logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Belagavi Assembly Session: ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್‌ ಹೆಸರಿನ ಉಲ್ಲೇಖವೇಕೆ? ಸಿದ್ದರಾಮಯ್ಯ ಆಕ್ಷೇಪ

Belagavi assembly session: ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್‌ ಹೆಸರಿನ ಉಲ್ಲೇಖವೇಕೆ? ಸಿದ್ದರಾಮಯ್ಯ ಆಕ್ಷೇಪ

HT Kannada Desk HT Kannada

Dec 27, 2022 01:21 PM IST

google News

ಸಿದ್ದರಾಮಯ್ಯ

    • ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಒಂದು ಕೆಟ್ಟ ಸಂಪ್ರದಾಯ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ (ANI)

ಬೆಳಗಾವಿ: ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದೆ. ಈ ಕುರಿತಂತೆ ಶೃಂಗೇರಿ ಶಾಸಕರಾದ ರಾಜುಗೌಡ ಅವರ ಮಾತಿಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್‌ ಅವರ ಹೆಸರು ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಒಂದು ಕೆಟ್ಟ ಸಂಪ್ರದಾಯ, ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ. ಬಜೆಟ್‌ ಗೆ ಅನುಮೋದನೆ ನೀಡುವವರು ಯಾರು? ಚುನಾವಣೆಯಲ್ಲಿ ಸೋತವರು ಬಂದು ಚರ್ಚಿಸಿ ಬಜೆಟ್‌ ಪಾಸ್‌ ಮಾಡಿ ಕೊಡುತ್ತಾರ? ಸೋತವರ ಹೆಸರಿಗೆ ಅನುದಾನ ನೀಡಿ ನೀವು ಜನರ ಜೊತೆ ಹೋಗಿ ಕೆಲಸ ಮಾಡಿ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಇದನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು, ಇದು ಮುಂದುವರೆಯಲೂಬಾರದು. ಸೋತವರು ಮತ್ತೆ ಗೆದ್ದು ಬಂದು ಜನರ ಜೊತೆ ನಿಂತು ಕೆಲಸ ಮಾಡಲಿ. ನಾನು ಮುಖ್ಯಮಂತ್ರಿಯಾಗಿರುವಾಗ ಈ ರೀತಿ ಸೋತವರಿಗೆ ಅನುದಾನ ನೀಡಿದ ನೆನಪಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಿಮ್ಮ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ್‌ ಅವರಿಗೆ ಹಿಂದೆ ನಾನು ಅನುದಾನ ನೀಡಿದ್ದೆನಾ ಎಂದು ಸ್ಪೀಕರ್‌ ಅವರನ್ನೇ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು. ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿ ನಡವಳಿಕೆಗೆ ಅವಕಾಶ ಇಲ್ಲ. ಇದು ರಾಜೇಗೌಡರಿಗೆ ಮಾತ್ರವಲ್ಲ, ಖಾದರ್‌ ಅವರಿಗೆ ಸೇರಿದಂತೆ ಬಹಳಷ್ಟು ಜನರಿಗೆ ಈ ರೀತಿ ಅನ್ಯಾಯ ಆಗಿದೆ. ಮಾಧುಸ್ವಾಮಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಭಾವಿಸಿದ್ದೇನೆ, ಅವರು ಹಿರಿಯ ಸದಸ್ಯರು ಕೂಡ ಹೌದು. ಇದನ್ನು ಪ್ರಿವಿಲೇಜ್‌ ಕಮಿಟಿಗೆ ಕಳಿಸುವ ಬದಲು ಇನ್ನು ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಸರ್ಕಾರ ಉತ್ತರ ನೀಡಲಿ. ಈಗಾಗಲೇ ಸೋತ ಅಭ್ಯರ್ಥಿಗಳ ಹೆಸರಿನಲ್ಲಿ ನೀಡಿರುವ ಅನುದಾನವನ್ನು ವಾಪಾಸು ಪಡೆಯಿರಿ ಎಂದು ಅವರು ಆಗ್ರಹಿಸಿದ್ದಾರೆ.

ನೀವು ಅನುದಾನ ನೀಡುತ್ತೀರಿ ಎಂಬ ನಿರೀಕ್ಷೆ ಕೂಡ ನಮಗೆ ಇಲ್ಲ. ನೀವು ಅನುದಾನವನ್ನೇ ಕೊಡದಿದ್ದರೂ ಪರವಾಗಿಲ್ಲ ಆದರೆ ಈ ರೀತಿ ಶಾಸಕರಿಗೆ ಅಗೌರವ ಮಾಡಬೇಡಿ. ಶಾಸಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸಭಾಧ್ಯಕ್ಷರ ಕರ್ತವ್ಯ. ಹಿಂದೆ ಹೀಗೆ ಆಗಿತ್ತು ಎಂದು ಹೇಳುವುದು ಸರಿಯಲ್ಲ, ಇದೊಂದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಈ ಸಂಪ್ರದಾಯ ಇಲ್ಲಿಗೆ ಕೊನೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾಲಿ ಶಾಸಕರಿಗೆ 100 ಕೋಟಿ ಅನುದಾನ ಕೊಟ್ಟು, ಅದೇ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೆ ಇನ್ನು 100 ಕೋಟಿ ಅನುದಾನ ಬಿಡುಗಡೆ ಮಾಡಲು ಅವಕಾಶ ಇದೆಯಾ? ಸೋತ ಅಭ್ಯರ್ಥಿ ಬಂದು ಬಿಲ್‌ ಮೇಲೆ ಚರ್ಚೆ ಮಾಡುತ್ತಾರ? ಬಜೆಟ್‌ ಅನ್ನು ಪಾಸ್‌ ಮಾಡಿ ಕೊಡುತ್ತಾರ? ಮಾಡಿಕೊಡೋಕೆ ಬರೋದಾದರೆ ಸರ್ಕಾರ ಅವರಿಂದಲೇ ಬಜೆಟ್‌ ಗೆ ಅನುಮೋದನೆ ಪಡೆಯಲಿ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