ITR filing: 2023-24 ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು, ಓದಿ ಐಟಿಆರ್ ಮಾರ್ಗದರ್ಶಿ
Jun 13, 2023 05:00 PM IST
ITR filing: 2023-24 ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು, ಓದಿ ಐಟಿಆರ್ ಮಾರ್ಗದರ್ಶಿ
- Income tax return: ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ eportal.incometax.gov.in ಗೆ ಭೇಟಿ ನೀಡಿ ಐಟಿಆರ್ ಸಲ್ಲಿಸಬಹುದು. ಅದಕ್ಕೂ ಮೊದಲು ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ITR filing: ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಈಗಾಗಲೇ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಸಾಕಷ್ಟು ಜನರು ಮುಂದಾಗಿದ್ದಾರೆ. ಆನ್‌ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಟೆಕ್ನಿಕಲ್ ಆಗಿಯೂ ಕೆಲವು ಎಚ್ಚರಿಕೆವಹಿಸಬೇಕಾಗುತ್ತದೆ. ಎಲ್ಲಾದರೂ ಸಣ್ಣ ತಪ್ಪು ಮಾಡಿದರೂ ದೊಡ್ಡ ಎರರ್‌ಗೆ ಕಾರಣವಾಗಬಹುದು. ನೀವು ಉದ್ಯೋಗದಲ್ಲಿರುವ ವ್ಯಕ್ತಿಯಾಗಿದ್ದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಾಗಿದ್ದಾರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ನೀವು ವೇತನ ಪಡೆಯುತ್ತಿದ್ದು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಬಾಧ್ಯತೆ ಹೊಂದಿರುವಿರೋ ಇಲ್ಲವೋ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಮೊದಲು ಅಗತ್ಯವಿರುವ ವಿಷಯಗಳು
ಮೊದಲ ಬಾರಿಗೆ ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿದ್ದರೆ ನಿಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಸಿದ್ಧವಾಗಿಟ್ಟುಕೊಳ್ಳಬೇಕು. ಬಳಿಕ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ eportal.incometax.gov.in ಗೆ ಭೇಟಿ ನೀಡಿ. ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವವರು ನೀವಾಗಿದ್ದರೆ ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಸೃಜಿಸಿಕೊಳ್ಳಬೇಕು. ನಿಮ್ಮ ಪಾನ್ ಕಾರ್ಡ್ ಯೂಸರ್ ಐಡಿಯಾಗಿರುತ್ತದೆ. ಬಳಿಕ ನಿಮ್ಮ ಸ್ವಂತ ಪಾಸ್ವರ್ಡ್ ರಚಿಸಿಕೊಳ್ಳಬಹುದು.
ಪಾಸ್‌ವರ್ಡ್ ಮರೆತರೆ ಏನು ಮಾಡಬೇಕು?
ವರ್ಷಕ್ಕೊಮ್ಮೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವುದರಿಂದ ಬಹುತೇಕರು ಲಾಗಿನ್ ಪಾಸ್ವರ್ಡ್ ಮರೆತಿರುತ್ತಾರೆ. ಈ ಕುರಿತು ಆತಂಕ ಪಡಬೇಕಾಗಿಲ್ಲ. ಹೊಸದಾಗಿ ಪಾಸ್ವರ್ಡ್ ರಚಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಫರ್ಗೆಟ್ ಫಾಸ್ವರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಖಾತೆಗೆ ಜೋಡಿಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ. ಆಧಾರ್‌ಗೆ ಪಾನ್ ಕಾರ್ಡ್ ಲಿಂಕ್ ಮಾಡಿರಬೇಕು. ಬಳಿಕ ಹೊಸ ಪಾಸ್ವರ್ಡ್ ರಚಿಸಿಕೊಳ್ಳಿ.
ಎಐಎಸ್ ಮಾಹಿತಿ
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್ ಅಗತ್ಯವಿರುತ್ತದೆ. ನಿಮ್ಮ ಆದಾಯದ ಸಮಗ್ರ ಮಾಹಿತಿಯನ್ನು ಎಐಎಸ್ ಹೊಂದಿರುತ್ತದೆ. ಈ ಹೇಳಿಕೆಯನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಪಡೆಯಬಹುದು. ನಿಮ್ಮ ಹೆಸರು, ಪಾನ್, ಆಧಾರ್ ವಿಷಯವು ಭಾಗ ಒಂದರಲ್ಲಿ ಇರುತ್ತದೆ. ಎರಡನೇ ಭಾಗದಲ್ಲಿ ನಿಮ್ಮ ಆದಾಯದ ವಿವರ ಇರುತ್ತದೆ. ಅಂದರೆ, ಟಿಡಿಎಸ್, ಅಡ್ವಾನ್ಸ್ ಟ್ಯಾಕ್ಸ್, ಸೆಲ್ಫ್ ಅಸೆಸ್‌ಮೆಂಟ್, ಬಾಕಿ ಇರುವ ಮೊತ್ತ ಇತ್ಯಾದಿಗಳು ಇರುತ್ತವೆ. ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಆದಾಯ ತೆರಿಗೆ ರಿಟರ್ನ್ ಭರ್ತಿ ಮಾಡಲು ಆರಂಭಿಸಿ.
ತೆರಿಗೆ ಬಾಧ್ಯತೆ ಇಲ್ಲದೆ ಇದ್ದರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕೆ?
ಹಣ ಸಂಪಾದನೆ ಮಾಡುವ ವ್ಯಕ್ತಿಯ ಮಿತಿಯು ಆದಾಯ ತೆರಿಗೆ ಕಡಿತದ ಮಿತಿಗಿಂತ ಕಡಿಮೆ ಇದ್ದರೆ, ಆದರೆ, ಅವರ ಪೇಮಾಸ್ಟರ್‌ನಿಂದ ಟಿಡಿಎಸ್ ಕಡಿತಗೊಂಡಿದ್ದರೆ, ಈ ಸಂದರ್ಭದಲ್ಲಿ ಅವರು ಐಟಿಆರ್ ಸಲ್ಲಿಸಬೇಕು. ಐಟಿಆರ್ ಮರುಪಾವತಿ (ಐಟಿಆರ್ ರಿಫಂಡ್) ಮೂಲಕ ತಮ್ಮ ಕಡಿತವಾದ ಟಿಡಿಎಸ್ ಮೊತ್ತವನ್ನು ಪಡೆಯಬೇಕು ಎಂದು ತೆರಿಗೆ ಮತ್ತು ಹೂಡಿಕೆ ತಜ್ಞರು ಸಲಹೆ ನೀಡಿದ್ದಾರೆ. ಈ ಕುರಿತು ವಿವರವಾದ ಲೇಖನ ಇಲ್ಲಿದೆ ಓದಿ.