Stock Market: ವಾರಾಂತ್ಯದ ವಹಿವಾಟಿನ ದಿನದ ಅಂತ್ಯಕ್ಕೆ ಸೆನ್ಸೆಕ್ಸ್, ನಿಫ್ಟಿ ದಾಖಲೆ ಏರಿಕೆ; ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂ ಲಾಭ
Jan 09, 2024 08:12 PM IST
ಸೆನ್ಸೆಕ್ಸ್, ನಿಫ್ಟಿ ಜೂನ್ 16 ರಂದು ಏರಿಕೆ ಕಂಡವು
Stock Market News: ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್ 467 ಅಂಕಗಳು ಅಥವಾ ಶೇಕಡಾ 0.74 ರಷ್ಟು ಏರಿಕೆಯಾಗಿ 63,384.58 ಕ್ಕೆ ಕೊನೆಗೊಂಡರೆ, ನಿಫ್ಟಿ 138 ಪಾಯಿಂಟ್ ಅಥವಾ 0.74 ರಷ್ಟು ಏರಿಕೆಯೊಂದಿಗೆ 18,826 ಕ್ಕೆ ಕೊನೆಗೊಂಡಿತು. ಸೆನ್ಸೆಕ್ಸ್ ನಿಫ್ಟಿ ದಾಖಲೆಯ ಗರಿಷ್ಠ ಮಟ್ಟ ತಲುಪಿ ಹೂಡಿಕೆದಾರರು 1 ದಿನದಲ್ಲಿ 2 ಲಕ್ಷ ಕೋಟಿ ರೂಪಾಯಿ ಗಳಿಸಿದ್ದಾರೆ.
ದೇಶೀಯ ಇಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ (Sensex) (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕ) ಮತ್ತು ನಿಫ್ಟಿ (Nifty) (ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕ) ಶುಕ್ರವಾರ (ಜೂನ್ 16) ಅತ್ಯುತ್ತಮ ಲಾಭವನ್ನು ಗಳಿಸಿದವು. ಧನಾತ್ಮಕ ಜಾಗತಿಕ ಭಾವನೆಯಿಂದ ಉತ್ತೇಜಿತವಾದ ಸೂಚ್ಯಂಕಗಳು ವಾರಾಂತ್ಯದ ದಿನದ ವಹಿವಾಟನ್ನು ದಾಖಲೆ ಏರಿಕೆಯೊಂದಿಗೆ ಕೊನೆಗೊಳಿಸಿವೆ.
ರಾಯಿಟರ್ಸ್ ವರದಿ ಪ್ರಕಾರ, "ಫೆಡರಲ್ ರಿಸರ್ವ್‌ನ ದರ-ಹೆಚ್ಚಳ ಅಭಿಯಾನದ ಅಂತ್ಯ ಸಮೀಪಿಸುತ್ತಿದೆ ಎಂದು US ಆರ್ಥಿಕ ಮಾಹಿತಿಯು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರಿಂದ ಏಷ್ಯನ್ ಷೇರುಗಳು ಶುಕ್ರವಾರ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು".
ಜೂನ್ 10 ಕ್ಕೆ ಕೊನೆಗೊಂಡ ವಾರದಲ್ಲಿ ಅಮೆರಿಕದಲ್ಲಿ ನಿರುದ್ಯೋಗ ಕ್ಲೇಮ್‌ಗಳು ಸ್ಥಿರವಾಗಿದ್ದವು. ಅಮೆರಿಕದ ಕಾರ್ಮಿಕ ಮಾರುಕಟ್ಟೆಗಳು ಮೃದು ಧೋರಣೆಗಿಳಿದ ಕಾರಣ ಫೆಡರಲ್ ರಿಸರ್ವ್ ತನ್ನ ದರ-ಹೆಚ್ಚಳ ಅಭಿಯಾನವನ್ನು ಕೊನೆಗೊಳಿಸಲು ನಿರ್ಧರಿಸಬಹುದು ಎಂಬ ಭರವಸೆಯನ್ನು ಉತ್ತೇಜಿಸುತ್ತದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಅನುಕ್ರಮವಾಗಿ 63,520.36 ಮತ್ತು 18,864.70 ರ ದಿನದ ಇಂಟ್ರಾ ಡೇ ವಹಿವಾಟಿನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದವು ಆದರೆ, 2022ರ ಡಿಸೆಂಬರ್ 1 ರಂದು ಅವು ತಲುಪಿದ್ದ 63,583.07 ಮತ್ತು 18,887.60 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮೀರಿ ಮುಂದುವರಿಯಲು ವಿಫಲವಾದವು.
