logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2024: ಕೇಂದ್ರ ಬಜೆಟ್ ಮಂಡನೆ ದಿನಾಂಕ, ಸಮಯ ಮತ್ತು ತಿಳಿದಿರಬೇಕಾದ ವಿಚಾರಗಳು

Union Budget 2024: ಕೇಂದ್ರ ಬಜೆಟ್ ಮಂಡನೆ ದಿನಾಂಕ, ಸಮಯ ಮತ್ತು ತಿಳಿದಿರಬೇಕಾದ ವಿಚಾರಗಳು

Umesh Kumar S HT Kannada

Jan 30, 2024 10:02 AM IST

google News

ಕಳೆದ ವರ್ಷ ಬಜೆಟ್ ಪ್ರತಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಪ್ರವೇಶಿಸಿದ ಸಂದರ್ಭ. (ಕಡತ ಚಿತ್ರ)

  • Union Budget 2024: ಸಂಸತ್ತಿನ ಬಜೆಟ್ ಅಧಿವೇಶನ ನಾಳೆ (ಜ.31) ಶುರುವಾಗುತ್ತಿದೆ. ಫೆ.1ರಂದು ಕೇಂದ್ರ ಬಜೆಟ್ 2024 ಮಂಡನೆಯಾಗಲಿದೆ. ಲೋಕಸಭೆ ಚುನಾವಣೆ ಕಾರಣ ಇದು ಮಧ್ಯಂತರ ಬಜೆಟ್ ಆಗಿರಲಿದೆ. ಬಜೆಟ್ ಮಂಡನೆಯ ಸಮಯ ಮತ್ತು ಇತರೆ ವಿವರ ಹೀಗಿದೆ.

ಕಳೆದ ವರ್ಷ ಬಜೆಟ್ ಪ್ರತಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಪ್ರವೇಶಿಸಿದ ಸಂದರ್ಭ. (ಕಡತ ಚಿತ್ರ)
ಕಳೆದ ವರ್ಷ ಬಜೆಟ್ ಪ್ರತಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಪ್ರವೇಶಿಸಿದ ಸಂದರ್ಭ. (ಕಡತ ಚಿತ್ರ) (PTI)

ನವದೆಹಲಿ: ಲೋಕಸಭೆ ಚುನಾವಣೆ ಸಮೀಪದಲ್ಲಿದೆ. ಇದಕ್ಕೆ ಮುಂಚಿತವಾಗಿ 17ನೇ ಲೋಕಸಭೆಯ ಕೊನೆಯ ಬಜೆಟ್‌ ಫೆ.1ಕ್ಕೆ ಮಂಡನೆಯಾಗಲಿದೆ. ಇದು ಮಧ್ಯಂತರ ಬಜೆಟ್ ಆಗಿದ್ದು, ಜೂನ್ ತನಕ ಸರ್ಕಾರದ ಖರ್ಚು ವೆಚ್ಚಗಳನ್ನು ನೀಗಿಸುವುದಕ್ಕಾಗಿ ಸಂಸತ್ತಿನ ಅನುಮೋದನೆ ಪಡೆಯಲು ಮಂಡಿಸುವ ಹಣಕಾಸು ಹೇಳಿಕೆಯ ದಾಖಲೆಗಳಿವು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2024ರ ಮಧ್ಯಂತರ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಈ ತಾತ್ಕಾಲಿಕ ಹಣಕಾಸು ಹೇಳಿಕೆಯು ಹೊಸ ಸರ್ಕಾರ ಅಧಿಕಾರವನ್ನು ಪಡೆದುಕೊಳ್ಳುವವರೆಗೆ ತಾತ್ಕಾಲಿಕವಾಗಿ ಚಾಲ್ತಿಯಲ್ಲಿರುತ್ತದೆ. ಸಾರ್ವತ್ರಿಕ ಚುನಾವಣೆ ಬಳಿಕ ರಚನೆಯಾಗುವ ಹೊಸ ಸರ್ಕಾರ, ಜೂನ್ ಅಥವಾ ಜುಲೈನಲ್ಲಿ ಹೊಸ ಬಜೆಟ್ (ಕೇಂದ್ರ ಬಜೆಟ್ 2024-25) ಅನ್ನು ಮಂಡಿಸುತ್ತದೆ.

ಫೆ.1ಕ್ಕೆ ಮಂಡನೆಯಾಗುವ ಈ ಸಲದ ಮಧ್ಯಂತರ ಬಜೆಟ್ ಹಣಕಾಸಿನ ವರ್ಷದ ಆರಂಭಿಕ ತಿಂಗಳುಗಳಿಗೆ ಅನ್ವಯವಾಗುತ್ತದೆ. ಅಂದರೆ 2024ರ ಏಪ್ರಿಲ್‌ನಿಂದ ಜೂನ್ ತನಕದ ಸಿಬ್ಬಂದಿ ವೇತನ ಮತ್ತು ಇತರೆ ಅಗತ್ಯ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕೆ ಸಂಬಂಧಿಸಿರುತ್ತದೆ.

ಕೇಂದ್ರ ಬಜೆಟ್ 2024 ಮಂಡನೆ ದಿನಾಂಕ, ಸಮಯ ಮತ್ತು ಇತರೆ ಪ್ರಮುಖ ವಿವರ

ಮುಂಬರುವ ಮಧ್ಯಂತರ ಕೇಂದ್ರ ಬಜೆಟ್‌ 2024ರ ಮಂಡನೆ ದಿನಾಂಕ, ಸಮಯ ಮತ್ತು ಇತರೆ ವಿವರ ಹೀಗಿದೆ.

1) ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನ ನಾಳೆ (ಜ.31) ಶುರುವಾಗಿ ಫೆ.9ರ ತನಕ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊದಲ ದಿನ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ಔಪಚಾರಿಕವಾಗಿ ಚಾಲನೆ ನೀಡುಲಿದ್ದಾರೆ.

2) ಕೇಂದ್ರ ಬಜೆಟ್ 2024 (ಮಧ್ಯಂತರ ಬಜೆಟ್‌) ಅನ್ನು ಫೆ.1ರಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.

3) ಮಧ್ಯಂತರ ಬಜೆಟ್ ಏಪ್ರಿಲ್ 1ರಿಂದ ಜೂನ್ ಕೊನೆ ತನಕ ಚಾಲ್ತಿಯಲ್ಲಿರಲಿದೆ. ಅದಾಗಿ ಹೊಸ ಸರ್ಕಾರ 2024-25ಕ್ಕೆ ಅನ್ವಯವಾಗುವ ಪೂರ್ಣ ಬಜೆಟ್ ಮಂಡಿಸಲಿದೆ.

4) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಆರನೇ ಬಜೆಟ್ ಅನ್ನು ಮಂಡಿಸುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ. 5 ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್‌ ಇದರಲ್ಲಿ ಸೇರಿವೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಇಂತಹ ಸಾಧನೆ ಮಾಡಿದ್ದಾರೆ.

5) ಭಾರತದ ಮೊದಲ ಮಧ್ಯಂತರ ಬಜೆಟ್ ಅನ್ನು 1947 ರಲ್ಲಿ ಆರ್‌ಕೆ ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ತಕ್ಷಣವೇ ಏಳೂವರೆ ವರ್ಷಗಳ ಕಾಲ ಆಹಾರ ಧಾನ್ಯದ ಕೊರತೆ, ಹೆಚ್ಚಿದ ಆಮದುಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರ ಸೇರಿದಂತೆ ದೇಶದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಈ ಬಜೆಟ್ ಅನ್ನು ಮಂಡಿಸಲಾಯಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