Basava Jayanthi: ಬಸವ ಜಯಂತಿಯಂದು ಸಮಾಜ ಸುಧಾರಕನಿಗೆ ಪ್ರಧಾನಿ ಮೋದಿ ನಮನ; ಕನ್ನಡದಲ್ಲೇ ಟ್ವೀಟ್
Apr 23, 2023 12:06 PM IST
ಬಸವಣ್ಣರಿಗೆ ಪ್ರಧಾನಿ ಮೋದಿ ನಮನ (ಸಂಗ್ರಹ ಚಿತ್ರ)
- “ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ” ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಇಂದು (ಏಪ್ರಿಲ್ 23) ಬಸವ ಜಯಂತಿ (Basava Jayanthi). 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರಿಗೆ (Basaveshwara) ಪ್ರಧಾನಿ ನರೇಂದ್ರ ಮೋದಿ, (PM Modi) ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ನಮಿಸಿದ್ದಾರೆ.
ಕನ್ನಡದಲ್ಲಿಯೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರು 2015ರಲ್ಲಿ ಲಂಡನ್ನಲ್ಲಿ ಬಸವೇಶ್ವರರ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದನ್ನು ನೆನೆದು ಪೋಸ್ಟ್ ಮಾಡಿದ್ದಾರೆ. ಇದನ್ನು ರಿಟ್ವೀಟ್ ಮಾಡಿರುವ ಪಿಎಂ ಮೋದಿ, “ಜಗದ್ಗುರು ಬಸವೇಶ್ವರರು ತೋರಿಸಿಕೊಟ್ಟ ಹಾದಿಯನ್ನು ನಾವು ಸದಾ ಪಾಲಿಸುತ್ತೇವೆ. ಅವರಿಗೆ ಗೌರವ ಸಲ್ಲಿಸಲು ಅನೇಕ ಅವಕಾಶಗಳು ಒದಗಿರುವುದು ನನ್ನ ಸೌಭಾಗ್ಯ” ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ್ದಾರೆ. ಬಸವ ಜಯಂತಿ ಹಿನ್ನೆಲೆ ಸಿಎಂ ಬೊಮ್ಮಾಯಿ ಅವರಿಂದ ಪುಷ್ಪನಮನ ಸಲ್ಲಿಸಲಾಗಿದೆ. ಅಶೋಕ್, ಕೋಟ ಶ್ರೀನಿವಾಸ್ ಪೂಜಾರಿ, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿಯಾಗಿದ್ದರು.
“ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು. ಕಾಯಕ ಮತ್ತು ದಾಸೋಹದೊಂದಿಗೆ ಸಮಾನತೆ ಹಾಗೂ ಜೀವನದ ಸತ್ಯದರ್ಶನದ ಮಹತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ಅಣ್ಣ ಬಸವಣ್ಣನವರ ವಚನಾದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪವನ್ನು ಮಾಡೋಣ” ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ತೀವ್ರ ಪ್ರಚಾರದ ನಡುವೆ, ಲಿಂಗಾಯತರು ಅತಿ ದೊಡ್ಡ ಸಮುದಾಯವಾಗಿರುವ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ಈ ದಿನವನ್ನು ಆಚರಿಸುತ್ತಿವೆ. ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಲಿಂಗ ಮತ್ತು ಜಾತಿ ತಾರತಮ್ಯದ ವಿರುದ್ಧ ನಿಂತ ಬಸವೇಶ್ವರರು ಲಿಂಗಾಯತ ಧರ್ಮದ ಉದಯಕ್ಕೆ ಪ್ರೇರಕ ಶಕ್ತಿ ಎಂದು ನಂಬಲಾಗಿದೆ. ಬಸವಣ್ಣ ಅವರನ್ನು ತತ್ವಜ್ಞಾನಿ, ಶಿವ-ಕೇಂದ್ರಿತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ನಿಂತ ಮಹಾನ್ ಸಮಾಜ ಸುಧಾರಕ ಎಂದು ಪರಿಗಣಿಸಲಾಗಿದೆ.
ಬಸವಣ್ಣನವರು ತಮ್ಮ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿದವರು, ಇದನ್ನು ವಚನಗಳು ಎಂದು ಕರೆಯಲಾಗುತ್ತದೆ. ಪ್ರಪಂಚದ ಮೊದಲ ಧಾರ್ಮಿಕ ಸಂಸತ್ತು ಎಂದು ಕರೆಯಲಾಗುವ ಅನುಭವ ಮಂಟಪ ಪರಿಕಲ್ಪನೆಯನ್ನು ಪರಿಚಯಿಸಿದವರು ಬಸವಣ್ಣ.