Explained: ಚಂದ್ರಬಾಬು ನಾಯ್ಡು ಬಂಧನ; ಏನಿದು ಬಹುಕೋಟಿ ಸ್ಕಿಲ್ ಡೆವಲಪ್‌ಮೆಂಟ್ ಹಗರಣ?
Sep 09, 2023 08:48 AM IST
ಚಂದ್ರಬಾಬು ನಾಯ್ಡು ಬಂಧನ
- skill development scam: ಈ ಹಿಂದೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದಲ್ಲಿ ಆಂಧ್ರಪ್ರದೇಶ ರಾಜ್ಯ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎಪಿಎಸ್‌ಎಸ್‌ಡಿಸಿ) ನಲ್ಲಿ ನಡೆದ ಬಹುಕೋಟಿ ಹಗರಣ ಇದಾಗಿದೆ. ಈ ವರ್ಷ ಮಾರ್ಚ್ನಲ್ಲಿ ಹಗರಣ ಸಂಬಂಧ ಸಿಐಡಿ ತನಿಖೆ ಆರಂಭಿಸಿತ್ತು.
ಆಂಧ್ರಪ್ರದೇಶ ರಾಜ್ಯ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (APSSDC) ಹಗರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು (ಸೆ.9 ಶನಿವಾರ) ಮುಂಜಾನೆ ಬಂಧಿಸಲಾಗಿದೆ.
ಬುಧವಾರ (ಸೆ.6) ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ಸಾರ್ವಜನಿಕರೊಂದಿಗೆ ನಡೆಸಿದ ಸಂವಾದದ ವೇಳೆ ಚಂದ್ರಬಾಬು ನಾಯ್ಡು, "ಇಂದಲ್ಲಾ ನಾಳೆ ಅವರು ನನ್ನನ್ನು ಬಂಧಿಸಬಹುದು. ನನ್ನ ಮೇಲೆ ದಾಳಿ ಮಾಡಬಹುದು. ನನ್ನ ಮೇಲೆ ದೌರ್ಜನ್ಯ ಎಸಗಬಹುದು" ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರದೆಡೆ ಬೆರಳು ಮಾಡಿ ಹೇಳಿದ್ದರು. ಹೀಗೆ ಹೇಳಿದ ಮೂರು ದಿನಗಳಲ್ಲೇ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಂದ್ಯಾಲ ಪಟ್ಟಣದಲ್ಲಿ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಶಿಬಿರದಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲು ಬಂದಿದ್ದರು. ಈ ವೇಳೆ ನಾಯ್ಡು ಅವರು ತಮ್ಮ ಕಾರವಾನ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರು ಪೊಲೀಸರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಕೊನೆಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ನಾಯ್ಡು ವಾಹನದಿಂದ ಅವರನ್ನು ಕೆಳಗಿಳಿಸಿ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ನಾಯ್ಡು ಅವರನ್ನು ಬಂಧಿಸಲಾಗಿದೆ.
ಏನಿದು ಬಹುಕೋಟಿ ಸ್ಕಿಲ್ ಡೆವಲಪ್‌ಮೆಂಟ್ ಹಗರಣ?
ಈ ಹಿಂದೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದಲ್ಲಿ ಆಂಧ್ರಪ್ರದೇಶ ರಾಜ್ಯ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎಪಿಎಸ್‌ಎಸ್‌ಡಿಸಿ) ನಲ್ಲಿ ನಡೆದ ಬಹುಕೋಟಿ ಹಗರಣ ಇದಾಗಿದೆ. ಈ ವರ್ಷ ಮಾರ್ಚ್ನಲ್ಲಿ ಹಗರಣ ಸಂಬಂಧ ಸಿಐಡಿ ತನಿಖೆ ಆರಂಭಿಸಿತು. 2016 ರಲ್ಲಿ ಎಪಿಎಸ್‌ಎಸ್‌ಡಿಸಿಯ ಸಿಇಒ ಆಗಿದ್ದ ಮಾಜಿ ಭಾರತೀಯ ರೈಲ್ವೇ ಸಂಚಾರ ಸೇವೆ (ಐಆರ್‌ಟಿಎಸ್) ಅಧಿಕಾರಿ ಅರ್ಜಾ ಶ್ರೀಕಾಂತ್ ಅವರಿಗೆ ನೀಡಲಾದ ನೋಟಿಸ್‌ಗಳನ್ನು ಅನುಸರಿಸಿ ತನಿಖೆ ಆರಂಭವಾಯಿತು.
2016 ರಲ್ಲಿ, ಟಿಡಿಪಿ ಸರ್ಕಾರದ ಅವಧಿಯಲ್ಲಿ, ನಿರುದ್ಯೋಗಿ ಯುವಕರಿಗೆ ಅವರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಎಪಿಎಸ್‌ಎಸ್‌ಡಿಸಿ ಅನ್ನು ಸ್ಥಾಪಿಸಲಾಯಿತು. 3,300 ಕೋಟಿ ಮೊತ್ತದ ಎಪಿಎಸ್‌ಎಸ್‌ಡಿಸಿ ಯೋಜನೆಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಂಡಿತು. ಈ ತಿಳುವಳಿಕಾ ಒಪ್ಪಂದವು ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಕ್ಕೂಟವನ್ನು ಒಳಗೊಂಡಿತ್ತು.
ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಕೌಶಲ್ಯ ಅಭಿವೃದ್ಧಿಗಾಗಿ 6 ಕೇಂದ್ರಗಳನ್ನು ಸ್ಥಾಪಿಸಬೇಕಾಗಿತ್ತು. ರಾಜ್ಯ ಸರ್ಕಾರವು ಒಟ್ಟು ಯೋಜನಾ ವೆಚ್ಚದ ಶೇ.10 ರಷ್ಟು ಹಣ ನೀಡಬೇಕಾಗಿತ್ತು. ಸೀಮೆನ್ಸ್ ಮತ್ತು ಡಿಸೈನ್ ಟೆಕ್ ಉಳಿದ ಹಣವನ್ನು ಒದಗಿಸಬೇಕಾಗಿತ್ತು.
ಆದರೆ ಗುಣಮಟ್ಟದ ಟೆಂಡರ್ ಪ್ರಕ್ರಿಯೆ ಅನುಸರಿಸದೆ ಯೋಜನೆ ಆರಂಭಿಸಲಾಗಿತ್ತು. ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರಲಿಲ್ಲ. ಹಣ ದುರುಪಯೋಗ ಮಾಡಿಕೊಳ್ಳಲಾಗಿತ್ತು. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಈ ಯೋಜನೆಯಲ್ಲಿ ತನ್ನದೇ ಆದ ಯಾವುದೇ ಸಂಪನ್ಮೂಲಗಳನ್ನು ಹೂಡಿಕೆ ಮಾಡಲು ವಿಫಲವಾಗಿತ್ತು ಮತ್ತು ಅದರ ಬದಲಾಗಿ ಯೋಜನೆಗೆ ಉದ್ದೇಶಿಸಲಾದ ಹಣದಲ್ಲಿ 371 ಕೋಟಿ ಹಣವನ್ನು ಅಲೈಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನಾಲೆಡ್ಜ್ ಪೋಡಿಯಮ್, ಕ್ಯಾಡೆನ್ಸ್ ಪಾರ್ಟ್‌ನರ್ಸ್ ಮತ್ತು ಇಟಿಎ ಗ್ರೀನ್ಸ್ ಸೇರಿದಂತೆ ಶೆಲ್ ಕಂಪನಿಗಳಿಗೆ ವರ್ಗಾಯಿಸಲಾಯಿತು.
ಸೀಮೆನ್ಸ್ ಗ್ಲೋಬಲ್ ಕಾರ್ಪೊರೇಟ್ ಆಫೀಸ್ ಈ ಯೋಜನೆಯ ಬಗ್ಗೆ ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿತು ಮತ್ತು ಯೋಜನಾ ವ್ಯವಸ್ಥಾಪಕರು ಶೆಲ್ ಕಂಪನಿಗಳಿಗೆ ಸರ್ಕಾರದಿಂದ ಮಂಜೂರು ಮಾಡಿದ ಹಣವನ್ನು ಹವಾಲಾ ವಹಿವಾಟುಗಳಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಂಡುಹಿಡಿಯಿತು. ಪರಿಣಾಮವಾಗಿ, ಪ್ರಾಜೆಕ್ಟ್ ಮ್ಯಾನೇಜರ್ ಅನ್ನು ವಜಾಗೊಳಿಸಲಾಗಿತ್ತು.