logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hindu Rashtra: ಹಿಂದುಗಳೆಲ್ಲ ಒಟ್ಟಾಗಬೇಕು ಮತ್ತು ಹಿಂದು ರಾಷ್ಟ್ರ ನಿರ್ಮಿಸಬೇಕು ಎಂದ ಕಾಂಗ್ರೆಸ್‌ ಶಾಸಕಿ; ವಿಡಿಯೋ ವೈರಲ್‌

Hindu Rashtra: ಹಿಂದುಗಳೆಲ್ಲ ಒಟ್ಟಾಗಬೇಕು ಮತ್ತು ಹಿಂದು ರಾಷ್ಟ್ರ ನಿರ್ಮಿಸಬೇಕು ಎಂದ ಕಾಂಗ್ರೆಸ್‌ ಶಾಸಕಿ; ವಿಡಿಯೋ ವೈರಲ್‌

HT Kannada Desk HT Kannada

Jun 17, 2023 06:58 PM IST

google News

ಛತ್ತೀಸ್‌ಗಢ ಕಾಂಗ್ರೆಸ್‌ ಶಾಸಕಿ ಅನಿತಾ ಶರ್ಮಾ

  • Hindu Rashtra: ಕಾಂಗ್ರೆಸ್‌ ಶಾಸಕಿಯೊಬ್ಬರು ಹಿಂದುರಾಷ್ಟ್ರ ನಿರ್ಮಾಣಕ್ಕೆ ಕರೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್‌ ಆಗಿದೆ. ಶುಕ್ರವಾರ ನಡೆದ ಧರ್ಮಸಭೆಯ ವಿಡಿಯೋ ಇದಾಗಿದ್ದು, ಈಗ ಗಮನಸೆಳೆದಿದೆ. ಇದರ ವಿವರ ಇಲ್ಲಿದೆ.

ಛತ್ತೀಸ್‌ಗಢ ಕಾಂಗ್ರೆಸ್‌ ಶಾಸಕಿ ಅನಿತಾ ಶರ್ಮಾ
ಛತ್ತೀಸ್‌ಗಢ ಕಾಂಗ್ರೆಸ್‌ ಶಾಸಕಿ ಅನಿತಾ ಶರ್ಮಾ (Anita Sharma Twitter)

ಹಿಂದು ರಾಷ್ಟ್ರದ ಕನಸು ನನಸು ಮಾಡಬೇಕು. ಅದಕ್ಕಾಗಿ ಹಿಂದುಗಳೆಲ್ಲ ಒಗ್ಗಟ್ಟಾಗಿ ದುಡಿಯಬೇಕು ಎಂಬ ಹೇಳಿಕೆ ಕೇಳಿದರೆ ಯಾರೇ ಆದರೂ, ಅದು ಬಿಜೆಪಿ ನಾಯಕರು ಯಾರೋ ಹೇಳಿದ್ದಿರಬೇಕು ಎಂದುಕೊಳ್ಳುತ್ತಾರೆ. ಆದರೆ, ಈ ಹೇಳಿಕೆ ನೀಡಿದ್ದು ಕಾಂಗ್ರೆಸ್‌ ಶಾಸಕಿ.

ಹೌದು, ಛತ್ತೀಸ್‌ಗಢದ ಕಾಂಗ್ರೆಸ್ ಶಾಸಕಿ ಅನಿತಾ ಶರ್ಮಾ ಅವರು 'ಹಿಂದು ರಾಷ್ಟ್ರ' ನಿರ್ಮಿಸಬೇಕು ಎಂದು ಶುಕ್ರವಾರ ಕರೆ ನೀಡಿದರು. ಅಲ್ಲದೆ, ಹಿಂದು ರಾಷ್ಟ್ರದ ಕನಸು ನನಸಾಗಿಸಲು ಎಲ್ಲರೂ ಮುಂದಾಗಬೇಕೆಂದು ಕೇಳಿಕೊಂಡರು ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ರಾಯ್‌ಪುರದ ಧರ್ಶಿವಾ ಪ್ರದೇಶದಲ್ಲಿ ಶುಕ್ರವಾರ ನಡೆದ 'ಧರ್ಮ ಸಭೆ'ಯಲ್ಲಿ ಪಾಲ್ಗೊಂಡಿದ್ದ ಧರ್ಶಿವಾ ಕ್ಷೇತ್ರದ ಶಾಸಕಿ ಅನಿತಾ ಶರ್ಮಾ ಅವರು, ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಒಗ್ಗಟ್ಟಾಗಿ ಕರೆ ನೀಡಿದರು ಮತ್ತು ಈ ಕಾರಣಕ್ಕಾಗಿ ಎಲ್ಲಾ ಹಿಂದೂಗಳು ಒಗ್ಗೂಡಬೇಕು ಎಂದು ಮನವಿ ಮಾಡಿದರು. ಈ ಹೇಳಿಕೆಯ ವಿಡಿಯೋ ತುಣುಕು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾವೆಲ್ಲರೂ ಎಲ್ಲೇ ಇರಬಹುದು... ಹಿಂದು ರಾಷ್ಟ್ರ ಮಾಡಲು ಪಣ ತೊಡಬೇಕು.. ಹಿಂದುಗಳ ಪರ ಮಾತನಾಡಬೇಕು ಮತ್ತು ಎಲ್ಲಾ ಹಿಂದುಗಳು ಒಗ್ಗೂಡಿದರೆ ಮಾತ್ರ ಹಿಂದು ರಾಷ್ಟ್ರ ಕಟ್ಟಲು ಸಾಧ್ಯ ಎಂದು ಶಾಸಕಿ ಅನಿತಾ ಶರ್ಮಾ ಸ್ಥಳೀಯ ಛತ್ತೀಸ್‌ಗಢದ ಭಾಷೆಯಲ್ಲಿ ಹೇಳಿದರು.

