮ ನೆರೆಯ ಗ್ಯಾಲಕ್ಸಿಯಾಗಿರುವ ಆ್ಯಂಡ್ರೋಮೆಡಾ ಗ್ಯಾಲಕ್ಸಿಯೊಂದಿಗೆ ಸಮ್ಮಿಲನಗೊಳ್ಳಲಿದೆ. ಈ ಎರಡೂ ಗ್ಯಾಲಕ್ಸಿಗಳು ಸೇರಿ ಒಂದೇ ದೈತ್ಯ ಗ್ಯಾಲಕ್ಸಿ ರಚನೆಯಾಗುವುದು ನಮ್ಮ ಖಗೋಳೀಯ ಭವಿಷ್ಯದ ಸತ್ಯ.
ಹೌದು, ಕೇವಲ ಮುಂದಿನ ಎರಡು ಶತಕೋಟಿ ವರ್ಷಗಳ ಅವಧಿಯಲ್ಲಿ ನಮ್ಮ ಹಾಲು ಹಾದಿ ಗ್ಯಾಲಕ್ಸಿ ಮತ್ತು ಆ್ಯಂಡ್ರೋಮೆಡಾ ಗ್ಯಾಲಕ್ಸಿಗಳ ಸಮ್ಮಿಲನ ಪ್ರಕ್ರಿಯೆ ಆರಂಭವಾಗಲಿದ್ದು, ಬರೋಬ್ಬರಿ 150 ಶತಕೋಟಿ ವರ್ಷಗಳ ನಂತರ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಎರಡು ಗ್ಯಾಲಕ್ಸಿಗಳ ಸಮ್ಮಿಲನದಿಂದ ರಚನೆಯಾಗುವ ಭವಿಷ್ಯದ ಏಕಮೇವ ದೈತ್ಯ ಗ್ಯಾಲಕ್ಸಿಗೆ ನಮ್ಮ ಖಗೋಳಶಾಸ್ತ್ರಜ್ಞರು ಮಿಲ್ಕೊಮೆಡಾ ಎಂದು ಹೆಸರಿಸಿದ್ದಾರೆ.
ಆ್ಯಂಡ್ರೋಮೆಡಾ ನಕ್ಷತ್ರಪುಂಜದ ಇತಿಹಾಸ, ಅದರ ಶೋಧನೆ, ಹಾಗೂ ಅದರ ಅಸ್ತಿತ್ವದ ಬಗ್ಗೆ ಹೇಳುತ್ತಾ ಹೋದರೆ ಅದೊಂದು ದೊಡ್ಡ ಪ್ರಬಂಧವೇ ಆಗುತ್ತದೆ. ಹೀಗಾಗಿ ನಾವು ಈ ಲೇಖನದಲ್ಲಿ ಕೇವಲ ಕ್ಷಿರಪಥ ಮತ್ತು ಆ್ಯಂಡ್ರೋಮೆಡಾ ನಕ್ಷತ್ರಪುಂಜಗಳ ಭವಿಷ್ಯದ ಸಮ್ಮಿಲನದ ಬಗ್ಗೆ ಮಾತ್ರ ಚರ್ಚಿಸೋಣ.
ನಮಗೆಲ್ಲಾ ಗೊತ್ತಿರುವಂತೆ ಆ್ಯಂಡ್ರೋಮೆಡಾ ಗ್ಯಾಲಕ್ಸಿಯು ನಮ್ಮಿಂದ ಸುಮಾರು 2.4 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದೆ. ಈ ಗ್ಯಾಲಕ್ಸಿ ನಮ್ಮ ಹಾಲುಹಾದಿ ಗ್ಯಾಲಕ್ಸಿಗಿಂತ ದುಪ್ಪಟ್ಟು ಗಾತ್ರವನ್ನು ಹೊಂದಿದೆ. ಬರೋಬ್ಬರಿ ಒಂದು ಟ್ರಿಲಿಯನ್ ನಕ್ಷತ್ರಗಳಿಗೆ ಆ್ಯಂಡ್ರೋಮೆಡಾ ಗ್ಯಾಲಕ್ಸಿ ಮನೆಯಾಗಿದೆ. ಮಿಲ್ಕಿವೇ ಗ್ಯಾಲಕ್ಸಿ ಸುಮಾರು 100-400 ಬಿಲಿಯನ್ ನಕ್ಷತ್ರಗಳಿಗೆ ತವರೂರು.
