ಗ್ರಾಹಕರೇ ಗಮನಿಸಿ; ಫೆಬ್ರವರಿ 29 ರಿಂದ ಪೇಟಿಎಂ ಬ್ಯಾಂಕ್ ಖಾತೆಗೆ ಹಣ ಪಾವತಿ ಸೇರಿ ಈ ಸೇವೆಗಳು ಸ್ಥಗಿತಗೊಳಿಸಿದ ಆರ್‌ಬಿಐ
Feb 01, 2024 11:23 AM IST
ಪೇಟಿಎಂ ಬ್ಯಾಂಕ್‌ಗೆ ಹಣ ಪಾವತಿ ಸೇರಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಿ ಆರ್‌ಬಿಐ ಆದೇಶ ಹೊರಡಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರವರಿ 29 ರಿಂದ ಯಾವುದೇ ಗ್ರಾಹಕರ ಖಾತೆಗಳು, ವಾಲೆಟ್‌ಗಳು, ಫಾಸ್ಟ್‌ಟ್ಯಾಗ್ ಹಾಗೂ ಇತರೆ ಪ್ರಿಪೇಡ್ ಪಾವತಿ ಸ್ವೀಕರಿಸುವುದನ್ನು ನಿಲ್ಲಿಸುವಂತೆೆ ಆರ್‌ಬಿಐ ಆದೇಶಿಸಿದೆ.
ದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ (Paytm Payments ank) ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ಬಿಗ್ ಶಾಕ್ ನೀಡಿದೆ. 2024ರ ಫೆಬ್ರವರಿ 29ರ ನಂತರ ಯಾವುದೇ ಗ್ರಾಹಕರ ಖಾತೆ, ಪ್ರಿಪೇಯ್ಡ್ ಸಾಧನಗಳು, ವಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳ ಠೇವಣಿ ಅಥವಾ ಟಾಪ್-ಅಪ್ ಪಾವತಿಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿ ಆರ್‌ಬಿಐ ಆದೇಶ ಹೊರಡಿಸಿದೆ.
ಲೆಕ್ಕಪರಿಶೋಧಕರು ನಡೆಸಿದ ಸಮಗ್ರ ಸಿಸ್ಟಮ್ ಆಡಿಟ್ ವರದಿ ಮತ್ತು ನಂತರದ ಅನುಸರಣೆ ಮೌಲ್ಯಮಾಪನ ವರದಿಗೆ ಪ್ರತಿಕ್ರಿಯೆಯಾಗಿ ಪೇಟಿಎಂ ವಿರುದ್ಧ ಕೇಂದ್ರ ಬ್ಯಾಂಕ್ ಈ ಕ್ರಮವನ್ನು ಕೈಗೊಂಡಿದೆ.
ಫೆಬ್ರವರಿ 29ರ ನಂತರ ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳಿಗೆ ಪೇಟಿಎಂ ಬ್ಯಾಂಕ್‌ಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವೀಸಸ್ ಲಿಮಿಟೆಡ್‌ನ ನೋಡಲ್ ಖಾತೆಗಳನ್ನು ಫೆಬ್ರವರಿ 29 ರೊಳಗೆ ಕೊನೆಗೊಳಿಸಬೇಕು ಎಂದು ಆರ್‌ಬಿಐ ನಿರ್ದೇಶಿಸಿದೆ. ಎಲ್ಲಾ ಪೈಪ್ಲೈನ್ ವಹಿವಾಟುಗಳು, ನೋಡಲ್ ಖಾತೆಗಳನ್ನು 2024ರ ಮಾರ್ಚ್ 15 ರೊಳಗೆ ಇತ್ಯರ್ಥಗೊಳಿಸುವಂತೆ ಆದೇಶಿಸಿದೆ. ಆ ನಂತರ ಯಾವುದೇ ಹೆಚ್ಚಿನ ವಹಿವಾಟುಗಳನ್ನು ಅನುಮತಿಸಲಾಗುವುದಿಲ್ಲ ಎಂದಿದೆ.
2022ರ ಮಾರ್ಚ್‌ನಲ್ಲಿ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೊಸ ಗ್ರಾಹಕರ ಸೇರ್ಪಡೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ನಿರ್ದೇಶನ ನೀಡಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಸಹವರ್ತಿಯಾಗಿದ್ದು, ಶೇಕಡಾ 49 ರಷ್ಟು ಪಾಲನ್ನು ಹೊಂದಿದೆ.
ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಯಾವುದೇ ನಿರ್ಬಂಧಗಳಿಲ್ಲದೆ ತಮ್ಮ ಖಾತೆಗಳಿಂದ ಲಭ್ಯವಿರುವ ಹಣವನ್ನು ವಾಪಸ್ ಪಡೆಯಬಹುದು. ಉಳಿತಾಯ ಬ್ಯಾಂಕ್ ಖಾತೆಗಳು, ಚಾಲ್ತಿ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ಫಾಸ್ಟ್‌ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳ ಮೂಲಕ ತಮ್ಮ ಖಾತೆಗಳಲ್ಲಿ ಇರುವ ಹಣವನ್ನು ಬಳಸಬಹುದಾಗಿದೆ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