Joe Biden: ಸಲಹಾ ಸಮಿತಿಗೆ ಭಾರತೀಯ ಮೂಲದ ಅಮೆರಿಕನ್ ಸಿಇಒಗಳನ್ನು ನೇಮಕ ಮಾಡಿದ ಜೋ ಬೈಡೆನ್
Mar 12, 2023 06:03 AM IST
Joe Biden: ಸಲಹಾ ಸಮಿತಿಗೆ ಭಾರತೀಯ ಮೂಲದ ಅಮೆರಿಕನ್ ಸಿಇಒಗಳನ್ನು ನೇಮಕ ಮಾಡಿದ ಜೋ ಬೈಡೆನ್
- ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್ ಅವರು ಭಾರತೀಯ ಮೂಲದ ಅಮೆರಿಕನ್ ಸಿಇಒಗಳಿಬ್ಬರ ಹೆಸರನ್ನು ಟ್ರೇಡ್ ಪಾಲಿಸಿ ಆಂಡ್ ನೆಗೋಷಿಯೇಷನ್ಸ್ ಸಲಹಾ ಸಮಿತಿಗೆ ಸೂಚಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್ ಅವರು ಭಾರತೀಯ ಮೂಲದ ಅಮೆರಿಕನ್ ಸಿಇಒಗಳಿಬ್ಬರ ಹೆಸರನ್ನು ಟ್ರೇಡ್ ಪಾಲಿಸಿ ಆಂಡ್ ನೆಗೋಷಿಯೇಷನ್ಸ್ ಸಲಹಾ ಸಮಿತಿಗೆ ಸೂಚಿಸಿದ್ದಾರೆ. ಫ್ಲೆಕ್ಸ್‌ನ ಸಿಇಒ ರೇವತಿ ಅದ್ವೈತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ ಸಿಇಒ ಮನೀಶ್ ಬಾಪ್ನಾ ಅವರು ಅಮೆರಿಕದ ಈ ಸಲಹಾ ಸಮಿತಿಗೆ ನೇಮಕಗೊಂಡಿದ್ದಾರೆ.
ಈ ಸಲಹಾ ಸಮಿತಿಗೆ ಬೈಡೆನ್ ಅವರು ಹದಿನಾಲ್ಕು ಜನರ ತಂಡವನ್ನು ಘೋಷಿಸಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯ ಮೂಲದವರಾಗಿದ್ದಾರೆ. ರೇವತಿ ಅದ್ವೈತಿ, ಮನೀಶ್ ಬಾಪ್ನಾ, ತಿಮೋತಿ ಮೈಕೆಲ್ ಬ್ರೋಸ್, ಥಾಮಸ್ ಎಮ್ ಕಾನ್ವೇ, ಎರಿಕಾ ಆರ್‌ಹೆಚ್ ಫುಚ್ಸ್, ಮರ್ಲಾನ್ ಇ ಕಿಂಪ್ಸನ್, ರಯಾನ್, ಶೋಂಡಾ ಯೆವೆಟ್ಟೆ ಸ್ಕಾಟ್, ಎಲಿಜಬೆತ್ ಶುಲರ್, ನೀನಾ ಸ್ಜ್ಲೋಸ್ಆರ್ಗ್-ಲ್ಯಾಂಡಿಸ್ ಮತ್ತು ವೆಂಡೆಲ್ ಪಿ ವೀಕ್ಸ್ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಯಾರು ರೇವತಿ ಅದ್ವೈತಿ?
ರೇವತಿ ಅದ್ವೈತಿ ಅವರು ಫ್ಲೆಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಫ್ಲೆಕ್ಸ್ ಕಂಪನಿಯು ವೈವಿಧ್ಯಮಯ ಗ್ರಾಹಕರ ಮೂಲ ವಿನ್ಯಾಸ ಮತ್ತು ಜಗತ್ತನ್ನು ಸುಧಾರಿಸಲು ಉತ್ಪನ್ನಗಳನ್ನು ನಿರ್ಮಿಸಲು ಸಹಾಯ ಮಾಡುವ ಜಾಗತಿಕ ಉತ್ಪಾದನಾ ಪಾಲುದಾರರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ.
ಅದ್ವೈತಿ ಅವರು ಫ್ಲೆಕ್ಸ್ ಸಂಸ್ಥೆಗೆ 2019ರಲ್ಲಿ ನೇಮಕಗೊಂಡಿದ್ದು, ಅದ್ವೈತಿ ವಿವಿಧ ಕೈಗಾರಿಕೆಗಳು ಮತ್ತು ಅಂತಿಮ ಮಾರುಕಟ್ಟೆಗಳಲ್ಲಿ ತಂತ್ರಜ್ಞಾನ ನಾವೀನ್ಯತೆ, ಪೂರೈಕೆ ಸರಪಳಿ ಮತ್ತು ಜವಾಬ್ದಾರಿಯುತ, ಸುಸ್ಥಿರ ಉತ್ಪಾದನಾ ಪರಿಹಾರಗಳನ್ನು ಚಾಲನೆ ಮಾಡುವತ್ತ ಗಮನಹರಿಸಿದ್ದಾರೆ.
