logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ ಯಾರು; ಬಂಧಿತ ಸಂತನಿಂದ ಅಂತರ ಕಾಯ್ದುಕೊಂಡ ಇಸ್ಕಾನ್ ಬಾಂಗ್ಲಾದೇಶ- 7 ಮುಖ್ಯ ಅಂಶಗಳು

ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ ಯಾರು; ಬಂಧಿತ ಸಂತನಿಂದ ಅಂತರ ಕಾಯ್ದುಕೊಂಡ ಇಸ್ಕಾನ್ ಬಾಂಗ್ಲಾದೇಶ- 7 ಮುಖ್ಯ ಅಂಶಗಳು

Umesh Kumar S HT Kannada

Nov 29, 2024 12:50 PM IST

google News

ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ (ಚಿತ್ರದಲ್ಲಿ ಮಧ್ಯದಲ್ಲಿರುವವರು) ಯಾರು ಮತ್ತು ಬಂಧಿತ ಸಂತನಿಂದ ಅಂತರ ಕಾಯ್ದುಕೊಂಡ ಇಸ್ಕಾನ್ ಬಾಂಗ್ಲಾದೇಶಕ್ಕೆ ಸಂಬಂಧಿಸಿದ 7 ಮುಖ್ಯ ಅಂಶಗಳು.

  • Chinmoy Krishna Das: ಹಿಂದೂ ಸಮುದಾಯದವರ ಮೇಲಿನ ದೌರ್ಜನ್ಯ, ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂತ ಚಿನ್ಮಯ್ ಕೃಷ್ಣ ದಾಸ್‌ ಬ್ರಹ್ಮಾಚಾರಿ ಯಾರು, ಇಸ್ಕಾನ್ ಬಾಂಗ್ಲಾದೇಶ ಅವರಿಂದ ಅಂತರ ಕಾಯ್ದುಕೊಂಡಿರುವುದೇಕೆ? ಇಲ್ಲಿದೆ 7 ಅಂಶಗಳ ವಿವರ.

ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ (ಚಿತ್ರದಲ್ಲಿ ಮಧ್ಯದಲ್ಲಿರುವವರು) ಯಾರು ಮತ್ತು ಬಂಧಿತ ಸಂತನಿಂದ ಅಂತರ ಕಾಯ್ದುಕೊಂಡ ಇಸ್ಕಾನ್ ಬಾಂಗ್ಲಾದೇಶಕ್ಕೆ ಸಂಬಂಧಿಸಿದ 7 ಮುಖ್ಯ ಅಂಶಗಳು.
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ (ಚಿತ್ರದಲ್ಲಿ ಮಧ್ಯದಲ್ಲಿರುವವರು) ಯಾರು ಮತ್ತು ಬಂಧಿತ ಸಂತನಿಂದ ಅಂತರ ಕಾಯ್ದುಕೊಂಡ ಇಸ್ಕಾನ್ ಬಾಂಗ್ಲಾದೇಶಕ್ಕೆ ಸಂಬಂಧಿಸಿದ 7 ಮುಖ್ಯ ಅಂಶಗಳು.

