logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opposition Unity: ನಮಗೆ ಬೇಕಾಗಿರುವುದು ಮೈತ್ರಿ ಮಾತ್ರ: ವಿಪಕ್ಷ ಒಗ್ಗೂಡಿಸಲು 'ಪ್ರತಿಷ್ಠೆ' ಬದಿಗಿಡಲು ಸಜ್ಜಾದ ಕಾಂಗ್ರೆಸ್‌

Opposition Unity: ನಮಗೆ ಬೇಕಾಗಿರುವುದು ಮೈತ್ರಿ ಮಾತ್ರ: ವಿಪಕ್ಷ ಒಗ್ಗೂಡಿಸಲು 'ಪ್ರತಿಷ್ಠೆ' ಬದಿಗಿಡಲು ಸಜ್ಜಾದ ಕಾಂಗ್ರೆಸ್‌

HT Kannada Desk HT Kannada

Mar 02, 2023 07:47 AM IST

google News

ಸ್ಟಾಲಿನ್‌ ಜನ್ಮದಿನಾಚರಣೆ

    • 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮಹಾ ಮೈತ್ರಿಯೊಂದಿಗೆ ಕಣಕ್ಕಿಳಿಯಲು ಬಯಸಿರುವ ಕಾಂಗ್ರೆಸ್‌, ಇದಕ್ಕಾಗಿ ತನ್ನ ಪ್ರತಿಷ್ಠೆಯನ್ನು ಬದಿಗಿಡಲು ಮುಂದಾಗಿದೆ. ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಪಕ್ಷದ ನಿಲುವಿನಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೈತ್ರಿಕೂಟ ರಚನೆಗಾಗಿ ಕಾಂಗ್ರೆಸ್‌ ಸರ್ವ ತ್ಯಾಗಕ್ಕೂ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಸ್ಟಾಲಿನ್‌ ಜನ್ಮದಿನಾಚರಣೆ
ಸ್ಟಾಲಿನ್‌ ಜನ್ಮದಿನಾಚರಣೆ (PTI)

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮಹಾ ಮೈತ್ರಿಯೊಂದಿಗೆ ಕಣಕ್ಕಿಳಿಯಲು ಬಯಸಿರುವ ಕಾಂಗ್ರೆಸ್‌, ಇದಕ್ಕಾಗಿ ತನ್ನ ಪ್ರತಿಷ್ಠೆಯನ್ನು ಬದಿಗಿಡಲು ಮುಂದಾಗಿದೆ. ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಪಕ್ಷದ ನಿಲುವಿನಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೈತ್ರಿಕೂಟ ರಚನೆಗಾಗಿ ಕಾಂಗ್ರೆಸ್‌ ಸರ್ವ ತ್ಯಾಗಕ್ಕೂ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

"ನಾವು ಪ್ರಧಾನಿ ಅಭ್ಯರ್ಥಿಯನ್ನು ಹೆಸರಿಸುತ್ತಿಲ್ಲ. ಯಾರು ಮೈತ್ರಿಕೂಟದ ನೇತೃತ್ವ ವಹಿಸುತ್ತಾರೆ ಎಂದೂ ನಾವು ಹೇಳುತ್ತಿಲ್ಲ. ನಾವು ಒಟ್ಟಾಗಿ ಹೋರಾಡಲು ಬಯಸುತ್ತೇವೆ.." ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಇದೀಗ ಗಮನ ಸೆಳೆದಿದೆ. ತಮಿಳುನಾಡುನ ರಾಜಧಾನಿ ಚೆನ್ನೈನಲ್ಲಿ ನಡೆದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, "ವಿಭಜಕ ಶಕ್ತಿಗಳ ವಿರುದ್ಧದ ಈ ಹೋರಾಟದಲ್ಲಿ ಸಮಾನ ಮನಸ್ಕ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಬೇಕು. 2024 ರ ಚುನಾವಣೆಗೆ ಮುಂಚಿತವಾಗಿ ನಾವು ನಮ್ಮ ಮೈತ್ರಿಯನ್ನು ಬಲಪಡಿಸುವುದನ್ನು ಮುಂದುವರಿಸಬೇಕು.." ಎಂದು ಹೇಳಿದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟವನ್ನು ತಾನೇ ಮುನ್ನಡೆಸುವುದಾಗಿ ಕಾಂಗ್ರೆಸ್‌ ಹೇಳಿತ್ತು. ಇದು ಪ್ರಮುಖ ವಿರೋಧ ಪಕ್ಷದ ನಾಯಕರನ್ನು, ಅದರಲ್ಲೂ ವಿಶೇಷವಾಗಿ ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಹೊಂದಿರುವವರನ್ನು ಅಸಮಾಧಾನಗೊಳಿಸಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು, ಕಾಂಗ್ರೆಸ್‌ ನಾಯಕತ್ವಕ್ಕೆ ಆಗ ವಿರೋಧ ವ್ಯಕ್ತಪಡಿಸಿದ್ದರು.

