logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವರ್ಷದ ಹಿಂದೆಯಷ್ಟೇ ಸಚಿವೆಯಾಗಿದ್ದ ಅತಿಶಿ ಈಗ ದೆಹಲಿ ಸಿಎಂ, ಹಠಾತ್‌ ಬೆಳೆದ ಅತಿಶಿ ಯಾರು, ಅವರನ್ನು ಕೇಜ್ರಿವಾಲ್‌ ನೇಮಿಸಿದ್ದೇಕೆ; 10 ಅಂಶಗಳು

ವರ್ಷದ ಹಿಂದೆಯಷ್ಟೇ ಸಚಿವೆಯಾಗಿದ್ದ ಅತಿಶಿ ಈಗ ದೆಹಲಿ ಸಿಎಂ, ಹಠಾತ್‌ ಬೆಳೆದ ಅತಿಶಿ ಯಾರು, ಅವರನ್ನು ಕೇಜ್ರಿವಾಲ್‌ ನೇಮಿಸಿದ್ದೇಕೆ; 10 ಅಂಶಗಳು

Umesha Bhatta P H HT Kannada

Sep 17, 2024 02:16 PM IST

google News

ಅತಿಶಿ ರಾಜಕೀಯ ಮೆಟ್ಟಿಲುಗಳನ್ನು ಬೇಗನೇ ಏರಿ ಬಂದು ದೆಹಲಿ ಸಿಎಂ ಗಾದಿಗೆ ಏರುತ್ತಿದ್ದಾರೆ.

    • ರಾಜಕೀಯದಲ್ಲಿ ಏನೆಲ್ಲಾ ಸಾಧ್ಯ ಎನ್ನುವುದಕ್ಕೆ ದೆಹಲಿ ನಿಯೋಜಿತ ಸಿಎಂ ಅತಿಶಿ ಅವರ ಸಾಧನೆಯೇ ಉದಾಹರಣೆ. ಮೊದಲ ಬಾರಿ ಶಾಸಕಿ. ಹದಿಮೂರು ಖಾತೆ ಸಚಿವೆ. ಕೊನೆಯ ಆರೇಳು ತಿಂಗಳಿಗೆ ಸಿಎಂ.. ಅವರ ರಾಜಕೀಯ ಹಾದಿ ನೋಟ ಹೀಗಿದೆ.
ಅತಿಶಿ ರಾಜಕೀಯ ಮೆಟ್ಟಿಲುಗಳನ್ನು ಬೇಗನೇ ಏರಿ ಬಂದು ದೆಹಲಿ ಸಿಎಂ ಗಾದಿಗೆ ಏರುತ್ತಿದ್ದಾರೆ.
ಅತಿಶಿ ರಾಜಕೀಯ ಮೆಟ್ಟಿಲುಗಳನ್ನು ಬೇಗನೇ ಏರಿ ಬಂದು ದೆಹಲಿ ಸಿಎಂ ಗಾದಿಗೆ ಏರುತ್ತಿದ್ದಾರೆ.

ದಿಢೀರ್‌ ಸಿಎಂ ಹುದ್ದೆಗೆ ಏರಿದವರು ಕಡಿಮೆ. ಅದರಲ್ಲೂ ರಾಜಕೀಯ ಹಿನ್ನೆಲೆ ಇಲ್ಲದೇಉ ಆ ಸ್ಥಾನ ಅಲಂಕರಿಸುತ್ತಿರುವವರೂ ಕೂಡ. ಆ ಪಟ್ಟಿಗೆ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್‌ ಸೇರಿದ್ದಾರೆ. ನಾಲ್ಕು ವರ್ಷದ ಹಿಂದೆ ಮೊದಲ ಬಾರಿ ಶಾಸಕಿಯಾಗಿ, ವರ್ಷದ ಹಿಂದೆಯಷ್ಟೇ ಸಚಿವೆಯಾಗಿ. ಆರು ತಿಂಗಳಿನಿಂದ ಅರವಿಂದ ಕೇಜ್ರಿವಾಲ್‌ ಅನುಪಸ್ಥಿತಿಯಲ್ಲಿ ಸಿಎಂ ಕಾರ್ಯಭಾರ ನೋಡಿಕೊಳ್ಳುತ್ತಿದ್ದ ಅತಿಶಿ ಅವರು ಈಗ ಮುಖ್ಯಮಂತ್ರಿ ಹುದ್ದೆಗೆ ಏರುತ್ತಿದ್ದಾರೆ. ಅವರ ಕುರಿತಾದ ಆಸಕ್ತಿದಾಯಕ ಅಂಶಗಳು ಇಲ್ಲಿವೆ.