ಅಂತರ ಕಾಯ್ದುಕೊಂಡ ಕಾಂಗ್ರೆಸ್‌ ಪಕ್ಷ

ಶಾಸಕಿ ಅನಿತಾ ಶರ್ಮಾ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷ ಅಂತರವನ್ನು ಕಾಯ್ದುಕೊಂಡಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಛತ್ತೀಸ್‌ಗಢ ಕಾಂಗ್ರೆಸ್ ಸಂವಹನ ಮುಖ್ಯಸ್ಥ ಮತ್ತು ವಕ್ತಾರ ಸುಶೀಲ್ ಆನಂದ್ ಶುಕ್ಲಾ ಅವರು ಇದನ್ನು "ವೈಯಕ್ತಿಕ ಹೇಳಿಕೆ" ಎಂದು ವ್ಯಾಖ್ಯಾನಿಸಿದರು.

“ಕಾಂಗ್ರೆಸ್ ಪಕ್ಷವು ಸಂವಿಧಾನದ ಜೊತೆ ನಿಂತಿದೆ. ಬಾಬಾಸಾಹೇಬ್ ಅಂಬೇಡ್ಕರ್, ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಡಾ ರಾಜೇಂದ್ರ ಪ್ರಸಾದ್ ಅವರಂತಹ ನಾಯಕರು ರಚಿಸಿದ ಮಹಾನ್ ಸಂವಿಧಾನದಲ್ಲಿ ಉಲ್ಲೇಖಿಸಲಾದ ಜಾತ್ಯತೀತತೆಯನ್ನು ಕಾಂಗ್ರೆಸ್ ದೃಢವಾಗಿ ಪ್ರತಿಪಾದಿಸುತ್ತದೆ ಎಂದು ಶುಕ್ಲಾ ಹೇಳಿದರು.

ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸಿದ್ಧಾಂತವನ್ನು ಹೊಂದಬಹುದು. ಕಾಂಗ್ರೆಸ್ ಪಕ್ಷವು ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುತ್ತದೆ ಎಂದು ಶುಕ್ಲಾ ಹೇಳಿದರು.

ತಪ್ಪಾಗಿ ಅರ್ಥೈಸಲಾಗಿದೆ ಎಂದ ಶಾಸಕಿ ಅನಿತಾ

ಆದಾಗ್ಯೂ, ನನ್ನ ಹೇಳಿಕೆಯನ್ನು "ತಪ್ಪಾಗಿ ಅರ್ಥೈಸಲಾಗಿದೆ". ಈ ದೇಶದಲ್ಲಿ ವಾಸಿಸುವ ಎಲ್ಲ ಜನರ ಏಕತೆಯ ಬಗ್ಗೆ ಮಾತನಾಡಿದ್ದೆ ಎಂದು ಶನಿವಾರ ಅನಿತಾ ಶರ್ಮಾ ಸಮಜಾಯಿಷಿ ನೀಡಿದರು.

“ನಾನು ಗಾಂಧಿವಾದಿ ಮತ್ತು ಗಾಂಧೀಜಿ ಅವರು ದ್ವೇಷವನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ ... ಎಲ್ಲ ಧರ್ಮದ ಜನರು ಸಹೋದರರು ... ನಾನು ಭಾರತದಲ್ಲಿ ವಾಸಿಸುವ ಎಲ್ಲ ಜನರ ಏಕತೆಯ ಬಗ್ಗೆ ಮಾತನಾಡುತ್ತಿದ್ದೆ ... ನನ್ನ ಹಿಂದು ರಾಷ್ಟ್ರದ ಪರಿಕಲ್ಪನೆ ಎಲ್ಲ ಧರ್ಮಗಳ ಏಕತೆಯಾಗಿದೆ'' ಎಂದು ಶರ್ಮಾ ವಿವರಿಸಿದರು. ಅಲ್ಲದೆ, ತನ್ನ ಹೇಳಿಕೆಯನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ ಎಂದ ಬಿಜೆಪಿ ನಾಯಕ

ಹಿಂದು ರಾಷ್ಟ್ರ, ರಾಮ ರಾಜ್ಯದ ಪರಿಕಲ್ಪನೆಗಳನ್ನು ಅವರಿಗೆ ಬೇಕಾದಂತೆ ತಿರುಚಿಕೊಳ್ಳುವುದಕ್ಕೆ ಅವಕಾಶವಿಲ್ಲ. ಈ ಪರಿಕಲ್ಪನೆಗಳ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆಯೂ ಇಲ್ಲ. ಆ ಹಕ್ಕೂ ಅವರಿಗಿಲ್ಲ ಎಂದು ಬಿಜೆಪಿ ವಕ್ತಾರ ಕೇದಾರ್‌ ಗುಪ್ತಾ ಹೇಳಿದ್ದಾರೆ.

ಅಲ್ಲದೆ, ಏಕರೂಪ ನಾಗರಿಕ ಸಂಹಿತೆ ಬರುತ್ತಿದೆ. ಅದನ್ನು ಕಾಂಗ್ರೆಸ್‌ ಶಾಸಕಿ ಅನಿತಾ ಶರ್ಮಾ ಬೆಂಬಲಿಸುವರೇ ಎಂದು ಪ್ರಶ್ನಿಸಿದ ಕೇದಾರ್‌, ಕಾಂಗ್ರೆಸ್‌ ಪಕ್ಷದ ಮಾತಿಗೂ ಕೃತಿಗೂ ತಾಳೆ ಆಗುವುದಿಲ್ಲ ಎಂದು ಟೀಕಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