Chandrababu Naidu: ಆಂಧ್ರಪ್ರದೇಶದ ಮಾಜಿ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅರೆಸ್ಟ್
Sep 09, 2023 10:07 AM IST
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು
- Chandrababu Naidu arrest: ಟಿಡಿಪಿ ಅಧ್ಯಕ್ಷರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಮರಾವತಿ: ಸ್ಕಿಲ್ ಡೆವಲಪ್ಮೆಂಟ್ ಹಗರಣದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು (ಸೆ.9 ಶನಿವಾರ) ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ಚಂದ್ರಬಾಬು ನಾಯ್ಡು ಅವರು ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಂದ್ಯಾಲ ಪಟ್ಟಣದಲ್ಲಿ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಶಿಬಿರದಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲು ಬಂದಿದ್ದರು. ಈ ವೇಳೆ ನಾಯ್ಡು ಅವರು ತಮ್ಮ ಕಾರವಾನ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರು ಪೊಲೀಸರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಬೆಳಿಗ್ಗೆ 5.30 ರವರೆಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಬಿಡಲಿಲ್ಲ. ಕೊನೆಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ನಾಯ್ಡು ವಾಹನದಿಂದ ಅವರನ್ನು ಕೆಳಗಿಳಿಸಿ ಬಂಧಿಸಿದ್ದು, ವಿಜಯವಾಡಕ್ಕೆ ಶಿಫ್ಟ್ ಮಾಡಲಾಗುತ್ತಿದೆ.
ಪೊಲೀಸರು ನೀಡಿದ ನೋಟಿಸ್ ಪ್ರಕಾರ, ಪೊಲೀಸರು ನಾಯ್ಡು ಅವರನ್ನು ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ಬಂಧಿಸಲಾಗಿದೆ.
ಅಲ್ಲದೇ ನೋಟಿಸ್ನಲ್ಲಿ ಜಾಮೀನು ರಹಿತ ಅಪರಾಧ, ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ " ನ್ಯಾಯಾಲಯದ ಮೂಲಕ ಮಾತ್ರ ಜಾಮೀನು ಪಡೆಯಬಹುದು" ಎಂದು ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ ಧನುಂಜಯುಡು ತಿಳಿಸಿದ್ದಾರೆ.
ಚಂದ್ರಬಾಬು ನಾಯ್ಡು ಟ್ವೀಟ್
ಅರೆಸ್ಟ್ ಆಗುವ ಕೆಲವೇ ಕ್ಷಣಗಳ ಮೊದಲು ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು, "ಕಳೆದ 45 ವರ್ಷಗಳಿಂದ ನಿಸ್ವಾರ್ಥವಾಗಿ ತೆಲುಗು ಜನರ ಸೇವೆ ಮಾಡಿದ್ದೇನೆ. ತೆಲುಗು ಜನರ ಹಿತಾಸಕ್ತಿ ಕಾಪಾಡಲು ನನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧನಿದ್ದೇನೆ. ತೆಲುಗು ಜನರಿಗೆ, ನನ್ನ ಆಂಧ್ರಪ್ರದೇಶಕ್ಕೆ ಮತ್ತು ನನ್ನ ಮಾತೃಭೂಮಿಗೆ ಸೇವೆ ಸಲ್ಲಿಸುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.