Chinmoy Krishna Das Brahmachari: ಬಾಂಗ್ಲಾದೇಶದಲ್ಲಿ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ ಜಾಗತಿಕ ಗಮನಸೆಳೆದಿದ್ದು, ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರಗಳು ಖಂಡಿಸಲ್ಪಟ್ಟಿವೆ. ಈ ನಡುವೆ, ರಾಷ್ಟ್ರದ್ರೋಹದ ಆರೋಪದ ಕಾರಣಕ್ಕೆ ಬಂಧಿತರಾಗಿರುವ ಚಿನ್ಮಯ್ ಕೃಷ್ಣ ದಾಸ್‌ ಅವರ ನಡವಳಿಕೆಗಳ ವಿಚಾರದಲ್ಲಿ ಬಾಂಗ್ಲಾದೇಶ ಇಸ್ಕಾನ್ ಅಂತರ ಕಾಯ್ದುಕೊಂಡಿದ್ದು, ಅವರನ್ನು ಇಸ್ಕಾನ್‌ನ ಎಲ್ಲ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಿದೆ. ಈ ಬಗ್ಗೆ ಬಾಂಗ್ಲಾದೇಶ ಇಸ್ಕಾನ್ ಗುರುವಾರ (ನವೆಂಬರ್ 28) ಅಧಿಕೃತ ಹೇಳಿಕೆ ನೀಡಿದ್ದು, ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ ಅವರ ನಡವಳಿಕೆಗಳನ್ನು ಇಸ್ಕಾನ್ ಸಮರ್ಥಿಸುವುದಿಲ್ಲ. ಆದರೆ ಅವರ ಹಕ್ಕುಗಳ ರಕ್ಷಣೆಗೆ ಇಸ್ಕಾನ್ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಇಸ್ಕಾನ್ ಬಾಂಗ್ಲಾದೇಶದ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರ ದಾಸ್ ಬ್ರಹ್ಮಚಾರಿ, ಶಿಸ್ತಿನ ಉಲ್ಲಂಘನೆ ಕಾರಣಕ್ಕೆ ಸಂತ ಚಿನ್ಮಯ್ ಕೃಷ್ಣ ದಾಸ್ ಮತ್ತು ಪ್ರಬಾರತಕ್ ಶ್ರೀಕೃಷ್ಣ ಮಂದಿರದ ಮುಖ್ಯಸ್ಥ ಗೌರಂಗ್ ದಾಸ್ ಅವರನ್ನು ಸಂಸ್ಥೆಯ ಎಲ್ಲಾ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ. ಇಸ್ಕಾನ್‌ನ ಮೂಲ ಉದ್ಧೇಶಗಳಿಂದ ವ್ಯತಿರಿಕ್ತವಾಗಿ ಮುಂದುವರಿದ ಕಾರಣ ಅಂತಹ ನಡವಳಿಕೆಗಳನ್ನು ಬೆಂಬಲಿಸಲಾಗದು ಎಂದು ತಿಳಿಸಿದ್ದಾಗಿ ದಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ ಯಾರು; 7 ಮುಖ್ಯ ಅಂಶಗಳು

1) ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅಥವಾ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರ ನಿಜವಾದ ಹೆಸರು ಚಂದನ್ ಕುಮಾರ್ ಧರ್. ಅವರು ಸನಾತನ ಜಾಗರಣ ಮಂಚ್‌ನ ವಕ್ತಾರರು ಮತ್ತು ಚಿತ್ತಗಾಂಗ್ ಇಸ್ಕಾನ್‌ನ ಮುಖ್ಯಸ್ಥರು. 37 ವರ್ಷದ ಚಿನ್ಮೋಯ್ ಕೃಷ್ಣ ಚಿತ್ತಗಾಂಗ್‌ನ ಸತ್ಕಾನಿಯಾ ಉಪ ಜಿಲ್ಲೆಯವರು ಎಂದು ಇಸ್ಕಾನ್ ಚಿತ್ತಗಾಂಗ್ ಬಹಿರಂಗಪಡಿಸಿದೆ. ಅವರು ಧಾರ್ಮಿಕ ಭಾಷಣಗಳಿಗೆ ಹೆಸರುವಾಸಿ. ಈ ಭಾಷಣಗಳಿಂದ ಅವರು ಚಿಕ್ಕ ವಯಸ್ಸಿನಲ್ಲೇ ಧರ್ಮ ಪ್ರಚಾರಕರಾಗಿ ಗುರುತಿಸಿಕೊಂಡರು. ಇದರಿಂದಾಗಿ ಅವರಿಗೆ ‘ಶಿಶು ವಕ್ತ’ ಎಂಬ ಉಪನಾಮವೂ ಬಂತು ಎಂದು ಅಮರ್‌ ಉಜಾಲಾ ವರದಿ ಮಾಡಿದೆ.

2) ಬಾಂಗ್ಲಾದೇಶದ ಇಸ್ಕಾನ್‌ನ ಪುಂಡರೀಕ್ ಧಾಮ್ ದೇವಾಲಯದ ಮುಖ್ಯಸ್ಥರಾಗಿ ಚಿನ್ಮಯ್‌ ಕೃಷ್ಣ ದಾಸ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲ್ಲಿ ರಾಧಾರಾಣಿಯ ತಂದೆ ವೃಷಭಾನು ಮಹಾರಾಜನ ಅವತಾರವನ್ನು ಶ್ರೀಲ ಪುಂಡರೀಕ ವಿದ್ಯಾನಿಧಿ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಈ ದೇವಾಲಯಕ್ಕೆ ಪುಂಡರೀಕ ಧಾಮ ಎಂದು ಹೆಸರು ಎಂದು ನ್ಯೂಸ್ 18 ವರದಿ ಮಾಡಿದೆ.

