logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್ ಪುಟಿದೇಳಲು ಕಾರಣವಾದವು ಈ 13 ಷೇರುಗಳು - Closing Bell

ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್ ಪುಟಿದೇಳಲು ಕಾರಣವಾದವು ಈ 13 ಷೇರುಗಳು - Closing Bell

Umesh Kumar S HT Kannada

Aug 12, 2024 04:02 PM IST

google News

ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್ ಪುಟಿದೇಳಲು ಕಾರಣವಾದವು ಈ 13 ಷೇರುಗಳು. (ಸಾಂಕೇತಿಕ ಚಿತ್ರ)

  • Closing Bell Aug 12; ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿಗಳು ಸೋಮವಾರ (ಆಗಸ್ಟ್ 12) ಹೆಚ್ಚು ಕಡಿಮೆ ಏರಿಳಿತದ ಕಲಾಪ ಕಂಡವು. ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಪುಟಿದೇಳಲು 13 ಷೇರುಗಳು ಕಾರಣವಾದವು. ನಿಫ್ಟಿ ಕೂಡ ಚೇತರಿಸಿದ್ದು, ನಷ್ಟ ಭರ್ತಿ ಮಾಡಿಕೊಂಡಿತು.

ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್ ಪುಟಿದೇಳಲು ಕಾರಣವಾದವು ಈ 13 ಷೇರುಗಳು. (ಸಾಂಕೇತಿಕ ಚಿತ್ರ)
ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್ ಪುಟಿದೇಳಲು ಕಾರಣವಾದವು ಈ 13 ಷೇರುಗಳು. (ಸಾಂಕೇತಿಕ ಚಿತ್ರ)

ಮುಂಬಯಿ: ಭಾರತದ ಷೇರುಪೇಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿಗಳು ಸೋಮವಾರ (ಆಗಸ್ಟ್ 12) ಹೆಚ್ಚು ಕಡಿಮೆ ಏರಿಳಿತದ ಕಲಾಪ ಕಂಡಿತಾದರೂ ಇಂಟ್ರಾ ಡೇ ವಹಿವಾಟಿನಲ್ಲಿ ಚೇತರಿಕೆ ಕಂಡು ನಷ್ಟ ಭರ್ತಿ ಮಾಡುವ ರೀತಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿವೆ.

ದಿನದ ವಹಿವಾಟಿನ ಕೊನೆಗೆ ಸೆನ್ಸೆಕ್ಸ್ 56.99 ಪಾಯಿಂಟ್‌ (0.07%) ಕುಸಿದು 79,648.92 ಕ್ಕೆ ತಲುಪಿತು. ನಿಫ್ಟಿ ಸೂಚ್ಯಂಕವು 20.50 ಪಾಯಿಂಟ್‌ (0.08%) ಕುಸಿದು 24,347.00 ಕ್ಕೆ ತಲುಪಿತು. ಸುಮಾರು 1760 ಷೇರುಗಳು ಲಾಭದ ವಹಿವಾಟು ನಡೆಸಿದರೆ, 1801 ಷೇರುಗಳು ನಷ್ಟ ಅನುಭವಿಸಿವೆ. 87 ಷೇರುಗಳ ಮೌಲ್ಯ ಸ್ಥಿರವಾಗಿದ್ದವು.

ಜಾಗತಿಕ ಷೇರುಪೇಟೆ ವಹಿವಾಟು ಏರುಮುಖವಾಗಿದ್ದ ವೇಳೆ, ಭಾರತೀಯ ಷೇರುಪೇಟೆ ನಿರೀಕ್ಷೆಯಂತೆ ಕುಸಿತ ಅನುಭವಿಸಿತ್ತಾದರೂ ನಂತರ ಚೇತರಿಸಿಕೊಂಡು ನಷ್ಟವನ್ನು ಭರ್ತಿ ಮಾಡಿಕೊಂಡಿತ್ತು. ಹಿಂಡೆನ್‌ಬರ್ಗ್-ಸೆಬಿ ವಿವಾದದ ನಡುವೆ ಸೋಮವಾರದ ವಹಿವಾಟು ಶುರುವಾಗಿತ್ತು.