ಸಮ್ಮಿಲನ ಪ್ರಕ್ರಿಯೆ:
ಈ ಎರಡೂ ದೈತ್ಯ ಗ್ಯಾಲಕ್ಸಿಗಳು ಪರಸ್ಪರ ಹತ್ತಿರವಾಗುತ್ತಿದ್ದು, ಸುಮಾರು ಎರಡು ಶತಕೋಟಿ ವರ್ಷಗಳ ಬಳಿಕ ಸಮ್ಮಿಲನಗೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಬ್ಲೂಶಿಫ್ಟ್ ವಿದ್ಯಮಾನದ ಸಿದ್ಧಾಂತದ ಪ್ರಕಾರ ಖಗೋಳೀಯ ವಸ್ತುವೊಂದು ನೀಲಿ ಬಣ್ಣದಲ್ಲಿ ಗೋಚರವಾದರೆ, ಅದು ನಮಗೆ ಹತ್ತಿರವಾಗುತ್ತಿದೆ ಎಂದು ಅರ್ಥ. ಅದರಂತೆ ಆ್ಯಂಡ್ರೋಮೆಡಾ ಗ್ಯಾಲಕ್ಸಿ ರಾತ್ರಿ ಆಗಸದಲ್ಲಿ ನೀಲಿ ಬಣ್ಣದಲ್ಲಿ ಗೋಚರವಾಗುವುದರಿಂದ, ಅದು ನಮಗೆ ಹತ್ತಿರವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಆ್ಯಂಡ್ರೋಮೆಡಾ ಗ್ಯಾಲಕ್ಸಿ ಪ್ರತಿ ಸೆಕೆಂಡ್‌ಗೆ 110 ಕಿ.ಮೀ. ವೇಗದಲ್ಲಿ ಕ್ಷಿರಪಥ ನಕ್ಷತ್ರಪುಂಜದತ್ತ ಧಾವಿಸುತ್ತಿದೆ. ಸುಮಾರು ಎರಡು ಶತಕೋಟಿ ವರ್ಷಗಳ ಬಳಿಕ ಈ ಎರಡೂ ಗ್ಯಾಲಕ್ಸಿಗಳ ಗುರುತ್ವಾಕರ್ಷಣ ಶಕ್ತಿ ಪರಸ್ಪರ ಸೆಳೆಯಲ್ಪಡುತ್ತವೆ. ಆಗ ರಾತ್ರಿಯ ಆಗಸದಲ್ಲಿ ಆ್ಯಂಡ್ರೋಮೆಡಾ ಗ್ಯಾಲಕ್ಸಿ ಗಾತ್ರದಲ್ಲಿ ದೊಡ್ಡದಾಗಿ ಗೋಚರವಾಗುತ್ತದೆ.
ಮೂರು ಶತಕೋಟಿ ವರ್ಷಗಳ ಬಳಿಕ ಆ್ಯಂಡ್ರೋಮೆಡಾ ಗ್ಯಾಲಕ್ಸಿಯು ರಾತ್ರಿ ಆಗಸದಲ್ಲಿ ಚಂದ್ರನಿಗಿಂತ ದೊಡ್ಡದಾಗಿ ಕಾಣಿಸಲು ಆರಂಭವಾಗುತ್ತದೆ. ಅದರಂತೆ ನಾಲ್ಕು ಶತಕೋಟಿ ವರ್ಷಗಳ ಬಳಿಕ ಎರಡೂ ಗ್ಯಾಲಕ್ಸಿಗಳು ಪರಸ್ಪರ ಡಿಕ್ಕಿ ಹೊಡೆಯುತ್ತವೆ. ಆಗ ಮೂಲಭೂತವಾಗಿ ಎರಡೂ ಗ್ಯಾಲಕ್ಸಿಗಳ ಸುರುಳಿಯ ರಚನೆಗಳು ವಿರೂಪಗೊಳ್ಳುತ್ತವೆ.
ಆರಂಭಿಕ ಘರ್ಷಣೆಯ ನಂತರ, ಎರಡೂ ಗೆಲಕ್ಸಿಗಳ ಕೋರ್‌ಗಳು ಪರಸ್ಪರ ಸೆಳೆಯಲ್ಪಡುತ್ತವೆ. ಕೇಂದ್ರದಲ್ಲಿ ವಿಲೀನಗೊಳ್ಳುವವರೆಗೆ ಈ ಪ್ರಕ್ರಿಯೆ ಮುಂದುವರೆಯುತ್ತದೆ. ಈ ಪ್ರಕ್ರಿಯೆಗೆ ನೂರಾರು ಶತಕೋಟಿ ವರ್ಷಗಳೇ ಬೇಕಾಗುತ್ತದೆ. ಅಲ್ಲದೇ ಅಗಾಧ ಗುರುತ್ವ ಬಲದ ಪರಿಣಾಮವಾಗಿ ಎರಡೂ ಗ್ಯಾಲಕ್ಸಿಗಳಲ್ಲಿರುವ ನಕ್ಷತ್ರಗಳು ಚದುರಲ್ಪಡುತ್ತವೆ.
ಇನ್ನು ಎರಡೂ ಗ್ಯಾಲಕ್ಸಿಗಳ ಕೋರ್ ವ್ಯಾಪ್ತಿಯೊಳಗೆ ಸುಮಾರು 7 ಬಿಲಿಯನ್ ವರ್ಷಗಳ ಬಳಿಕ ವಿಲೀನ ಪ್ರಕ್ರಿಯೆ ಆರಂಭವಾಗುತ್ತದೆ. ಎರಡೂ ನಕ್ಷತ್ರಪುಂಜಗಳ ನ್ಯೂಕ್ಲಿಯಸ್‌ನ ಸಂಯೋಜನೆಯೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಂದರೆ ಆ್ಯಂಡ್ರೋಮೆಡಾ ಮತ್ತು ಮಿಲ್ಕಿ ವೇ ಗ್ಯಾಲಕ್ಸಿಗಳ ಮಧ್ಯಭಾಗದಲ್ಲಿರುವ ಬೃಹತ್ ಕಪ್ಪು ಕುಳಿಗಳು ಪರಸ್ಪರ ಘರ್ಷಿಸುತ್ತವೆ.
ಈ ಬೃಹತ್ ಕಪ್ಪು ಕುಳಿಗಳು ಕ್ರಮೇಣ ಒಂದನ್ನೊಂದು ಸುತ್ತಲು ಪ್ರಾರಂಭಿಸುತ್ತವೆ. ಅಂತಿಮವಾಗಿ ಎರಡೂ ಕಪ್ಪುಕುಳಿಗಳು ಸಮ್ಮಿಲನಗೊಂಡು, ಒಂದೇ ಬೃಹತ್ ಕಪ್ಪುಕುಳಿ ಜನ್ಮ ತಳೆಯುತ್ತದೆ. ಅಂದರೆ ಹೊಸದಾಗಿ ಜನ್ಮತಲೆದ ಮಿಲ್ಕೊಮೆಡಾ ಗ್ಯಾಲಕ್ಸಿಯ ಹೃದಯವನ್ನು, ಹೊಸ ಸೂಪರ್‌ಮ್ಯಾಸಿವ್ ಬ್ಲ್ಯಾಕ್ ಹೋಲ್ ಆವರಿಸಿಕೊಳ್ಳುತ್ತದೆ.
ಅಂತಿಮ ಹಂತ:
ಇಲ್ಲಿಗೆ ಈ ವಿಲೀನ ಪ್ರಕ್ರಿಯೆ ಅಂತಿಮಗೊಂಡು ಮಿಲ್ಕೊಮೆಡಾ ಎಂಬ ದೈತ್ಯ ಗ್ಯಾಲಕ್ಸಿ ತನ್ನ ಉಪಗ್ರಹ ಗ್ಯಾಲಕ್ಸಿಗಳನ್ಹು ಆಕರ್ಷಿಸಲು ಆರಂಭಿಸುತ್ತದೆ. ಅಂದರೆ ಲೋಕಲ್ ಗ್ರೂಪ್ ಎಂದು ಕರೆಯಲ್ಪಡುವ ಪ್ರದೇಶದ ಎಲ್ಲಾ ಉಪಗ್ರಹ ಗ್ಯಾಲಕ್ಸಿಗಳು, ಮಿಲ್ಕೊಮೆಡಾ ಗ್ಯಾಲಕ್ಸಿಯ ಅಗಾಧ ಗುರುತ್ವಾಕರ್ಷಣೆಗೆ ಸೆಳೆಯಲ್ಪಡುತ್ತವೆ.
