Covid JN1 alert: ಭಾರತದಲ್ಲಿ ಹೆಚ್ಚಿದ ಜೆಎನ್ 1ಪ್ರಕರಣಗಳು: ಸಾಮಾನ್ಯ ಶೀತ ಜ್ವರದ ನಿರ್ಲಕ್ಷ್ಯ ಬೇಡ
Dec 21, 2023 09:43 AM IST
ಭಾರತದಲ್ಲಿ ಕೋವಿಡ್ ಜೆಎನ್ 1 ತಳಿಯ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
- Covid variant ಭಾರತದಲ್ಲಿ ಕೋವಿಡ್‌ನ ಉಪತಳಿ ಜೆಎನ್ 1ನ ಪ್ರಕರಣಗಳು ಹೆಚ್ಚುತ್ತಿವೆ. ಶೀತ ಸಂಬಂಧಿತ ಜ್ವರ ಅಥವಾ ಇತರೆ ಸಮಸ್ಯೆಗಳನ್ನು ನಿರ್ಲಕ್ಷಿಸದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ದೆಹಲಿ: ಭಾರತದಲ್ಲಿ ಜೆಎನ್ 1 ತಳಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಬುಧವಾರದ ಹೊತ್ತಿಗೆ ಇಡೀ ದೇಶದಲ್ಲಿ ಜೆಎನ್ 1 ತಳಿಯ 21 ಪ್ರಕರಣಗಳು ಕಂಡು ಬಂದಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನೀತಿ ಆಯೋಗದ ಸದಸ್ಯ( ಆರೋಗ್ಯ) ಡಾ.ವಿ.ಕೆ.ಪೌಲ್ ಅವರ ಪ್ರಕಾರ, ಈವರೆಗೂ ಕೋವಿಡ್‌ನ ಜೆಎನ್ 1 ತಳಿಯ 21 ಪ್ರಕರಣಗಳು ದಾಖಲಾಗಿವೆ. ಗೋವಾ, ಕೇರಳ, ಮಹಾರಾಷ್ಟ್ರದಲ್ಲಿ ಈ ಪ್ರಕರಣಗಳು ಅಧಿಕವಾಗಿದೆ. ಗೋವಾದಲ್ಲಿಯೇ 19 ಪ್ರಕರಣವಿದ್ದರೆ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ತಲಾ 1 ಪ್ರಕರಣ ಕಂಡು ಬಂದಿವೆ. ಈ ತಳಿಯ ಕುರಿತು ಸಂಶೋಧನೆಗಳೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್( ICMR) ನಲ್ಲಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಕಂಡು ಬಂದ ಒಮಿಕ್ರಾನ್‌ನ ಉಪ ತಳಿಯ ರೀತಿಯಲ್ಲಿಯೇ ಇದು ಕಂಡು ಬರುತ್ತಿದೆ. ಈ ಕುರಿತು ಹೆಚ್ಚಿನ ಸಂಶೋಧನೆಗಳ ವರದಿಗಳು ಹೊರ ಬಂದರೆ ಇನ್ನಷ್ಟು ನಿಖರವಾಗಿ ಜೆಎನ್ 1 ತಳಿ ಬಗ್ಗೆ ತಿಳಿಯಲಿದೆ ಎನ್ನುವುದು ತಜ್ಞರ ನುಡಿ.
ಕೇರಳದಲ್ಲಿ ಫ್ಲೂನಿಂದ ಆಸ್ಪತ್ರೆಗೆ ಆಗಮಿಸಿದವರಲ್ಲಿ ಶೇ. 30 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂದಿದೆ. ಆದರೆ ಗಂಭೀರ ಸ್ವರೂಪದ ಪ್ರಕರಣಗಳು ಅದರಲ್ಲಿ ಇಲ್ಲ. ಇದು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಳವೂ ಆಗಬಹುದು. ಆದರೆ ಆತಂಕ ಪಡುವ ಸನ್ನಿವೇಶ ಇರುವುದಿಲ್ಲ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್.
ಕೋವಿಡ್ ಎನ್ನುವುದು ಸಮಯದಿಂದ ಸಮಯಕ್ಕೆ ಬದಲಾಗುತ್ತಿರುವ ವೈರಸ್. ಹೊಸ ರೂಪವನ್ನು ಇದು ಪಡೆದುಕೊಳ್ಳುತ್ತಾ ಹೋಗುವುದು ನಾಲ್ಕು ವರ್ಷದ ಅವಧಿಯಲ್ಲಿನ ಬೆಳವಣಿಗ ನೋಡಿದರೆ ತಿಳಿಯಲಿದೆ. ಅದು ಈಗ ಜೆಎನ್ 1 ಸ್ವರೂಪವನ್ನು ಪಡೆದುಕೊಂಡಿರಬಹುದು. ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎನ್ನುವುದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ಶ್ವಾಸ ಕೋಶ ತಜ್ಞ ಡಾ. ರೋಹಿತ್ ಕುಮಾರ್ ಅಭಿಪ್ರಾಯ.
ಆದರೆ ಶೀತ ಸಂಬಂಧಿತ ಯಾವುದೇ ಕಾಯಿಲೆ ಇದ್ದರೂ ಜನ ನಿರ್ಲಕ್ಷ್ಯ ಮಾಡಬಾರದು. ನ್ಯುಮೋನಿಯಾ ಅಥವಾ ಫ್ಲೂ ಅದು ಕೋವಿಡ್ ಕೂಡ ಆಗಿರಬಹುದು. ಜ್ವರ ಬಂದಾಗ ಇಲ್ಲವೇ ಗಂಟಲು ನೋವು, ಕೆಮ್ಮು, ಕಫ, ಎದೆ ನೋವು ಇಲ್ಲವೇ ಉಸಿರಾಡಲು ತೀವ್ರ ತೊಂದರೆ ಕಂಡು ಬಂದರೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಈಗಾಗಲೇ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ಅಸ್ತಮಾ ರೋಗಿಗಳು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ ಎನ್ನುವುದು ವೈದ್ಯರ ಸಲಹೆ.
ಚಳಿಗಾಲದ ಅವಧಿಯಲ್ಲಿ ಶೀತದ ವಾತಾವರಣ ಜ್ವರ ಇಲ್ಲವೇ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ದಾರಿ ಮಾಡಿಕೊಡಬಹುದು. ಗಂಭೀರ ಕಾಯಿಲೆ ಎದುರಿಸುತ್ತಿರುವವರು ಹೆಚ್ಚಿನ ಮುತುವರ್ಜಿ ವಹಿಸುವುದು ಸೂಕ್ತ. ಈ ಹಿಂದೆ ಕೋವಿಡ್ ಬಂದು ತೊಂದರೆ ಅನುಭವಿಸಿದವರು ಜ್ವರ, ಕೆಮ್ಮು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಜನಜಂಗುಳಿ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡುತ್ತಾರೆ.