ಹಿಂಡೆನ್‌ಬರ್ಗ್ ವರದಿ ಪರಿಣಾಮ ಕುಸಿತದೊಂದಿಗೆ ವಹಿವಾಟು ಶುರುಮಾಡಿದ ಷೇರುಪೇಟೆ, ಸೆನ್ಸೆಕ್ಸ್ 218 ಅಂಶ, ನಿಫ್ಟಿ 83 ಅಂಶ ಕುಸಿತ- Opening Bell
Aug 12, 2024 09:57 AM IST
ಹಿಂಡೆನ್‌ಬರ್ಗ್ ವರದಿ ಪರಿಣಾಮ ಕುಸಿತದೊಂದಿಗೆ ವಹಿವಾಟು ಶುರುಮಾಡಿದ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 218 ಅಂಶ, ನಿಫ್ಟಿ 83 ಅಂಶ ಕುಸಿತ ಕಂಡಿದೆ.
Indian Stock Market Opening Bell; ನಿರೀಕ್ಷೆಯಂತೆಯೇ ಭಾರತದ ಷೇರುಪೇಟೆ ಇಂದು (ಆಗಸ್ಟ್ 12) ಕುಸಿತದೊಂದಿಗೆ ವಹಿವಾಟು ಶುರುಮಾಡಿದೆ. ಹಿಂಡೆನ್‌ಬರ್ಗ್ ವರದಿ ಪರಿಣಾಮ ಉಂಟಾಗಬಹುದಿದ್ದ ಈ ಕುಸಿತವನ್ನು ಹೂಡಿಕೆದಾರರು ಮೊದಲೇ ಊಹಿಸಿಕೊಂಡಿದ್ದರು. ವಹಿವಾಟು ಆರಂಭವಾಗುತ್ತಿರುವಂತೆಯೇ ಸೆನ್ಸೆಕ್ಸ್ 218 ಅಂಶ, ನಿಫ್ಟಿ 83 ಅಂಶ ಕುಸಿತ ಕಂಡಿದೆ.
ಮುಂಬಯಿ: ಜಾಗತಿಕವಾಗಿ ಏರಿಕೆಯ ವಹಿವಾಟು ಶುರುವಾಗಿದ್ದು, ನಿರೀಕ್ಷೆಯಂತೆಯೇ ಭಾರತದ ಷೇರುಪೇಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕಗಳು ಸೋಮವಾರ (ಆಗಸ್ಟ್ 12) ಕುಸಿತದೊಂದಿಗೆ ವಹಿವಾಟು ಶುರುಮಾಡಿದೆ. ಷೇರುಪೇಟೆ ವಹಿವಾಟು ಸೋಮವಾರ ಬೆಳಗ್ಗೆ 9.17ಕ್ಕೆ ಶುರುವಾದಾಗ ಸೆನ್ಸೆಕ್ಸ್ 218.65 ಅಂಶ (0.27%) ಕುಸಿತ ಕಂಡು 79,487.26 ರಲ್ಲಿ ಮತ್ತು ನಿಫ್ಟಿ 50 ಸೂಚ್ಯಂಕ ಆರಂಭಿಕ ಹಂತದಲ್ಲಿ 47.45 ಅಂಶ (0.19%) ಕುಸಿತ ಕಂಡಿತ್ತಾದರೂ ಬಳಿಕ, ಒಟ್ಟು 82.55 ಅಂಶ (0.34%) ಕುಸಿದು 24,284.95 ರಲ್ಲಿ ವಹಿವಾಟು ಶುರುಮಾಡಿವೆ.
ಆರಂಭಿಕ ವಹಿವಾಟಿನ ಬಳಿಕವೂ ಕುಸಿತ ಸೆನ್ಸೆಕ್ಸ್ 375.79 ಅಂಶ (0.47%) ಇಳಿಕೆಯಾಗಿ 79,330.12ರಲ್ಲಿ ವಹಿವಾಟು ನಡೆಸಿತ್ತು. ಬ್ಯಾಂಕ್ ನಿಫ್ಟಿ ಕೂಡ 71.90 ಅಂಶ (0.14%) ಕುಸಿದು 50,412.60 ಅಂಶದಲ್ಲಿ ವಹಿವಾಟು ಮುಂದುವರಿಸಿದೆ.
