Donald Trump Arrest: ದೇಶ ಉಳಿಸಲು ಕೆಲಸ ಮಾಡಿದ್ದೇ ನನ್ನ ತಪ್ಪು; ಡೊನಾಲ್ಡ್ ಟ್ರಂಪ್
Apr 05, 2023 08:50 AM IST
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
- Donald Trump Reaction: 'ಅಮೆರಿಕದಲ್ಲಿ ಇಂಥದ್ದೇನಾದರೂ ನಡೆಯಬಹುದು ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಯಾವುದೇ ಭಯವಿಲ್ಲದೆ ದೇಶವನ್ನು ರಕ್ಷಿಸಲು ಮುಂದಾಗಿದ್ದೇ ನಾನು ಮಾಡಿದ ತಪ್ಪು' ಎಂದು ಅಲವತ್ತುಕೊಂಡರು.
ಫ್ಲಾರಿಡಾ: ಅಶ್ಲೀಲ ಸಿನಿಮಾಗಳಲ್ಲಿ ನಟಿಸುವ ನೀಲಿಚಿತ್ರ ತಾರೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ ಮುಚ್ಚಿಹಾಕಲೆಂದು ದೊಡ್ಡಮೊತ್ತದ ಹಣವನ್ನು ಪಾವತಿಸಿ, ಅದನ್ನು ಸರಿದೂಗಿಸಲು ವ್ಯಾಪಾರ ವಹಿವಾಟಿನ ದಾಖಲೆಗಳನ್ನು ತಿದ್ದಿದ ಆರೋಪ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump Arrest) ನ್ಯೂಯಾರ್ಕ್ ನಗರದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ತಾವು ನಿರ್ದೋಷಿ ಎಂದು ವಾದಿಸಿದರು. ಇದಕ್ಕೂ ಮುನ್ನ ಫ್ಲಾರಿಡಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅಮೆರಿಕದಲ್ಲಿ ಇಂಥದ್ದೇನಾದರೂ ನಡೆಯಬಹುದು ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಯಾವುದೇ ಭಯವಿಲ್ಲದೆ ದೇಶವನ್ನು ರಕ್ಷಿಸಲು ಮುಂದಾಗಿದ್ದೇ ನಾನು ಮಾಡಿದ ತಪ್ಪು' ಎಂದು ಅಲವತ್ತುಕೊಂಡರು.
'ನಮ್ಮ ದೇಶ ನರಕಕ್ಕೆ ಹೋಗುತ್ತಿದೆ' ಎಂದು ಟ್ರಂಪ್ ಹೇಳಿದಾಗ ಸ್ಥಳದಲ್ಲಿದ್ದ ಅಭಿಮಾನಿಗಳು ಚಪ್ಪಾಳೆ ಹೊಡೆದು ಬೆಂಬಲಿಸಿದರು. 'ಈ ವಿಚಾರಣೆಯನ್ನು ನ್ಯಾಯಾಲಯ ತಕ್ಷಣ ಕೈಬಿಡಬೇಕು. ಇದು ಮುಂದಿನ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿದೆ' ಎಂದು ನ್ಯೂಯಾರ್ಕ್‌ನ ವಿಚಾರಣಾಧಿಕಾರಿ ಅಲ್ವಿನ್ ಬ್ರಾಗ್ ವಿರುದ್ಧ ಹರಿಹಾಯ್ದರು. 'ಸೈದ್ಧಾಂತಿಕವಾಗಿ ನನ್ನನ್ನು ವಿರೋಧಿಸುವ ವ್ಯಕ್ತಿಯನ್ನೇ ಈ ಪ್ರಕರಣದ ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಅವರು ನನ್ನನ್ನು ಬಂಧಿಸಬೇಕೆಂದು ನಿರ್ಧರಿಸಿಬಿಟ್ಟಿದ್ದಾರೆ' ಎಂದು ಟ್ರಂಪ್ ದೂರಿದರು. ಈ ಮೂಲಕ ಪರೋಕ್ಷವಾಗಿ ಹಾಲಿ ಅಧ್ಯಕ್ಷ ಜೋ ಬೈಡೆನ್ ಆಡಳಿತ ತನ್ನ ವಿರುದ್ಧ ಸಂಚು ನಡೆಸಿರುವ ಬಗ್ಗೆ ಟ್ರಂಪ್ ಆರೋಪ ಮಾಡಿದರು.