  1. ಅತಿಶಿ ಮರ್ಲೆನಾ ಸಿಂಗ್‌ ಜನಿಸಿದ್ದು ದೆಹಲಿಯಲ್ಲೇ. 1981ರ ಜೂನ್ 8ರಂದು ಜನನ. ಈಗ ಅವರಿಗೆ 43 ವರ್ಷಗಳು.
  2. ಅವರ ತಂದೆ ಹಾಗೂ ತಾಯಿ ಇಬ್ಬರೂ ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು. ರಜಪೂತ್‌ ಹಿನ್ನೆಲೆಯ ತಂದೆ ವಿಜಯ್ ಸಿಂಗ್ ಮತ್ತು ತಾಯಿ ತ್ರಿಪ್ತ ಸಿಂಗ್. ಇಬ್ಬರೂ ಮಾರ್ಕ್ಸ್‌ವಾದದ ಚಿಂತಕರು
  3. ಅತಿಶಿ ಹೆಸರು ಮೊದಲು ಅತಿಶಿ ಸಿಂಗ್‌. ಆನಂತರ ಅವರ ಹೆಸರು ಅತಿಶಿ ಮರ್ಲೆನಾ ಸಿಂಗ್‌ ಎಂದು ಬಯಲಾಯಿತು. ಮೆರ್ಲೆನಾ ಎನ್ನುವುದು ಕ್ರಿಶ್ಚಿಯನ್‌ ಹೆಸರ ಎನ್ನುವ ಚರ್ಚೆಗಳು ಶುರುವಾದವು. ಆಗ ಅತಿಶಿ ಸ್ಪಷ್ಟನೆ ಕೊಟ್ಟರು. ಮೆರ್ಲೆನಾ ಎಂದರೆ ಮಾರ್ಕ್ಸ್ ಮತ್ತು ಲೆನಿನ್‌ನ ಸರಳ ಹೆಸರು. ಅವರ ತಂದೆಯ ಕಾರಣಕ್ಕೆ ಇದು ಸೇರಿಕೊಂಡಿತು.
  4. ಅತಿಶಿ ಶಿಕ್ಷಣ ಆಗಿದ್ದು ಬಹುತೇಕ ದೆಹಲಿಯಲ್ಲೇ. ದೆಹಲಿಯ ಸ್ಪ್ರಿಂಗ್‌ಡೇಲ್ ಶಾಲೆಯಲ್ಲಿ ಶಾಲಾ ಶಿಕ್ಷಣ. ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ. ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ. ಇತಿಹಾಸ ಅವರ ಆಸಕ್ತಿ ವಿಷಯ. ಆಕ್ಸಫರ್ಡ್‌ ವಿಶ್ವವಿದ್ಯಾನಿಲಯದಲ್ಲೂ ಉನ್ನತ ಶಿಕ್ಷಣ ಪಡೆದಿದ್ದಾರೆ.
  5. ಅತಿಶಿ ಕೆಲ ಕಾಲ ಉಪನ್ಯಾಸಕರೂ ಆಗಿದ್ದರು. ಆನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಮಧ್ಯಪ್ರದೇಶದ ಜಲಾಂದೋಲನದಲ್ಲೂ ಭಾಗಿಯಾದರು
  6. 2013 ರಲ್ಲಿ ಆಪ್‌ ನೊಂದಿಗೆ ಗುರುತಿಸಿಕೊಂಡ ಅತಿಶಿ ಅವರನ್ನು ಪ್ರಣಾಳಿಕೆ ಸಮಿತಿಯಲ್ಲಿ ನೇಮಿಸಲಾಯಿತು. ಶಿಕ್ಷಣಕ್ಕೆ ಸಂಬಂಧಿಸಿದಂತ ಹಲವಾರು ಸಲಹೆಗಳನ್ನು ಅವರು ನೀಡಿದ್ದರು.
  7. ಆನಂತರ 2015 ರಿಂದ 2018 ರವರೆಗೆ ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ಸಲಹೆಗಾರರಾಗಿ ಮೂರು ವರ್ಷ ಕೆಲಸ ಮಾಡಿದರು. ಆಗಲೂ ಹಲವಾರು ಸಮಿತಿಗಳಲ್ಲಿದ್ದರು.
