ನಿಮ್ ದುರಹಂಕಾರಕ್ಕಿಷ್ಟು: ಪ್ರವಾಹ ಸಂತ್ರಸ್ತರ ಎದುರು ದರ್ಪ ಮೆರೆದ ಐಎಎಸ್ ಅಧಿಕಾರಿ, ಸರಿಯಾಗಿ ಬುದ್ಧಿ ಕಲಿಸಿದ ಎಎಸ್‌ಐ
Sep 04, 2024 02:39 PM IST
ಪ್ರವಾಹ ಸಂತ್ರಸ್ತರ ಎದುರು ದರ್ಪ ಮೆರೆದ ಐಎಎಸ್ ಅಧಿಕಾರಿ, ಸರಿಯಾಗಿ ಬುದ್ಧಿ ಕಲಿಸಿದ ಎಎಸ್‌ಐ
- ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಬೇಕಿದ್ದ ಐಎಎಸ್ ಅಧಿಕಾರಿಯೊಬ್ಬರು ದರ್ಪ ತೋರಿದ್ದಾರೆ. ತನ್ನ ಅಧಿಕಾರದಿಂದ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿದ್ದಾರೆ. ಆದರೆ ಸಿಎಂ ಆದೇಶ ಪಾಲಿಸಿದ ಎಎಸ್ಐ ಒಬ್ಬರು, ಐಎಎಸ್ ಅಧಿಕಾರಿಗೆ ಸೊಪ್ಪು ಹಾಕಿಲ್ಲ.
ಆಂಧ್ರಪ್ರದೇಶದ ವಿಜವಾಡದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಪ್ರವಾಹ ಸಂತ್ರಸ್ತರ ಮುಂದೆ ದರ್ಪ ತೋರಿದ ಐಎಎಸ್ ಅಧಿಕಾರಿಗೆ ಸಾಮಾನ್ಯ ಎಸ್‌ಎಸ್‌ಐ ಒಬ್ಬರು ಪಾಠ ಹೇಳಿದ್ದಾರೆ. ತಮಗೆ ಹೇಳಿರುವ ಕೆಲಸವನ್ನು ತ್ವರಿತವಾಗಿ ಮಾಡಿದ ಎಎಸ್‌ಐ, ಯಾರೇ ಬಂದರೂ ತನಗೆ ವಹಿಸುವ ಕೆಲಸ ಮಾತ್ರ ಮಾಡುವುದಾಗಿ ಹೇಳಿದ್ದಾರೆ. ಐಎಎಸ್ ಅಧಿಕಾರಿಯ ದುರಹಂಕಾರದ ವರ್ತನೆಗೆ ಎಎಸ್‌ಐ ಬುದ್ದಿ ಕಲಿಸಿರುವ ಘಟನೆ ಬುಧವಾರ ಬೆಳಗ್ಗೆ ವಿಜಯವಾಡದಲ್ಲಿ ನಡೆದಿದೆ.
ವಿಜಯವಾಡದ ಬುಡಮೇರು ಕಾಲುವೆ ಸೇತುವೆ ಬಳಿ ಪೊಲೀಸರು ಎಲ್ಲಾ ರೀತಿಯ ವಾಹನಗಳನ್ನು ನಿಲ್ಲಿಸಿ, ತುರ್ತು ಸೇವೆ ನೀಡುವವರಿಗೆ ಮಾತ್ರ ಮುಂದೆ ಚಲಿಸಲು ಅವಕಾಶ ನೀಡುತ್ತಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದ ಸಾವಿರಾರು ನಿರಾಶ್ರಿತರು ಕಾಲ್ನಡಿಗೆಯ ಮೂಲಕವೇ ನಗರ ಪ್ರವೇಶಿಸುತ್ತಿರುವ ಕಾರಣದಿಂದಾಗಿ, ಬುಧವಾರ ಬೆಳಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಈ ಕುರಿತು ಪೊಲೀಸರಿಗೆ ಸಿಎಂ ಹಾಗೂ ಮೇಲಧಿಕಾರಿಗಳು ಆದೇಶ ನೀಡಿದ್ದರು. ಈ ನಡುವೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಪ್ರಸನ್ನ ವೆಂಕಟೇಶ್ ಅವರು ತಮ್ಮ ವಾಹನದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಬಂದಿದ್ದರು.
ಪರಿಹಾರ ಕಾರ್ಯಾಚರಣೆ ತ್ವರಿತವಾಗಿ ಆಗಬೇಕಿರುವುದರಿಂದ, ಹೆಚ್ಚು ವಾಹನ ಸಂಚಾರವಾದರೆ ತೀವ್ರ ಅಡಚಣೆಯಾಗುತ್ತದೆ. ಹೀಗಾಗಿ ಕಳೆದ ಎರಡು-ಮೂರು ದಿನಗಳಿಂದ ವಿಐಪಿಗಳು ಮತ್ತು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬರುವವರ ವಾಹನಗಳಿಗೆ ಅವಕಾಶ ನೀಡುತ್ತಿಲ್ಲ. ಯಾವುದೇ ವಾಹನವಾಗಿದ್ದರೂ ಅದನ್ನು ನಿಲ್ಲಿಸಲು ಉನ್ನತ ಅಧಿಕಾರಿಗಳು ಆದೇಶಿಸಿದ್ದಾರೆ. ಪ್ರವಾಹ ಪರಿಹಾರ ಕ್ರಮಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದರಿಂದ, ವಿಪತ್ತು ಪರಿಹಾರ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನಗಳನ್ನು ನಿಲ್ಲಿಸಲಾಗಿದೆ.
