Brazil Beauty Pageant: ಬ್ರೆಜಿಲ್ ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ 2ನೇ ಸ್ಥಾನ; ಕಿರೀಟ ಎತ್ತಿ ನೆಲಕ್ಕೆ ಬಡಿದ ಪತಿರಾಯ VIDEO
Jun 01, 2023 04:30 PM IST
ಬ್ರೆಜಿಲ್ ಸೌಂದರ್ಯ ಸ್ಪರ್ಧೆ
- Miss Gay Mato Grosso 2023: ಬ್ರೆಜಿಲ್‌ನ ಸೌಂದರ್ಯ ಸ್ಪರ್ಧೆಯಲ್ಲಿ ನತಲ್ಲಿ ಬೆಕರ್ ಎಂಬವರು ರನ್ನರ್ ಅಪ್ ಆಗಿದ್ದಾರೆ. ಪತ್ನಿಗೆ ಎರಡನೇ ಸ್ಥಾನ ಬಂದಿದ್ದಕ್ಕೆ ಕೋಪಗೊಂಡ ಆಕೆಯ ಪತಿ ವೇದಿಕೆಯ ಮೇಲೆಯೇ ಕಿರೀಟವನ್ನು ಎತ್ತಿ ಬಡಿದಿದ್ದಾನೆ.
ಸ್ಪರ್ಧೆಗಳಲ್ಲಿ ಸೋಲು-ಗೆಲುವು ಎರಡನ್ನೂ ಒಪ್ಪಿಕೊಳ್ಳಲೇಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಸೋತಿದನ್ನ ಸಹಿಸಿಕೊಳ್ಳಲೇ ಇಲ್ಲ. ಬದಲಾಗಿ , ಸೌಂದರ್ಯ ಸ್ಪರ್ಧೆಯ ವೇದಿಕೆಯ ಮೇಲೆ ರಂಪ-ರಾಮಾಯಣ ಮಾಡಿದ್ದಾನೆ. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬ್ರೆಜಿಲ್‌ನ ಸೌಂದರ್ಯ ಸ್ಪರ್ಧೆಯಲ್ಲಿ ನತಲ್ಲಿ ಬೆಕರ್ ಎಂಬವರು ರನ್ನರ್ ಅಪ್ ಆಗಿದ್ದಾರೆ. ಪತ್ನಿಗೆ ಎರಡನೇ ಸ್ಥಾನ ಬಂದಿದ್ದಕ್ಕೆ ಕೋಪಗೊಂಡ ಆಕೆಯ ಪತಿ ವೇದಿಕೆಯ ಮೇಲೆಯೇ ಕಿರೀಟವನ್ನು ಎತ್ತಿ ಬಡಿದಿದ್ದಾನೆ.
ಘಟನೆಯ ವಿವರ
ಮೇ 27 ರಂದು ಬ್ರೆಜಿಲ್‌ನಲ್ಲಿ LGBTQ+ ಸೌಂದರ್ಯ ಸ್ಪರ್ಧೆಯಾದ ಮಿಸ್ ಗೇ ಮಾಟೊ ಗ್ರೊಸೊ 2023 ಫೈನಲ್ ನಡೆದಿದೆ. ನತಲ್ಲಿ ಬೆಕರ್ ಮತ್ತು ಇಮಾನ್ಯುಲಿ ಬೆಲಿನಿ ಎಂಬವರು ಫೈನಲಿಸ್ಟ್‌ಗಳಾಗಿದ್ದರು. ಇವರಿಬ್ಬರು ಕೈ ಕೈ ಹಿಡಿದುಕೊಂಡು ವಿನ್ನರ್ ಯಾರು ಎಂದು ಘೋಷಿಸುವುದನ್ನು ಆಲಿಸುತ್ತಾ ಇದ್ದರು. ಉತ್ಸಾಹಿ ಪ್ರೇಕ್ಷಕರು ಇಬ್ಬರನ್ನೂ ಹುರಿದುಂಬಿಸುತ್ತಿದ್ದರು. ಕೆಲವು ಸೆಕೆಂಡುಗಳ ಕುತೂಹಲದ ಬಳಿಕ ಇಮಾನ್ಯುಲಿ ಬೆಲಿನಿ ಅವರನ್ನು ಮಿಸ್ ಗೇ ಮಾಟೊ ಗ್ರೊಸೊ 2023 ಸೌಂದರ್ಯ ಸ್ಪರ್ಧೆಯ ವಿಜೇತರೆಂದು ಘೋಷಿಸಲಾಯಿತು.
ಇನ್ನೇನು ಕಿರೀಟವನ್ನು ವಿಜೇತರಿಗೆ ತೊಡಿಸಬೇಕು ಎನ್ನುವಷ್ಟರಲ್ಲಿ ವೇದಿಕೆ ಹತ್ತಿದ ನತಲ್ಲಿ ಬೆಕರ್ ಅವರ ಪತಿ, ಕಿರೀಟವನ್ನು ಎತ್ತಿ ಎರಡು ಬಾರಿ ನೆಲಕ್ಕೆ ಬಡಿದಿದ್ದಾನೆ. ಭದ್ರತಾ ತಂಡವು ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ಹೊರಗೆ ಕರೆದೊಯ್ದಿದ್ದಾರೆ. ವೇದಿಕೆ ಮೇಲೆ ಕೆಲಕಾಲ ಗಜಿಬಿಜಿಯ ಸಂದರ್ಭ ಉಂಟಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪರ್ಧೆಯ ಸಂಯೋಜಕರಾದ ಮ್ಯಾಲೋನ್ ಹೇನಿಶ್, "ಅವರು ಫಲಿತಾಂಶವನ್ನು ನ್ಯಾಯಯುತವೆಂದು ಪರಿಗಣಿಸದೆ ಈ ಎಲ್ಲಾ ಗದ್ದಲ ಮತ್ತು ಹಾನಿಯನ್ನು ಉಂಟುಮಾಡಿದರು. ವಿಜೇತ ಸುಂದರಿಯ ಕಿರೀಟವನ್ನು ಅಲಂಕರಿಸುವ ಸಮಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಮಿಸ್ ಕ್ಯುಯಾಬಾ ಅವರ ಪತಿ ವೇದಿಕೆಯ ಮೇಲೆ ಬಂದು ಕಿರೀಟವನ್ನು ಆಕ್ರಮಣಕಾರಿಯಾಗಿ ನಾಶಪಡಿಸಿದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸ್ಪರ್ಧೆಯ ತೀರ್ಪುಗಾರರು ಇಮಾನ್ಯುಲಿ ಬೆಲಿನಿ ಅವರನ್ನು ವಿಜೇತರೆಂದು ಘೋಷಿಸಿದ್ದು ನ್ಯಾಯಯುತವಾಗಿದೆ" ಎಂದು ಹೇಳಿದ್ದಾರೆ.