Trump Court Trial: ನ್ಯಾಯಾಲಯಕ್ಕೆ ಟ್ರಂಪ್ ಶರಣು; ಆರೋಪಗಳನ್ನು ಅಲ್ಲೆಗಳೆದ ಅಮೆರಿಕಾ ಮಾಜಿ ಅಧ್ಯಕ್ಷ
Jun 14, 2023 07:02 AM IST
ಅಮೆರಿಕಾದ ಮಿಯಾಮಿ ನ್ಯಾಯಾಲಯದ ಎದುರು ಡೊನಾಲ್ಡ್ ಟ್ರಂಪ್ ಶರಣಾಗಿ ವಿಚಾರಣೆ ಎದುರಿಸಿದರು.
- ಡೊನಾಲ್ಡ್ ಟ್ರಂಪ್ ಒಂದು ವರ್ಷದ ಅಂತರದೊಳಗೆ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವುದು ಇದು ಎರಡನೇ ಬಾರಿ. ಪೋರ್ನ್ ಸ್ಟಾರ್ ಒಬ್ಬರಿಗೆ ಹಣ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲೂ ವಿಚಾರಣೆ ಎದುರಿಸಿದ್ದರು.
ಮಿಯಾಮಿ: ರಕ್ಷಣಾ ಹಾಗೂ ಅಣು ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಹೊತ್ತೊಯ್ದ ಗಂಭೀರ ಆರೋಪ ಎದುರಿಸುತ್ತಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಿಯಾಮಿ ನ್ಯಾಯಾಲಯಕ್ಕೆ ಶರಣಾಗಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದರು.
ತಮ್ಮ ವಿರುದ್ದ ಅಮೆರಿಕಾದ ನ್ಯಾಯಾಂಗ ಇಲಾಖೆ ಹೊರಿಸಿರುವ 37 ಕ್ರಿಮಿನಲ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಟ್ರಂಪ್ ಅವರು ತಪ್ಪಿತಸ್ಥರಲ್ಲ ಎಂದು ಟ್ರಂಪ್ ಪರ ವಕೀಲರು ನ್ಯಾಯಾಧೀಶರಾದ ಅಲಿನ್ ಕೆನಾನ್ ಎದುರು ವಾದ ಮಂಡಿಸಿದರು. ಅಲ್ಲದೇ ಟ್ರಂಪ್ ಪರವಾಗಿ ನ್ಯಾಯವಾದಿಗಳ ದಂಡೇ ಇದ್ದು ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿತು. ಕೆಲವು ಛಾಯಾಚಿತ್ರಗಳನ್ನೂ ಒದಗಿಸಿ ಅನಗತ್ಯವಾಗಿ ಟ್ರಂಪ್ ಅವರನ್ನು ಸಿಲುಕಿಸುವ ಕೆಲಸವಾಗಿದೆ ಎಂದು ಹೇಳಿದರು. ಟ್ರಂಪ್ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದಂತೆ ಅಧಿಕಾರಿಗಳ ತಂಡ ವಶಕ್ಕೆ ಪಡೆದು ಪರಿಶೀಲನೆ ಪ್ರಕ್ರಿಯೆಗಳನ್ನು ನಡೆಸಿ ಬಿಡುಗಡೆಗೊಳಿಸಿತು. ಇಡೀ ನ್ಯಾಯಾಲಯದ ಸುತ್ತಲೂ ಭಾರೀ ಭದ್ರತೆ ಒದಗಿಸಲಾಗಿತ್ತು.
ಡೊನಾಲ್ಡ್ ಟ್ರಂಪ್ ಒಂದು ವರ್ಷದ ಅಂತರದೊಳಗೆ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವುದು ಇದು ಎರಡನೇ ಬಾರಿ. ಪೋರ್ನ್ ಸ್ಟಾರ್ ಒಬ್ಬರಿಗೆ ಹಣ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲೂ ವಿಚಾರಣೆ ಎದುರಿಸಿದ್ದರು.
ಇದಕ್ಕೂ ಮುನ್ನ ಮಿಯಾಮಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಟ್ರಂಪ್ ಅಲ್ಲಿಂದ ತಮ್ಮ ವಕೀಲರೊಂದಿಗೆ ಕಾರುಗಳಲ್ಲಿ ಆಗಮಿಸಿದರು.
ಅಮೆರಿಕಾದಲ್ಲಿ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಡೊನಾಲ್ಡ್ ಟ್ರಂಪ್ ವಿರುದ್ದದ ನ್ಯಾಯಾಂಗ ಇಲಾಖೆ ದಾಖಲಿಸಿರುವ ಮೊಕದ್ದಮೆಗಳೇ ಪ್ರಮುಖ ವಿಷಯವಾಗುವ ಸಾಧ್ಯತೆಗಳಿವೆ. ಟ್ರಂಪ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ವಾಹನಗಳೊಂದಿಗೆ ಮೆರವಣಿಗೆ ರೂಪದಲ್ಲಿ ಆಗಮಿಸಿ ಗಮನ ಸೆಳೆದರು. ನ್ಯಾಯಾಲಯಕ್ಕೆ ಹೊರಡುವ ಮುನ್ನ ಅಮೆರಿಕಾದ ಇತಿಹಾಸದಲ್ಲಿ ಇದೊಂದು ಕಪ್ಪು ದಿನ. ದೇಶ ಕುಸಿಯುತ್ತಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದರು.
ನ್ಯಾಯಾಲಯಕ್ಕೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಪರ ನ್ಯಾಯವಾದಿ ಅಲಿನಾ ಹಬ್ಬ, ಇದು ಡೊನಾಲ್ಡ್ ಟ್ರಂಪ್ ಅಥವಾ ರಿಪಬ್ಲಿಕನ್ ಪಕ್ಷ ವಿಷಯವಲ್ಲ. ಮುಂದಿನ ವರ್ಷ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವಿಚಾರವೂ ಅಲ್ಲ. ಬದಲಿಗೆ ಸುದೀರ್ಘ ಇತಿಹಾಸ ಇರುವ ಅಮೆರಿಕಾವನ್ನೇ ನಾಶ ಮಾಡುವ ಹುನ್ನಾರ. ಇಡೀ ದೇಶದ ಜನರಿಗೆ ಮಾಡುತ್ತಿರುವ ಅವಮಾನ. ಇದು ನನ್ನ ಅಮೆರಿಕಾವಂತೂ ಅಲ್ಲಎಂದು ಟೀಕಿಸಿದರು.
ಬೈಡನ್ ಪತ್ನಿ ಟೀಕೆ
ಈ ನಡುವೆ ಹಾಲಿ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಮುಂದಿನ ಚುನಾವಣೆಗೆ ಪತಿಯ ಪರ ಪ್ರಚಾರ ಆರಂಭಿಸಿದ್ದಾರೆ. ಮ್ಯಾನ್ ಹಾಟನ್ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಡೊನಾಲ್ಡ್ ಟ್ರಂಪ್ ವಿರುದ್ದದ ದೋಷಾರೋಪಣೆ ನಂತರವೂ ರಿಪಬ್ಲಿಕನ್ ಪಕ್ಷದ ಪರ ಜನ ಒಲವು ತೋರಿಸುತ್ತಿರುವುದು ಆಘಾತಕಾರಿ. ಟ್ರಂಪ್ ನಡೆಯ ಬಗ್ಗೆ ಅವರಲ್ಲಿ ಬೇಸರವೇ ಇದ್ದಂತಿಲ್ಲ ಎಂದು ಹೇಳಿದರು.
ಮುಂದಿನ ವರ್ಷದ ಚುನಾವಣೆಯು ಭ್ರಷ್ಟಾಚಾರ, ದ್ವೇಷದ ಮೇಲೆ ಮತ ಯಾಚಿಸುವ ರಿಪಬ್ಲಿಕನ್ ಪಕ್ಷ ಹಾಗೂ ಜೋ ಬೈಡನ್ ಅವರ ಪ್ರಬಲ ನಾಯಕತ್ವದ ನಡುವೆಯೇ ಇರಲಿದೆ ಎಂದು ಜಿಲ್ ತಿಳಿಸಿದರು.
ಇದನ್ನೂ ಓದಿರಿ…
ವಿಭಾಗ