R day parade: ಗಣರಾಜ್ಯೋತ್ಸವಕ್ಕೆ ದೆಹಲಿ ಕರ್ತವ್ಯಪಥದಲ್ಲಿ ಭಾರತದರ್ಶನ; ಫ್ರೆಂಚ್ ಅಧ್ಯಕ್ಷರಿಗೆ ಗೌರವ
Jan 26, 2024 12:25 PM IST
ದೆಹಲಿ ಕರ್ತವ್ಯ ಪಥದ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದ ಮಹಿಳಾ ಪೊಲೀಸ್ ಪಡೆ.
- ಭಾರತದ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ಪಥಸಂಚಲನ ಶುರುವಾಗಿದೆ. ದೆಹಲಿಯಲ್ಲಿ ಸಂಭ್ರಮ ಜೋರಾಗಿಯೇ ಇದೆ.
ದೆಹಲಿ: ದೆಹಲಿಯ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವದ ಸಡಗರ. ಇಡೀ ದೇಶವೇ ನೋಡುವ ಗಣರಾಜೋತ್ಸವ ಪಥಸಂಚಲನ. ಅಲ್ಲಿ ಭಾರತ ದರ್ಶನವಾದ ಸಂತಸ. ಭಾರತದ ಸಾಂಸ್ಕೃತಿಕ, ಆಡಳಿತಾತ್ಮಕ, ನಾನಾ ಪಡೆಗಳ ಶಕ್ತಿ ಪ್ರದರ್ಶಿಸುವ ಸಮಯ. ಅದೂ ಒಂದೇ ಕಡೆ ನೋಡುವ ಹೆಮ್ಮೆಯ ಕ್ಷಣವದು. ಇಡೀ ದೇಶದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಇದರ ನಡುವೆಯೇ ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್ ಶುರುವಾಗಿದೆ.
ಈ ಬಾರಿ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಮುಖ್ಯ ಅತಿಥಿಯಾಗಿದ್ದು. ಅವರನ್ನು ಸಾರೋಟ್ ಮೂಲಕ ಕರ್ತವ್ಯ ಪಥಕ್ಕೆ ಸ್ವಾಗತ ಮಾಡಲಾಯಿತು. ಖುದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಮ್ಯಾಕ್ರಾನ್ ಅವರನ್ನು ವಿಶೇಷ ಸಾರೋಟಿನಲ್ಲಿ ಕರೆ ತಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬರ ಮಾಡಿಕೊಂಡರು. ಇಬ್ಬರೂ ಆಲಿಂಗನ ಮಾಡಿಕೊಂಡರು. ಮ್ಯಾಕ್ರಾನ್ ಅವರು ಇಲ್ಲಿನ ಆತಿಥ್ಯಕ್ಕೆ ಮಾರು ಹೋಗಿ ಖುಷಿಯ ಸನ್ನಿವೇಶವನ್ನು ಹಂಚಿಕೊಂಡರು. ಆನಂತರ ಭಾರತದ ಪಥಸಂಚಲನದಲ್ಲೂ ಭಾಗಿಯಾದರು. 40 ವರ್ಷದ ಬಳಿಕ ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ರಾಷ್ಟ್ರಪತಿ ಬಂದಿಳಿದಿರುವುದು ಈ ಬಾರಿ ವಿಶೇಷ.
ಗಣ್ಯರು, ಅತಿಥಿಗಳು, ಆಹ್ವಾನಿತರು ಕುಳಿತು ಆಕರ್ಷಕ ಪಥಸಂಚಲನ ವೀಕ್ಷಿಸಿದರು. ಅದರಲ್ಲೂ ವಿವಿಧ ಪಡೆಗಳ ಪಥ ಸಂಚಲನ, ಸಾಂಸ್ಕೃತಿಕ ತಂಡಗಳ ಸೊಬಗು, ಸ್ಥಬ್ಧಚಿತ್ರಗಳ ವೈಭವ, ಆಗಸದಲ್ಲಿ ವಿಮಾನ, ಹೆಲಿಕಾಪ್ಟರ್‌ಗಳ ಹಾರಾಟದ ಜತೆಗೆ ಪುಷ್ಪವೃಷ್ಟಿ ಕ್ಷಣಗಳನ್ನೂ ಕಣ್ತುಂಬಿಕೊಂಡರು.
ವಿವಿಧ ಪಡೆಗಳು ಭಾಗಿ
ಗಣರಾಜ್ಸೋತ್ಸವದ ಅಂಗವಾಗಿ ಆಯೋಜಿಸಿರುವ ವಿಶೇಷ ಪಥ ಸಂಚಲನವೂ ಆರಂಭಗೊಂಡಿದೆ. ಪೊಲೀಸ್‌ನ ಹಲವು ಪಡೆಗಳು, ಅದರಲ್ಲೂ ಮಹಿಳಾ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿವೆ. ಎನ್‌ಸಿಸಿ ಸಹಿತ ವಿದ್ಯಾರ್ಥಿ ಪಡೆಗಳೂ ಪಥಸಂಚನದಲ್ಲಿ ಹೆಜ್ಜೆ ಹಾಕಿದವು.
ಗಣತಂತ್ರದ ಪರೇಡ್ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಿರುವುದು ವಿಶೇಷ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿದರು. ಪೊಲೀಸ್ ಅಧಿಕಾರಿ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆ ಮುನ್ನಡೆಸಿದರು.ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ವಿಷಯದಡಿ 194 ಮಹಿಳಾ ಪೊಲೀಸರು ಪಥಸಂಚನದಲ್ಲಿ ಜಾಗೃತಿ ಮೂಡಿಸಿದರು.
ಸ್ಥಬ್ಧಚಿತ್ರಗಳು
ಇದಲ್ಲದೇ ಹದಿನಾರು ರಾಜ್ಯಗಳ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸ್ಥಬ್ದಚಿತ್ರಗಳೂ ಪಥಸಂಚಲನದಲ್ಲಿ ಭಾಗಿಯಾಗವು. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸಹಿತ ಹಲವು ರಾಜ್ಯಗಳು ಭಾಗಿಯಾದವು. ಈ ಬಾರಿ ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ. ಬಾಲ ರಾಮನ ಮೂರ್ತಿ ಹೊತ್ತ ಉತ್ತರ ಪ್ರದೇಶದ ಸ್ಥಬ್ಧಚಿತ್ರವು ಗಮನ ಸೆಳೆಯಿತು.
ಭಾರೀ ಭದ್ರತೆ
ಗಣರಾಜ್ಸೋತ್ಸವ ಕಾರ್ಯಕ್ರಮದ ಹಿನ್ಮೆಲೆಯಲ್ಲಿ ದೆಹಲಿಯಲ್ಲಿ ಭಾರೀ ಭದ್ರತೆ ಹಾಕಲಾಗಿದೆ. ವಿಶೇಷ ಪಡೆಗಳು ಗಸ್ತು ತಿರುಗುವ ಜತೆಗೆ ಕಟ್ಟಡಗಳ ಮೇಲೆ ಶಾರ್ಪ್‌ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಎಲ್ಲೆಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಡ್ರೋಣ್ ಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಗಣರಾಜ್ಯೋತ್ಸವ ವೀಕ್ಷಣೆಗೆ ಆಗಮಿಸಿರುವ ದೇಶ ವಿದೇಶಗಳ 13 ಸಾವಿರ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 70 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸಾರ್ವಜನಿಕರಿಗಾಗಿ 42 ಸಾವಿರ ಆಸನಗಳನ್ನು ಮೀಸಲಿರಿಸಲಾಗಿದೆ.