ಅದರಂತೆ ಸೆಪ್ಟೆಂಬರ್ 4ರ ಬುಧವಾರವೂ ಪೊಲೀಸರು ಇದೇ ನಿಯಮ ಅನುಸರಿಸುತ್ತಿದ್ದಾರೆ. ಹೀಗಾಗಿ ಎಲ್ಲ ಹಂತದ ಅಧಿಕಾರಿಗಳು, ಡಿಐಜಿ ಹಾಗೂ ಐಜಿ ಮಟ್ಟದ ಅಧಿಕಾರಿಗಳು ಕೂಡಾ ಬುಧವಾರ ಬೆಳಗ್ಗೆಯಿಂದ ಬುಡಮೇರು ಸೆಂಟರ್‌ನಿಂದ ಸಿಂಗ್‌ನಗರ ಮೇಲ್ಸೇತುವೆ ಮೂಲಕ ನಡಿಗೆಯಲ್ಲೇ ತೆರಳುತ್ತಿದ್ದಾರೆ.
ಐಎಎಸ್ ಅಧಿಕಾರಿಯನ್ನು ತಡೆದ ಎಎಸ್‌ಐ
ಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಕುಡಿಯುವ ನೀರು ಒದಗಿಸುವ ವಾಹನಗಳು, ಆಂಬ್ಯುಲೆನ್ಸ್‌ಗಳು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ವಾಹನಗಳಿಗೆ ಮಾತ್ರ ಫ್ಲೈಓವರ್ ಮೇಲೆ ಹೋಗಲು ಅನುಮತಿಸಲಾಗಿದೆ. ಪ್ರವಾಹದಿಂದಾಗಿ ಜನರು ಕಾಲ್ನಡಿಗೆಯಲ್ಲಿ ನಗರಕ್ಕೆ ಬರುವುದರಿಂದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬುಧವಾರ ಬೆಳಗ್ಗೆ 7 ಗಂಟೆಗೆ ಐಎಎಸ್ ಅಧಿಕಾರಿ ಪ್ರಸನ್ನ ವೆಂಕಟೇಶ್ ಅವರು ತಮ್ಮ ವಾಹನದಲ್ಲಿ ಬಂದಿದ್ದು, ಅವರನ್ನು ಕರ್ತವ್ಯ ನಿರತ ಪೊಲೀಸರು ತಡೆದಿದ್ದಾರೆ. ಈ ವೇಳೆ 'ಕಾರಿನಲ್ಲಿ ಐಎಎಸ್ ಅಧಿಕಾರಿ ಇದ್ದಾರೆ' ಎಂದು ಚಾಲಕ ಹೇಳಿದ್ದು, ಮೇಲಧಿಕಾರಿಗಳ ಆದೇಶ ಪಾಲಿಸಬೇಕು ಎಂದು ಎಎಸ್‌ಐ ಉತ್ತರಿಸಿದ್ದಾರೆ. ಇದಾದ ಬಳಿಕ ಕಾರಿನಿಂದ ಇಳಿದ ಪ್ರಸನ್ನ ವೆಂಕಟೇಶ್ ಎಸ್‌ಎಸ್‌ಐ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಆದರೆ ಎಎಸ್‌ಐ ಅವಕಾಶ ನೀಡಿಲ್ಲ. ಈ ವೇಳೆ, ಒಂದು ಹಂತದಲ್ಲಿ ಕರ್ತವ್ಯ ಮಾಡದೆ ವಾಪಸ್ ಹೋಗುವಂತೆ ಬೆದರಿಕೆ ಹಾಕಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಡಿಯೋ ಇಲ್ಲಿದೆ
ಎಸ್‌ಎಸ್‌ಐ ಜತೆಗಿನ ವಾಗ್ವಾದದ ವೇಳೆ ಡಿಐಜಿಯೊಬ್ಬರಿಗೆ ಕರೆ ಮಾಡಿದ ಐಎಎಸ್, ಅವರ ಜತೆ ಮಾತನಾಡಲು ಫೋನ್ ಕೊಟ್ಟು ಕಾರಿನಲ್ಲಿ ಕುಳಿತರು. ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಕೂಡ ಮೇಲಧಿಕಾರಿಗಳ ಆದೇಶವನ್ನು ಅಧಿಕಾರಿಗೆ ವಿವರಿಸಿ ಕಾರಿಗೆ ಅವಕಾಶ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಮೇಲಧಿಕಾರಿಗೆ ಕರೆ ಮಾಡಿದ ಬಳಿಕ ತಮ್ಮ ವಾಹನಕ್ಕೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಕೊನೆಗೂ ನಿರಾಶೆಗೊಂಡರು. ಕೊನೆಗೆ ಪ್ರಸನ್ನ ವೆಂಕಟೇಶ್ ಫ್ಲೈಓವರ್ ಮೇಲೆ ನಡೆದುಕೊಂಡೇ ಹೋದರು. ಅರ್ಧ ದಾರಿಯವರೆಗೂ ಹೋದ ನಂತರ ನಡೆದಾಡಲು ಸಾಧ್ಯವಾಗದೆ ಪೊಲೀಸ್ ಪಡೆಯ ವಾಹನವನ್ನು ನಿಲ್ಲಿಸಿ ತಾನು ಐಎಎಸ್ ಅಧಿಕಾರಿ ಎಂದು ಹೇಳಿ ಸಿಬ್ಬಂದಿಯೊಂದಿಗೆ ವಾಹನದಲ್ಲಿ ಮುಂದುವರೆದರು.
ಆಂಧ್ರಪ್ರದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಎಚ್ಚರ.. ಕಟ್ಟೆಚ್ಚರ..! ಮಳೆಯ ಆರ್ಭಟಕ್ಕೆ ತತ್ತರಿಸಿದ ಆಂಧ್ರಕ್ಕೆ ಈ ದಿನಾಂಕ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