  8. 2019 ರ ಲೋಕಸಭೆ ಚುನಾವಣೆ ಚುನಾವಣೆಗೆ ಅವರನ್ನು ಆಪ್‌ ಸಂಚಾಲಕರನ್ನಾಗಿ ನೇಮಕ ಮಾಡಿತು. ಅದೇ ವರ್ಷ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ವಿರುದ್ದ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಸೋತರು.
  9. 2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾದ ಅತಿಶಿ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧರ್ಮೇಂದರ್‌ ಅವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2023ರಲ್ಲಿ ಡಿಸಿಎಂ ಸಿಸೋಡಿಯಾ ಹಾಗೂ ಸಚಿವರು ಅಬಕಾರಿ ನೀತಿ ಹಗರಣದಲ್ಲಿ ಸಿಲುಕಿದಾಗ ಅತಿಶಿ ಶಿಕ್ಷಣ, ಲೋಕೋಪಯೋಗಿ, ಸಂಸ್ಕೃತಿ ಸಚಿವೆಯಾದರು. ಆನಂತರ ಅವರು 13 ಪ್ರಮುಖ ಖಾತೆಗಳನ್ನು ನಿಭಾಯಿಸಿದರು.
  10. ಈ ವರ್ಷದ ಫೆಬ್ರವರಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರು ಇದೇ ಹಗರಣದಲ್ಲಿ ಸಿಲುಕಿ ಬಂಧನಕ್ಕೆ ಒಳಗಾದಾಗ ಹೆಚ್ಚಿನ ಹೊಣೆ ಅತಿಶಿ ಅವರಿಗೆ ಬಿತ್ತು. ಬಜೆಟ್‌ ಮಂಡಿಸಿದರು. ಕೇಜ್ರಿವಾಲ್‌ ಅನುಪಸ್ಥಿತಿಯಲ್ಲಿ ಸರ್ಕಾರದ ಆಡಳಿತ ನೋಡಿಕೊಳ್ಳುತ್ತಿದ್ದರು. ಛಾಯಾ ಸಿಎಂ ಹಾಗು ಕೇಜ್ರಿವಾಲ್‌ ಆಪ್ತರು ಎನ್ನುವುದೂ ಅವರ ಹಿಂದೆ ಇತ್ತು. ಈಗ ಸಿಎಂ ಹುದ್ದೆಗೇರಲು ಇದೇ ಕೆಲಸ ಮಾಡಿದೆ. ಮಹಿಳೆಯೊಬ್ಬರಿಗೆ ಅಧಿಕಾರ ನೀಡಿ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳುವ ಉದ್ದೇಶವೂ ಕೇಜ್ರಿವಾಲ್‌ ಅವರಿಗೆ ಇದ್ದಂತಿದೆ. ಈಗ ಸಚಿವೆಯಾದ ಒಂದೇ ವರ್ಷದಲ್ಲಿ ಸಿಎಂ ಹುದ್ದೆಯೂ ಅವರ ಮುಡಿಗೇರಿದೆ. ಇನ್ನೇನು ನಾಲ್ಕೈದು ತಿಂಗಳಲ್ಲಿ ಚುನಾವಣೆಯೂ ಇರುವುದರಿಂದ ಮಹತ್ವ ಪಡೆದುಕೊಂಡಿದೆ. ಶೀಲಾ ದೀಕ್ಷಿತ್‌, ಸುಷ್ಮಾ ಸ್ವರಾಜ್‌ ನಂತರ ದೆಹಲಿಯ ಮೂರನೇ ಮಹಿಳಾ ಸಿಎಂ ಅತಿಶಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