ಹಿಂಡೆನ್‌ಬರ್ಗ್‌ ವರದಿ ಹೊಡೆತಕ್ಕೆ 400 ಅಂಶಗಳಷ್ಟು ಕುಸಿತ ಕಂಡ ಸೆನ್ಸೆಕ್ಸ್‌

ಷೇರುಪೇಟೆ ವಹಿವಾಟು ಸೋಮವಾರ ಬೆಳಗ್ಗೆ ಶುರುವಾದಾಗ ಸೆನ್ಸೆಕ್ಸ್ 218.65 ಅಂಶ (0.27%) ಕುಸಿತ ಕಂಡು 79,487.26ಕ್ಕೆ ಇಳಿಯಿತು. ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್ ಮತ್ತೆ ಒಟ್ಟು 375.79 ಅಂಶ (0.47%) ಇಳಿಕೆಯಾಗಿ 79,330.12ರಲ್ಲಿ ವಹಿವಾಟು ನಡೆಸಿತ್ತು. ಇನ್ನೊಂದೆಡೆ, ನಿಫ್ಟಿ 50 ಸೂಚ್ಯಂಕ ಆರಂಭಿಕ ಹಂತದಲ್ಲಿ 47.45 ಅಂಶ (0.19%) ಕುಸಿತ ಕಂಡಿತ್ತಾದರೂ ಬಳಿಕ, ಒಟ್ಟು 82.55 ಅಂಶ (0.34%) ಕುಸಿದು 24,284.95 ರಲ್ಲಿ ವಹಿವಾಟು ಶುರುಮಾಡಿವೆ.

ಆದಾಗ್ಯೂ, ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ - ಇಂಟ್ರಾಡೇ ವಹಿವಾಟಿನಲ್ಲಿ ಏರುಮುಖ ಅಂದರೆ ಲಾಭದ ವಹಿವಾಟು ಶುರುಮಾಡಿದವು. ಸೆನ್ಸೆಕ್ಸ್ ಇಂದು 400 ಪಾಯಿಂಟ್‌ಗಿಂತ ಕುಸಿದಿತ್ತಾದರೂ ಮತ್ತೆ 200 ಅಂಶಗಳಷ್ಟು ಏರಿಕೆ ದಾಖಲಿಸಿ 79,900ರ ಹಂತದಲ್ಲಿ ವಹಿವಾಟು ನಡೆಸಿತು. ಮತ್ತೊಂದೆಡೆ, ನಿಫ್ಟಿ 50 ಸೂಚ್ಯಂಕವು ಸುಧಾರಿಸಿಕೊಂಡು 24,400ರ ಆಸುಪಾಸಿನಲ್ಲಿ ವಹಿವಾಟು ನಡೆಸಿತು.

ಸೆನ್ಸೆಕ್ಸ್‌ ಚೇತರಿಕೆಗೆ ಈ 13 ಷೇರುಗಳು ಕಾರಣ

ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಕೋಟಕ್ ಬ್ಯಾಂಕ್, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್ ಕಂಪನಿ ಷೇರುಗಳು ಒಟ್ಟಾರೆ ಷೇರು ಸೂಚ್ಯಂಕಗಳ ಚೇತರಿಕೆಗೆ ನೇತೃತ್ವ ವಹಿಸಿದವು. ಈ ಷೇರುಗಳು ಶೇ.0.4 ರಿಂದ ಶೇ.1.7 ರ ವ್ಯಾಪ್ತಿಯಲ್ಲಿ ಏರಿಕೆ ಕಂಡಿವೆ.

ಸೆನ್ಸೆಕ್ಸ್ ಪಟ್ಟಿಯಲ್ಲಿರುವ 30 ಷೇರುಗಳ ಪೈಕಿ 13 ಷೇರುಗಳು ಲಾಭದ ವಹಿವಾಟು ನಡೆಸಿದ ಕಾರಣ ಸೆನ್ಸೆಕ್ಸ್ ಆರಂಭಿಕ ಕುಸಿತದಿಂದ ಪಾರಾಗಿ ಮತ್ತೆ ಹಳೆಯ ಸ್ತರವನ್ನು ಸಮೀಪಿಸಿತು. ಆಕ್ಸಿಸ್ ಬ್ಯಾಂಕ್‌, ಇನ್ಫೋಸಿಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಮೋಟಾರ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಏಷ್ಯನ್ ಪೇಂಟ್ಸ್‌, ಮಾರುತಿ, ಟೆಕ್‌ ಮಹಿಂದ್ರಾ, ಟಾಟಾ ಸ್ಟೀಲ್‌, ಹಿಂದುಸ್ತಾನ್ ಲಿವರ್‌, ಸನ್‌ಫಾರ್ಮಾ, ಕೊಟಾಕ್‌ ಬ್ಯಾಂಕ್‌, ಇಂಡಸ್ಇಂಡ್ ಬ್ಯಾಂಕ್ ಷೇರುಗಳು ಲಾಭದ ವಹಿವಾಟು ನಡೆಸಿದವು. ಅದಾನಿ ಪೋರ್ಟ್ಸ್ ಮತ್ತು ಎನ್‌ಟಿಪಿಸಿ ಶೇಕಡ 2 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದವು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