ಜೈನ ಮುನಿ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ನಿಧನ: ಪಿಎಂ ಮೋದಿಯೂ ಇವರ ಆಶೀರ್ವಾದ ಪಡೆದಿದ್ದರು
Feb 18, 2024 10:37 AM IST
ಆಚಾರ್ಯ ವಿದ್ಯಾಸಾಗರ್ ಮಹಾರಾಜ್
- Acharya Vidyasagar Maharaj: ಜೈನ ಧರ್ಮದ ಪ್ರಮುಖ ದಾರ್ಶನಿಕರಲ್ಲಿ ಒಬ್ಬರಾದ, ಕರ್ನಾಟಕ ಮೂಲದ ಆಚಾರ್ಯ ಶ್ರೀ ವಿದ್ಯಾಸಾಗರ್ ಮಹಾರಾಜ್ ಅವರು ಇಂದು ನಿಧನರಾಗಿದ್ದಾರೆ.
ದಿಗಂಬರ ಮುನಿ, ಜೈನ ಧರ್ಮದ ಪ್ರಮುಖ ದಾರ್ಶನಿಕರಲ್ಲಿ ಒಬ್ಬರಾದ ಆಚಾರ್ಯ ಶ್ರೀ ವಿದ್ಯಾಸಾಗರ್ ಮಹಾರಾಜ್ ಅವರು ಇಂದು (ಫೆ 18, ಭಾನುವಾರ) ಮುಂಜಾನೆ 2:35 ರ ಸುಮಾರಿಗೆ ಛತ್ತೀಸ್‌ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಅಸುನೀಗಿದ್ದಾರೆ. ಇವರು ಹುಟ್ಟಿದ್ದು ಕರ್ನಾಟಕದ ಬೆಳಗಾವಿಯಲ್ಲಿ.
78 ವರ್ಷದ ವಿದ್ಯಾಸಾಗರ್ ಮಹಾರಾಜ್ ಅವರು 3 ದಿನಗಳ ಹಿಂದೆ ಸಂಪೂರ್ಣ ಪ್ರಜ್ಞೆಯಲ್ಲಿದ್ದಾಗ ಶಾಶ್ವತ ಉಪವಾಸ ಕೈಗೊಂಡಿದ್ದರು. ಸಲ್ಲೇಖನರ ಜೈನ ಧಾರ್ಮಿಕ ಆಚರಣೆಯನ್ನು ಅನುಸರಿಸಿ, ಅವರು ಅಂದಿನಿಂದಲೂ ಮಾತನಾಡುವುದನ್ನು ನಿಲ್ಲಿಸಿದ್ದರು.
ವಿದ್ಯಾಸಾಗರ್ ಮಹಾರಾಜ್ ಅವರ ಅಂತಿಮ ದರ್ಶನ ಪಡೆಯಲು ಡೊಂಗರಗಢಕ್ಕೆ ಭಕ್ತರ ದಂಡೇ ಆಗಮಿಸುತ್ತಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.
ಪಿಎಂ ಮೋದಿಯೂ ಇವರ ಆಶೀರ್ವಾದ ಪಡೆದಿದ್ದರು
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಆಚಾರ್ಯ ವಿದ್ಯಾಸಾಗರ್ ಮಹಾರಾಜರ ಆಶೀರ್ವಾದ ಪಡೆಯಲು ಡೊಂಗರಗಢಕ್ಕೆ ಆಗಮಿಸಿದ್ದರು. ಹೆಸರಾಂತ ದಾರ್ಶನಿಕರ ಬಗ್ಗೆ ಇರುವ ತಮ್ಮ ಅಭಿಮಾನವನ್ನು ಮೋದಿ ತೋರ್ಪಡಿದಸಿದ್ದರು. 'ಆಚಾರ್ಯ ಶ್ರೀ ವಿದ್ಯಾಸಾಗರ್ ಜೀ ಅವರ ಆಶೀರ್ವಾದವನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಆಚಾರ್ಯ ವಿದ್ಯಾಸಾಗರ್ ಮಹಾರಾಜ್ರ ಜೀವನ ಪಯಣ
ವಿದ್ಯಾಸಾಗರ್ ಮಹಾರಾಜ್ ಅವರು 1946 ಅಕ್ಟೋಬರ್ 10 ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗ ಎಂಬಲ್ಲಿ ಜನಿಸಿದ್ದರು. ರಾಜಸ್ಥಾನದಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆದರು. ಬುಂದೇಲ್ಖಂಡ್ನಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಠಿಣ ತಪಸ್ಸು ಮತ್ತು ಧ್ಯಾನಕ್ಕೆ ಹೆಸರುವಾಸಿಯಾದ ಅವರು ಹೈಕು ಕವಿತೆಗಳನ್ನು (ಜಪಾನೀಸ್ ಕಾವ್ಯ ರೂಪ) ಮತ್ತು ಪ್ರಸಿದ್ಧ ಹಿಂದಿ ಕವಿತೆ "ಮುಕಾಮತಿ" ಯನ್ನು ಬರೆದಿದ್ದಾರೆ.
1968 ರಲ್ಲಿ ದಿಗಂಬರ ಸನ್ಯಾಸಿಯಾಗಿ ದೀಕ್ಷೆ ಪಡೆದ ಇವರು 1972 ರಲ್ಲಿ 'ಆಚಾರ್ಯ' ಸ್ಥಾನಮಾನವನ್ನು ಪಡೆದರು. ಅವರ ಕಠಿಣ ಜೀವನಶೈಲಿಯು ಉಪ್ಪು, ಸಕ್ಕರೆ, ಹಣ್ಣುಗಳು ಮತ್ತು ಇತರ ಕೆಲವು ಪದಾರ್ಥಗಳನ್ನು ತ್ಯಜಿಸುವುದನ್ನು ಒಳಗೊಂಡಿತ್ತು. ಹಿಂದಿ ಪ್ರಚಾರ, ಕೈಮಗ್ಗ ಮತ್ತು ಆಯುರ್ವೇದದಲ್ಲಿಯೂ ಇವರ ಪಾತ್ರವಿದೆ. ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್, ಕಮಲ್ ನಾಥ್ ಮತ್ತು ಉಮಾ ಭಾರತಿ ಅವರಂತಹ ರಾಜಕೀಯ ನಾಯಕರು ಸೇರಿದಂತೆ ಉತ್ತರ ಭಾರತದಲ್ಲಿ ಇವರಿಗೆ ಲಕ್ಷಾಂತರ ಭಕ್ತರಿದ್ದಾರೆ.