logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2024; ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ದಾಖಲೆ ಸಮಗಟ್ಟಲಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನದು

ಕೇಂದ್ರ ಬಜೆಟ್ 2024; ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ದಾಖಲೆ ಸಮಗಟ್ಟಲಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನದು

Umesh Kumar S HT Kannada

Jan 31, 2024 10:31 AM IST

google News

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (ಕಡತ ಚಿತ್ರ)

  • Union Budget 2024: ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಿದೆ. ಫೆ.1ರಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್ ಮಂಡಿಸಲಿದ್ದು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆ ಸರಿಗಟ್ಟಲಿದ್ದಾರೆ. ಏನದು ದಾಖಲೆ ಇಲ್ಲಿದೆ ವಿವರ. 

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (ಕಡತ ಚಿತ್ರ)
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (ಕಡತ ಚಿತ್ರ)

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸತತ ಆರನೇ ಬಜೆಟ್ ಮಂಡಿಸುವ ಮೂಲಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಜುಲೈ 2019 ರಿಂದ ಐದು ಪೂರ್ಣ ಬಜೆಟ್‌ಗಳನ್ನು ಮಂಡಿಸಿದ್ದಾರೆ. ದೇಶದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರು ಎಂಬ ಕೀರ್ತಿಗೂ ಅವರು ಈಗ ಭಾಜನರು.

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ತಮ್ಮ ಹಿಂದಿನ ಹಣಕಾಸು ಸಚಿವರಾದ ಡಾ. ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ದಾಖಲೆಗಳನ್ನು ಮುರಿಯಲಿದ್ದಾರೆ.

ಮೊರಾರ್ಜಿ ದೇಸಾಯಿ ಬಜೆಟ್ ಮಂಡನೆ

ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿ 1959-1964ರ ನಡುವೆ ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದರು. ಅವರು 10 ಬಜೆಟ್‌ಗಳನ್ನು ಮಂಡಿಸಿದ ಕೀರ್ತಿಗೆ ಭಾಜನರು. ಈ ಸಾಧನೆ ಮಾಡಿದ ಏಕೈಕ ಕೇಂದ್ರ ಹಣಕಾಸು ಸಚಿವರೆಂಬ ಗರಿಮೆ ಮೊರಾರ್ಜಿ ದೇಸಾಯಿ ಅವರದ್ದು. ಇದನ್ನು ಇದುವರೆಗೆ ಯಾರೂ ಮುರಿದಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಮುಂದಿನ ಅವಧಿಗೆ ನಿರ್ಮಲಾ ಸೀತಾರಾಮನ್ ಅವರೇ ಮಂದುವರಿದರೆ ಈ ದಾಖಲೆಯೂ ಮುರಿಯಲಿದೆ.

ಅರುಣ್ ಜೇಟ್ಲಿ ಅವರು 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು. 2014-15 ರಿಂದ 2018-19 ರವರೆಗೆ ಸತತ ಐದು ಬಜೆಟ್ ಗಳನ್ನು ಮಂಡಿಸಿದರು. ಆದರೆ, ಕೊನೆಯಲ್ಲಿ ಅಂದರೆ, 2019-20ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಪಿಯೂಷ್ ಗೋಯಲ್ ಅವರು ಫೆಬ್ರವರಿ 1, 2019 ರಂದು ಮಂಡಿಸಿದರು.

2019 ರ ಸಾರ್ವತ್ರಿಕ ಚುನಾವಣೆಯ ನಂತರ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯ ಉಸ್ತುವಾರಿಯನ್ನು ನೀಡಲಾಯಿತು. 1970-71 ರ ಹಣಕಾಸು ವರ್ಷದ ಬಜೆಟ್ ಮಂಡಿಸಿದ ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಧ್ಯಂತರ ಬಜೆಟ್ ಏಕೆ?

ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವಾಗ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಜೂನ್ ತಿಂಗಳಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಜುಲೈನಲ್ಲಿ ಹೊಸದಾಗಿ 2024-25ಕ್ಕೆ ಪೂರ್ಣಪ್ರಮಾಣದ ಬಜೆಟ್ ಮಂಡನೆಯಾಗುವುದು ವಾಡಿಕೆ.

ಭಾರತದ ಮೊದಲ ಮಧ್ಯಂತರ ಬಜೆಟ್ ಅನ್ನು 1947 ರಲ್ಲಿ ಅಂದಿನ ವಿತ್ತ ಸಚಿವ ಆರ್‌ಕೆ ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ತಕ್ಷಣ ದೇಶದ ಅರ್ಥ ವ್ಯವಸ್ಥೆ ಭಾರಿ ಸಂಕಷ್ಟದಲ್ಲಿತ್ತು. ಆಗ ಏಳೂವರೆ ವರ್ಷಗಳ ಕಾಲ ಆಹಾರ ಧಾನ್ಯದ ಕೊರತೆ, ಹೆಚ್ಚಿದ ಆಮದುಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರ ಸೇರಿ ದೇಶದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಈ ಬಜೆಟ್ ಅನ್ನು ಮಂಡಿಸಲಾಯಿತು.

ಸಂಸತ್ತಿನ ಬಜೆಟ್ ಅಧಿವೇಶನ ಇಂದು ಶುರುವಾಗುತ್ತಿದೆ. ಫೆ.9ರ ತನಕ ಬಜೆಟ್ ಅಧಿವೇಶನ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಸತ್ತಿನ ಉಭಯ ಸದನಗಳನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ.

ಲೋಕಸಭೆಯಲ್ಲಿ ನಾಳೆ (ಫೆ.1) ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2024 (ಮಧ್ಯಂತರ ಬಜೆಟ್‌) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಈ ಮಧ್ಯಂತರ ಬಜೆಟ್ ಏಪ್ರಿಲ್ 1ರಿಂದ ಜೂನ್ ಕೊನೆ ತನಕ ಚಾಲ್ತಿಯಲ್ಲಿರಲಿದೆ. ಅದಾಗಿ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಹೊಸ ಸರ್ಕಾರ ರಚಿಸಿ, 2024-25ಕ್ಕೆ ಅನ್ವಯವಾಗುವ ಪೂರ್ಣ ಬಜೆಟ್ ಅನ್ನು ಜುಲೈನಲ್ಲಿ ಮಂಡಿಸಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