logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Situation In India: ಮಾಸ್ಕ್-ಟೆಸ್ಟಿಂಗ್ ಕಡ್ಡಾಯ, ರಾಜ್ಯ ಆರೋಗ್ಯ ಸಚಿವರೊಂದಿಗೆ ಕೇಂದ್ರದ ಸಭೆ; ಇಲ್ಲಿವೆ ಹತ್ತು ಅಂಶಗಳು

Covid situation in India: ಮಾಸ್ಕ್-ಟೆಸ್ಟಿಂಗ್ ಕಡ್ಡಾಯ, ರಾಜ್ಯ ಆರೋಗ್ಯ ಸಚಿವರೊಂದಿಗೆ ಕೇಂದ್ರದ ಸಭೆ; ಇಲ್ಲಿವೆ ಹತ್ತು ಅಂಶಗಳು

HT Kannada Desk HT Kannada

Dec 23, 2022 08:51 AM IST

google News

ಮುಂಬೈ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಂಗ್ರಹ ಚಿತ್ರ

    • ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಕೋವಿಡ್ 19 ಪರಿಸ್ಥಿತಿ ಮತ್ತು ಸಿದ್ಧತೆ ಕುರಿತು ರಾಜ್ಯ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಂಗ್ರಹ ಚಿತ್ರ
ಮುಂಬೈ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಂಗ್ರಹ ಚಿತ್ರ

ಚೀನಾದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜಾಗತಿಕ ಮಟ್ಟದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, ಡ್ರ್ಯಾಗನ್‌ ರಾಷ್ಟ್ರದಲ್ಲಿ ದಿನಕ್ಕೆ 1 ಮಿಲಿಯನ್ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೋವಿಡ್ ಇನ್ನೂ ಮುಗಿದಿಲ್ಲ. ಹೀಗಾಗಿ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಆರೋಗ್ಯ ಮೂಲಸೌಕರ್ಯ, ಲಸಿಕೆ ಅಭಿಯಾನ ಮತ್ತು ಹೊಸ ರೂಪಾಂತರ ವೈರಸ್‌ಗಳ ಭೀತಿ ಹಿನ್ನೆಲೆಯಲ್ಲಿ ಸೂಕ್ತ ಸಿದ್ಧತೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾರತದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 153ಕ್ಕೆ ಇಳಿದಿದೆ. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಆರು ವಾರಗಳಲ್ಲಿ ಜಾಗತಿಕವಾಗಿ 5.9 ಲಕ್ಷ ಪ್ರಕರಣಗಳು ವರದಿಯಾಗಿವೆ. ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿರುವುದರಿಂದ, ಅನೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳಲಾಗುತ್ತಿದೆ.

ಭಾರತದಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿಯ ಹತ್ತು ಪ್ರಮುಖ ಅಂಶಗಳು ಇಲ್ಲಿವೆ:

1. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಕೋವಿಡ್ 19 ಪರಿಸ್ಥಿತಿ ಮತ್ತು ಸಿದ್ಧತೆ ಕುರಿತು ರಾಜ್ಯ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2. ಭಾರತವು 2 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸುತ್ತಿದೆ ಎಂದು ಸಚಿವ ಮಾಂಡವಿಯಾ ಗುರುವಾರ ಸಂಸತ್ತಿಗೆ ತಿಳಿಸಿದರು.

3. “ಚೀನಾದಿಂದ ಭಾರತಕ್ಕೆ ಯಾವುದೇ ನೇರ ವಿಮಾನಗಳಿಲ್ಲ. ದೇಶದಲ್ಲಿ ಸೋಂಕಿನ ಹರಡುವಿಕೆಯನ್ನು ನಿರ್ವಹಿಸಲು ಕಳೆದ ಎರಡು ವರ್ಷಗಳಲ್ಲಿ ನಾವು ಕಲಿತ ಎಲ್ಲಾ ಸಂಭವನೀಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಅವರು ಒತ್ತಿ ಹೇಳಿದ್ದಾರೆ.

4. ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಎಲ್ಲಾ ಹಂತಗಳಲ್ಲಿನ ಸಂಪೂರ್ಣ ಕೋವಿಡ್ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ. “ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಕೋವಿಡ್ ನಿರ್ದಿಷ್ಟ ಸೌಲಭ್ಯಗಳನ್ನು ಲೆಕ್ಕಪರಿಶೋಧಿಸಲು ರಾಜ್ಯಗಳಿಗೆ ಸಲಹೆ ನೀಡಿದ್ದಾರೆ” ಎಂದು ಅವರ ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

5. ಜೀನೋಮ್ ಸೀಕ್ವೆನ್ಸಿಂಗ್ ಬಗ್ಗೆಯೂ ಪ್ರಧಾನ ಮಂತ್ರಿಯವರ ಸಭೆಯಲ್ಲಿ ಮಾತನಾಡಲಾಯ್ತು. ಒಮಿಕ್ರಾನ್‌ನ BF.7 ಉಪರೂಪಂತರಿ ವೈರಸ್‌ ಪ್ರಕರಣಗಳು ಚೀನಾದಲ್ಲಿ ಉಲ್ಬಣವಾಗಿರುವುದರಿಂದ, ಕೋವಿಡ್‌ ಹೊಸ ಪ್ರಕರಣಗಳ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ದೇಶದಲ್ಲಿ ಗಮನ ಹರಿಸಲಾಗಿದೆ.

6. ಬೇರೆ ದೇಶಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ ಹಾಗೂ ಹೊಸ ರೂಪಾಂತರಿ ವೈರಸ್​​ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಐಎಲ್‌ಐ (Influenza-Like Illness -ILI) ಮತ್ತು ಸಾರಿ (Severe acute respiratory infections -SARI) ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಹಾಗೆಯೇ ಒಳಾಂಗಣ ಸ್ಥಳ, ಎಸಿ ಇರುವ ಕಡೆಗಳಲ್ಲಿ ಮಾಸ್ಕ್‌ ಧರಿಸಬೇಕು ಎಂದು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

7. ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಘಟಕಗಳನ್ನು ಅಳವಡಿಸಲಾಗಿದೆ. ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗುವುದು. ಜಿಲ್ಲಾಸ್ಪತ್ರೆಗಳಲ್ಲಿ ಕೆಲ ಹಾಸಿಗೆಗಳನ್ನು ಕೋವಿಡ್‌ಗೆ ಮೀಸಲಿಡಲು ತೀರ್ಮಾನವಾಗಿದೆ. ಖಾಸಗಿ ಆಸ್ಪತ್ರೆಯಲ್ಲೂ ಹಾಸಿಗೆ ಮೀಸಲಿಡಲು ಸೂಚಿಸಲಾಗುವುದು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಭೆ ನಡೆಯುತ್ತಿದ್ದು, ಅಲ್ಲಿಂದ ನೀಡುವ ಮಾರ್ಗಸೂಚಿಯನ್ನು ನೋಡಿಕೊಂಡು ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸುಧಾಕರ್‌ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ, ಗುರುವಾರ ಕೋವಿಡ್‌ ನಿರ್ವಹಣೆ ಕುರಿತು ಸಭೆ ನಡೆದ ಬಳಿಕ ಮಾಹಿತಿ ನೀಡಿದರು.

8. ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಅವರು ಹೊಸ ಪಾಸಿಟಿವ್‌ ಪ್ರಕರಣಗಳ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರೀಕ್ಷೆ ಮತ್ತು ಜೀನೋಮ್ ಸೀಕ್ವೆನ್ಸಿಂಗ್‌ ಅನ್ನು ಹೆಚ್ಚಿಸಲು ಸೂಚಿಸಿದ್ದಾರೆ. ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಜನರು ಭಯಭೀತರಾಗಬೇಡಿ ಎಂದು ಹೇಳಿದ್ದಾರೆ.

9. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ಕೋವಿಡ್ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ ಎಂದು ಆಯಾ ರಾಜ್ಯಗಳ ಸರ್ಕಾರ ಮಾಹಿತಿ ನೀಡಿವೆ. ಹೀಗಾಗಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

10. ಏತನ್ಮಧ್ಯೆ, ಶನಿವಾರ ದೆಹಲಿಗೆ ಪ್ರವೇಶಿಸುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಂದ್ರವು ಆಕ್ಷೇಪಣೆಗಳನ್ನು ಎತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