2016ರ ಅಧ್ಯಕ್ಷೀಯ ಚುನಾವಣೆಗೆ ಮೊದಲು ಇಬ್ಬರು ಮಹಿಳೆಯರಿಗೆ ಡೊನಾಲ್ಡ್ ಟ್ರಂಪ್ ಅವರು ದೊಡ್ಡಮಟ್ಟದ ಹಣ ಪಾವತಿಸಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಈ ಮಹಿಳೆಯರು ತಮ್ಮೊಂದಿಗೆ ಹೊಂದಿದ್ದ ಲೈಂಗಿಕ ಸಂಬಂಧದ ಬಗ್ಗೆ ಯಾರೊಡನೆಯೂ ಮಾಹಿತಿ ಹಂಚಿಕೊಳ್ಳಬಾರದು ಎಂಬ ಒಪ್ಪಂದವನ್ನು ಟ್ರಂಪ್ ಮಾಡಿಕೊಂಡಿದ್ದರು. ಈ ಆರೋಪ ದೃಢಪಟ್ಟ ನಂತರ ಟ್ರಂಪ್ ವಿರುದ್ಧ ವಿಚಾರಣೆ ಆರಂಭವಾಗಿತ್ತು. ಇದೀಗ ಅವರು ಜೈಲಿಗೆ ಹೋಗುವುದರೊಂದಿಗೆ ಕ್ರಿಮಿನಲ್ ವಿಚಾರಣೆ ಎದುರಿಸಿದ ಹಾಗೂ ಜೈಲಿಗೆ ಹೋದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎನಿಸಿದ್ದಾರೆ.
ಫ್ಲಾರಿಡಾ ಸೇರಿದಂತೆ ಹಲವು ನಗರಗಳಲ್ಲಿ ಟ್ರಂಪ್ ಬೆಂಬಲಿಗರು ಪ್ರತಿಭಟನಾ ರ‍್ಯಾಲಿ ನಡೆಸಿದರು. ವಿಚಾರಣೆ ನಡೆದ ನ್ಯಾಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ತಮ್ಮನ್ನು ಬಂಧಿಸಬಹುದು ಎಂಬ ಮುನ್ಸೂಚನೆ ಮೊದಲೇ ಸಿಕ್ಕಿದ್ದ ಟ್ರಂಪ್, ಟ್ರೂತ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. 'ಅಮೆರಿಕದಲ್ಲಿ ಹೀಗಾಗಬಹುದು ಎಂಬುದನ್ನು ನಂಬಲು ಆಗುತ್ತಿಲ್ಲ' ಎಂದು ಹೇಳಿದ್ದರು.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಮೊದಲಷ್ಟೇ, ನ್ಯೂಯಾರ್ಕ್ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. 'ನನಗೆ ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ ನಂಬಿಕೆ ಇದೆ' ಎಂಬ ಅವರ ಮಾತನ್ನು ಅವರ ಇಂಗಿತ ಎಂದು ವಿಶ್ಲೇಷಿಸಲಾಗಿತ್ತು.
ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು ಜೈಲು ಶಿಕ್ಷೆ ಅನುಭವಿಸಿದರೂ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಅಮೆರಿಕದಲ್ಲಿ ಅವಕಾಶವಿದೆ. ತಪ್ಪಿತಸ್ಥನೆಂದು ಸಾಬೀತಾಗಿರುವ ಅಭ್ಯರ್ಥಿ ಜೈಲಿನಿಂದ ಪ್ರಚಾರ ಮಾಡುವುದನ್ನು ತಡೆಯುವ ಕಾನೂನು ಅಮೆರಿಕದಲ್ಲಿ ಇಲ್ಲ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಬಂಧನ