ಎಚ್ಚರ.. ಕಟ್ಟೆಚ್ಚರ..! ಮಳೆಯ ಆರ್ಭಟಕ್ಕೆ ತತ್ತರಿಸಿದ ಆಂಧ್ರಕ್ಕೆ ಈ ದಿನಾಂಕ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ
Sep 04, 2024 10:28 AM IST
ಆಂಧ್ರಕ್ಕೆ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ
- Andhra Pradesh Rain Update: ಭಾರೀ ಮಳೆಯಿಂದ ಸಂಪೂರ್ಣ ಚೇತರಿಸಿಕೊಳ್ಳುವ ಮುನ್ನವೇ ಆಂಧ್ರ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡೂ ತೆಲುಗು ರಾಜ್ಯಗಳಲ್ಲೂ ಭಾರಿ ಪ್ರಮಾಣದಲ್ಲಿ ಪ್ರಾಣಹಾನಿ ಸಂಭವಿಸಿದೆ. ಪ್ರಮುಖ ನಗರಗಳಲ್ಲಿ ಪ್ರವಾಹ ಕಂಡು ಬಂದಿದ್ದು, ಎದೆಮಟ್ಟಕ್ಕೆ ನೀರು ಹರಿದಿದೆ. ಜನರು ಬದುಕು ತತ್ತರಿಸಿದ್ದು, ಪ್ರವಾಹದಲ್ಲಿ ಸಿಲುಕಿದ ಜನರನ್ನು ಬೋಟ್ಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಈ ಪರಿಣಾಮದಿಂದ ಸಂಪೂರ್ಣ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಚಂಡಮಾರುತ ಅಪ್ಪಳಿಸುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಮತ್ತೊಂದು ಮಾನ್ಸೂನ್ ಅಪ್ಪಳಿಸುವ ಎಚ್ಚರಿಕೆ ನೀಡಿದ್ದು, ಉತ್ತರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣ ಇದೇ ತಿಂಗಳ 6 ಮತ್ತು 7 ರಂದು ವಿಶಾಖಪಟ್ಟಣಕ್ಕೆ ಮತ್ತೊಂದು ಚಂಡ ಮಾರುತ ಅಪ್ಪಳಿಸುವ ಕುರಿತು ಹವಾಮಾನ ಇಲಾಖೆ ಅಧಿಕಾರಿಗಳು ಭಾರಿ ಎಚ್ಚರಿಕೆ ನೀಡಿದ್ದು, ಇಲ್ಲಿನ ಜನತೆಗೆ ಮತ್ತೆ ಆತಂಕ ಶುರುವಾಗಿದೆ. ಭಾರೀ ಮಳೆಗೆ ತೆರೆ ಬೀಳುವ ಮುನ್ನವೇ ಈ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಪ್ರಭಾವದಿಂದ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ವಿಜಯವಾಡ ಮತ್ತು ಗುಂಟೂರು ನಗರದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತ ಸೆಪ್ಟೆಂಬರ್ 6 ಮತ್ತು 7ರಂದು ಬಂದರೂ ಮಳೆಯ ಪ್ರಮಾಣ ಕಡಿಮೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಪ್ರಸ್ತುತ ಮಳೆಯಿಂದಾಗಿ ಜನಸಾಮಾನ್ಯರು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಮಳೆ ಮತ್ತು ಪ್ರವಾಹದಿಂದಾಗಿ ರೈಲು ಹಳಿಗಳೂ ಹಾನಿಗೊಳಗಾಗಿದ್ದು, ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವೆಡೆ ಬೇರೆ ಸಂಚಾರ ಮಾರ್ಗದಲ್ಲಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ.
