Rishi Sunak: 18 ವರ್ಷ ವಯಸ್ಸಿನವರೆಗೆ ಗಣಿತ ಕಡ್ಡಾಯ: ಬ್ರಿಟನ್ ವಿದ್ಯಾರ್ಥಿಗಳಿಗೆ ರಿಷಿ ಸುನಕ್ ಕೊಡಲಿದ್ದಾರೆ ಕಜ್ಜಾಯ
Jan 05, 2023 01:07 PM IST
ರಿಷಿ ಸುನಕ್ (ಸಂಗ್ರಹ ಚಿತ್ರ)
- ಬ್ರಿಟನ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು 18 ವರ್ಷ ವಯಸ್ಸಿನವರೆಗೆ, ಗಣಿತವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಪ್ರಧಾನಮಂತ್ರಿ ರಿಷಿ ಸುನಕ್ ಸರ್ಕಾರ ಆದೇಶ ಹೊರಡಿಸಲಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ರಿಷಿ ಸುನಕ್ ಅವರ ಕಚೇರಿಯು, ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯ ಆಸಕ್ತಿ ಮೂಡಿಸುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದೆ.
ಲಂಡನ್: ಬ್ರಿಟನ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು 18 ವರ್ಷ ವಯಸ್ಸಿನವರೆಗೆ, ಗಣಿತವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಪ್ರಧಾನಮಂತ್ರಿ ರಿಷಿ ಸುನಕ್ ಸರ್ಕಾರ ಆದೇಶ ಹೊರಡಿಸಲಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ರಿಷಿ ಸುನಕ್ ಅವರ ಕಚೇರಿಯು, ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯ ಆಸಕ್ತಿ ಮೂಡಿಸುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದೆ.
2023ರ ಹೊಸ ವರ್ಷದಲ್ಲಿ ತಮ್ಮ ಸರ್ಕಾರದ ಆದ್ಯತೆಗಳೇನು ಎಂಬುದನ್ನು, ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಹೊಸ ವರ್ಷದ ಮೊದಲ ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಗಣಿತ ಕಲಿಕೆ ಕಡ್ಡಾಯ ಕೂಡ ಈ ಆದ್ಯತೆಗಳಲ್ಲಿ ಒಂದು ಎನ್ನಲಾಗಿದೆ.
"ಶಿಕ್ಷಣವು ನನಗೆ ಜೀವನದಲ್ಲಿ ಎದುರಾದ ಎಲ್ಲಾ ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸುವ ಶಕ್ತಿ ನೀಡಿದೆ. ಅದೇ ರೀತಿ ಬ್ರಿಟನ್‌ನ ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಎದುರಾಗುವ ಸವಾಲುಗಳನ್ನು ಎದುರಿಸಿ, ಅವಕಾಶಗಳನ್ನು ಮುಕ್ತವಾಗಿ ಬಾಚಿಕೊಳ್ಳಬೇಕು. ಜಾಗತಿಕ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಲು ಗಣಿತ ಶಿಕ್ಷಣ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಗಣಿತ ಕಲಿಕೆಗೆ ಒತ್ತು ನೀಡಬೇಕು.." ಎಂದು ರಿಷಿ ಸುನಕ್ ಮನವಿ ಮಾಡಿಕೊಂಡಿದ್ದಾರೆ.
" ಪ್ರತಿ ಮಗುವಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಗುರಿಯೊಂದಿಗೆ ನಾನು ರಾಜಕೀಯಕ್ಕೆ ಬಂದಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವುದೇ ನನ್ನ ಪ್ರಮುಖ ಆದ್ಯತೆ. ಸರಿಯಾದ ಯೋಜನೆಯೊಂದಿಗೆ ಮತ್ತು ಶ್ರೇಷ್ಠ ಬದ್ಧತೆಯೊಂದಿಗೆ ನಾವು ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ರಾಷ್ಟ್ರವಾಗಬಹುದು ಎಂಬುದು ನನ್ನ ಬಲವಾದ ನಂಬಿಕೆ.." ಎಂದು ರಿಷಿ ಸುನಕ್ ಅವರ ಹೊಸ ವರ್ಷದ ಮೊದಲ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.
