EPFO Interest: ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇ 8.15 ಬಡ್ಡಿ ಘೋಷಿಸಿದ ಇಪಿಎಫ್‌ಒ, ಪಿಎಫ್ ಬ್ಯಾಲೆನ್ಸ್ ಪರಿಶೀಲನೆಗೆ ಇಲ್ಲಿದೆ ಸರಳ ವಿಧಾನ
Jul 24, 2023 03:15 PM IST
EPFO Interest: ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇ 8.15 ಬಡ್ಡಿ ಘೋಷಿಸಿದ ಇಪಿಎಫ್‌ಒ, ಪಿಎಫ್ ಬ್ಯಾಲೆನ್ಸ್ ಪರಿಶೀಲನೆಗೆ ಇಲ್ಲಿದೆ ಸರಳ ವಿಧಾನ
- EPFO Interest Rate: 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ ಶೇಕಡ 8.15 ಬಡ್ಡಿ ದರವನ್ನು ಇಪಿಎಫ್‌ಒ ಘೋಷಿಸಿದೆ. ಈ ಸುದ್ದಿಯೊಂದಿಗೆ What is EPF ಮತ್ತು How to check EPF balance ಎಂಬ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ.
ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಪಿಎಫ್ ಖಾತೆಗೆ ಸಂಬಂಧಪಟ್ಟಂತೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಪ್ರಮುಖ ಸುತ್ತೋಲೆ ಪ್ರಕಟಿಸಿದೆ. 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ ಶೇಕಡ 8.15 ಬಡ್ಡಿ ದರವನ್ನು ಘೋಷಿಸಿದೆ. ಜುಲೈ 24ರಂದು ಈ ಕುರಿತು ಅಧಿಕೃತ ಸುತ್ತೋಲೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಕಟಿಸಿದೆ.
ಸುತ್ತೋಲೆಯಲ್ಲಿ ಏನಿದೆ?
1952 ರ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, 1952 ರ ಪ್ಯಾರಾ 60 (1) ರ ಅಡಿಯಲ್ಲಿ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿ 6 ಯೋಜನೆಯಡಿಯಲ್ಲಿನ ಪ್ರತಿ ಸದಸ್ಯನ ಖಾತೆಗೆ ಇಪಿಎಫ್ 6 ಯೋಜನೆಯಡಿ ಶೇಕಡ 8.15 ಬಡ್ಡಿದರ ನಿಗದಿಪಡಿಸಿದೆ. 2022-23 ರ ಅವಧಿಯಲ್ಲಿ ಪ್ರತಿ ಸದಸ್ಯರ ಖಾತೆಗಳಿಗೆ ಇಷ್ಟು ಬಡ್ಡಿದರ ಜಮಾ ಮಾಡಲು ಸಂಬಂಧಪಟ್ಟ ವಿಭಾಗಕ್ಕೆ ಅಗತ್ಯ ಸೂಚನೆಗಳನ್ನು ನೀಡಲು ವಿನಂತಿಸಲಾಗಿದೆ ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.
ಇಪಿಎಫ್ ಎಂದರೇನು?
ಬಹುತೇಕರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಎಂದರೆ ಏನೆಂದು ತಿಳಿದಿರಬಹುದು. ಉದ್ಯೋಗಿಗಳು ಸಾಮಾನ್ಯವಾಗಿ ಪಿಎಫ್ ಖಾತೆ ಹೊಂದಿರುತ್ತಾರೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ನೀಡುವ ಕಡ್ಡಾಯ ಕೊಡುಗೆ ಇದಾಗಿದೆ. ಉದ್ಯೋಗದಾತರು ಇಪಿಎಫ್ ಖಾತೆಗೆ ಹೊಂದಾಣಿಕೆಯ ಕೊಡುಗೆ ನೀಡಬೇಕು. ಅಂದರೆ ಒಂದು ಪಾಲು ಉದ್ಯೋಗಿಯ ವೇತನದಿಂದ ಮತ್ತೊಂದು ಪಾಲು ಕಂಪನಿಯ ಲೆಕ್ಕದಲ್ಲಿ ನೀಡಲಾಗುತ್ತದೆ. ಉದ್ಯೋಗಿಯು ತನ್ನ ಇಪಿಎಫ್ ಖಾತೆಗೆ ಗಳಿಕೆಯ ಶೇಖಡ 12 ಕೊಡುಗೆ ನೀಡುತ್ತಾನೆ. ಉದ್ಯೋಗದಾತರು ನೀಡುವ ಹಣದಲ್ಲಿ ಶೇಕಡ 3.67 ಮೊತ್ತವನ್ನು ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಉಳಿದ ಶೇಕಡ 8.33 ಪಾಲು ನೌಕರರ ಪಿಂಚಣಿ ಯೋಜನೆ ಅಥವಾ ಇಪಿಎಸ್‌ಗೆ ಹೋಗುತ್ತದೆ.
ಇಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ?
ಈ ನಾಲ್ಕು ಹಂತಗಳ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯಲ್ಲಿರುವ ಬ್ಯಾಲೆನ್ಸ್ ಪರಿಶೀಲಿಸಬಹುದು.
- Umang app ಮೂಲಕ
- ಇಪಿಎಫ್ ಮೆಂಬರ್ ಇ ಸೇವಾ ಪೋರ್ಟಲ್‌ಗೆ (EPF member e-sewa portal) ಭೇಟಿ ನೀಡುವ ಮೂಲಕ
- ಮಿಸ್ ಕಾಲ್ ನೀಡುವ ಮೂಲಕ
- ಎಸ್‌ಎಂಎಸ್ ಕಳುಹಿಸುವ ಮೂಲಕ
ಉಮಾಂಗ್ ಆಪ್‌ನಲ್ಲಿ ಬ್ಯಾಲೆನ್ಸ್ ಪರಿಶೀಲನೆ ಹೇಗೆ?
- Umang app ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಮಾಡಿ
- ಇಪಿಎಫ್‌ಒ ಆಯ್ಕೆ ಕ್ಲಿಕ್ ಮಾಡಿ
- ಪಾಸ್‌ಬುಕ್ ಕ್ಲಿಕ್ ಮಾಡಿ
- ಯುಎಎನ್ ಸಂಖ್ಯೆ ನಮೂದಿಸಿ
- ಒಟಿಪಿ ನಮೂದಿಸಿ
- ಲಾಗಿನ್ ಆಯ್ಕೆ ಮಾಡಿ.
- ಪಾಸ್‌ಬುಕ್ ವಿಭಾಗದಲ್ಲಿ ಇಪಿಎಫ್ ಬ್ಯಾಲೆನ್ಸ್ ನೋಡಬಹುದು.
ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?
- ಮೊದಲಿಗೆ www.epfindia.gov.in ವೆಬ್‌ಸೈಟ್‌ಗೆ ಹೋಗಿ
- ಯುಎಎನ್ ಮತ್ತು ಪಾಸ್ವರ್ಡ್ ನೀಡಿ ಲಾಗಿನ್ ಆಗಿ
- ಮೆಂಬರ್ ಪಾಸ್‌ಬುಕ್ ಕ್ಲಿಕ್ ಮಾಡಿ
- ಪಾಸ್‌ಬುಕ್‌ನಲ್ಲಿ ಬ್ಯಾಲೆನ್ಸ್ ಮೊತ್ತವನ್ನು ಪರಿಶೀಲಿಸಿ