ಅನೇಕ ಜನರು ರೈಲು, ಬಸ್ ಅಥವಾ ಇತರ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೆ ಇದೇ ತಿಂಗಳ 6 ಮತ್ತು 7ರಂದು ಮತ್ತೊಂದು ಕಡೆ ಚಂಡಮಾರುತದ ಭೀತಿ ಎದುರಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿದ ಬೆನ್ನಲ್ಲೇ ಜನ ನಡುಗಿ ಹೋಗಿದ್ದಾರೆ. ಇದು ಚಂಡಮಾರುತವು ಬಲಗೊಂಡು ಉತ್ತರ ಆಂಧ್ರ ಮತ್ತು ಒಡಿಶಾ ನಡುವೆ ಕರಾವಳಿಯನ್ನು ದಾಟಿ ಹೋಗಲಿದೆ ಎಂದು ಅಧಿಕಾರಿಗಳು ಭವಿಷ್ಯ ನುಡಿದಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಆದರೆ, ಸದ್ಯದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುವ ಸಾಧ್ಯತೆ ಇದೆ. ರೈಲುಗಳ ಪುನಶ್ಚೇತನದ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದ್-ವಿಜಯವಾಡ ನಡುವೆ ಸಂಚಾರ ಸ್ಥಗಿತಗೊಂಡಿದೆ. ಇದೀಗ ಹವಾಮಾನ ಇಲಾಖೆ ಬಹಿರಂಗಪಡಿಸಿರುವ ಇತ್ತೀಚಿನ ಮಾಹಿತಿ ಆತಂಕವನ್ನು ಹೆಚ್ಚಿಸುತ್ತಿದೆ. ಹಾಗಾಗಿ, ಆಂಧ್ರದ, ಅದರಲ್ಲೂ ವಿಶಾಖಪಟ್ಟಣ ಮತ್ತು ವಿಜಯವಾಡದ ಜನತೆ ಎಚ್ಚರಿಕೆಯಿಂದ ಸೂಚಿಸಿದ್ದಾರೆ ಹವಾಮಾನ ಇಲಾಖೆಯ ಅಧಿಕಾರಿಗಳು.
ಕೃಷ್ಣಾ ನದಿಯ ಬ್ಯಾರೇಜ್ ಗೇಟ್‌ಗಳಿಗೆ ಹಾನಿ
ಕೃಷ್ಣಾ ನದಿಗೆ ಒಳಹರಿವಿನ ಪ್ರಮಾಣ ಅಧಿಕಗೊಂಡಿದ್ದು, ಪ್ರಕಾಶಂ ಬ್ಯಾರೇಜ್‌ನ ಗೇಟ್‌ಗಳಿಗೆ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ನಾಲ್ಕು ದೊಡ್ಡ ಬೋಟ್‌ಗಳು ಸಿಲುಕಿಕೊಂಡಿವೆ. ಇದು ಬ್ಯಾರೇಜ್ ಗೇಟ್‌ಗಳಿಗೆ ಹಾನಿಯುಂಟು ಮಾಡಿದ್ದು, ಆತಂಕಕ್ಕೆ ಕಾರಣವಾಗಿದೆ. ದೋಣಿಗಳು ಬ್ಯಾರೇಜ್‌ಗೆ ಡಿಕ್ಕಿ ಹೊಡೆದು ಗೇಟ್ಗೆ ಡಿಕ್ಕಿ ಹೊಡೆದಿರುವ ಕಾರಣ ಶೇ 60 ರಷ್ಟು ಹಾನಿಯಾಗಿದೆ ಎಂದು ಡಿಎಸ್ಪಿ ಮುರಳಿ ಕೃಷ್ಣ ತಿಳಿಸಿದ್ದಾರೆ. ದೋಣಿಗಳು ಅಪ್‌ಸ್ಟ್ರೀಮ್ ಪ್ರದೇಶಗಳಿಂದ ಕೊಚ್ಚಿಹೋಗಿವೆ.
ಗಂಟೆಗೆ ಸುಮಾರು 40 ಕಿ.ಮೀ ವೇಗದಲ್ಲಿ ಗೇಟ್‌ಗಳಿಗೆ ಅಪ್ಪಳಿಸಿದ ಕಾರಣ ಗೇಟ್ ಸಂಖ್ಯೆ 2ರಲ್ಲಿ ಕಾಂಕ್ರೀಟ್ ಹಾನಿಗೊಳಗಾಗಿದೆ. ಪರಿಣಾಮ ಮಂಗಳಗಿರಿ ಉಪವಿಭಾಗದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ರಿಡ್ಜ್ ಮೇಲೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಪ್ರಕಾಶಂ ಬ್ಯಾರೇಜ್‌ಗೆ ಒಳಹರಿವು ಮುಂದುವರಿದಿದ್ದು, ಎಲ್ಲಾ 72 ಗೇಟ್‌ಗಳನ್ನು ಎತ್ತುವ ಮೂಲಕ ದಾಖಲೆಯ 11.40 ಲಕ್ಷ ಕ್ಯೂಸೆಕ್‌ಗಳಷ್ಟು ಪ್ರವಾಹವನ್ನು ಹೊರಬಿಡಲಾಗಿದೆ. ಮಳೆಯಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.