ಇಂಗ್ಲೆಂಡ್‌ನಲ್ಲಿ ಸುಮಾರು 8 ಮಿಲಿಯನ್ ವಯಸ್ಕರು, ಪ್ರಾಥಮಿಕ ಶಾಲಾ ಮಕ್ಕಳು ಹೊಂದಿರುವಷ್ಟೇ ಸಂಖ್ಯಾಶಾಸ್ತ್ರದ ಕೌಶಲ್ಯವನ್ನು ಹೊಂದಿದ್ದಾರೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ರಾಷ್ಟ್ರ ಕಟ್ಟುವ ಪ್ರಕ್ರಿಯೆಯಲ್ಲಿ ಗಣಿತ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಗಣಿತ ಕಲಿಕೆ ಪ್ರಮಾಣದಲ್ಲಿ ಸುಧಾರಣೆಯನ್ನು ಸಾಧಿಸುವುದು ತಮ್ಮ ಸರ್ಕಾರದ ಪ್ರಥಮ ಆದ್ಯತೆ ಎಂದು ರಿಷಿ ಸುನಕ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಇಂಗ್ಲೆಂಡ್‌ನಲ್ಲಿ 16-19 ವರ್ಷ ವಯಸ್ಸಿನ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಗಣಿತವನ್ನು ಅಧ್ಯಯನ ಮಾಡುತ್ತಾರೆ. ಬಹುತೇಕ ವಿದ್ಯಾರ್ಥಿಗಳು ಗಣಿತವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಶೇ.60ರಷ್ಟು ಜನರು ಯಾವುದೇ ಮೂಲಭೂತ ಗಣಿತ ಕೌಶಲ್ಯಗಳನ್ನು ಹೊಂದಿಲ್ಲ ಎಂದು ಅಂಕಿಅಂಶಗಳಿಂದ ತಿಳಿದು ಬರುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
"ಇಂದು ಶಿಕ್ಷಣದಲ್ಲಿ ನಮಗೆ ಅಗತ್ಯವಿರುವ ಮನಸ್ಥಿತಿಯಲ್ಲಿನ ಒಂದು ದೊಡ್ಡ ಬದಲಾವಣೆಯೆಂದರೆ, ಸಂಖ್ಯಾಶಾಸ್ತ್ರ ಕಲಿಕೆಗೆ ಸಂಬಂಧಿಸಿದಂತೆ ನಮ್ಮ ವಿಧಾನವನ್ನು ಮರು ರೂಪಿಸುವುದು. ಡೇಟಾ ಮತ್ತು ಅಂಕಿ ಅಂಶಗಳು ಪ್ರತಿ ಕೆಲಸಕ್ಕೂ ಆಧಾರವಾಗಿರುವ ಈ ಜಗತ್ತಿನಲ್ಲಿ, ನಮ್ಮ ಮಕ್ಕಳ ಉದ್ಯೋಗಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ವಿಶ್ಲೇಷಣಾತ್ಮಕ ಕೌಶಲ್ಯಗಳು ಬೇಕಾಗುತ್ತವೆ. ನಮ್ಮ ಮಕ್ಕಳು ಆ ಕೌಶಲ್ಯವಿಲ್ಲದೆ ಜಗತ್ತಿನಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಸಾಧ್ಯವಿಲ್ಲ. ಹೀಗಾಗಿ ವಿವಿಧ ಪ್ರಕಾರದ ಗಣಿತ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸುವ ನಿರ್ಧಾರ ಮಾಡಲಾಗಿದೆ.." ಎಂದು ರಿಷಿ ಸುನಕ್ ಅವರ ಭಾಷಣದಲ್ಲಿ ಉಲ್ಲೇಖ ಮಾಡಲಾಗಿದೆ.
ಈ ನಿರ್ಧಾಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಅಸ್ತಿತ್ವದಲ್ಲಿರುವ ಮಾರ್ಗಗಳನ್ನು ಅನುಸರಿಸಿಯೇ, ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯ ಮೇಲೆ ಆಸಕ್ತಿ ಮೂಡುವಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಹೆಚ್ಚು ನವೀನ ಆಯ್ಕೆಗಳತ್ತಲೂ ಗಮನ ಹರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ವಿಭಾಗ