Booster Dose: ಕೋವಿಡ್ ಬೂಸ್ಟರ್ ಡೋಸ್ ಬೇಡ ಎಂದು ಕುಳಿತ ದೇಶದ ಶೇ.92ರಷ್ಟು ಜನ
Jul 14, 2022 09:54 AM IST
ಸಾಂದರ್ಭಿಕ ಚಿತ್ರ
- ಜುಲೈ 12ರ ಮಾಹಿತಿಯಂತೆ ಮುಂಚೂಣಿ ಕಾರ್ಯಕರ್ತರಲ್ಲಿ 35% ಅರ್ಹರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ 39% ಅರ್ಹರು ತಮ್ಮ ಬೂಸ್ಟರ್ ಡೋಸ್ ಅನ್ನು ತೆಗೆದುಕೊಂಡಿಲ್ಲ. 18-45 ವಯಸ್ಸಿನವರಲ್ಲಿ ಬೂಸ್ಟರ್ ಡೋಸ್ ಪಡೆಯಲು ಅರ್ಹವಿರುವ 360 ಮಿಲಿಯನ್ ಜನರಲ್ಲಿ 98.8% ಜನರು ಇನ್ನೂ ಡೋಸ್ ಪಡೆದಿಲ್ಲ. 45-60 ವರ್ಷ ವಯಸ್ಸಿನ 158.5 ಮಿಲಿಯನ್ ಜನರಲ್ಲಿ 98% ಜನರು ಇನ್ನೂ ಡೋಸ್ ಹಾಕಿಸಿಕೊಂಡಿಲ್ಲ.
ದೇಶದಲ್ಲಿ ನಾಳೆಯಿಂದ ಕೋವಿಡ್ ಬೂಸ್ಟರ್ ಡೋಸ್ ಲಸಿಕಾಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಕೋವಿಡ್ ಲಸಿಕೆಯ ಮೂರನೇ ಅಥವಾ ಬೂಸ್ಟರ್ ಡೋಸ್‌ಗೆ ಅರ್ಹರಾಗಿರುವ 92% ಭಾರತೀಯರು ಇನ್ನೂ ಈ ಡೋಸ್‌ಗಳನ್ನು ಪಡೆದಿಲ್ಲವಂತೆ. ನಾಳೆಯಿಂದ ಮುಂದಿನ 75 ದಿನಗಳವರೆಗೆ ಉಚಿತ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಹೀಗಾಗಿ ಲಸಿಕಾಕರಣ ಚುರುಕು ಪಡೆಯುವ ಸಾಧ್ಯತೆ ಇದೆ.
ಭಾರತದ ಒಟ್ಟು ಜನಸಂಖ್ಯೆಯ ಅರ್ಹರಲ್ಲಿ ಸುಮಾರು 59.4 ಕೋಟಿ ವಯಸ್ಕರು ತಮ್ಮ ಮುನ್ನೆಚ್ಚರಿಕೆ ಡೋಸ್‌ಗಳನ್ನು ಪಡೆಯಲು ತಡಮಾಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಬೂಸ್ಟರ್ ಡೋಸ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರನ್ನು ಮತ್ತೆ ಲಸಿಕಾ ಕೇಂದ್ರಗಳತ್ತ ಬರುವಂತೆ ಮಾಡಲು ಉಚಿತ ಬೂಸ್ಟರ್ ಡೋಸ್ ಲಸಿಕಾಕರಣವನ್ನು ಸರ್ಕಾರ ಘೋಷಿಸಿದೆ. ಹೀಗಾಗಿ ಈ ಮೂಲಕವಾದರೂ ಜನರು ಸಂಪೂರ್ಣ ಲಸಿಕೆಯನ್ನು ಪಡೆಯುವಂತೆ ಮಾಡಲು ಸರ್ಕಾರದ ಇಲಾಖೆ ಪ್ರಯತ್ನಿಸುತ್ತಿದೆ. ಕಳೆದ ಜುಲೈ 6ರಂದು, ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಒಂಬತ್ತು ತಿಂಗಳಿನಿಂದ ಆರು ತಿಂಗಳಿಗೆ ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿತ್ತು.
60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನಸಾಮಾನ್ಯರು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ, ಮೊದಲ ಹಂತದಲ್ಲಿ ಬೂಸ್ಟರ್ ಡೋಸ್ ಅನ್ನು ದೇಶದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.
ಜುಲೈ 12ರ ಮಾಹಿತಿಯಂತೆ ಮುಂಚೂಣಿ ಕಾರ್ಯಕರ್ತರಲ್ಲಿ 35% ಅರ್ಹರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ 39% ಅರ್ಹರು ತಮ್ಮ ಬೂಸ್ಟರ್ ಡೋಸ್ ಅನ್ನು ತೆಗೆದುಕೊಂಡಿಲ್ಲ. ಇನ್ನೊಂದೆಡೆ ಉಚಿತ ಬೂಸ್ಟರ್ ಡೋಸ್ ಪಡೆಯುವ ಮೊದಲ ಅರ್ಹತೆ ಇರುವ ಸಾಮಾನ್ಯ ವರ್ಗ 60 ವರ್ಷಕ್ಕಿಂತ ಮೇಲ್ಪಟ್ಟವರು. ಇವರಲ್ಲಿ 73% ಕ್ಕಿಂತ ಹೆಚ್ಚಿನ ಜನರು ಡೋಸ್ ಪಡೆದಿಲ್ಲ. ಈ ಬಗ್ಗೆ ಸಾರ್ವಜನಿಕ ಜಾಗೃತಿಯಂತಹ ಇತರ ಕ್ರಮಗಳ ಅಗತ್ಯವಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಆರು ತಿಂಗಳ ಬಳಿಕ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬಹುದಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, “ಭಾರತವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, 2022ರ ಜುಲೈ 15ರಿಂದ ಮುಂದಿನ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡಲು ಎಂದು ನಿರ್ಧರಿಸಲಾಗಿದೆ. ಈ ಸೌಲಭ್ಯವು ಎಲ್ಲಾ ಸರ್ಕಾರಿ ಕೇಂದ್ರಗಳಲ್ಲಿ ಲಭ್ಯವಿರುತ್ತದೆ” ಎಂದು ತಿಳಿಸಿದ್ದಾರೆ.
ಇಡೀ ಪ್ರಪಂಚವನ್ನೇ ಸಂಕಷ್ಟಕ್ಕೆ ದೂಡಿದ್ದ ಮಹಾಮಾರಿ ಕೊರೊನಾಗೆ ಭಾರತದಲ್ಲೇ ಲಸಿಕೆಗಳು ಸಿದ್ಧವಾಗಿದ್ದವು. ಮೇಡ್ ಇನ್ ಇಂಡಿಯಾ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಅನ್ನು ಜನರಿಗೆ ನೀಡಲು ನಿರ್ಧರಿಸಲಾಯಿತು. 2021ರ ಜನವರಿ 16 ರಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ ನೀಡಲಾಯಿತು. ಈಗಾಗಲೇ ದಾಖಲೆಯ ಮಟ್ಟದ ವ್ಯಾಕ್ಸಿನೇಶನ್ ಆಗಿದ್ದು, ನಾಳೆಯಿಂದ ನೀಡುವ ಬೂಸ್ಟರ್ ಡೋಸ್ ಲಸಿಕಾಕರಣ ನಡೆಯಲಿದೆ