logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜಸ್ಥಾನ ಚುನಾವಣಾ ಫಲಿತಾಂಶದ ದಿಕ್ಕನ್ನೇ ಬದಲಿಸಿದ ಮೋದಿ ರೋಡ್‌ ಶೋ, ರ‍್ಯಾಲಿಗಳು; ಕಾಂಗ್ರೆಸ್‌ಗೆ ಮುಳುವಾದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿ

ರಾಜಸ್ಥಾನ ಚುನಾವಣಾ ಫಲಿತಾಂಶದ ದಿಕ್ಕನ್ನೇ ಬದಲಿಸಿದ ಮೋದಿ ರೋಡ್‌ ಶೋ, ರ‍್ಯಾಲಿಗಳು; ಕಾಂಗ್ರೆಸ್‌ಗೆ ಮುಳುವಾದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿ

HT Kannada Desk HT Kannada

Dec 03, 2023 08:00 PM IST

google News

ರಾಜಸ್ಥಾನದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು

    • ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಈ ಭಾರಿ ಮತದಾರರು ಬಿಜೆಪಿ ಕೈಹಿಡಿದಿದ್ದಾರೆ. ಪ್ರಸ್ತುತ ಆಡಳಿತದಲ್ಲಿದ್ದ ಕಾಂಗ್ರೆಸ್‌ ಅನ್ನು ಸೋತಿದೆ. ಬಿಜೆಪಿ ಅಭ್ಯರ್ಥಿಗಳಿಗಿಂತ ಮೋದಿ ರೋಡ್‌ ಶೋ, ರ‍್ಯಾಲಿಗಳು ಇಲ್ಲಿ ಹೆಚ್ಚು ಪ್ರಭಾವ ಬೀರಿದೆ. ಇನ್ನು ಕಾಂಗ್ರೆಸ್‌ ಸೋಲಲು ಅತಿಯಾದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯೇ ಕಾರಣ ಎನ್ನಲಾಗುತ್ತಿದೆ. ವಿಶ್ಲೇಷಣೆ: ಎಚ್‌. ಮಾರುತಿ
ರಾಜಸ್ಥಾನದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು
ರಾಜಸ್ಥಾನದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಿ ಮರಳಿ ಅಧಿಕಾರ ಹಿಡಿದಿದೆ. ಈ ಗೆಲುವಿಗೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕಾರಣವೇ ಹೊರತು ಮತ್ತಾರೂ ಅಲ್ಲ. ಮೋದಿ ನಡೆಸಿದ ರ‍್ಯಾಲಿಗಳು ಮತ್ತು ರೋಡ್ ಶೋಗಳು ಫಲ ನೀಡಿವೆ. ಚುನಾವಣಾ ತಂತ್ರಗಾರಿಕೆ ಕೈ ಹಿಡಿದಿದೆ.

ಚುನಾವಣೆ ಅರಂಭವಾದ ದಿನಗಳಲ್ಲಿ ಬಿಜೆಪಿಗೆ ಗೆಲ್ಲುವ ಆತ್ಮವಿಶ್ವಾಸ ಇರಲಿಲ್ಲ. ಸ್ಥಳಿಯ ಮುಖಂಡರಾದ ವಸುಂಧರಾ ರಾಜೇ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದರು. ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಪ್ರತಿಯಾಗಿ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರು. ಇಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ನಿರೀಕ್ಷೆ ಮಾಡಿದ್ದ ಸಂದರ್ಭದಲ್ಲಿ ಮೋದಿ ಅಖಾಡ ಪ್ರವೇಶ ಪ್ರವೇಶಿಸಿದರು. ಪರಿಣಾಮ ಫಲಿತಾಂಶದ ದಿಕ್ಕು ಬದಲಾಗುತ್ತಾ ಹೋಯಿತು. ಗುಜರಾತ್‌ಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ ರಾಜಸ್ಥಾನವೂ ಒಂದು. ಆ ಕಾರಣಕ್ಕೆ ಸಹಜವಾಗಿಯೇ ಅವರ ಪ್ರಭಾವ ಆಗಿದೆ ಎನ್ನಬಹುದು.