3) ಚಿನ್ಮಯ್‌ ಕೃಷ್ಣ ದಾಸ್ ಅವರು 2016 ರಿಂದ 2022 ರವರೆಗೆ ಇಸ್ಕಾನ್‌ನ ಚಿತ್ತಗಾಂಗ್ ವಿಭಾಗೀಯ ಕಾರ್ಯದರ್ಶಿಯಾಗಿದ್ದರು. ಅವರು 2007 ರಿಂದ ಚಿತ್ತಗಾಂಗ್‌ನ ಹತಜಾರಿಯಲ್ಲಿರುವ ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿದ್ದಾರೆ. ಮೂರು ತಿಂಗಳ ಹಿಂದೆ ಚಿನ್ಮಯ್ ಅವರನ್ನು ಇಸ್ಕಾನ್‌ನಲ್ಲಿನ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ.

4) ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸಾಚಾರ ಖಂಡಿಸಿ ಪ್ರತಿಭಟನಾ ರಾಲಿಗಳಲ್ಲಿ ಚಿನ್ಮಯ್‌ ಕೃಷ್ಣ ದಾಸ್ ಪ್ರಭು ಮುಖ್ಯ ಭಾಷಣಕಾರರಾಗಿ ಗಮನಸೆಳೆದಿದ್ದರು. ಅಕ್ಟೋಬರ್ 25ರಂದು ಚಿತ್ತಗಾಂಗ್‌ನಲ್ಲಿ ಚಿನ್ಮಯ್ ಕೃಷ್ಣ ದಾಸ್ ಅಧ್ಯಕ್ಷತೆಯಲ್ಲಿ ನಡೆದ ರ್ಯಾಲಿಯಲ್ಲಿ ಅಲ್ಪಸಂಖ್ಯಾತರ ರಕ್ಷಣಾ ಕಾನೂನು, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ರಚನೆ, ದೇವಸ್ಥಾನ, ಮಠಗಳ ಆಸ್ತಿ ರಕ್ಷಣೆಗೆ ಸಂಬಂಧಿಸಿದ ಕಾನೂನು ರಚನೆ ಸೇರಿದಂತೆ 8 ಬೇಡಿಕೆಗಳನ್ನು ಮಂಡಿಸಲಾಯಿತು.

5) ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯಾದಾಗಿನಿಂದ, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಿರಂತರ ಹಿಂಸಾಚಾರ ನಡೆಯುತ್ತಿದೆ. ಈ ಘಟನೆಗಳನ್ನು ವಿರೋಧಿಸಿ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಚಿನ್ಮಯ್ ಕೃಷ್ಣ ದಾಸ್ ಪ್ರಮುಖ ಪಾತ್ರ ವಹಿಸಿದ್ದರು.

6) ಚಿತ್ತಗಾಂಗ್ ಪ್ರತಿಭಟನಾ ಸಭೆಯಲ್ಲಿ ಚಿನ್ಮಯ್ ಕೃಷ್ಣ ದಾಸ್ ಮತ್ತು 18 ಜನ ಅಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರಕ್ಕೆ ಕೇಸರಿ ಧ್ವಜ ಹಾರಿಸಿದ್ದು, ಆ ಮೂಲಕ ರಾಷ್ಟ್ರದ್ರೋಹದ ಕೆಲಸ ಮಾಡಿದ್ದಾರೆ ಎಂದು ಎಂ ಡಿ ಫಿರೋಜ್ ಖಾನ್ ಎಂಬುವವರು ದೂರು ದಾಖಲಿಸಿದರು. ಬಾಂಗ್ಲಾದೇಶ ಧ್ವಜ ನಿಯಮ 1972ರಂತೆ ಕೇಸ್ ದಾಖಲಾಗಿದೆ. ಬಾಂಗ್ಲಾದೇಶದಲ್ಲಿ ದೇಶದ್ರೋಹಕ್ಕೆ ಜೀವಾವಧಿ ಶಿಕ್ಷೆಯನ್ನು ವಿಧಿಸುವುದಕ್ಕೆ ಅವಕಾಶವಿದೆ.

7) ಆದರೆ, ಚಿನ್ಮಯ್‌ ಕೃಷ್ಣ ದಾಸ್ ಪ್ರಭು ಅವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಾನು ಇರಲಿಲ್ಲ. ಆರೋಪಿಸಲಾಗಿರುವ ಘಟನೆ ನಡೆದ ಸ್ಥಳವು ಪ್ರತಿಭಟನಾ ಸ್ಥಳಕ್ಕಿಂತ 2 ಕಿ.ಮೀ ದೂರದಲ್ಲಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