ಈ ಪ್ರಕ್ರಿಯೆಗೆ ಸುಮಾರು 150 ಶತಕೋಟಿ ವರ್ಷಗಳು ಬೇಕಾಗುತ್ತದೆ. ಅಷ್ಟರಲ್ಲಿ ಮಿಲ್ಕೊಮೆಡಾದಲ್ಲಿ ನಕ್ಷತ್ರಗಳನ್ನು ರೂಪಿಸುವ ಅನಿಲಗಳು ಧೂಳು ಖಾಲಿಯಾಗಿರುತ್ತದೆ. ಹೀಗಾಗಿ ಮಿಲ್ಕೊಮೆಡಾದಲ್ಲಿ ಹೊಸ ನಕ್ಷತ್ರಗಳು ಜನ್ಮ ತಳೆಯುವುದಿಲ್ಲ. ಅಲ್ಲದೇ ಅಸ್ತಿತ್ವದಲ್ಲಿರುವ ನಕ್ಷತ್ರಗಳು ಒಂದೊಂದಾಗಿ ಸಾಯಲು(ಸೂಪರ್‌ನೋವಾ) ಆರಂಭಿಸುತ್ತವೆ.
ಮಿಲ್ಕೊಮೆಡಾದ ಸಾಮಾನ್ಯ ನಾಕ್ಷತ್ರಿಕ ಜನಸಂಖ್ಯೆಯು ವಯಸ್ಸಾಗಿ ಕೆಂಪು ದೈತ್ಯಕ್ಕೆ ಬದಲಾಗುತ್ತವೆ. ತದನಂತರ ಅವು ಸ್ಫೋಟಗೊಳ್ಳುವ ಮೂಲಕ ಅಥವಾ ಬಿಳಿ ಕುಬ್ಜವಾಗಿ ಉಳಿಯುವ ಮೂಲಕ ಮಿಲ್ಕೊಮೆಡಾ ಬಂಜರು ಗ್ಯಾಲಕ್ಸಿಯಾಗಿ ಪರಿವರ್ತನೆಗೊಳ್ಳುತ್ತದೆ.
ಸೌರವ್ಯೂಹದ ಭವಿಷ್ಯ:
ಆ್ಯಂಡ್ರೋಮೆಡಾ ಮತ್ತು ಮಿಲ್ಕಿ ವೇ ಗ್ಯಾಲಕ್ಸಿಗಳ ಈ ಸಮ್ಮಿಲನ ಪ್ರಕ್ರಿಯೆಯಲ್ಲಿ, ನಮ್ಮ ಸೌರವ್ಯೂಹದ ಭವಿಷ್ಯ ಕೂಡ ಅಡಕವಾಗಿದೆ. ಈ ಹಿಂಸಾತ್ಮಕ ಘರ್ಷಣೆ ಖಂಡಿತವಾಗಿಯೂ ನಮ್ಮ ಸೌರವ್ಯೂಹದ ರಚನೆ ಮೇಲೆ ಪರಿಣಾಮ ಬೀರುತ್ತದೆ. ಎರಡೂ ಗ್ಯಾಲಕ್ಸಿಗಳ ಸಮ್ಮಿಲನದ ಬಳಿಕ ಉದ್ಭವವಾಗುವ ದೈತ್ಯ ಮಿಲ್ಕೊಮೆಡಾ ಗ್ಯಾಲಕ್ಸಿಯಲ್ಲಿ ನಮ್ಮ ಸೌರವ್ಯೂಹ ಸ್ಥಾನವನ್ನು ಪಡೆಯಬಹದು ಅಥವಾ ಭವಿಷ್ಯದ ಈ ದೈತ್ಯ ಗ್ಯಾಲಕ್ಸಿಯ ಗುರುತ್ವಾಕರ್ಷಣೆಗೆ ಬಲಿಯಾಗಿ ಸೌರವ್ಯೂಹ ಇಡಿಯಾಗಿ ಹೊರಚಿಮ್ಮಿ, ಬ್ರಹ್ಮಾಂಡದ ಬೇರೊಂದು ಪ್ರದೇಶದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.