ಗೆಹ್ಲೋಟ್ ಮತ್ತು ಪೈಲಟ್ ನಡುವೆ ಮೂಡದ ಒಮ್ಮತ

ಈ ಇಬ್ಬರೂ ನಾಯಕರು ಕೈ ಜೋಡಿಸಿದ್ದರೆ ಅಧಿಕಾರವನ್ನು ಉಳಿಸಿಕೊಳ್ಳುವ ಅವಕಾಶಗಳಿದ್ದವು. ಆದರೆ ಹೈ ಕಮಾಂಡ್ ಇಬ್ಬರ ನಡುವೆ ತೇಪೆ ಹಾಕುವ ಕೆಲಸ ಮಾಡಿ ಸುಮ್ಮನಾಯಿತು. ಒಮ್ಮತಾಭಿಪ್ರಯಕ್ಕೆ ಬರಲು ಸಾಧ್ಯವಾಗಲಿಲ್ಲ.

ರಾಜಸ್ಥಾನದಲ್ಲಿ ಜೈಪುರ ಮತ್ತು ಬಿಕನೇರ್ ವ್ಯಾಪ್ತಿಯಲ್ಲಿ 42 ಸ್ಥಾನಗಳಿವೆ. ಈ ಎರಡೂ ಜಿಲ್ಲೆಗಳು ಕೋಮು ಗಲಭೆಗಳಿಗೆ ಕುಖ್ಯಾತಿ ಪಡೆದಿವೆ. ಆರಂಭದಲ್ಲೇ ಮೋದಿ ಈ ಎರಡೂ ಜಿಲ್ಲೆಗಳಲ್ಲಿ ರ‍್ಯಾಲಿ ಮತ್ತು ರೋಡ್ ಶೋಗಳನ್ನು ನಡೆಸುವ ಮೂಲಕ ಪ್ರಚಾರದ ವೈಖರಿಯನ್ನೇ ಬದಲಿಸಿಬಿಟ್ಟರು. ಕಾಂಗ್ರೆಸ್‌ನ ಅಲ್ಪಸಂಖ್ಯಾತ ತುಷ್ಟೀಕರಣ ನೀತಿ ವಿರುದ್ಧ ಹಿಂದೂಗಳ ಮತಗಳನ್ನು ಕ್ರೋಢೀಕರಿಸಿದರು.

ರಾಜಸ್ಥಾನದಲ್ಲಿ ಮುಸಲ್ಮಾನ ಸಮುದಾಯದ ಜನಸಂಖ್ಯೆ ಶೇ 9ರಷ್ಟು ಮಾತ್ರ ಮತ್ತು ಇವರು ಹೆಚ್ಚೆಂದರೆ 40 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಮೋದಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಪ್ರಬಲ ಹಿಂದುತ್ವವನ್ನು ಪ್ರತಿಪಾದಿಸಿದರು. ಹದಗೆಟ್ಟ ಕಾನೂನು ಸುವ್ಯವಸ್ಥೆ ಅಲ್ಪಸಂಖ್ಯಾತರ ತುಷ್ಟೀಕರಣ ಮೊದಲಾದ ಅಂಶಗಳನ್ನು ಪ್ರತಿಪಾದಿಸಿದರು.

ನರ್ಮದಾ ನದಿ ನೀರು ಯೋಜನೆ ಭರವಸೆ

ರಾಜಸ್ಥಾನ ಮರಳುಗಾಡು ಪ್ರದೇಶ. ಇಲ್ಲಿ ಕುಡಿಯುವ ನೀರಿಗೂ ತತ್ವಾರ. ಈ ಅಂಶವನ್ನೇ ಬಳಸಿಕೊಂಡ ಮೋದಿ ಅಭಿವೃದ್ಧಿ ಮಂತ್ರವನ್ನು ಪಠಿಸಿದರು. ರಾಜಸ್ಥಾನಕ್ಕೆ ನರ್ಮದಾ ನದಿಯಿಂದ ಕುಡಿಯುವ ನೀರಿನ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸುವ ಭರವಸೆ ನೀಡಿದರು. ಇದಕ್ಕೆ ಪೂರಕವಾಗಿ ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಗಳಲ್ಲಿ ಆಗಿರುವ ಪ್ರಗತಿಯನ್ನು ಮುಂದಿಟ್ಟರು. ಇದು ಮತದಾರರ ಮನ ಗೆಲ್ಲುವಲ್ಲಿ ಫಲ ನೀಡಿತು.

