logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bilkis Bano Case: 11 ಅಪರಾಧಿಗಳ ಬಿಡುಗಡೆ ಖಂಡಿಸಿ 180 ಕಿ.ಮೀ ದೂರ ಪಾದಯಾತ್ರೆ ನಡೆಸಲಿರುವ ಸಾಮಾಜಿಕ ಕಾರ್ಯಕರ್ತರು

Bilkis Bano case: 11 ಅಪರಾಧಿಗಳ ಬಿಡುಗಡೆ ಖಂಡಿಸಿ 180 ಕಿ.ಮೀ ದೂರ ಪಾದಯಾತ್ರೆ ನಡೆಸಲಿರುವ ಸಾಮಾಜಿಕ ಕಾರ್ಯಕರ್ತರು

Meghana B HT Kannada

Sep 17, 2022 10:01 PM IST

google News

ಸಂತ್ರಸ್ತೆ ಬಿಲ್ಕಿಸ್ ಬಾನು

    • ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದನ್ನು ಖಂಡಿಸಿ 180 ಕಿ.ಮೀ ದೂರ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟಿಸಲು ಗುಜರಾತ್​ನ ಸಾಮಾಜಿಕ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಸಂತ್ರಸ್ತೆ ಬಿಲ್ಕಿಸ್ ಬಾನು
ಸಂತ್ರಸ್ತೆ ಬಿಲ್ಕಿಸ್ ಬಾನು

ಗುಜರಾತ್‌: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದನ್ನು ಖಂಡಿಸಿ 180 ಕಿ.ಮೀ ದೂರ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟಿಸಲು ಗುಜರಾತ್​ನ ಸಾಮಾಜಿಕ ಕಾರ್ಯಕರ್ತರು ನಿರ್ಧರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರ ಗುಂಪು ಗುಜರಾತ್‌ನ ದಾಹೋಡ್ ಜಿಲ್ಲೆಯ ರಂಧಿಕ್‌ಪುರದಿಂದ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಪಾದಯಾತ್ರೆ ನಡೆಸಲಿದೆ. ಕಾರ್ಯಕರ್ತರು 'ಹಿಂದೂ ಮುಸ್ಲಿಂ ಏಕತಾ ಸಮಿತಿ' ಬ್ಯಾನರ್ ಅಡಿಯಲ್ಲಿ ಮಾರ್ಚ್ 26 ಮತ್ತು ಅಕ್ಟೋಬರ್ 4 ರ ನಡುವೆ 180 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ಮತ್ತು ಶಾಸಕ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ.

ಆಧ್ಯಾತ್ಮಿಕತೆ, ಮಹಾತ್ಮ ಗಾಂಧಿಯವರ ಮೌಲ್ಯಗಳು ಮತ್ತು ಸದ್ಗುಣಗಳಿಗಾಗಿ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ಭಾರತದಲ್ಲಿ ಅಪರಾಧಿಗಳ ಬಿಡುಗಡೆ ನಾಚಿಕೆಗೇಡಿನ ಸಂಗತಿಯಾಗಿದೆ. ಮಹಾತ್ಮಾ ಗಾಂಧಿಯಂತಹ ಜಾಗತಿಕ ಧೀಮಂತ ವ್ಯಕ್ತಿ ಹುಟ್ಟಿದ ನಾಡು ಗುಜರಾತ್​ ಇಂದು ಘೋರ ಅಪರಾಧ ಎಸಗಿದವರ ಬಿಡುಗಡೆ ಬಗ್ಗೆ ಮೌನವಾಗಿದೆ. ಮಾನವೀಯತೆ ಉಳಿಸಲು, ನೈತಿಕ ಮೌಲ್ಯಗಳು ಮತ್ತು ನೈತಿಕ ಮಾನದಂಡಗಳನ್ನು ಗೌರವಿಸಲು, ಮುಗ್ಧ ಜನರು ಸುರಕ್ಷಿತವಾಗಿರಲು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಲು ನಾವು ಮಾತನಾಡುವ ಅವಶ್ಯಕತೆಯಿದೆ ಎಂದು ಸಾಮಾಜಿಕ ಕಾರ್ಯಕರ್ತರ ಗುಂಪು ಪ್ರಕಟಣೆ ಹೊರಡಿಸಿದೆ.

