logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Border Dispute: ಕರ್ನಾಟಕದ 'ಮರಾಠಿ ವಿರೋಧಿ' ನೀತಿಗೆ ಖಂಡನೆ: ಮಹಾರಾಷ್ಟ್ರ ಅಸೆಂಬ್ಲಿ ನಿರ್ಣಯವೆಂಬ ರೋದನೆ..!

Border Dispute: ಕರ್ನಾಟಕದ 'ಮರಾಠಿ ವಿರೋಧಿ' ನೀತಿಗೆ ಖಂಡನೆ: ಮಹಾರಾಷ್ಟ್ರ ಅಸೆಂಬ್ಲಿ ನಿರ್ಣಯವೆಂಬ ರೋದನೆ..!

HT Kannada Desk HT Kannada

Dec 27, 2022 04:32 PM IST

google News

ನಿರ್ಣಯ ಮಂಡಿಸಿದ ಏಕನಾಥ್‌ ಶಿಂಧೆ

    • ಕರ್ನಾಟಕದ 'ಮರಾಠಿ ವಿರೋಧಿ' ನಿಲುವನ್ನು ಖಂಡಿಸಿ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೇ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವ ಭರವಸೆಯನ್ನೂ ನೀಡಲಾಗಿದೆ. ಈ ನಿರ್ಣಯವನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ನಿರ್ಣಯ ಮಂಡಿಸಿದ ಏಕನಾಥ್‌ ಶಿಂಧೆ
ನಿರ್ಣಯ ಮಂಡಿಸಿದ ಏಕನಾಥ್‌ ಶಿಂಧೆ (ANI)

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕವು ತೆಗೆದುಕೊಂಡ ಒಕ್ಕೊರಲಿನ ನಿರ್ಣಯಕ್ಕೆ, ಮಹಾರಾಷ್ಟ್ರ ಸಡ್ಡು ಹೊಡೆದಿದೆ.

ಹೌದು, ಕರ್ನಾಟಕದ 'ಮರಾಠಿ ವಿರೋಧಿ' ನಿಲುವನ್ನು ಖಂಡಿಸಿ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೇ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವ ಭರವಸೆಯನ್ನೂ ನೀಡಲಾಗಿದೆ. ಈ ನಿರ್ಣಯವನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಕರ್ನಾಟಕದ 'ಮರಾಠಿ ವಿರೋಧಿ' ನಿಲುವನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದರು. ಅಲ್ಲದೇ ಕರ್ನಾಟಕದ ಹಿಡಿತದಲ್ಲಿ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವ ಬದ್ಧತೆಯನ್ನು ಪುನರುಚ್ಛಿಸಿದರು.

"ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರವನ್ನು ಜಾರಿಗೊಳಿಸುವಂತೆ, ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮನವಿ ಮಾಡಬೇಕು. ಗಡಿ ಭಾಗಗಳಲ್ಲಿನ ಮರಾಠಿ ಜನರ ಸುರಕ್ಷತೆಗೆ ಬಗ್ಗೆ ಕರ್ನಾಟಕ ಸರ್ಕಾರ ಭರವಸೆಯನ್ನು ನೀಡಬೇಕು".. ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

"ಗಡಿಯಲ್ಲಿ ಮರಾಠಿ ಭಾಷೆ ಮಾತನಾಡುವ 865 ಹಳ್ಳಿಗಳಿವೆ. ಈ ಎಲ್ಲ ಗ್ರಾಮಗಳ ಪ್ರತಿ ಇಂಚು ಜಾಗವನ್ನೂ, ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲಾಗುವುದು. ಇದಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಏನೇನು ಮಾಡುವುದು ಅಗತ್ಯವಿದೆಯೋ, ಅದೆಲ್ಲವನ್ನೂ ಮಹಾರಾಷ್ಟ್ರ ಸರ್ಕಾರ ಮಾಡಲಿದೆ.." ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಹೇಳಲಾಗಿದೆ.

"ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ, ಭಾಲ್ಕಿ ನಗರಗಳು ಸೇರಿದಂತೆ, ಕರ್ನಾಟಕದಲ್ಲಿನ 865 ಹಳ್ಳಿಗಳ ಪ್ರತಿ ಇಂಚು ಕೂಡ ಮಹಾರಾಷ್ಟ್ರದ ಭಾಗವಾಗಲಿದೆ.." ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಸಿಎಂ ಏಕನಾಥ್‌ ಶಿಂಧೆ ಮಂಡಿಸಿದ ಈ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯು ಅವಿರೋಧವಾಗಿ ಅಂಗೀಕರಿಸಿತು.

ಉದ್ಧವ್‌ ಠಾಕ್ರೆ ಬಣದ ಬೆಂಬಲ:

ಇನ್ನು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯಕ್ಕೆ, ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ಬೆಂಬಲ ಸೂಚಿಸಿದೆ. ಕಲಾಪದ ಬಳಿಕ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಉದ್ಧವ್‌ ಠಾಕ್ರೆ, ಮಹಾರಾಷ್ಟ್ರದ ಪರವಾಗಿರುವ ಯಾವುದೇ ನಿರ್ಣಯವನ್ನು ನಾವು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಆದರೆ ಕಳೆದ ಎರಡು ವರ್ಷಗಳಿಂದ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು, ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದಕ್ಕಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಬೇಕು ಎಂದು ಇದೇ ವೇಳೆ ಉದ್ಧವ್‌ ಠಾಕ್ರೆ ಆಗ್ರಹಿಸಿದರು.

ಸಿದ್ದರಾಮಯ್ಯ ಪ್ರತಿಕ್ರಿಯೆ:

ಇನ್ನು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಮಹಾರಾಷ್ಟ್ರದಿಂದ ನಡೆಯುತ್ತಿರುವ ಪ್ರಚೋದನೆಯ ಹೊರತಾಗಿ ಬೇರೇನೂ ಅಲ್ಲ ಎಂದು ಗುಡುಗಿದ್ದಾರೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಇತರ ನಾಯಕರು ಭಾಗವಹಿಸಿದ್ದರು.

ಇಂದಿನ ಪ್ರಮುಖ ಸುದ್ದಿ:

Belagavi assembly session: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ

ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 15 ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7ಕ್ಕೆ ಹೆಚ್ಚಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಗಮನಸೆಳೆದಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