ಖಗೋಳಶಾಸ್ತ್ರಜ್ಞರು ಅಂದಾಜಿಸಿದಂತೆ ಸುಮಾರು ಮೂರು ಶತಕೋಟಿ ವರ್ಷಗಳ ಬಳಿಕ ಭೂಮಿ ವಾಸಯೋಗ್ಯ ಗ್ರಹವಾಗಿ ಉಳಿಯುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಸೂರ್ಯ ತನ್ನ ಇಂಧನವನ್ನೆಲ್ಲಾ ದಹಿಸಲು ಆರಂಭಿಸಿ, ಕೆಂಪು ದೈತ್ಯನಾಗಿ ಪರಿವರ್ತನೆಗೊಂಡಿರುತ್ತಾನೆ. ಇದರಿಂದ ಸೂರ್ಯನ ಗಾತ್ರ ಹೆಚ್ಚುತ್ತಾ ಹೋಗಿ, ಸುಮಾರು ಐದು ಶತಕೋಟಿ ವರ್ಷಗಳ ಬಳಿಕ ಆತ ಒಂದೊಂದೇ ಗ್ರಹವನ್ನು ನುಂಗಲು ಆರಂಭಿಸುತ್ತಾನೆ.
ಈ ಪ್ರಕ್ರಿಯೆಯಲ್ಲಿ ಸೌರವ್ಯೂಹದ ಆಂತರಿಕ ಗ್ರಹಗಳಾದ ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು ಸೂರ್ಯ ಪೂರ್ಣವಾಗಿ ನುಂಗಿ ಹಾಕುವ ಸಾಧ್ಯತೆ ಇದೆ. ಅದರಂತೆ ಸೌರಮಂಡದ ಬಾಹ್ಯ ಗ್ರಹಗಳಾದ ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್, ಪೂರ್ಣವಾಗಿ ಚದುರಿ ಬೇರೊಂದು ನಕ್ಷತ್ರದ ಗುರುತ್ವದ ಪರೀಧಿಯೊಳಗೆ ಬರಬಹುದು.
ಭವಿಷ್ಯದಲ್ಲಿ ಘಟಿಸುವ ಈ ರೋಚಕ ವಿದ್ಯಮಾನವನ್ನು ನೋಡಲು ಭೂಮಿಯ ಮೇಲೆ ಮಾನವರೂ ಸೇರಿದಂತೆ ಯಾವುದೇ ಜೀವಿ ಅಸ್ತಿತ್ವದಲ್ಲಿ ಇರುವುದಿಲ್ಲ ಎಂಬುದು ನೋವಿನ ಸಂಗತಿ.
ಅದೆನೆ ಇರಲಿ, ಭವಿಷ್ಯದಲ್ಲಿ ಆ್ಯಂಡ್ರೋಮೆಡಾ ಮತ್ತು ಮಿಲ್ಕಿ ವೇ ಗ್ಯಾಲಕ್ಸಿಗಳು ಕೂಡಿ ರಚಿಸುವ ಮಿಲ್ಕೊಮೆಡಾ ಗ್ಯಾಲಕ್ಸಿಯ ಮೂಲೆಯೊಂದರಲ್ಲಿ, ಸೂರ್ಯನ ಗಾತ್ರದ ನಕ್ಷತ್ರವೊಂದನ್ನು,ಭೂಮಿಯನ್ನು ಹೋಲುವಂತಹ ಗ್ರಹವೊಂದು ಸುತ್ತುತ್ತಿರಲಿ. ಆ ಸಂಭಾವ್ಯ ಗ್ರಹದಲ್ಲಿ ಮಾನವನ ರೀತಿಯ ಬುದ್ಧಿವಂತ ಪ್ರಾಣಿಗಳು ಅಸ್ತಿತ್ವದಲ್ಲಿದ್ದು, ಈ ಇಡೀ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳಲಿ ಎಂದು ನಾವು ಹಾರೈಸೋಣ.
ವಿಭಾಗ