ಗೋಧ್ರಾ ಗಲಭೆಯ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತಲ್ಲದೇ ಇವರ ಕುಟುಂಬದ 7 ಮಂದಿಯನ್ನು ಕೊಲ್ಲಲಾಗಿತ್ತು. ಆದರೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಗುಜರಾತ್​ನ ಬಿಜೆಪಿ ಸರ್ಕಾರ ಬಿಡುಗಡೆ ಭಾಗ್ಯ ನೀಡಿದೆ.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳಾದ ರಾಧೇಶ್ಯಾಮ್ ಶಾ, ಜಸ್ವಂತ್ ಚತುರ್ಭಾಯಿ ನಾಯ್, ಕೇಶುಭಾಯಿ ವಡಾನಿಯಾ, ಬಕಾಭಾಯಿ ವಡಾನಿಯಾ, ರಾಜಿಭಾಯಿ ಸೋನಿ, ರಮೇಶ್‌ಭಾಯ್ ಚೌಹಾಣ್, ಶೈಲೇಶ್‌ಭಾಯ್ ಭಟ್, ಬಿಪಿನ್ ಚಂದ್ರ ಜೋಶಿ, ಗೋವಿಂದಭಾಯ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋಧಿಯಾ ಆಗಸ್ಟ್​ 15ರಂದು ಗೋಧ್ರಾ ಸಬ್​ ಜೈಲಿನಿಂದ ಹೊರನಡೆದಿದ್ದಾರೆ.

ಗುಜರಾತ್​ ಗಲಭೆ ಪ್ರಕರಣ

ಫೆಬ್ರವರಿ 27, 2002 ರಂದು ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ 59 ಮಂದಿಯನ್ನು ಸಜೀವ ದಹನ ಮಾಡಲಾಗಿತ್ತು. ಮಾರನೇ ದಿನ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿ 68 ಜನರ ಹತ್ಯೆ ಆಗಿತ್ತು. ಬಳಿಕ ರಾಜ್ಯಾದ್ಯಂತ ಉಂಟಾದ ಗಲಭೆ ಹಾಗೂ ಹಿಂಸಾಚಾರಗಳಲ್ಲಿ 1000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಗಲಭೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹೆಸರು ಕೇಳಿಬಂದಿತ್ತು. ಆದರೆ ನರೇಂದ್ರ ಮೋದಿ ಸೇರಿದಂತೆ 64 ಜನರಿಗೆ ಎಸ್​ಐಟಿ ಕ್ಲೀನ್​ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿ ಹತ್ಯೆಯಾದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿ ಕ್ಲೀನ್​ಚಿಟ್ ತೀರ್ಪನ್ನು ಎತ್ತಿಹಿಡಿದಿತ್ತು.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ

ಗೋಧ್ರಾ ಗಲಭೆಯ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ (ಮಾರ್ಚ್​ 2002) ಬಿಲ್ಕಿಸ್ ಬಾನು ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ಬಿಲ್ಕಿಸ್​ ಬಾನು ಗರ್ಭಿಣಿಯಾಗಿದ್ದರು. ಅಷ್ಟೇ ಅಲ್ಲದೇ ಬಿಲ್ಕಿಸ್ ಬಾನು ಕುಟುಂಬದ 7 ಮಂದಿಯನ್ನು ಕೊಲ್ಲಲಾಗಿತ್ತು. ಸಾವೀಗೀಡಾದವರಲ್ಲಿ ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗಳು ಸಹ ಇದ್ದಾಳೆ.

ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದ್ದರು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್​ ನೀಡಿತ್ತು. ಪ್ರಕರಣ ಸಂಬಂಧ ಜನವರಿ 21, 2008 ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017 ಮೇ ತಿಂಗಳಲ್ಲಿ ಬಾಂಬೈ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು 14 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾದವರು 14 ವರ್ಷಗಳ ನಂತರ ಕ್ಷಮಾಪಣೆಗಾಗಿ ಅರ್ಜಿ ಸಲ್ಲಿಸಬಹುದು. ನಂತರ ಅರ್ಜಿಯನ್ನು ಪರಿಗಣಿಸುವುದು ಸರ್ಕಾರದ ನಿರ್ಧಾರವಾಗಿದೆ. ಇದರಂತೆ ಅಪರಾಧಿಗಳಲ್ಲಿ ಓರ್ವ ತನ್ನನ್ನು ಶೀಘ್ರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗುಜರಾತ್ ಸರ್ಕಾರ ಪಂಚಮಹಲ್ ನ ಜಿಲ್ಲಾಧಿಕಾರಿ ಸುಜಲ್ ಮೇತ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಈ ಎಲ್ಲ 11 ಆರೋಪಿಗಳಿಗೆ ಕ್ಷಮಾದಾನ ನೀಡಲು ಸರ್ವಾನುಮತದಿಂದ ನಿರ್ಧರಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಹೀಗಾಗಿ ಸ್ವಾತಂತ್ರ್ಯ ದಿನದಂದು ಇವರನ್ನು ಬಿಡುಗಡೆಗೊಳಿಸಲಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