ರೆಪೋ ದರ ಯಥಾಸ್ಥಿತಿ ಎಫೆಕ್ಟ್; ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, 21000 ಗಡಿ ದಾಟಿದ ನಿಫ್ಟಿ
Dec 08, 2023 02:52 PM IST
ಮುಂಬೈ ಷೇರುಪೇಟೆಯ ಹೊರ ನೋಟ
ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸಿರುವುದು ಮುಂಬೈ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಬರೆದಿದೆ. ನಿಫ್ಟಿ 21 ಸಾವಿರ ಗಡಿ ದಾಟಿದೆ.
ಮುಂಬೈ: ಭಾರತೀಯ ರಿಸರ್ವ ಬ್ಯಾಂಕ್-ಆರ್‌ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ ಇಂದು (ಡಿಸೆಂಬರ್ 8, ಶುಕ್ರವಾರ) ಘೋಷಣೆ ಮಾಡಿರುವ ವಿತ್ತೀಯ ನೀತಿಯಲ್ಲಿ ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲಿ ಇಡಲಾಗಿದೆ. ಆರ್‌ಬಿಐನ ಈ ನಿರ್ಧಾರ ಮುಂಬೈ ಷೇರುಪೇಟೆಯಲ್ಲಿ (Mumbai Share Market) ಹೊಸ ಉತ್ಸಾಹವನ್ನು ಮೂಡಿಸಿದೆ. ಮಧ್ಯಾಹ್ನದ ವಹಿವಾಟಿನ ವೇಳೆ ನಿಫ್ಟಿ (Nifty) 21,000 ಗಡಿ ದಾಟಿದರೆ, ಸೆನ್ಸೆಕ್ಸ್ (Sensex) 69,888.33 ಅಂಕಗಳಿಗೆ ಜಿಗಿತದ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಒಂದು ಹಂತದಲ್ಲಿ ನಿಫ್ಟಿ 21,006.10ಕ್ಕೆ ತಲುಪಿತ್ತು. ಆರಂಭದ ವಹಿವಾಟಿನಲ್ಲೇ ಪ್ರಮುಖ 25 ಕಂಪನಿಗಳ ಶೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ಆರಂಭಿಸಿದವು. ಎಲ್‌ಟಿಎಂಐ ಮೈಂಡ್ ಟ್ರೀ ಸಂಸ್ಥೆಯ ಶೇರುಗಳು ಶೇಕಡಾ 3.17 ರಷ್ಟು ಜಿಗಿತ ಕಂಡು ಹೂಡಿಕೆದಾರರ ಗಮನ ಸೆಳೆಯಿತು. ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 2.97, ಎಚ್‌ಸಿಎಲ್ ಶೇ 2.26, ಎಚ್‌ಡಿಎಫ್‌ಸಿ ಶೇ 1.41 ಹಾಗೂ ಎಲ್ ಅಂಡ್ ಟಿ ಶೇರುಗಳು ಆರಂಭಿಕ ವಹಿವಾಟಿನಲ್ಲಿ ಶೇ 1.32 ರಷ್ಟು ಹೆಚ್ಚಳಗೊಂಡವು.
ಇನ್ನ ಇಳಿಕೆ ಕಂಡ ಕಂಪನಿಗಳ ಪೈಕಿ ಅದಾನಿ ಪೋರ್ಟ್ಸ್ ಶೇಕಡಾ 1.55 ರಷ್ಟು ಕುಸಿತವಾದರೆ. ಆ ನಂತರ ಬಜಾಡ್ ಫೈನಾನ್ಸ್ ಶೇ 1.37, ಅದಾನಿ ಎಂಟರ್‌ಪ್ರೈಸಸ್ ಶೇ 1.23, ಹೀರೋ ಮೋಟೋಕಾರ್ಪ್ ಶೇ 1.18 ರಷ್ಟು ಹೊಂದಿದೆ ಇತರೆ ಶೇರು ಕಂಪನಿಗಳಾಗಿವೆ.
ಆರ್‌ಬಿಐನ ಹಣಕಾಸು ನೀತಿಯ ನಿರ್ಧಾರವನ್ನು ಷೇರು ಮಾರುಕಟ್ಟೆಯ ಸ್ವಾಗತಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಹಣಕಾಸು ನೀತಿ ನಿರೀಕ್ಷಿತ ಮಾರ್ಗದಲ್ಲಿದೆ. ವಿತ್ತೀಯ ನೀತಿ ಸಮಿತಿ-ಎಂಪಿಸಿ ಹಣದುಬ್ಬರವನ್ನು ಸರಿದೂಗಿಸುವುದನ್ನು ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿದೆ. ರಿಯಲ್ ಎಸ್ಟೇಟ್, ಬ್ಯಾಂಕ್‌ಗಳು, ಗ್ರಾಹಕ, ಇಂಜಿನಿಯರಿಂಗ್ ಅಥವಾ ಕ್ಯಾಪಿಟಲ್ ಸರಕುಗಳಿಗೆ ಸಂಬಂಧಿಸಿದ ಶೇರುಗಳು ಬೆಲೆ ಮಾರುಕಟ್ಟೆಯಲ್ಲಿ ಧನಾತ್ಮಕವಾಗಿರಲಿದೆ ಎಂದು ಬಿಎನ್‌ಪಿ ಪರಿಬಾಸನ್‌ನ ಶೇರ್‌ಖಾನ್ ಕ್ಯಾಪಿಟಲ್ ಮಾರ್ಕೆಟ್ ಸ್ಟ್ರಾಟಡಿ ಮುಖ್ಯಸ್ಥ ಗೌರವ್ ದುವಾ ವಿಶ್ಲೇಷಿಸಿದ್ದಾರೆ.
ಇತ್ತೀಚಿನ ವರದಿಯಲ್ಲಿ ಸೆನ್ಸೆಕ್ಸ್ 69,725, ನಿಫ್ಟಿ 20,935ರಲ್ಲಿ ವಹಿವಾಟು ನಡೆಸುತ್ತಿತ್ತು. ಟಾಟಾ ಸ್ಟೀಲ್, ಡಿಮಾರ್ಕ್, ಜೆಕಿ ಸಿಮೆಂಟ್, ಎಲ್‌ಐಸಿ, ಐಆರ್‌ಸಿಟಿಸಿ, ಟಿವಿಎಸ್ ಮೋಟಾರ್ಸ್, ಅದಾನಿ ಗ್ರೀನ್, ಬಜಾಜ್ ಫೈನಾನ್ಸ್, ರಿಲಯನ್ಸ್ ಏಷಿಯನ್ ಪೈಂಟ್ಸ್ ಶೇರುಗಳು ನಷ್ಟದಲ್ಲಿದ್ದವು. ಟಿಸಿಎಸ್, ಟೈಟಾನ್, ಎಂಆರ್‌ಎಫ್, ವಿಪ್ರೊ, ಆಕ್ಸಿಸ್ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಎಎಲ್, ಎಂಎಂಟಿಸಿ ಕಂಪನಿಗಳ ಶೇರುಗಳು ಜಿಗಿತ ಕಂಡಿದ್ದವು.