logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Unilaterally Renamed Indian Places: ಅರುಣಾಚಲದ 11 ಸ್ಥಳಗಳ ಮರುನಾಮಕರಣ ಮಾಡಿದ ಚೀನಾ

China unilaterally renamed Indian places: ಅರುಣಾಚಲದ 11 ಸ್ಥಳಗಳ ಮರುನಾಮಕರಣ ಮಾಡಿದ ಚೀನಾ

HT Kannada Desk HT Kannada

Apr 04, 2023 06:05 AM IST

google News

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪ ಭಾರತ ಮತ್ತು ಚೀನಾದ ಸೈನಿಕರು

  • China unilaterally renamed Indian places: ದಕ್ಷಿಣ ಟಿಬೆಟ್‌ ಎಂದು ಹೇಳುತ್ತ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳ ಮರುನಾಮಕರಣ ಮಾಡುವ ಕೆಲಸವನ್ನು ಚೀನಾ ಇದು ಮೂರನೇ ಬಾರಿಗೆ ಮಾಡಿದೆ. ಈ ಹಿಂದೆ 2017ರ ಏಪ್ರಿಲ್‌, 2021ರ ಡಿಸೆಂಬರ್‌ನಲ್ಲಿ ಇದೇ ರೀತಿ ಮಾಡಿತ್ತು.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪ  ಭಾರತ ಮತ್ತು ಚೀನಾದ ಸೈನಿಕರು
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪ ಭಾರತ ಮತ್ತು ಚೀನಾದ ಸೈನಿಕರು (File/ PTI)

ನಮ್ಮ ದೇಶದ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿರುವ ಚೀನಾ, ಅದು ದಕ್ಷಿಣ ಟಿಬೆಟ್ ಎಂದು ಹೇಳಿಕೊಂಡಿದೆ. ಮರುನಾಮಕರಣಕ್ಕೆ ಒಳಗಾದ ಪ್ರದೇಶಗಳಲ್ಲಿ ಪರ್ವತ ಶಿಖರ, ನದಿ ಮತ್ತು ವಸತಿ ಪ್ರದೇಶಗಳು ಸೇರಿಕೊಂಡಿವೆ. ಚೀನಾದ ಈ ನಡವಳಿಕೆ ನವದೆಹಲಿ ಮತ್ತು ಬೀಜಿಂಗ್‌ ನಡುವಿನ ಅವಿಶ್ವಾಸವನ್ನು ಇನ್ನಷ್ಟು ಬಲಗೊಳಿಸುವ ರೀತಿಯಲ್ಲಿ ಇದೆ. ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಹದಗೆಡುವ ಲಕ್ಷಣಗಳು ಗೋಚರಿಸಿವೆ.

ಚೀನಾ ಈ ರೀತಿ ಮಾಡುತ್ತಿರುವುದು ಇದು ಮೂರನೇ ಸಲ. ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಇದೇ ರೀತಿ ಏಕಪಕ್ಷೀಯವಾಗಿ ಮರುನಾಮಕರಣ ಮಾಡಿದೆ. ಈ ಹಿಂದೆ ಚೀನಾ, 2017ರ ಏಪ್ರಿಲ್‌, 2021ರ ಡಿಸೆಂಬರ್‌ ತಿಂಗಳಲ್ಲಿ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಈ ರೀತಿ ಮರುನಾಮಕರಣ ಮಾಡಿತ್ತು.

ಈ ಹಿಂದೆ ಚೀನಾದ ಮರುನಾಮಕರಣ ಪ್ರಯತ್ನವನ್ನು ಭಾರತವು ಕೂಡಲೇ ತಿರಸ್ಕರಿಸಿತ್ತು. ಈಶಾನ್ಯ ರಾಜ್ಯವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು "ಬೇರ್ಪಡಿಸಲಾಗದ" ಭಾಗವಾಗಿ ಉಳಿಯುತ್ತದೆ ಎಂದು ನವದೆಹಲಿ ಪುನರುಚ್ಚರಿಸಿತ್ತು.

"ಭೌಗೋಳಿಕ ಹೆಸರುಗಳ ನಿರ್ವಹಣೆಯ ಕುರಿತು ಸ್ಟೇಟ್ ಕೌನ್ಸಿಲ್ (ಚೀನಾ ಕ್ಯಾಬಿನೆಟ್) ಸಂಬಂಧಿತ ನಿಯಮಗಳ ಪ್ರಕಾರ, ನಮ್ಮ ಸಚಿವಾಲಯವು ಸಂಬಂಧಿತ ಇಲಾಖೆಗಳೊಂದಿಗೆ ದಕ್ಷಿಣ ಟಿಬೆಟ್‌ನಲ್ಲಿ ಕೆಲವು ಭೌಗೋಳಿಕ ಹೆಸರುಗಳನ್ನು ಪ್ರಮಾಣೀಕರಿಸಿದೆ" ಎಂದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಭಾನುವಾರ ಕಿರು ಹೇಳಿಕೆಯಲ್ಲಿ ತಿಳಿಸಿರುವುದು ಸದ್ಯ ಗಮನಸೆಳೆದ ವಿಚಾರ.

