Rahul Gandhi: 'ಎಲ್ಲಿಗೆ ಪಯಣ..' ಮನೆ 'ಖಾಲಿ' ಮಾಡಿ ಬೀಗದ 'ಕೈ' ಕೊಟ್ಟು ಹೊರಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Apr 15, 2023 08:13 AM IST
ರಾಹುಲ್ ಸರ್ಕಾರಿ ಬಂಗಲೆ ಖಾಲಿ ಪ್ರಕ್ರಿಯೆ
- ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರ ಆದೇಶದಂತೆ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ತಮ್ಮ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22ರೊಳಗಾಗಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ನಿಗದಿತ ದಿನಾಂಕಕ್ಕೂ ಮೊದಲೇ ರಾಹುಲ್ ಗಾಂಧಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.
ನವದೆಹಲಿ: ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರ ಆದೇಶದಂತೆ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ತಮ್ಮ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22ರೊಳಗಾಗಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ನಿಗದಿತ ದಿನಾಂಕಕ್ಕೂ ಮೊದಲೇ ರಾಹುಲ್ ಗಾಂಧಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ 12 ತುಘಲಕ್ ಲೇನ್‌ನ ರಾಹುಲ್ ಗಾಂಧಿ ಅವರ ಅಧಿಕೃತ ಸರ್ಕಾರಿ ಬಂಗಲೆ ಹೊರಗೆ, ಎರಡು ಟ್ರಕ್‌ಗಳಲ್ಲಿ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ನೌಕರರು ಬಂಗಲೆಯಲ್ಲಿದ್ದ ವಸ್ತುಗಳನ್ನು ಎರಡು ಟ್ರಕ್‌ಗಳಿಗೆ ಹೇರಿ, ಬಂಗಲೆಯನ್ನು ತೆರವುಗೊಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಸಂಸತ್ ಸದಸ್ಯತ್ವ ಕಳೆದುಕೊಂಡ ಬಳಿಕ ಸರ್ಕಾರಿ ಬಂಗಲೆಯನ್ನು ತೆರವು ಮಾಡಲು ಸಮ್ಮತಿಸಿರುವ ರಾಹುಲ್ ಗಾಂಧಿ ಅವರಿಗೆ, ಪಕ್ಷದ ಹಲವು ನಾಯಕರು ಸ್ವಂತ ಮನೆಯ ಆಫರ್ ನೀಡಿದ್ದಾರೆ. ಆದರೆ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳುವ ನಿರ್ಧಾರ ಮಾಡಿರುವ ರಾಹುಲ್ ಗಾಂಧಿ, 10 ಜನಪಥ್ ನಿವಾಸಕ್ಕೆ ತಮ್ಮ ಸಾಮಾನು ಸರಂಜಾಮುಗಳನ್ನು ರವಾನಿಸಿದ್ದಾರೆ.
ಆದಾಗ್ಯೂ ಸಂಪೂರ್ಣ ಹಸ್ತಾಂತರ ಪ್ರಕ್ರಿಯೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನಿಗದಿತ ದಿನಾಂಕದ ಮೊದಲು ಮಾಡಲಾಗುತ್ತದೆ ಎಂದು ರಾಹುಲ್ ಗಾಂಧಿ ಅವರ ಕಚೇರಿ ಮೂಲಗಳು ತಿಳಿಸಿವೆ.
"ಬಿಜೆಪಿಯವರು ನನ್ನನ್ನು ಮನೆಯಿಂದ ಹೊರಹಾಕಿ ಜೈಲಿಗೆ ಹಾಕಬಹುದು. ಆದರೆ ವಯನಾಡ್ ಜನರು ಮತ್ತು ಅವರ ಸಮಸ್ಯೆಗಳನ್ನು ಪ್ರತಿನಿಧಿಸುವ ನನ್ನ ಹಕ್ಕನ್ನು ಅವರು ಕಸಿದುಕೊಳ್ಳಲು ಸಾಧ್ಯವಿಲ್ಲ.." ಎಂದು ರಾಹುಲ್ ಗಾಂಧಿ ತಮ್ಮ ವಯನಾಡ್ ಭೇಟಿಯ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸ್ನೇಹ ಸಂಬಂಧದ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ, ನನ್ನ ಸಂಸತ್ ಸದಸ್ಯತ್ವವನ್ನು ಕಿತ್ತುಕೊಳ್ಳಲಾಗಿದೆ. ಆದರೆ ಈ ಕಾರಣಕ್ಕೆ ಅವರು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಾನು ಈ ಪ್ರಶ್ನೆಯನ್ನು ಮುಂದೆಯೂ ಕೇಳುತ್ತಲೇ ಇರುತ್ತೇನೆ. ಇಂದಲ್ಲ ನಾಳೆ ಪ್ರಧಾನಿ ಮೋದಿ ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
ಸತ್ಯ ಮಾತನಾಡುವವರನ್ನು, ಪ್ರಶ್ನೆ ಕೇಳುವವರನ್ನು ಮೋದಿ ಸರ್ಕಾರ ಸಹಿಸುವುದಿಲ್ಲ. ಆದರೆ ಸಂಸತ್ ಸದಸ್ಯತ್ವ ಕಿತ್ತುಕೊಂಡ ಮಾತ್ರಕ್ಕೆ ಅವರು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಾನು ಸತ್ಯಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಅನರ್ಹ ಸಂಸದ ರಾಹುಲ್ ಗಾಂಧಿ ಘರ್ಜಿಸಿದ್ದಾರೆ.
2019ರ ಲೋಕಸಭೆ ಚುನಾವಣಾ ಪ್ರಚಾರ ಭಾಷಣದಲ್ಲಿ, ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರಾಗಿತ್ತಾರೆ ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ರಾಹುಲ್ ಅವರ ಈ ಹೇಳಿಕೆ ವಿರೋಧಿಸಿ ಗುಜರಾತ್‌ನ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯ, ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿತ್ತು. ಅಲ್ಲದೇ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವನ್ನು ಅನರ್ಹಗೊಳಿಸಲಾಗಿತ್ತು.
ಇನ್ನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ, ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯ ಕುರಿತು ಏಪ್ರಿಲ್ 20ರಂದು ತನ್ನ ಆದೇಶವನ್ನು ಪ್ರಕಟಿಸುವುದಾಗಿ ಸೂರತ್‌ನ ಸೆಷನ್ಸ್ ನ್ಯಾಯಾಲಯ ಹೇಳಿದೆ.
ವಿಭಾಗ