ಈ ಕಾರಣಕ್ಕೆ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿರು ಕಾಂಗ್ರೆಸ್‌, ನಿತೀಶ್ ಕುಮಾರ್ ಅವರಂತಹ ಇತರ ಮೈತ್ರಿ ಪಾಲುದಾರರು ನಾಯಕತ್ವವಹಿಸಿಕೊಂಡರೆ ತನ್ನ ಅಭ್ಯಂತರವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. ರಾಯ್‌ಪುರ್‌ದಲ್ಲಿ ಕೈಗೊಂಡ ನಿರ್ಣಯದ ಪ್ರಕಾರ, ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳ ಐಕ್ಯತೆಗೆ ಕಾಂಗ್ರೆಸ್ ಕರೆ ನೀಡಿದೆ.

ಪ್ರತಿಪಕ್ಷಗಳ ಪಾಳಯದಲ್ಲಿನ ಭಿನ್ನಾಭಿಪ್ರಾಯವು ಬಿಜೆಪಿಗೆ ದೊಡ್ಡ ಲಾಭವನ್ನು ತರುತ್ತದೆ. ಅಲ್ಲದೇ ವಿಪಕ್ಷಗಳಲ್ಲಿ ಮೂಡಿಬರದ ಒಗ್ಗಟ್ಟನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ. ಸಹಮತವಿಲ್ಲದ ವಿಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಸುಭದ್ರ ಆಡಳಿತ ಮರೀಚಿಕೆಯಾಗುತ್ತದೆ ಎಂದು ಬಿಜೆಪಿ ಹೇಳುತ್ತದೆ. ಬಿಜೆಪಿಯ ಈ ಅಭಿಪ್ರಾಯವನ್ನು ಸೋಲಿಸಲು ಕಾಂಗ್ರೆಸ್‌ ಇದೀಗ ಸರ್ವ ತ್ಯಾಗಕ್ಕೂ ಸಿದ್ಧವಾಗಿದೆ.

ಇನ್ನು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌, ಕಾಂಗ್ರೆಸ್ ಇಲ್ಲದ ವಿರೋಧ ಪಕ್ಷದ ಮೈತ್ರಿ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ, ರಾಷ್ಟ್ರ ರಾಜಕಾರಣವನ್ನು ನಿರ್ಧರಿಸಿವುದರಿಂದ ನಮಗೆ ನಷ್ಟವಾಗುತ್ತದೆ. ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಮೆಟ್ಟಿ ನಿಂತು, ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನ ಶಕ್ತಿಯಾಗಿ ನಿಲ್ಲಬೇಕು ಎಂದು ಎಂಕೆ ಸ್ಟಾಲಿನ್‌ ಇದೇ ವೇಳೆ ಕರೆ ನೀಡಿದರು.

"ಆ ನಿಟ್ಟಿನಲ್ಲಿ ಕಾಂಗ್ರೆಸ್ಸೇತರ ಮೈತ್ರಿಕೂಟ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್‌ನ್ನು ಹೊರಗಿಟ್ಟು ಮಾಡಿಕೊಳ್ಳುವ ಚುನಾವಣೋತ್ತರ ಮೈತ್ರಿಯೂ ಪ್ರಯೋಜನಕ್ಕೆ ಬರುವುದಿಲ್ಲ. ಹಾಗೆಯೇ ತೃತೀಯ ರಂಗದ ಮಾತುಗಳು ಅರ್ಥಹೀನ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಈ ಸರಳ ಅಂಕಗಣಿತವನ್ನು ಅರ್ಥಮಾಡಿಕೊಳ್ಳಬೇಕು.." ಎಂದು ಸಿಎಂ ಸ್ಟಾಲಿನ್‌ ವಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.

ಚೆನ್ನೈನಲ್ಲಿ ನಡೆದ ಎಂಕೆ ಸ್ಟಾಲಿನ್‌ ಜನ್ಮದಿನಾಚರಣೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನ್ಯಾಶನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ, ಆರ್‌ಜೆಡಿ ನಾಯಕ ಹಾಗೂ ಬಿಹಾರ ಡಿಸಿಎಂ ತೇಜಸ್ವಿ ಸೂರ್ಯ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