ಸೆನ್ಸೆಕ್ಸ್ 467 ಅಂಕಗಳು ಅಥವಾ ಶೇಕಡಾ 0.74 ರಷ್ಟು ಏರಿಕೆಯಾಗಿ 63,384.58 ಕ್ಕೆ ಕೊನೆಗೊಂಡರೆ, ನಿಫ್ಟಿ 138 ಪಾಯಿಂಟ್ ಅಥವಾ 0.74 ರಷ್ಟು ಏರಿಕೆಯೊಂದಿಗೆ 18,826 ಕ್ಕೆ ಕೊನೆಗೊಂಡಿತು.
30-ಷೇರುಗಳ ಸೆನ್ಸೆಕ್ಸ್ ಪಟ್ಟಿಯಲ್ಲಿ, ಕೇವಲ ನಾಲ್ಕು ಷೇರುಗಳು ಅಂದರೆ ವಿಪ್ರೋ (ಶೇ. 1.94), ಟಿಸಿಎಸ್ (ಶೇ. 1.27), ಪವರ್ ಗ್ರಿಡ್ (ಶೇ. 0.32) ಮತ್ತು ಟೆಕ್ ಮಹೀಂದ್ರ (ಶೇ. 0.25 ರಷ್ಟು ಇಳಿಕೆ) ರೆಡ್‌ನಲ್ಲಿ ವಹಿವಾಟು ಕೊನೆಗೊಳಿಸಿದವು.
ಒಂದೇ ದಿನದಲ್ಲಿ ಹೂಡಿಕೆದಾರರಿಗೆ 2 ಲಕ್ಷ ಕೋಟಿಗೂ ಅಧಿಕ ಲಾಭ
ಏತನ್ಮಧ್ಯೆ, ದೇಶೀಯ ಕರೆನ್ಸಿ ರೂಪಾಯಿ ಮೌಲ್ಯವು 25 ಪೈಸೆ ಜಿಗಿದು ಪ್ರತಿ ಡಾಲರ್‌ಗೆ 81.93 ಕ್ಕೆ ತಲುಪಿದ ಕಾರಣ ಇಕ್ವಿಟಿ ಮಾರುಕಟ್ಟೆಯಲ್ಲಿನ ಲಾಭವು ರೂಪಾಯಿಯ ಮೇಲೆ ಪ್ರಭಾವ ಬೀರಿತು.
ಸತತ ಆರನೇ ಸೆಷನ್‌ಗೆ ತಮ್ಮ ಲಾಭಗಳನ್ನು ವಿಸ್ತರಿಸಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಇಂಟ್ರಾಡೇ ವಹಿವಾಟಿನಲ್ಲಿ ತಮ್ಮ ತಾಜಾ ಸಾರ್ವಕಾಲಿಕ ಗರಿಷ್ಠವಾದ 28,381.54 ಮತ್ತು 32,362.35 ಅನ್ನು ತಲುಪಿದವು. ಮಿಡ್‌ಕ್ಯಾಪ್ ಸೂಚ್ಯಂಕವು ಅಂತಿಮವಾಗಿ 0.71 ರಷ್ಟು ಏರಿಕೆಯಾಗಿ 28,331.32 ಕ್ಕೆ ಕೊನೆಗೊಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು 0.76 ಶೇಕಡಾ ಏರಿಕೆಯೊಂದಿಗೆ 32,292.19 ಕ್ಕೆ ಕೊನೆಗೊಂಡಿತು.
ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳವು ಹಿಂದಿನ ವಹಿವಾಟಿನಲ್ಲಿ 290.7 ಲಕ್ಷ ಕೋಟಿ ರೂಪಾಯಿಯಿಂದ ದಾಖಲೆಯ ಗರಿಷ್ಠ 292.8 ಲಕ್ಷ ಕೋಟಿ ರೂಪಾಯಿಗೆ ಏರಿತು. ಅಂದರೆ, ಹೂಡಿಕೆದಾರರು ಒಂದೇ ದಿನದಲ್ಲಿ 2.1 ಲಕ್ಷ ಕೋಟಿ ರೂಪಾಯಿಯಷ್ಟು ಶ್ರೀಮಂತರಾಗಿದ್ದಾರೆ.