“11 ಸ್ಥಳಗಳ ಅಧಿಕೃತ ಹೆಸರುಗಳನ್ನು ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದೆ, ಇದು ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು ಮತ್ತು ಎರಡು ನದಿಗಳನ್ನು ಒಳಗೊಂಡಂತೆ ನಿಖರವಾದ ನಿರ್ದೇಶಾಂಕಗಳನ್ನು ನೀಡಿದೆ. ಇದು ಸ್ಥಳಗಳ ಹೆಸರುಗಳು ಮತ್ತು ಅವುಗಳ ಅಧೀನದ ಆಡಳಿತ ಜಿಲ್ಲೆಗಳ ವರ್ಗವನ್ನು ಸಹ ಪಟ್ಟಿ ಮಾಡಿದೆ. ಇದು ಮೂರನೇ ಹಂತದ ಮರುನಾಮಕರಣ” ಎಂದು ಸರ್ಕಾರಿ ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಸೋಮವಾರ ಸರ್ಕಾರದ ಅಧಿಸೂಚನೆಯನ್ನು ಉಲ್ಲೇಖಿಸಿದ ವರದಿಯಲ್ಲಿ ತಿಳಿಸಿದೆ.

ಟಿಬೆಟ್‌ನಲ್ಲಿರುವ ಸ್ಥಳಗಳ ಹೆಸರು ಇನ್ನು ಮುಂದೆ ಚೀನಾದ ಮ್ಯಾಪ್‌ಗಳಲ್ಲಿ ಕೂಡ ಗೋಚರಿಸಲಿದೆ ಎಂಬುದು ಇದರ ಅರ್ಥ.

ಚೀನಾದ ಇನ್‌ಸ್ಟಿಟ್ಯೂಟ್‌ ಆಫ್‌ ಚೀನೀಸ್‌ ಬಾರ್ಡರ್‌ಲ್ಯಾಂಡ್‌ ಸ್ಟಡೀಸ್‌, ಚೀನೀಸ್‌ ಅಕಾಡೆಮಿ ಆಫ್‌ ಸೋಷಿಯಲ್‌ ಸೈನ್ಸಸ್‌ನ ಜಾಂಗ್ ಯೋಂಗ್‌ಪಾನ್, ಹೆಸರುಗಳನ್ನು ಪ್ರಮಾಣೀಕರಿಸುವ ಚೀನಾದ ಕ್ರಮವು "ಚೀನಾದ ಸಾರ್ವಭೌಮತ್ವದೊಳಗೆ ಬರುತ್ತದೆ ಎಂದು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಇದೇ ರೀತಿ, ಬೀಜಿಂಗ್‌ನಲ್ಲಿರುವ ಚೀನಾ ಟಿಬೆಟಾಲಜಿ ಸಂಶೋಧನಾ ಕೇಂದ್ರದ ಪರಿಣಿತರಾದ ಲಿಯಾನ್ ಕ್ಸಿಯಾಂಗ್ಮಿನ್, ಈ ಪ್ರದೇಶದಲ್ಲಿ ಹೆಚ್ಚು "ಪ್ರಮಾಣಿತ" ಸ್ಥಳದ ಹೆಸರುಗಳನ್ನು ಭವಿಷ್ಯದಲ್ಲಿ ಸರ್ಕಾರ ಘೋಷಿಸಲಿದೆ ಎಂದು ಹೇಳಿದ್ದಾಗಿ ವರದಿ ಹೇಳಿದೆ.

ಬೀಜಿಂಗ್ ಜಂಗ್ನಾನ್ (ಚೀನಾದ ಟಿಬೆಟ್‌ನ ದಕ್ಷಿಣ ಭಾಗ) ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ (TAR) ಭಾಗವೆಂದು ಹೇಳುತ್ತ ಬಂದಿದೆ. ಈ ವಿದ್ಯಮಾನದ ಕುರಿತು ಭಾರತೀಯ ಅಧಿಕಾರಿಗಳಿಂದ ತತ್‌ಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಚೀನಾದ ಈ ರೀತಿ ನಡವಳಿಕೆ ಇತ್ತೀಚಿನ ವರ್ಷಗಳಲ್ಲಿ ಮುಂದುವರಿಕೆಯಾಗಿರುವುದು ಕೇಂದ್ರ ಸರ್ಕಾರದ ಗಮನದಲ್ಲಿದೆ ಎಂದು ಈ ವಿದ್ಯಮಾನದ ಅರಿವು ಇರುವಂಥವರು ತಿಳಿಸಿರುವುದಾಗಿ HT ಕನ್ನಡದ ಮಾತೃತಾಣ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಚೀನಾ ಈಗ ಹೊಸ ಹೆಸರುಗಳನ್ನು ನೀಡಲು ನಿರ್ಧರಿಸಿದ್ದೇಕೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯನ್ನು ಗಮನಿಸಿದರೆ, ನವದೆಹಲಿಯನ್ನು ಕೆರಳಿಸುವುದಕ್ಕಾಗಿ ಬೀಜಿಂಗ್‌ ಕ್ರಮ ಕೈಗೊಂಡಿರಬಹುದು ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ವರದಿ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