logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುಜರಾತ್ ಕೋಮು ಗಲಭೆಯ ಕಟುಸತ್ಯ ಬಿಚ್ಚಿಟ್ಟ ಬಿಲ್ಕಿಸ್ ಬಾನೊ ಪ್ರಕರಣ; ನೀವು ತಿಳಿಯಬೇಕಾದ 10 ಅಂಶಗಳು

ಗುಜರಾತ್ ಕೋಮು ಗಲಭೆಯ ಕಟುಸತ್ಯ ಬಿಚ್ಚಿಟ್ಟ ಬಿಲ್ಕಿಸ್ ಬಾನೊ ಪ್ರಕರಣ; ನೀವು ತಿಳಿಯಬೇಕಾದ 10 ಅಂಶಗಳು

Raghavendra M Y HT Kannada

Jan 08, 2024 01:03 PM IST

google News

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು

  • 2002ರ ಗುಜರಾತ್ ಕೋಮುಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನೊ ಪ್ರಕರಣದ 11 ಆರೋಪಿಗಳನ್ನು ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರದ ಆದೇಶವನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ.

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು

ದೆಹಲಿ: 2022 ರಲ್ಲಿ ನಡೆದಿದ್ದ ಗುಜರಾತ್ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ (Bilkis Bano Gangrape Case) ಹಾಗೂ ಆಕೆಯ ಕುಟುಂಬ ಸದಸ್ಯರ ಹತ್ಯೆ ಪ್ರಕರಣದ 11 ಅಪರಾಧಿಗಳ ಶಿಕ್ಷೆಯನ್ನು ಕಡಿತ ಮಾಡಿ ಜೈಲಿನಿಂದ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ರದ್ದು ಮಾಡಿದೆ.

ಇಂದು (ಜನವರಿ 8, ಸೋಮವಾರ) ಮಹತ್ವದ ಆದೇಶವನ್ನು ನೀಡಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗಳ ಶಿಕ್ಷೆಯನ್ನು ಕಡಿತ ಮಾಡಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಹಕ್ಕು ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ಕೋರ್ಟ್ ಹೇಳಿದೆ.

2002 ರಲ್ಲಿ ನಡೆದಿದ್ದ ಗೋಧ್ರಾ ಗಲಭೆ ಸಂದರ್ಭದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ತನ್ನ ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಿದ 11 ಜನ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿನ್ ಬಾನೊ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ, ಉಜ್ವಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠ 11 ದಿನಗಳ ವಿಚಾರಣೆಯ ನಂತರ 2023ರ ಅಕ್ಟೋಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.

2022ರ ಆಗಸ್ಟ್ 15 ರಂದು ಗುಜರಾತ್ ಸರ್ಕಾರ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ದೇಶಾದ್ಯಂತ ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಪರಾಧಿಗಳು ಉತ್ತಮ ನಡವಳಿಕೆ ಹೊಂದಿದ್ದಾರೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಅಪರಾಧಿಗಳು 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿ ಪೂರ್ಣಗೊಳಿಸಿರುವುದರಿಂದ ಜೊತೆಗೆ ಅವರ ನಡವಳಿಕೆ ಉತ್ತಮವಾಗಿರುವುದು ಕಂಡು ಬಂದಿದ್ದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಆರಂಭಿಸಿದ್ದರು. ಸಿಪಿಐ (ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ಲಕ್ನೋ ವಿವಿ ಮಾಜಿ ಕುಲಪತಿ ರೂಪ್ ರೇಖಾ ವರ್ಮಾ ಸೇರಿ ಹಲವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.

ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ತಿಳಿಯಬೇಕಾದ 10 ಅಂಶಗಳು

  1. 2002ರ ಫ್ರೆಬ್ರವರಿಯಲ್ಲಿ ನಡೆದ ಗುಜರಾತ್ ಗಲಭೆ ಸಂದರ್ಭದಲ್ಲಿ ಕರಸೇವಕರನ್ನು ಹೊತ್ತು ಸಾಬರಮತಿಗೆ ತೆರಳುತ್ತಿದ್ದ ರೈಲಿಗೆ ಗೋಧ್ರಾದಲ್ಲಿ ಬೆಂಕಿ ಹಚ್ಚಲಾಗಿತ್ತು. ರೈಲಿನಲ್ಲಿದ್ದ 59 ಕರಸೇವರು ಸುಟ್ಟು ಭಸ್ಮವಾಗಿದ್ದರು.
  2. ಗಲಭೆಗೆ ಹೆದರಿ 5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನೊ ತನ್ನ 3 ವರ್ಷದ ಪುತ್ರಿ ಹಾಗೂ ಕುಟುಂಬದ 15 ಸದಸ್ಯರೊಂದಿಗೆ ತಮ್ಮ ಗ್ರಾಮವಾದ ರಂಧಿಕ್‌ಪುರವನ್ನು ತೊರೆದರು. ಛಪವಾರ್ಡ್ ಜಿಲ್ಲೆಯಲ್ಲಿ ಆಶ್ರಯ ಪಡೆದರು.
  3. 2002ರ ಮಾರ್ಚ್ 3 ರಂದು ಸುಮಾರು 20 ರಿಂದ 30 ಜನರ ಗುಂಪು ಶಸ್ತ್ರಸಜ್ಜಿತವಾಗಿ ಬಂದು ಬಿಲ್ಕಿಸ್ ಮತ್ತು ಆಕೆಯ ಕುಟುಂಬದ ಮೇಲೆ ದಾಳಿ ಮಾಡಿತು. ದಾಳಿಕೋರರಲ್ಲಿ 11 ಮಂದಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ರಾಧಿಕಪುರದ ಗ್ರಾಮದ 17 ಸದಸ್ಯರ ಪೈಕಿ 8 ಮಂದಿ ಶವವಾಗಿ ಪತ್ತೆ, 6 ಮಂದಿ ಕಾಣೆಯಾಗಿದ್ದರು.
  4. ಒಂದು ವರದಿಯ ಪ್ರಕಾರ ಬಿಲ್ಕಿಸ್ ಬಾನೊ ಮತ್ತು ಆಕೆಯ 3 ವರ್ಷದ ಮಗು ಜೀವಂತವಾಗಿದ್ದರು. ಸಂತ್ರಸ್ತೆ (ಬಿಲ್ಕಿಸ್) ಗೆ ಪ್ರಜ್ಞೆ ಬಂದ ನಂತರ ಆದಿವಾಸಿ ಮಹಿಳೆಯರಿಂದ ಬಟ್ಟೆಗಳನ್ನು ಪಡೆದು ಲಿಮ್ಖೇಡಾ ಪೊಲೀಸ್ ಠಾಣೆಗೆ ಬಂದು ಆಕೆ ದೂರು ನೀಡುತ್ತಾರೆ. ಗೋಧ್ರಾ ಪರಿಹಾರ ಶಿಬಿರ ತಲುಪಿದ ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಕೆಗೆ ದೈಹಿಕ ಪರೀಕ್ಷೆ ನಡೆಸಲಾಗಿದೆ.
  5. ಘಟನೆ ನಂತರ ಸಾಕಷ್ಟು ಪುರಾವೆಗಳನ್ನು ಉಲ್ಲೇಖಿಸಿ ಸ್ಥಳೀಯ ಪೊಲೀಸರಿಂದ ಪ್ರಕರಣ ತಿರಸ್ಕೃತ. ಅಂತಿಮವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಆರಂಭ.
  6. 2003ರಲ್ಲಿ ಸಿಬಿಐ ಪ್ರಕರಣದ ತನಿಖೆಗೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ. 2004ರಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಅಹಮದಾಬಾದ್‌ನಲ್ಲಿ ಸಿಬಿಐ ಅಧಿಕಾರಿಗಳಿಂದ ವಿಚಾರಣೆ ಆರಂಭ
  7. ಸಿಬಿಐ ಸಂಗ್ರಹಿಸಿದ ಸಾಕ್ಷ್ಯಗಳನ್ನು ತಿರುಚಬಹುದೆಂದು ಬಿಲ್ಕಿಸ್ ಬಾನೊ ಅವರಿಂದ ಆತಂಕ ವ್ಯಕ್ತ. ಆ ನಂತರ ಪ್ರಕರಣವನ್ನು ಅಹಮದಾಬಾದ್‌ನಿಂದ ಮುಂಬೈಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
  8. 2008 ರಲ್ಲಿ ಆರೋಪಿಗಳ ಕೃತ್ಯ ಸಾಬೀತು ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಮಹತ್ವದ ಆದೇಶ
  9. ರಾಧೇಶ್ಯಾಮ್ ಶಾ, ಜಸ್ವಂತ್ ಚತುರ್ಭಾಯಿ ನಾಯ್, ಕೇಶುಭಾಯಿ ವಡಾನಿಯಾ, ಬಕಾಭಾಯಿ ವಡಾನಿಯಾ, ರಾಜಿಭಾಯಿ ಸೋನಿ, ರಮೇಶ್ ಭಾಯಿ ಚೌಹಾಣ್, ಶೈಲೇಶಭಾಯ್ ಭಟ್, ಬಿಪಿನ್ ಚಂದ್ರ ಜೋಶಿ, ಗೋವಿಂದಭಾಯ್ ನಾಯ್, ಮಿತೇಶ್ ಭಟ್ ಹಾಗೂ ಪ್ರದೀಪ್ ಮೋದಿಯಾ ಅಪರಾಧಿಗಳು
  10. ಉತ್ತಮ ನಡವಳಿಕೆ ಆಧಾರದ ಮೇಲೆ 2022ರ ಆಗಸ್ಟ್ 15 ರಂದು ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣ 11 ಅಪರಾಧಿಗಳನ್ನು ಬಿಡುಗಡೆ. ಆ ಬಳಿಕ ಸಂತ್ರಸ್ತೆಯಿಂದ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಆರಂಭ. ಇಂದು (ಜನವರಿ 8, ಸೋಮವಾರ) ಸುಪೀಂ ಕೋರ್ಟ್‌ನಿಂದ ಗುಜರಾತ್ ಸರ್ಕಾರದ ಆದೇಶ ರದ್ದಾಗಿದ್ದು, 11 ಮಂದಿ ಅಪರಾಧಿಗಳು ಮತ್ತೆ ಜೈಲಿಗೆ ಹೋಗಬೇಕಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