ಫ್ಲೆಕ್ಸ್‌ಗೆ ಸೇರುವ ಮೊದಲು ಅದ್ವೈತಿ ಅವರು ಈಟನ್ ಎಂಬ ಎಲೆಕ್ಟ್ರಿಕಲ್ ವಲಯದ ಕಂಪನಿಯ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದು 20 ಶತಕೋಟಿ ಡಾಲರ್ ವ್ಯವಹಾರದ ಕಂಪನಿಯಾಗಿದ್ದು, 102,000 ಉದ್ಯೋಗಿಗಳನ್ನು ಹೊಂದಿದೆ. ಈ ಕಂಪನಿಯಲ್ಲಿ ಅವರು ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಪ್ರದೇಶಗಳಿಗೆ ಕಾರ್ಪೊರೇಟ್ ಜವಾಬ್ದಾರಿಯನ್ನು ಹೊಂದಿದ್ದರು. ಇದಕ್ಕೂ ಮುನ್ನ ಅದ್ವೈತಿ ಅವರು ಈಟನ್‌ನ ಅಮೆರಕ ವಿಭಾಗದ ಎಲೆಕ್ಟ್ರಿಕಲ್ ಸೆಕ್ಟರ್ ಅಧ್ಯಕ್ಷರಾಗಿದ್ದರು ಮತ್ತು ಉತ್ತರ, ದಕ್ಷಿಣ ಮತ್ತು ಮಧ್ಯ ಅಮೆರಿಕದ ಜವಾಬ್ದಾರಿಯನ್ನು ಹೊಂದಿದ್ದರು.
ಅದ್ವೈತಿ ಅವರು ವರ್ಲ್ಡ್ ಎಕನಾಮಿಕ್ ಫೋರಮ್ (WEF) ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಸಿಇಒ ಸಮುದಾಯದ ಸಹ-ಅಧ್ಯಕ್ಷರಾಗಿದ್ದಾರೆ ಮತ್ತು ಸಿಇಒ ಕ್ಲೈಮೇಟ್ ಲೀಡರ್‌ಗಳ ಡಬ್ಲ್ಯುಇಎಫ್ ಅಲೈಯನ್ಸ್‌ಗೆ ಸೇರಿದ್ದಾರೆ. ಅವರು ಉಬೆರ್ ಮತ್ತು ಕೆಟಲಿಸ್ಟ್ ಆರ್ಗ್‌ನ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅದ್ವೈತಿ ಅವರು ಸತತ ನಾಲ್ಕು ವರ್ಷಗಳ ಕಾಲ ಫಾರ್ಚೂನ್‌ನ ಪವರ್‌ಫುಲ್ ಬಿಸ್ನೆಸ್ ಮಹಿಳೆಯರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದರು. ಇವರು ಭಾರತದ ಬ್ಯುಸಿನೆಸ್ ಟುಡೆಯ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಥಂಡರ್‌ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.
ಮನೀಶ್ ಬಾಪ್ನಾ ಪರಿಚಯ
ಮನೀಶ್ ಬಾಪ್ನಾ ಅವರು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ (NRDC) ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯು ಪರಿಸರ ಕಾನೂನಿಗೆ ಸಂಬಂಧಪಟ್ಟಂತೆ ಹಲವು ಸಾಧನೆಗಳನ್ನು ಮಾಡಿದೆ. ಬಾಪ್ನಾ ಅವರ ನಾಯಕತ್ವದಲ್ಲಿ ಬಡತನ ಮತ್ತು ಹವಾಮಾನ ಬದಲಾವಣೆಯ ಮೂಲ ಕಾರಣಗಳನ್ನು ನಿಭಾಯಿಸಲು ಪ್ರಯತ್ನಿಸಲಾಗಿದೆ. ಹದಿನಾಲ್ಕು ವರ್ಷಗಳ ಕಾಲ ಇವರು ವಿಶ್ವ ಸಂಪನ್ಮೂಲ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅರ್ಥಶಾಸ್ತ್ರಜ್ಞರಾಗಿ, ಬ್ಯಾಂಕ್ ಮಾಹತಿ ಕೇಂದ್ರದಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮೆಕಿನ್ಸ್ ಮತ್ತು ವಿಶ್ವ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ವ್ಯಾಪಾರ ಮತ್ತು ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಎಂಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.