ಶೇಕಡ 4 ರಷ್ಟು ಕುಸಿಯಿತು ಅದಾನಿ ಗ್ರೂಪ್ ಷೇರು ಮೌಲ್ಯ
ಹಿಂಡೆನ್ ಬರ್ಗ್ ವರದಿಯ ಪರಿಣಾಮ ಅದಾನಿ ಗ್ರೂಪ್ ಕಂಪನಿಯ ಷೇರುಗಳ ಮೌಲ್ಯ ಶೇಕಡ 4 ರಷ್ಟು ಕುಸಿತ ಕಂಡಿದ್ದು, ನಷ್ಟದಲ್ಲಿ ವಹಿವಾಟು ನಡೆಸಿವೆ. ಅದಾನಿ ಎಂಟರ್‌ಪ್ರೈಸಸ್ ಶೇರು ಶೇ.3.3ರಷ್ಟು ಕುಸಿದು 3,082 ರೂಪಾಯಿಗೆ, ಅದಾನಿ ಪೋರ್ಟ್ಸ್ ಶೇ.2ರಷ್ಟು ಕುಸಿದು 1,504 ರೂಪಾಯಿಗೆ, ಅದಾನಿ ಗ್ರೀನ್ ಎನರ್ಜಿ ಸೊಲ್ಯೂಷನ್ಸ್ ಶೇ.2.8ರಷ್ಟು ಕುಸಿದು 1,732 ರೂಪಾಯಿಗೆ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇ.2.7ರಷ್ಟು ಕುಸಿದು 1,074 ರೂಪಾಯಿಗೆ, ಅದಾನಿ ವಿಲ್ಮಾರ್ ಶೇ.2.38ಕ್ಕೆ 374 ರೂಪಾಯಿಗೆ ತಲುಪಿದೆ.
ಇನ್ನೊಂದೆಡೆ, ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕದಲ್ಲಿ ಬ್ರಿಟಾನಿಯಾ ಇಂಡಸ್ಟ್ರೀಸ್, ಒಎನ್‌ಜಿಸಿ, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ ಮತ್ತು ಇನ್ಫೋಸಿಸ್ ಟಾಪ್ ಗೇನರ್‌ಗಳಾಗಿದ್ದರೆ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಪವರ್ ಗ್ರಿಡ್ ಕಾರ್ಪೊರೇಷನ್, ಎನ್‌ಟಿಪಿಸಿ ಮತ್ತು ಟಾಟಾ ಸ್ಟೀಲ್ ನಷ್ಟದಲ್ಲಿ ವಹಿವಾಟು ನಡೆಸುತ್ತಿರುವ ಪ್ರಮುಖ ಕಂಪನಿಯ ಷೇರುಗಳಾಗಿವೆ.
ಬೆಳಗ್ಗೆ 9.30ರ ಹೊತ್ತಿಗೆ ಎನ್‌ಎಸ್‌ಇನಲ್ಲಿ ಟಾಪ್ ಗೇನರ್ ಮತ್ತು ಲೂಸರ್
ಭಾರತೀಯ ಷೇರುಪೇಟೆಯ ಪೈಕಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸೋಮವಾರ (ಆಗಸ್ಟ್ 12) ರ ವಹಿವಾಟು ಬೆಳಗ್ಗೆ ಶುರುವಾದ ಸಂದರ್ಭದಲ್ಲಿ 9.30ರ ಹೊತ್ತಿಗೆ ಟಾಪ್ ಗೇನರ್ ಮತ್ತು ಲೂಸರ್ ಆಗಿದ್ದ ಷೇರುಗಳಿವು.
ಲಾಭ ತಂದುಕೊಟ್ಟ ಅಗ್ರ ಷೇರುಗಳಿವು - ಗ್ರಾಸಿಮ್ (0.96%), ಜೆಸ್‌ಡಬ್ಲ್ಯು ಸ್ಟೀಲ್ (0.84%), ಸಿಪ್ಲಾ (0.73%), ಏಷ್ಯನ್ ಪೇಂಟ್ಸ್ (0.62%), ಟಾಟಾ ಮೋಟಾರ್ಸ್ (0.47%)
ನಷ್ಟ ಉಂಟುಮಾಡಿದ ಅಗ್ರ ಷೇರುಗಳಿವು- ಅದಾನಿ ಎಂಟರ್‌ಪ್ರೈಸಸ್ (-3.07%), ಅದಾನಿ ಪೋರ್ಟ್ಸ್ (-2.07%), ಎನ್‌ಟಿಪಿಸಿ (-1.77%), ಪವರ್ ಗ್ರಿಡ್ (-1.18%), ಬಜಾಜ್ ಆಟೋ (-1.03%)
ಹಿಂಡೆನ್‌ಬರ್ಗ್ ವರದಿಯ ಸಾರವೇನು: ಹಿಂಡೆನ್‌ಬರ್ಗ್ ವರದಿಯ ಮುಖ್ಯಾಂಶದ ಪ್ರಕಾರ, “ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಬರ್ಮುಡಾ ಮತ್ತು ಮಾರಿಷಸ್ ಫಂಡ್‌ಗಳಲ್ಲಿ ಪಾಲನ್ನು ಹೊಂದಿರುವುದನ್ನು ಮರೆಮಾಚಿದ್ದಾರೆ. ಅದೇ ಸಂಕೀರ್ಣ ಜಾಲದಿಂದ ವಿನೋದ್ ಅದಾನಿ 32 ಶತಕೋಟಿ ಡಾಲರ್ ಹಣವನ್ನು ಬಳಸಿದ್ದಾರೆ. ವಿನೋದ್ ಅದಾನಿ ಅವರು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಹಿರಿಯ ಸಹೋದರ.” ಎಂಬ ಆರೋಪ ವ್ಯಕ್ತವಾಗಿದೆ.