ಅಂತರ್ಗತ ಮತ್ತು ನವೀನ ಈ ಮಧ್ಯಂತರ ಬಜೆಟ್; ಕೇಂದ್ರ ಬಜೆಟ್ 2024ರ ಕುರಿತು ಪ್ರಧಾನಿ ನರೇಂದ್ರ ಮೋದಿ ಅಭಿಮತದ 5 ಅಂಶಗಳು
Feb 01, 2024 03:46 PM IST
ಕೇಂದ್ರ ಬಜೆಟ್ 2024: ಈ ಮಧ್ಯಂತರ ಬಜೆಟ್ ಅಂತರ್ಗತ ಮತ್ತು ನವೀನ ಎಂದು ಹೇಳಿದರು. (ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್)
ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡನೆಯಾದ ನಂತರ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಅಂತರ್ಗತ ಮತ್ತು ನವೀನ ಈ ಮಧ್ಯಂತರ ಬಜೆಟ್ ಎಂದು ಹೇಳಿದರು. ಕೇಂದ್ರ ಬಜೆಟ್ 2024ರ ಕುರಿತು ಪ್ರಧಾನಿ ನರೇಂದ್ರ ಮೋದಿ ಅಭಿಮತದ 5 ಅಂಶಗಳು ಇಲ್ಲಿವೆ.
ಲೋಕಸಭೆ ಚುನಾವಣೆ ಮುಂಚಿತವಾಗಿ ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್, ಅಂತರ್ಗತವಾದುದು ಮತ್ತು ನವೀನ ಮಾದರಿಯದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೇಂದ್ರ ಬಜೆಟ್ 2024 ಮಂಡನೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ವಿಕಸಿತ ಭಾರತದ ನಾಲ್ಕು ಆಧಾರ ಸ್ತಂಭಗಳನ್ನು ಬಲಪಡಿಸುವಂತೆ ಈ ಸಲದ ಮಧ್ಯಂತರ ಬಜೆಟ್ ಇದೆ ಎಂದು ಹೇಳಿದರು.
ಮಧ್ಯಂತರ ಬಜೆಟ್ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮಾತಿನ 5 ಮುಖ್ಯ ಅಂಶಗಳು ಹೀಗಿವೆ..
1) 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು
ಈ ಮಧ್ಯಂತರ ಬಜೆಟ್ ವಿಕಸಿತ ಭಾರತದ ಎಲ್ಲ ನಾಲ್ಕು ಆಧಾರ ಸ್ತಂಭಗಳನ್ನು ಅಂದರೆ ಯುವಜನ, ಬಡವರು, ಮಹಿಳೆ ಮತ್ತು ರೈತರನ್ನು ಸಶಕ್ತಗೊಳಿಸುತ್ತದೆ. ಇದು 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಭರವಸೆಯನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ಬಜೆಟ್‌ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಲಾಗಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.
2) ನಿಯಂತ್ರಣದಲ್ಲಿದೆ ವಿತ್ತೀಯ ಕೊರತೆ
ಈ ಸಲದ ಮಧ್ಯಂತರ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ ಅಂದರೆ 11,11,111 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಹೇಳುವುದಾದರೆ, ಇದೊಂದು 'ಸ್ವೀಟ್ ಸ್ಪಾಟ್'. ಇದರೊಂದಿಗೆ ಕಟ್ಟಡ ನಿರ್ಮಾಣದ ಜೊತೆಗೆ 21ನೇ ಶತಮಾನದ ಭಾರತದ ಆಧುನಿಕ ಮೂಲಸೌಕರ್ಯ, ಯುವಕರಿಗೆ ಅಸಂಖ್ಯಾತ ಹೊಸ ಉದ್ಯೋಗಾವಕಾಶಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
3) ಬಡವರು ಮತ್ತು ಮಧ್ಯಮ ವರ್ಗದ ಸಬಲೀಕರಣ
"ಈ ಬಜೆಟ್ ಬಡವರು ಮತ್ತು ಮಧ್ಯಮ ವರ್ಗದ ಸಬಲೀಕರಣ ಮತ್ತು ಅವರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಒತ್ತು ನೀಡುತ್ತದೆ. ಬಡವರಿಗೆ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸುವುದನ್ನು ಘೋಷಿಸಲಾಗಿದೆ. ನಾವು ಈಗ 3 ಕೋಟಿ 'ಲಖ್‌ಪತಿ ದೀದಿ'ಗಳನ್ನು ಹೊಂದುವ ಗುರಿ ಹೊಂದಿದ್ದೇವೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಸಿಗಲಿದೆ' ಎಂದು ಪ್ರಧಾನಿ ಮೋದಿ ಹೇಳಿದರು.
4) ಆದಾಯ ತೆರಿಗೆ ವಿನಾಯಿತಿಯಲ್ಲಿ 1 ಕೋಟಿ ಮಧ್ಯಮ ವರ್ಗದವರಿಗೆ ಅನುಕೂಲ
ಮಧ್ಯಂತರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಯೋಜನೆಯಲ್ಲಿ ಆದಾಯ ತೆರಿಗೆ ಪರಿಹಾರ ಯೋಜನೆ ಘೋಷಿಸಲಾಗಿದೆ. ಇದು ಮಧ್ಯಮ ವರ್ಗದ 1 ಕೋಟಿ ಜನರಿಗೆ ಪರಿಹಾರ ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
5) ರೈತರಿಗೆ ಅನುಕೂಲವಾಗಿರುವ ತೀರ್ಮಾನಗಳು
ವಿಕಸಿತ ಭಾರತದ 4 ಆಧಾರ ಸ್ತಂಭಗಳ ಪೈಕಿ ರೈತರಿಗೆ ಅನುಕೂಲವಾಗುವ ತೀರ್ಮಾನಗಳನ್ನು ಈ ಮಧ್ಯಂತರ ಬಜೆಟ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಪಿಎಂ ಕಿಸಾನ್ ಮೂಲಕ 11.8 ಕೋಟಿ ರೈತರಿಗೆ ಹಣಕಾಸು ನೆರವು ತಲುಪಿಸಲಾಗಿದೆ ಎಂಬುದನ್ನು ಪ್ರಧಾನಿ ನೆನಪಿಸಿದರು.