ರಾಜಸ್ಥಾನದಲ್ಲಿ ಪಕ್ಷ ವೀಕ್ ಆಗಿದ್ದನ್ನು ಮನಗಂಡ ಹೈಕಮಾಂಡ್ 3 ವರ್ಷ ಮುಂಚಿತವಾಗಿ ಪಕ್ಷದ ಬಲವರ್ದನೆಯಲ್ಲಿ ತೊಡಗಿತ್ತು. ಬೂತ್ ಮಟ್ಟದಲ್ಲಿ ಪಕ್ಷವನ್ನು ಭದ್ರಪಡಿಸುತ್ತಾ ಬಂದಿದ್ದು ನೆರವಿಗೆ ಬಂದಿತು.

ಕಾಂಗ್ರೆಸ್‌ನ ಅಲ್ಪಸಂಖ್ಯಾತ ನೀತಿಗೆ ವಿರುದ್ಧವಾಗಿ ಹಿಂದುತ್ವ, ಅಭಿವೃದ್ಧಿ ಮತ್ತು ಕಲ್ಯಾಣ ರಾಜಕಾರಣವನ್ನು ಪ್ರತಿಪಾದಿಸಿದ್ದು ಬಿಜೆಪಿಗೆ ನೆರವಾಯಿತು. ಇಡೀ ರಾಜ್ಯದಲ್ಲಿ ಗೂಂಡಾಗಿರಿ ಹಂಟೆಂಗೆ ಬಿಜೆಪಿ ಲಾನೆಗೆ ಎಂಬ ಪೋಸ್ಟರ್‌ಗಳು ಮತದಾರರ ಮೇಲೆ ಪರಿಣಾಮ ಬೀರಿದವು.

ಪ್ರತಿ 5 ವರ್ಷಗಳಿಗೊಮ್ಮೆ ಸರ್ಕಾರ ಬದಲಾಯಿಸುವುದು ಇಲ್ಲಿನ ಮತದಾರರ ಸಂಪ್ರದಾಯ. ಈ ಬಾರಿಯೂ ಪಕ್ಷವನ್ನು ಬದಲಾಯಿಸಿದ್ದಾನೆ ಎನ್ನಬಹುದು. ಕಾಂಗ್ರೆಸ್‌ನ ಉಚಿತ ಕೊಡುಗೆಗಳಿಗೆ ಬಿಜೆಪಿಯೂ ಪ್ರತಿಯಾಗಿ ಹಲವಾರು ಉಚಿತ ಕೊಡುಗೆಗಳನ್ನು ಘೋಷಣೆ ಮಾಡುತ್ತಾ ಹೋಯಿತು. ಈ ಭರವಸೆಗಳು ಕಮಲವನ್ನು ಅರಳಿಸಲು ಸಹಾಯ ಮಾಡಿದವು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ, ಕಡಿಮೆ ಬೆಲೆಗೆ ಅಡುಗೆ ಅನಿಲ ಸಿಲಿಂಡರ್, ಆಂಟಿ

ರೋಮಿಯೋ ದಳ ರಚನೆ, ಹೆಣ್ಣು ಮಗು ಜನಿಸಿದಾಗ 2ಲಕ್ಷ ರೂಗಳ ಬಾಂಡ್ ಮೊದಲಾದ ಘೋಷಣೆಗಳು ಮತದಾರರ ಮನಗೆದ್ದವು. ಕಳೆದ ಬಾರಿ ಬಿಜೆಪಿಯಿಂದ ದೂರ ಸರಿದಿದ್ದ ಗುಜ್ಜರ್ ಮತ್ತು ರಜಪೂತ ಸಮುದಾಯಗಳು ಈ ಬಾರಿ ಬಿಜೆಪಿ ಕೈ ಹಿಡಿದಿದ್ದು ನೆರವಾಯಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